ADVERTISEMENT

ಹಡಗು ನಿರ್ಮಾಣ: ₹69 ಸಾವಿರ ಕೋಟಿ ಪ್ಯಾಕೇಜ್‌

‘ಹಡಗು ನಿರ್ಮಾಣ ಸೇವೆಗಳನ್ನು ಪಡೆಯಲು ವಿದೇಶಿ ಕಂಪನಿಗಳಿಗೆ ಈಗ ವಾರ್ಷಿಕ ₹6 ಲಕ್ಷ ಕೋಟಿ ಪಾವತಿ’

ಪಿಟಿಐ
Published 24 ಸೆಪ್ಟೆಂಬರ್ 2025, 16:22 IST
Last Updated 24 ಸೆಪ್ಟೆಂಬರ್ 2025, 16:22 IST
   

ನವದೆಹಲಿ: ಭಾರತದಲ್ಲಿ ಹಡಗು ನಿರ್ಮಾಣ ಚಟುವಟಿಕೆಗಳಿಗೆ ಮತ್ತೆ ಜೀವ ನೀಡುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ₹69,725 ಕೋಟಿ ಮೊತ್ತದ ಪ್ಯಾಕೇಜ್‌ಗೆ ಬುಧವಾರ ಒಪ್ಪಿಗೆ ನೀಡಿದೆ.

ಸರ್ಕಾರದ ಅಧಿಕೃತ ಹೇಳಿಕೆ ಪ್ರಕಾರ ಈ ಪ್ಯಾಕೇಜ್‌ ಅಡಿಯಲ್ಲಿ ನಾಲ್ಕು ಅಂಶಗಳು ಇರಲಿವೆ. ದೇಶದಲ್ಲಿ ಹಡಗು ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸುವುದು, ದೀರ್ಘಾವಧಿಯಲ್ಲಿ ಈ ಚಟುವಟಿಕೆಗಳಿಗೆ ಹಣಕಾಸಿನ ನೆರವು ಹೆಚ್ಚಿಸುವುದು, ಹೊಸ ಹಾಗೂ ಈಗಾಗಲೇ ಇರುವ ಹಡಗು ನಿರ್ಮಾಣ ಘಟಕಗಳಿಗೆ ಉತ್ತೇಜನ ನೀಡುವುದು, ತಾಂತ್ರಿಕ ಸಾಮರ್ಥ್ಯ ಮತ್ತು ಕೌಶಲವನ್ನು ಹೆಚ್ಚಿಸುವುದು ಆ ಅಂಶಗಳು.

ಹಡಗು ನಿರ್ಮಾಣ ವಲಯದಲ್ಲಿ ದೇಶವು ‘ಆತ್ಮನಿರ್ಭರ’ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಹೇಳಿದ್ದರು. ಭಾರತವು ವಿದೇಶಿ ಹಡಗು ನಿರ್ಮಾಣ ಕಂಪನಿಗಳಿಂದ ಸೇವೆ ಪಡೆಯುವುದಕ್ಕೆ ವಾರ್ಷಿಕ ಅಂದಾಜು ₹6 ಲಕ್ಷ ಕೋಟಿ ಪಾವತಿಸುತ್ತಿದೆ ಎಂದು ಅವರು ತಿಳಿಸಿದ್ದರು.

ADVERTISEMENT

‘50 ವರ್ಷಗಳ ಹಿಂದೆ ನಾವು ನಡೆಸುತ್ತಿದ್ದ ವ್ಯಾಪಾರ ಚಟುವಟಿಕೆಗಳಲ್ಲಿ ಬಳಕೆಯಾಗುತ್ತಿದ್ದ ಹಡಗು‌ಗಳ ಪೈಕಿ ಶೇ 40ರಷ್ಟು ಭಾರತದಲ್ಲೇ ತಯಾರಾದವಾಗಿದ್ದವು. ಆದರೆ ಈಗ ಅವುಗಳ ಪಾಲು ಶೇ 5ಕ್ಕೆ ಕುಸಿದಿದೆ’ ಎಂದು ಪ್ರಧಾನಿ ಹೇಳಿದ್ದರು.

ಜಾಗತಿಕ ಮಟ್ಟದಲ್ಲಿ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಈಗ ಭಾರತದ ಪಾಲು ಶೇ 0.06ರಷ್ಟು ಮಾತ್ರವೇ ಇದೆ. ಈ ಉದ್ಯಮದಲ್ಲಿ ಭಾರತವು 20ನೇ ಸ್ಥಾನ ಪಡೆದಿದೆ. ಆದರೆ 2030ರೊಳಗೆ ಮೊದಲ 10 ಸ್ಥಾನಗಳ ಪೈಕಿ ಒಂದರಲ್ಲಿ ತಾನಿರಬೇಕು, 2047ರ ವೇಳೆಗೆ ಟಾಪ್–5 ದೇಶಗಳ ಪಟ್ಟಿಯಲ್ಲಿ ತಾನಿರಬೇಕು ಎಂದು ಭಾರತ ಬಯಸಿದೆ.

ಈಗ ಘೋಷಣೆ ಮಾಡಿರುವ ಪ್ಯಾಕೇಜ್‌ನಿಂದಾಗಿ ದೇಶದಲ್ಲಿ ಸರಿಸುಮಾರು 30 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ, ದೇಶದಲ್ಲಿ ₹4.5 ಲಕ್ಷ ಕೋಟಿ ಹೂಡಿಕೆ ಆಗಲಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರ್ಥಿಕ ಪರಿಣಾಮ ಮಾತ್ರವೇ ಅಲ್ಲದೆ, ಈ ಉಪಕ್ರಮವು ದೇಶದ ಇಂಧನ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ, ಮಹತ್ವದ ಸಮುದ್ರ ಮಾರ್ಗಗಳಲ್ಲಿ ಸ್ಥಿರತೆ ತರುತ್ತದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.