ADVERTISEMENT

DNP ಕರ್ನಾಟಕ ಬಜೆಟ್‌–2023 | ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು?

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 4:47 IST
Last Updated 18 ಫೆಬ್ರುವರಿ 2023, 4:47 IST
ಬಜೆಟ್‌
ಬಜೆಟ್‌   

ಬೆಂಗಳೂರು: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೊಸ ಕೊಡುಗೆಗಳು ಕಡಿಮೆ ಯಾಗಿದ್ದರೂ, ಬೃಹತ್‌ ಯೋಜನೆಗಳ ಅನುಷ್ಠಾನಕ್ಕೆ ಆಯವ್ಯಯದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ವಾಹನ ದಟ್ಟಣೆ ನಿಯಂತ್ರಣಕ್ಕೆ ರಸ್ತೆ ಅಭಿವೃದ್ಧಿ, ಮೇಲ್ಸೇತುವೆ, ಜಂಕ್ಷನ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

ಅಮೃತ ನಗರೋತ್ಥಾನ ಯೋಜನೆ ಹಾಗೂ ನಗರದ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ಎಂದು 2–3 ತಿಂಗಳಿಂದ ಹೇಳಿಕೊಂಡು ಬರುತ್ತಿದ್ದ ವಿಷಯಗಳನ್ನೇ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ವರ್ಷ ಮಾಡಿರುವ ಕಾರ್ಯ ಹಾಗೂ ಮುಂದಿನ ವರ್ಷ ವಿನಿಯೋಗಿಸುವ ಹಣದ ಬಾಬ್ತನ್ನು ಹೇಳಲಾಗಿದೆ. ಒಟ್ಟಾರೆ ₹ 9 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದು ತೋರಿಸಲಾಗಿದ್ದರೂ, ವಾಸ್ತವದಲ್ಲಿ ಹಳೆಯ ಯೋಜನೆಗಳನ್ನೇ ಪ್ರಸ್ತಾಪಿಸಲಾಗಿದೆ.

ಮಳೆಗಾಲದಲ್ಲಿ ಅತಿಹೆಚ್ಚು ಸಮಸ್ಯೆಗೆ ಒಳಗಾದ ನಗರದಲ್ಲಿ ಪ್ರವಾಹ ನಿಯಂತ್ರಿಸುವ ಯೋಜನೆಗೆ ಆದ್ಯತೆ ನೀಡಲಾಗಿದ್ದು, ವಿಶ್ವಬ್ಯಾಂಕ್‌ ನೆರವನ್ನು ಇದಕ್ಕೆ ಪಡೆಯಲಾಗಿದೆ. ನಗರದಲ್ಲಿರುವ ಎಲ್ಲ ಕೆರೆಗಳಿಗೂ ತೂಬು ಅಳವಡಿಸುವ ಮೂಲಕ, ನೀರಿನ ಹರಿವಿನ ವೇಗಕ್ಕೆ ತಡೆ ಹಾಕಲು ಉದ್ದೇಶಿಸಲಾಗಿದೆ.

