ADVERTISEMENT

ಹೂಡಿಕೆದಾರರ ಸಂಪತ್ತು ₹ 3 ಲಕ್ಷ ಕೋಟಿ ವೃದ್ಧಿ: ಸಕಾರಾತ್ಮಕ ವಹಿವಾಟು

ಪಿಟಿಐ
Published 2 ಮಾರ್ಚ್ 2019, 17:07 IST
Last Updated 2 ಮಾರ್ಚ್ 2019, 17:07 IST
sensex
sensex   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ 2ನೇ ವಾರದಲ್ಲಿಯೂ ಸಕಾರಾತ್ಮಕ ವಹಿವಾಟು ಮುಂದುವರಿದಿದೆ. ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿಯೂಏರಿಕೆಯಾಗುತ್ತಿದೆ.

ಫೆಬ್ರುವರಿ 22 ರಿಂದ ಮಾರ್ಚ್‌ 1ರವರೆಗಿನ ಆರು ವಹಿವಾಟು ಅವಧಿಗಳಲ್ಲಿ ಹೂಡಿಕೆದಾರರ ಸಂಪತ್ತು₹ 3 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಷೇರುಪೇಟೆ ಬಂಡವಾಳ ಮೌಲ್ಯ₹ 139 ಲಕ್ಷ ಕೋಟಿಗಳಿಂದ ₹ 142 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಈ)192 ಅಂಶಗಳ ಗಳಿಕೆಯೊಂದಿಗೆ 36,063 ಅಂಶಗಳಲ್ಲಿವಾರದ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, ವಾರದ ವಹಿವಾಟಿನಲ್ಲಿ 71 ಅಂಶ ಹೆಚ್ಚಾಗಿ 10,863 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯುತ್ತಿರುವ ಸಂಘರ್ಷವು ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರ ಜತೆಗೆ ಫೆಬ್ರುವರಿ ತಿಂಗಳ ಸರ್ಕಾರಿ ಸಾಲಪತ್ರಗಳ ವಾಹಿದಾ ವಹಿವಾಟು ಮುಕ್ತಾಯವೂ ಸೂಚ್ಯಂಕವನ್ನು ಹೆಚ್ಚಿನ ಏರಿಕೆ ಕಾಣದಂತೆ ಅಡ್ಡಿಪಡಿಸಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಹಣಕಾಸು, ಐಟಿ, ವಿದ್ಯುತ್‌, ಇಂಧನ ವಲಯಗಳ ಷೇರುಗಳು ಗಳಿಕೆ ಕಂಡುಕೊಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಪೇಟೆಯಲ್ಲಿ ಖರೀದಿಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗಿನ ವಹಿವಾಟಿನಲ್ಲಿ ₹ 7,639 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಳಿತ ಅನುಭವಿಸುತ್ತಿದೆ.

ವಾರದ ವಹಿವಾಟಿನಲ್ಲಿ 22 ಪೈಸೆ ಹೆಚ್ಚಾಗಿದ್ದು, ಒಂದು ಡಾಲರ್‌ಗೆ₹ 70.92ಕ್ಕೆ ತಲುಪಿದೆ.

ಬ್ರೆಂಟ್‌ ಕಚ್ಚಾ ತೈಲ ಒಂದು ತಿಂಗಳಿನಲ್ಲಿ ಶೇ 0.03ರಷ್ಟು ಇಳಿಕೆಯಾಗಿದ್ದು, ಒಂದು ಬ್ಯಾರೆಲ್‌ಗೆ 66.01 ಡಾಲರ್‌ಗಳಂತೆ ಮಾರಾಟವಾಗುತ್ತಿದೆ.

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿನ ಹೆಚ್ಚಳದಿಂದಾಗಿಫೆಬ್ರುವರಿ 22ರ ಅಂತ್ಯಕ್ಕೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ₹ 6,709 ಕೋಟಿಗಳಷ್ಟು ಹೆಚ್ಚಾಗಿ ₹ 28.32 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಅದಕ್ಕೂ ಹಿಂದಿನ ವಾರದಲ್ಲಿ ₹ 28.25 ಲಕ್ಷ ಕೋಟಿಯಷ್ಟಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ. 2018ರ ಏಪ್ರಿಲ್‌ 13ರಂದು ಮೀಸಲು ಸಂಗ್ರಹ₹ 30.24 ಲಕ್ಷ ಕೋಟಿಗಳಿಗೆ ಗರಿಷ್ಠ ಮಟ್ಟವನ್ನು ತಲುಪಿತ್ತು. ಆ ಬಳಿಕ ₹ 2.20 ಲಕ್ಷ ಕೋಟಿಯಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.