ADVERTISEMENT

ದಾಖಲೆಯ ಓಟ ಮುಂದುವರಿಸಿದ ಸೆನ್ಸೆಕ್ಸ್

ಪಿಟಿಐ
Published 16 ಡಿಸೆಂಬರ್ 2020, 16:08 IST
Last Updated 16 ಡಿಸೆಂಬರ್ 2020, 16:08 IST
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ   

ಮುಂಬೈ: ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿರುವ ಷೇರು ಮಾರುಕಟ್ಟೆ ಸೂಚ್ಯಂಕಗಳು, ಗುರುವಾರವೂ ದಾಖಲೆಯ ಎತ್ತರವನ್ನು ತಲುಪಿದವು. ಅರ್ಥ ವ್ಯವಸ್ಥೆಯ ಆರೋಗ್ಯ ಸೂಚಕಗಳು ಒಳ್ಳೆಯ ಸುದ್ದಿಯನ್ನು ಹೊತ್ತು ತಂದಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು ಮುಂಬೈನ ಷೇರು ಪೇಟೆಯಲ್ಲಿ ಭರ್ಜರಿ ವಹಿವಾಟು ನಡೆಯಲು ಕಾರಣವಾಯಿತು.

ಬಿಎಸ್‌ಇ ಸೆನ್ಸೆಕ್ಸ್ 403 ಅಂಶ ಏರಿಕೆ ಕಂಡು, ದಿನದ ಅಂತ್ಯಕ್ಕೆ 46,666 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ನಿಫ್ಟಿ ಸೂಚ್ಯಂಕವು 114 ಅಂಶ ಜಿಗಿದು, 13,682ರಲ್ಲಿ ಕೊನೆಗೊಂಡಿತು. ಬಿಎಸ್‌ಇ ಮತ್ತು ನಿಫ್ಟಿ ಗುರುವಾರದ ಕೊನೆಯಲ್ಲಿ ದಾಖಲೆಯ ಮಟ್ಟ ತಲುಪಿವೆ. ದಿನದ ವಹಿವಾಟಿನ ನಡುವೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯ ಮಟ್ಟವಾದ 46,704 ಅಂಶಗಳಿಗೆ, ನಿಫ್ಟಿ 13,692 ಅಂಶಗಳಿಗೆ ತಲುಪಿದವು.

ಎಚ್‌ಡಿಎಫ್‌ಸಿ, ಒಎನ್‌ಜಿಸಿ, ಭಾರ್ತಿ ಏರ್‌ಟೆಲ್‌, ಏಷ್ಯನ್‌ ಪೇಂಟ್ಸ್‌, ಟೈಟಾನ್, ಟಿಸಿಎಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡವು. ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್‌ ಬ್ಯಾಂಕ್‌, ಎನ್‌ಟಿಪಿಸಿ, ಅಲ್ಟ್ರಾಟೆಕ್‌ ಸಿಮೆಂಟ್, ಟೆಕ್‌ ಮಹೀಂದ್ರ ಮತ್ತು ಎಚ್‌ಸಿಎಲ್‌ ಟೆಕ್‌ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂತು.

ADVERTISEMENT

‘ದೇಶದ ಷೇರು ಮಾರುಕಟ್ಟೆಗಳಲ್ಲಿ ಗೂಳಿಯ ಓಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಒಳ್ಳೆಯ ವಹಿವಾಟು ನಡೆದಿದ್ದು, ದೇಶಿ ಮಾರುಕಟ್ಟೆಗಳ ನೆರವಿಗೆ ಬಂತು. ಅಮೆರಿಕದಲ್ಲಿ ಅರ್ಥ ವ್ಯವಸ್ಥೆಯ ಚೇತರಿಕೆ ಮತ್ತೊಂದು ಸುತ್ತಿನ ಪ್ಯಾಕೇಜ್‌ ಘೋಷಣೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಕೊರೊನಾ ವೈರಾಣು ತಡೆಯುವ ಲಸಿಕೆ ವಿಚಾರವಾಗಿ ತೃಪ್ತಿಕರ ಮುನ್ನಡೆ ಕಂಡುಬಂದಿದ್ದು ಹೂಡಿಕೆದಾರರ ಆತ್ಮವಿಶ್ವಾಸವನ್ನು ವೃದ್ಧಿಸಿದವು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಹೊರತುಪಡಿಸಿದರೆ, ಇನ್ನೆಲ್ಲ ಪ್ರಮುಖ ವಲಯಗಳ ಷೇರುಗಳೂ ಏರಿಕೆ ದಾಖಲಿಸಿದವು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೇಳಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಮಾರುಕಟ್ಟೆಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದ್ದು, ಮಂಗಳವಾರದ ವಹಿವಾಟಿನಲ್ಲಿ ಒಟ್ಟು ₹ 2,484 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.