ADVERTISEMENT

ಸೆನ್ಸೆಕ್ಸ್, ನಿಫ್ಟಿ ಶೇ 1ರಷ್ಟು ಚೇತರಿಕೆ

ಬ್ಯಾಂಕಿಂಗ್‌, ಐ.ಟಿ. ಮತ್ತು ಆಟೊ ಷೇರು ಖರೀದಿ ಹೆಚ್ಚಳ

ಪಿಟಿಐ
Published 8 ಸೆಪ್ಟೆಂಬರ್ 2022, 13:56 IST
Last Updated 8 ಸೆಪ್ಟೆಂಬರ್ 2022, 13:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕಿಂಗ್‌, ಐ.ಟಿ. ಮತ್ತು ಆಟೊ ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚಾಗಿ ಖರೀದಿಸಿದ ಪರಿಣಾಮವಾಗಿ ದೇಶದ ಷೇರುಪೇಟೆಗಳು ಗುರುವಾರದ ವಹಿವಾಟಿನಲ್ಲಿ ಶೇಕಡ 1ರಷ್ಟು ಗಳಿಕೆ ಕಂಡುಕೊಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 659 ಅಂಶ ಏರಿಕೆ ಕಂಡು 59,688 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 174 ಅಂಶ ಹೆಚ್ಚಾಗಿ 17,798 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ವಿದೇಶಿ ಬಂಡವಾಳ ಒಳಹರಿವು ಮತ್ತು ಕಚ್ಚಾ ತೈಲ ದರ ಇಳಿಕೆಯು ಹೂಡಿಕೆ ಚಟುವಟಿಕೆ ಹೆಚ್ಚಾಗುವಂತೆ ಮಾಡಿದವು ಎಂದು ವಿಶ್ಲೇಷಕರು ಹೇಳಿದ್ದಾರೆ.

ADVERTISEMENT

‘ಹಣದುಬ್ಬರ ಏರಿಕೆ ಆಗಲಿದೆ ಎನ್ನುವ ಹೂಡಿಕೆದಾರ ಆತಂಕ ಕಡಿಮೆ ಆಗಿರುವುದರಿಂದ ಹಾಗೂಕಚ್ಚಾ ತೈಲ ದರ ಇಳಿಕೆ ಕಂಡಿರುವುದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಏರಿಕೆ ಕಂಡಿತು. ಇದರಿಂದಾಗಿ ಭಾರತದ ಹಣಕಾಸು ಮಾರುಕಟ್ಟೆಗಳು ಸಹ ಸಕಾರಾತ್ಮಕ ಹಾದಿಗೆ ಮರಳಿದವು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಏಷ್ಯಾದಲ್ಲಿ, ಸೋಲ್‌ ಮತ್ತು ಟೋಕಿಯೊ ಮಾರುಕಟ್ಟೆಗಳು ಗಳಿಕೆ ಕಂಡರೆ, ಶಾಂಘೈ ಮತ್ತು ಹಾಂಕಾಂಗ್ ಷೇರುಪೇಟೆಗಳು ನಷ್ಟ ಅನುಭವಿಸಿದವು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.49ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 87.57 ಡಾಲರ್‌ಗೆ ತಲುಪಿತು.

ಬಂಡವಾಳ ಮೌಲ್ಯ ₹ 282 ಲಕ್ಷ ಕೋಟಿ: ಮುಂಬೈ ಷೇರುಪೇಟೆಯಲ್ಲಿ ನಡೆದ ಸಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 1.79 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 282.66 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

=

ಬಿಎಸ್‌ಇ ವಲಯವಾರು ಗಳಿಕೆ (%)

ಬ್ಯಾಂಕ್‌;1.94

ಹಣಕಾಸು;1.54

ಟೆಕ್‌;1.04

ಐ.ಟಿ.;1.02

ಟೆಲಿಕಾಂ;0.71

ಮುಖ್ಯಾಂಶಗಳು

ಟೆಕ್‌ ಮಹೀಂದ್ರ ಷೇರು ಮೌಲ್ಯ ಶೇ 3.23ರಷ್ಟು ಏರಿಕೆ

ಬಿಎಸ್‌ಇ ಸ್ಮಾಲ್‌, ಮಿಡ್‌ ಕ್ಯಾಪ್‌ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.