ADVERTISEMENT

ಅತಿಯಾಗಿ ಕಾಡುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೆಚ್ಚಿನ ಒತ್ತು ನೀಡಲಾಗಿದೆ. ಕೃತಕ ಬುದ್ಧಿಮತ್ತೆ ಬಳಕೆಯೊಂದಿಗೆ ಸಿಗ್ನಲ್‌ ವ್ಯವಸ್ಥೆಯನ್ನು ಆಧುನೀಕರಿಸಿ, ‘ಸೀಮ್‌ಲೆಸ್‌ ಸಿಗ್ನಲಿಂಗ್‌’ ಮೂಲಕ ದಟ್ಟಣೆ ಕಡಿಮೆ ಮಾಡುವ ಆಲೋಚನೆ ಇದೆ. ಇನ್ನು, ಯಶವಂತಪುರಕ್ಕೆ ಹೊಂದಿಕೊಂಡ ತುಮಕೂರು ರಸ್ತೆಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರ್ಯಾಯ ಮೇಲ್ಸೇತುವೆಯನ್ನು ಯಶವಂತಪುರ ರೈಲು ನಿಲ್ದಾಣದಿಂದ ಮತ್ತಿಕೆರೆ ಮಾರ್ಗವಾಗಿ ಬಿಇಎಲ್‌ ರಸ್ತೆವರೆಗೆ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಟಿನ್‌ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ ಎಲಿವೇಟೆಡ್‌ ರಸ್ತೆಗೆ ಅನುದಾನ ನಿಗದಿ ಮಾಡಲಾಗಿದೆ. 120 ಕಿ.ಮೀ ಉದ್ದದ ರಸ್ತೆ ವೈಟ್ ಟಾಪಿಂಗ್‌ಗೆ ಮತ್ತೆ ಆದ್ಯತೆ ನೀಡಲಾಗಿದ್ದು, ಮುಖ್ಯರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಜೊತೆಗೆ, ಗ್ರಾಮೀಣ ರಸ್ತೆಗಳ ಪುನರ್‌ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.

‘ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ’ಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುವುದಾಗಿ ಈಗಾಗಲೇ ಪ್ರಕಟಿಸಲಾಗಿದೆ. ₹13,139 ಕೋಟಿ ವೆಚ್ಚದ ಈ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಆಗುವ ವೆಚ್ಚದಲ್ಲಿ ಶೇ 30ರಷ್ಟನ್ನು ಭರಿಸಲು ಒಪ್ಪಲಾಗಿದೆ. ಉಪನಗರ ರೈಲ್ವೆ ಯೋಜನೆಗೂ ಅನುದಾನ ಒದಗಿಸುವುದನ್ನೂ ಪ್ರಸ್ತಾಪಿಸಲಾಗಿದೆ.

ಬೆಂಗಳೂರು ಹೆಲ್ತ್‌ ಸಿಸ್ಟಮ್ಸ್‌: ನಮ್ಮ ಕ್ಲಿನಿಕ್‌, ಸ್ಮಾರ್ಟ್‌ ವರ್ಚ್ಯು ಯಲ್‌ ಕ್ಲಿನಿಕ್‌ ಅನುಮೋದನೆಯನ್ನು ಪ್ರಸ್ತಾಪಿಸಲಾಗಿದೆ. 50 ಹಾಸಿಗೆಗಳ ಡಯಾಲಿಸಿಸ್‌, 300 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉಲ್ಲೇಖಿಸಿ ಎಲ್ಲವನ್ನೂ ಒಂದೇ ಆರೋಗ್ಯ ಆಡಳಿತ ವ್ಯವಸ್ಥೆಯಡಿ ತಂದು ‘ಬೆಂಗಳೂರು ಆರೋಗ್ಯ ವ್ಯವಸ್ಥೆ’ ಎಂದು ಪುನರ್‌ ರಚಿಸಲು ಉದ್ದೇಶಿಸಲಾಗಿದೆ.

ಅಮೃತ ನಗರೋತ್ಥಾನ ಯೋಜನೆಯಡಿ ಅನುಮತಿಸಲಾಗಿ ರುವ ₹ 6 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳನ್ನೇ ಮತ್ತೆ ಬಜೆಟ್‌ನಲ್ಲಿ ಉಲ್ಲೇಖಿಸಿ, ಹೊಸ ಯೋಜನೆಗಳೆಂಬಂತೆ ಬಿಂಬಿಸಲಾಗಿದೆ.

