ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಎರಡು ವಾರಗಳ ಗರಿಷ್ಠ

ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ವಹಿವಾಟು

ಪಿಟಿಐ
Published 30 ಮಾರ್ಚ್ 2021, 16:09 IST
Last Updated 30 ಮಾರ್ಚ್ 2021, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಮಂಗಳವಾರದ ವಹಿವಾಟಿನಲ್ಲಿ ಎರಡು ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಚಲನೆಯ ಜೊತೆಗೆ ಹಣಕಾಸು, ಐ.ಟಿ. ಮತ್ತು ಇಂಧನ ವಲಯದ ಷೇರುಗಳ ಗಳಿಕೆಯು ಸತತ ಎರಡನೇ ದಿನವೂ ಸೂಚ್ಯಂಕಗಳ ಏರಿಕೆಗೆ ಕಾರಣವಾದವು ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 1,128 ಅಂಶಗಳಷ್ಟು ಜಿಗಿತ ಕಂಡಿತು. ಸರಿಸುಮಾರು ಎರಡು ತಿಂಗಳಲ್ಲಿ ದಿನದ ವಹಿವಾಟಿನಲ್ಲಿ ಕಂಡ ಗರಿಷ್ಠ ಏರಿಕೆ ಇದಾಗಿದೆ. 50,137 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ ದಿನದ ವಹಿವಾಟಿನಲ್ಲಿ 338 ಅಂಶಗಳ ಏರಿಕೆ ಕಂಡಿತು.

‘ಐ.ಟಿ., ಲೋಹ, ಔಷಧ ಮತ್ತು ಎಫ್‌ಎಂಸಿಜಿ ವಲಯಗಳ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದರಿಂದ ದೇಶಿ ಷೇರುಪೇಟೆಗಳು ತೀವ್ರ ಗತಿಯ ಏರಿಕೆ ಕಂಡವು’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್ ಮೋದಿ ತಿಳಿಸಿದ್ದಾರೆ.

ಸಂಪತ್ತು ₹ 6 ಲಕ್ಷ ಕೋಟಿ ವೃದ್ಧಿ: ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 6.02 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ. ಇದರಿಂದ ಷೇರುಪೇಟೆಯ ಒಟ್ಟಾರೆ ಸಂಪತ್ತಿನ ಮೌಲ್ಯ ₹ 204.77 ಲಕ್ಷ ಕೋಟಿಗಳಿಗೆ ತಲುಪಿದೆ.

ರೂಪಾಯಿ 87 ಪೈಸೆ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 87 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 73.38ರಂತೆ ವಿನಿಮಯಗೊಂಡಿತು.

ಇತರೆ ಕರೆನ್ಸಿಗಳ ಎದುರು ಅಮೆರಿಕದ ಡಾಲರ್‌ ಮೌಲ್ಯ ವೃದ್ಧಿಯಾಗಿದ್ದು ಹಾಗೂ ಅಮೆರಿಕದ ಬಾಂಡ್‌ ಗಳಿಕೆಯ ಕಾರಣಗಳಿಂದಾಗಿ ರೂಪಾಯಿ ಮೌಲ್ಯ ಇಳಿಕೆ ಕಾಣುವಂತಾಯಿತು ಎಂದು ತಜ್ಞರು ಹೇಳಿದ್ದಾರೆ.

ಬ್ರೆಂಟ್ ತೈಲ ದರವು ಶೇ 0.69ರಷ್ಟು ಇಳಿಕೆಯಾಗಿ ಒಂದು ಬ್ಯಾರಲ್‌ಗೆ 64.53 ಡಾಲರ್‌ಗಳಿಗೆ ತಲುಪಿತು.

ಮುಖ್ಯಾಂಶಗಳು

- ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರು ಶೇ 4.11ರಷ್ಟು ಗರಿಷ್ಠ ಏರಿಕೆ

- ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್ ಸೂಚ್ಯಂಕಗಳು ಶೇ 1.30ರವರೆಗೂ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.