ADVERTISEMENT

ಎಂ. ಟೆಕ್‌ ಮಾಡಲು ಬ್ಯಾಂಕುಗಳಲ್ಲಿ ಸಾಲ ಸಿಗುತ್ತದೆಯೇ?

ಯು.ಪಿ.ಪುರಾಣಿಕ್
Published 11 ಡಿಸೆಂಬರ್ 2018, 19:46 IST
Last Updated 11 ಡಿಸೆಂಬರ್ 2018, 19:46 IST
   

ಹೆಸರು ಬೇಡ
ನಾನು ಅನುದಾನಿತ ಶಾಲಾ ಶಿಕ್ಷಕ. 2021 ಮಾರ್ಚ್‌ನಲ್ಲಿ ನಿವೃತ್ತಿ. ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಈಗ ನಾನು ಹೆಂಡತಿ ಹೆಸರಿನಲ್ಲಿ
₹ 15,000, 3 ವರ್ಷಗಳ ಅವಧಿಗೆ ಆರ್‌ಡಿ ಮಾಡಿದ್ದೇನೆ. ಹೀಗೆ ಮಾಡಿದಲ್ಲಿ ತೆರಿಗೆ ಬರುವುದರಿಂದ ತೆರಿಗೆ ಬಾರದಂತೆ ಮಾಡಲು ವಿಧಾನ ತಿಳಿಸಿರಿ.

ಉತ್ತರ: ನೀವು ನಿಮ್ಮ ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಕರಾದಲ್ಲಿ ಅವರ ಹೆಸರಿನಲ್ಲಿ₹ 15,000 ಆರ್.ಡಿ ಮಾಡಿರಿ. ಈ ಮಾರ್ಗದಲ್ಲಿ ನಿಮಗೆ ತೆರಿಗೆ ಬರುವುದಿಲ್ಲ. ಅವರು ಅಪ್ರಾಪ್ತ ವಯಸ್ಕರಾದರೆ ಈ ಮಾರ್ಗ ಪ್ರಯೋಜನಕಾರಿಯಾಗಲಾರದು. ಏನೇ ಇರಲಿ ತೆರಿಗೆ ಬಿಟ್ಟು₹ 15,000 ಆರ್.ಡಿ. ಮಾಡುವುದನ್ನು ನಿಲ್ಲಿಸಬೇಡಿ.

***
ಸುಹಾಸ್, ಎಂ. ರಾಣೆಬೆನ್ನೂರು
ನಾನು ಬಿಇ ಫೈನಲ್‌ನಲ್ಲಿ ಓದುತ್ತಿದ್ದೇನೆ. ಬಿಇ ಓದಲು ಶಿಕ್ಷಣ ಸಾಲ ಪಡೆದಿದ್ದೇನೆ. ಮುಂದೆ ಈ ಸಾಲ ತೀರಿಸದೆ ಎಂ. ಟೆಕ್‌ ಮಾಡಲು ಬ್ಯಾಂಕುಗಳಲ್ಲಿ ಸಾಲ ಸಿಗಬಹುದೇ ತಿಳಿಸಿರಿ.

ADVERTISEMENT

ಉತ್ತರ: ಬಡ್ಡಿ ಅನುದಾನಿತ ಶಿಕ್ಷಣ ಸಾಲ (Interest Subsidy Educational Loan) ಹೊರತುಪಡಿಸಿ ಉಳಿದ ಶಿಕ್ಷಣ ಸಾಲ ಎಷ್ಟು ಬಾರಿ ಕೂಡಾ ಪಡೆಯಬಹುದು. ಆದರೆ, ಈಗಾಗಲೇ ಪಡೆದ ಶಿಕ್ಷಣ ಸಾಲದ ಕಾಲ ಕಾಲದ ಬಡ್ಡಿ ಪಾವತಿಸುತ್ತಿರಬೇಕು. ನೀವು ಬಿಇ ಮುಗಿಯುತ್ತಲೇ ಅದೇ ಬ್ಯಾಂಕಿನಲ್ಲಿ ಎಂ. ಟೆಕ್‌ಗೂ ಶಿಕ್ಷಣ ಸಾಲ ಪಡೆಯಬಹುದು. ನೀವು ಪಡೆಯುವ ಸಾಲಕ್ಕೆ ಅನುಗೂಣವಾಗಿ ಬ್ಯಾಂಕಿಗೆ ಜವಾಬ್ದಾರಿ (Collateral Security) ಒದಗಿಸಬೇಕು. ಚೆನ್ನಾಗಿ ಓದಿ, ಸಾಲ ಸಕಾಲದಲ್ಲಿ ತೀರಿಸಿ.

***
ಹೆಸರು, ಊರು ಬೇಡ
ನಾನು ಬೆಂಗಳೂರಿನಲ್ಲಿ ಉಬರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಅವಕಾಶ ಸಿಕ್ಕಾಗ ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತೇನೆ. ಕಾರಿಗೆ ಡ್ರೈವರ್ ಇಟ್ಟು ಕೊಂಡಿದ್ದೇನೆ. ಹೆಂಡತಿ ಕೆಎಎಸ್‌ ಕೋಚಿಂಗ್ ತೆಗೆದುಕೊಳ್ಳುತ್ತಾಳೆ. ಸಿನಿಮಾ ಕ್ಷೇತ್ರದಲ್ಲಿಯೇ ನನ್ನ ಬದುಕಿನ ಭವಿಷ್ಯ ರೂಪಿಸಿಕೊಳ್ಳಲು ಉದ್ದೇಶಿಸಿರುವೆ. ಹೆಂಡತಿಯನ್ನು ಚೆನ್ನಾಗಿ ಓದಿಸಲು ಸಾಲ ಮಾಡಿರುವೆ. ಸೂಕ್ತ ಮಾರ್ಗದರ್ಶನ ನೀಡಿ.

ಉತ್ತರ: ನೀವು ಕಷ್ಟಪಟ್ಟು ಜೀವನದಲ್ಲಿ ಮುಂದೆ ಬರಬೇಕು ಎನ್ನುವ ನಿಮ್ಮ ಧ್ಯೇಯ ಮೆಚ್ಚಬೇಕಾಗಿದೆ. ಮನುಷ್ಯನಿಗೆ ಅಸಾಧ್ಯವೆನ್ನುವುದಿಲ್ಲ. ಬಡವನಾಗಿ ಜನಿಸುವುದು ತಪ್ಪಲ್ಲ. ಆದರೆ, ಬಡವನಾಗಿ ಸಾಯುವುದು ತಪ್ಪು. ಇದು ಮಾತ್ರ ನಿಖರವಾದ ಸತ್ಯ. ನೀವು ನಿಮ್ಮ ಹೆಂಡತಿಗೆ ಉತ್ತಮ ಕೋಚಿಂಗ್ ಕೊಡಿಸಿರಿ. ನೀವು ಕನ್ನಡದವರಾದ್ದರಿಂದ ನಿಮ್ಮ ಶ್ರೀಮತಿಯವರು ಕೆಎಎಸ್‌ ಮತ್ತು ಐಎಎಸ್‌ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲಿ. ಐಚ್ಛಿಕ (Obtional Subjet) ವಿಷಯ ಕನ್ನಡವಾಗಿರಲಿ. ಇದರಿಂದ ನಿಮಗೆ ಬಹಳಷ್ಟು ಪ್ರಯೋಜನಗಳಿವೆ. ನಿಮ್ಮ ವಿಚಾರದಲ್ಲಿ ನೀವು ಉತ್ತಮ ನಿರ್ದೇಶಕರು ಹಾಗೂ ಪ್ರೊಡ್ಯೂಸರ್ ಇವರ ಸ್ನೇಹ ಗಳಿಸಿ ಹಾಗೂ ನಿಮ್ಮಲ್ಲಿರುವ ನಿಜವಾದ ಯೋಗ್ಯತೆ ಸಣ್ಣ ಪುಟ್ಟ ಪಾತ್ರವಾದರೂ ತೊಂದರೆ ಇಲ್ಲ. ಚೆನ್ನಾಗಿ ಪ್ರದರ್ಶಿಸಿರಿ. ನಿಮಗೂ ನಿಮ್ಮ ಹೆಂಡತಿಗೂ ಉಜ್ವಲ ಭವಿಷ್ಯ ಹಾರೈಸುತ್ತೇನೆ. ಜೊತೆಗೆ ನೀವು ಗಳಿಸುವ ಸಿಂಹಪಾಲು ಸಾಲಕ್ಕೆ ತುಂಬಿರಿ. ಒಮ್ಮೆ ಸಾಲ ತೀರಿದ ನಂತರ ಎಷ್ಟಾದರಷ್ಟು ಪ್ರತೀ ತಿಂಗಳೂ ಆರ್.ಡಿ. ಮಾಡುತ್ತಾ ಬನ್ನಿ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ,ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.
ಇ–ಮೇಲ್‌: businessdesk@prajavani.co.in
ಮೊ: 9448015300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.