ಬಿಡಿಎ ಪ್ರಸ್ತಾಪವೇ ಇಲ್ಲ!
‘ಬೆಂಗಳೂರು ಸಮಗ್ರ ಅಭಿವೃದ್ಧಿ’ ಶೀರ್ಷಿಕೆಯಡಿ ಯೋಜನೆಗಳು, ಅನುದಾನವನ್ನು 27 ಅಂಶಗಳಲ್ಲಿ ವಿವರಿಸಲಾಗಿದ್ದು, ಇದರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾಪವೇ ಇಲ್ಲ. ಕಳೆದ ಬಾರಿ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಆಧುನಿಕ ಸ್ಮಾರ್ಟ್‌ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಘೋಷಿಸಲಾಗಿತ್ತು. ವಿಶ್ವೇಶ್ವರಯ್ಯ, ಅಂಜನಾಪುರ, ಬನಶಂಕರಿ 6ನೇ ಹಂತ ಬಡಾವಣೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸುವ ವಿಷಯವಿತ್ತು. ಈ ಬಾರಿ ಯಾವುದೂ ಇಲ್ಲ.

ನಗರಕ್ಕೆ ನೀಡಲಾಗಿರುವ ಒಟ್ಟಾರೆ ಅನುದಾನದಲ್ಲಿ ಸುಮಾರು ₹1,200 ಕೋಟಿ ಈ ವರ್ಷ ಹೆಚ್ಚಾಗಿದೆ.

‘ನಮ್ಮ ಮೆಟ್ರೊ’ಗೆ ಸಂಬಂಧಿಸಿದಂತೆ ಕಳೆದ ಬಾರಿ 45 ಕಿ.ಮೀ ಹೊಸ ಮಾರ್ಗವನ್ನು ಪ್ರಕಟಿಸಲಾಗಿತ್ತು. ಈ ಬಾರಿ 40 ಕಿ.ಮೀ ಕಾರ್ಯಗತವಾಗುತ್ತದೆ ಎಂದಷ್ಟೇ ಪ್ರಸ್ತಾಪಿಸಲಾಗಿದೆ. ತ್ಯಾಜ್ಯನೀರು ಸಂಸ್ಕರಣೆ, ಬೆಂಗಳೂರು ಪ‍ಬ್ಲಿಕ್‌ ಶಾಲೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಉಪನಗರ ರೈಲು, ರಾಜಕಾಲುವೆ ಅಭಿವೃದ್ಧಿ ವಿಷಯಗಳು ಹಿಂದಿನ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದವು. ಅವನ್ನೇ ಈ ಬಾರಿಯೂ ಪುನರುಚ್ಚರಿಸಲಾಗಿದೆ.

2022–23ರಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ಸಸಿಗಳನ್ನು ನೆಡಲಾಗುವ ಪ್ರಸ್ತಾಪವನ್ನು ಈ ಬಾರಿ ಹೆಚ್ಚಿಸಿ 15 ಲಕ್ಷ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮೂರು ಹೊಸ ಹೈಟೆಕ್‌ ನರ್ಸರಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಮಹಿಳೆಯರ ರಕ್ಷಣೆಗೆ ₹261 ಕೋಟಿ
ಸಮಾಜದ ದುರ್ಬಲ ವರ್ಗದವರಲ್ಲಿ, ಅದರಲ್ಲೂ ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ‘ನಿರ್ಭಯ’ ಯೋಜನೆಯಡಿ ನಗರದಲ್ಲಿ ‘ಸುರಕ್ಷಿತ ನಗರ’ ಯೋಜನೆಯನ್ನು ₹261 ಕೋಟಿ ವೆಚ್ಚದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. 1,640 ಸ್ಥಳಗಳಲ್ಲಿ 4,100 ಕ್ಯಾಮೆರಾ ಅಳವಡಿಸಲಾಗಿದ್ದು, ಇವುಗಳನ್ನು ಇಂಟಿಗ್ರೇಟೆಡ್‌ ಕಂಟ್ರೋಲ್‌ ಸೆಂಟರ್‌ಗೆ ಸಂಪರ್ಕಿಸಲಾಗುತ್ತದೆ. ಈ ಮೂಲಕ ಭದ್ರತಾ ಕ್ರಮಗಳ ಮೇಲೆ ನಿಗಾವಹಿಸಲಾಗುತ್ತದೆ.

