ADVERTISEMENT

ಗಳಿಕೆಯಲ್ಲಿ ಸ್ಮಾಲ್‌–ಮಿಡ್‌ ಕ್ಯಾಪ್‌ ಷೇರು: ಹೂಡಿಕೆದಾರರ ನಿರೀಕ್ಷೆ ಫಲಪ್ರದ

ಪಿಟಿಐ
Published 25 ಡಿಸೆಂಬರ್ 2023, 16:19 IST
Last Updated 25 ಡಿಸೆಂಬರ್ 2023, 16:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸಕ್ತ ಸಾಲಿನಡಿ ಷೇರು ಮಾರುಕಟ್ಟೆಯಲ್ಲಿ ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳು ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸುವ ಜೊತೆಗೆ, ಉತ್ತಮ ಲಾಭವನ್ನೂ ತಂದುಕೊಟ್ಟಿವೆ.

ಈಕ್ವಿಟಿ ಮಾರುಕಟ್ಟೆಯು ದೀರ್ಘಕಾಲದ ಏರಿಕೆ ಕಾಣುತ್ತಿದೆ. ಲಾರ್ಜ್‌ ಕ್ಯಾಪ್‌ಗಿಂತ  ‌ಮಿಡ್‌ ಕ್ಯಾಪ್ ಮತ್ತು ಸ್ಮಾಲ್‌ ಕ್ಯಾಪ್‌ಗಳು ಉತ್ತಮ ಗಳಿಕೆ ಕಂಡಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಡಿಸೆಂಬರ್‌ 22ರವರೆಗೆ ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಸೂಚ್ಯಂಕ 13,074 ಅಂಶ (ಶೇ 45.20) ಏರಿಕೆ ಆಗಿದ್ದರೆ, ಮಿಡ್‌ ಕ್ಯಾಪ್‌ ಸೂಚ್ಯಂಕ 10,568 ಅಂಶ (ಶೇ 41.74) ಏರಿಕೆ ಆಗಿದೆ.

ADVERTISEMENT

ಬಿಎಸ್‌ಇ ಷೇರುಗಳು ಈ ಅವಧಿಯಲ್ಲಿ 10,266 ಅಂಶಗಳಷ್ಟು (ಶೇ 16.87) ಹೆಚ್ಚಳ ಆಗಿದೆ. ಡಿಸೆಂಬರ್‌ 20ರಂದು ