ADVERTISEMENT

ವಾರದ ವಹಿವಾಟು: ನಿಲ್ಲದ ಸೂಚ್ಯಂಕದ ಕುಸಿತ

ಸಂವೇದಿ ಸೂಚ್ಯಂಕ 2,224 ಅಂಶ ಕುಸಿತ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 19:45 IST
Last Updated 4 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳ ಮೇಲೆ ಕೊರೊನಾ ಪರಿಣಾಮ ತೀವ್ರವಾಗಿದೆ. ಸದ್ಯದ ಮಟ್ಟಿಗಂತೂ ಸೂಚ್ಯಂಕಗಳು ಕುಸಿತದ ಹಾದಿಯಿಂದ ಹೊರಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಸೋಂಕಿಗೆ ತುತ್ತಾಗುವ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ನಕಾರಾತ್ಮಕ ಪರಿಣಾಮ ಉಂಟು
ಮಾಡುತ್ತಿದೆ.ವಾರದಿಂದ ವಾರಕ್ಕೆ ಸೂಚ್ಯಂಕಗಳ ಕುಸಿತದ ಪ್ರಮಾಣ ಹೆಚ್ಚಾಗುತ್ತಲೇ ಇದ್ದು ಹೂಡಿಕೆದಾರರ ಸಂಪತ್ತು ಮೌಲ್ಯವೂ ಕುಸಿಯುತ್ತಿದೆ.

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 2,225 ಅಂಶ ಕುಸಿತ ಕಂಡಿದ್ದು, 27,590ಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 576 ಅಂಶ ಇಳಿಕೆಯಾಗಿ 8,083 ಅಂಶಗಳಿಗೆ ಇಳಿಕೆಯಾಗಿದೆ.

ADVERTISEMENT

ಬಂಡವಾಳ ಹೊರಹರಿವು: ಕೊರೊನಾ ದಿಂದಾಗಿ ಜಾಗತಿಕ ಮತ್ತು ದೇಶಿ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ಇದರಿಂದಾಗಿ ದೇಶದ ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗುತ್ತಲೇ ಇದೆ.

ಬುಧವಾರ ಒಂದೇ ದಿನ ₹1,117 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.ಮಾರ್ಚ್‌ ನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹ 1 ಲಕ್ಷ ಕೋಟಿ ಹಿಂದಕ್ಕೆ ಪಡೆದಿದ್ದಾರೆ. ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ ದತ್ತಾಂಶವನ್ನು ಸಂಗ್ರಹಿಸಲು ಆರಂಭಿಸಿದ ಬಳಿಕ ಗರಿಷ್ಠ ಮಟ್ಟದ ಬಂಡವಾಳ ಹೊರಹರಿವು ಇದಾಗಿದೆ.

₹4.06 ಲಕ್ಷ ಕೋಟಿ ಸಂಪತ್ತು ಕರಗಿತು

ಷೇರುಪೇಟೆಯಲ್ಲಿನ ನಕಾರಾತ್ಮಕ ವಹಿವಾಟು ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ಕುಸಿತಕ್ಕೆ ಕಾರಣವಾಗುತ್ತಿದೆ. ವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 4.06 ಲಕ್ಷ ಕೋಟಿ ಕರಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 108.43 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಕೊರೊನಾ ಪರಿಣಾಮ

ಭಾರತದ ಜಿಡಿಪಿ ದರ ಶೇ 4ಕ್ಕೆ ಕುಸಿಯುವ ಆತಂಕ

ದೇಶದ ಬ್ಯಾಂಕಿಂಗ್‌ ವಲಯದ ಸಾಲ ಸಾಮರ್ಥ್ಯದಲ್ಲಿ ಇಳಿಕೆ

ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.