250 ‘ಶಿ’ ಶೌಚಾಲಯ: ನಗರದ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕೆ ‘ಶಿ’ ಶೌಚಾಲಯವನ್ನು ನಿರ್ಮಿಸಲಾಗುತ್ತದೆ. ಶೌಚಾಲಯ, ಹಾಲುಣಿಸುವ ಕೊಠಡಿ, ಮೊಬೈಲ್‌ ಚಾರ್ಜಿಂಗ್‌, ತುರ್ತು ಎಸ್‌ಒಎಸ್‌ ಸೌಲಭ್ಯಗಳಿಗೆ ₹50 ಕೋಟಿ ಮೀಸಲಿಡಲಾಗಿದೆ.

ಆರು ಮಹಿಳಾ ಪೊಲೀಸ್‌ ಠಾಣೆ: ಬೆಂಗಳೂರಿನಲ್ಲಿ ಒಂಬತ್ತು ಕಾನೂನು ಮತ್ತು ಸುವ್ಯವಸ್ಥೆ, ಐದು ಸಂಚಾರ, ಆರು ಮಹಿಳಾ ಪೊಲೀಸ್‌ ಠಾಣೆಗಳನ್ನು ಹೊಸದಾಗಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ನಗರದ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚುವರಿಯಾಗಿ 2,000 ಹುದ್ದೆಗಳನ್ನು ಸೃಷ್ಟಿಸಲು ಪ್ರಸ್ತಾಪಿಸಲಾಗಿದೆ.

ಬೆಂಗಳೂರು ಬಯೋ-ಇನೋವೇಷನ್ ಸೆಂಟರ್ ಮತ್ತು ಸಾಂಕ್ರಾಮಿಕ ರೋಗಗಳ ಸಂಶೋಧನಾ ಪ್ರತಿಷ್ಠಾನದ ಸಹಯೋಗದೊಂದಿಗೆ ಸಾಂಕ್ರಾಮಿಕ ಸನ್ನದ್ಧತೆ ಕೇಂದ್ರ ಸ್ಥಾಪನೆಯ ಮೊದಲ ಹಂತಕ್ಕೆ ₹10 ಕೋಟಿ ನೀಡಲು ಉದ್ದೇಶಿಸಲಾಗಿದೆ.

ಆಸ್ತಿ ಒತ್ತುವರಿ ತಡೆಗೆ ಜಿಪಿಎಸ್‌: ಬಿಬಿಎಂಪಿ ಆಸ್ತಿಗಳ ಒತ್ತುವರಿ ತಡೆ ಹಾಗೂ ಸುರಕ್ಷತೆಗಾಗಿ ಜಿಪಿಎಸ್‌ ತಂತ್ರಜ್ಞಾನದ ಮೂಲಕ ಕಣ್ಗಾವಲು ವ್ಯವಸ್ಥೆ ಒದಗಿಸಲಾಗುತ್ತದೆ. ಇದಕ್ಕಾಗಿ ₹35 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಬೇಲಿ ನಿರ್ಮಾಣ, ಫಲಕಗಳನ್ನು ಅಳವಡಿಸಲಾಗುತ್ತದೆ.

ಶಾಲೆಗಳ ಅಭಿವೃದ್ಧಿ ಪೂರ್ಣ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ‘ಬೆಂಗಳೂರು ಪಬ್ಲಿಕ್‌ ಶಾಲೆಗಳ’ ಯೋಜನೆ ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುತ್ತಿದ್ದು, ಇದಕ್ಕಾಗಿ ₹180 ಕೋಟಿ ವಿನಿಯೋಗಿಸಲಾಗಿದೆ ಎಂದು ವಿವರಿಸಲಾಗಿದೆ.

ಮೆಗಾಸಿಟಿ ರಿವಾಲ್ವಿಂಗ್‌ ನಿಧಿಯಡಿ 440 ಎಂಎಲ್‌ಡಿ ತ್ಯಾಜ್ಯ ನೀರಿನ ಸಂಸ್ಕರಣೆಗೆ ₹1,200 ಕೋಟಿ ವೆಚ್ಚದಲ್ಲಿ ನಾಲ್ಕು ಘಟಕ ಸ್ಥಾಪನೆ.

ಕೆ.ಸಿ. ವ್ಯಾಲಿ: ತೃತೀಯ ಹಂತದ ಸಂಸ್ಕರಣೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ನಗರದ ಸುತ್ತಮುತ್ತಲಿನ ಅಂತರ್ಜಲ ಕ್ಷೀಣಿಸಿರುವ ಪ್ರದೇಶಗಳಲ್ಲಿ ಹರಿಸಲಾಗುತ್ತಿದೆ. ಈ ಸಂಸ್ಕರಿಸಿದ ನೀರಿನ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಿ ಕೃಷಿಗೆ ಯೋಗ್ಯವನ್ನಾಗಿ ಮಾಡಲು ತೃತೀಯ ಹಂತದ ಸಂಸ್ಕರಣಾ ಕ್ರಮಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ವಾಸನೆರಹಿತ ತ್ಯಾಜ್ಯ ಸಂಸ್ಕರಣಾ ಕೇಂದ್ರ
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯಾ ವಾರ್ಡ್‌ಗಳಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡಲು ಪ್ರತಿ ವಾರ್ಡ್‌ಗೆ ಒಂದರಂತೆ ಆಧುನಿಕ ತಂತ್ರಜ್ಞಾನದ ವಾಸನೆರಹಿತ ತ್ಯಾಜ್ಯ ಸಂಸ್ಕರಣಾ ಕೇಂದ್ರ ಸ್ಥಾಪಿಸಲಾಗುವುದು. ಒಂದೇ ವಾಹನದಲ್ಲಿ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸುವ ವಿನ್ಯಾಸದ ಆಟೋ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ಗಳು ಕಾರ್ಯಾಚರಣೆ ಮಾಡಲಿವೆ. ವಾಣಿಜ್ಯ ಮಳಿಗೆಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಸೇರಿದಂತೆ ಬೃಹತ್ ತ್ಯಾಜ್ಯ ಉತ್ಪಾದಕರು ‌ತ್ಯಾಜ್ಯವನ್ನು ಸಂಸ್ಕರಿಸುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.

ಪಾರಂಪರಿಕ, ಶೈಕ್ಷಣಿಕ ಜಿಲ್ಲೆ
ಬೆಂಗಳೂರು ನಗರದ ಕೇಂದ್ರ ಭಾಗದ 5 ಕಿ.ಮೀ. ವ್ಯಾಪ್ತಿಯೊಳಗಿನ ಪಾರಂಪರಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರದೇಶವನ್ನು ‘ಪಾರಂಪರಿಕ ಮತ್ತು ಶೈಕ್ಷಣಿಕ ಜಿಲ್ಲೆ’ ಎಂದು ಘೋಷಿಸಲು ನಿರ್ಧರಿಸಿದ್ದು, ಈ ಬಗ್ಗೆ ಕಾರ್ಯಸಾಧ್ಯತೆ ಅಧ್ಯಯನ ನಡೆಸಲಾಗುತ್ತದೆ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕುರುಹುಗಳಿರುವ ತಾಣಗಳ ‘ಪ್ರವಾಸಿ ಸರ್ಕಿಟ್’ ಪ್ರಾರಂಭಿಸಲಾಗುವುದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ₹30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸ್ಟಾರ್ಟ್‌–ಅಪ್ ಪಾರ್ಕ್ ಸ್ಥಾಪಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.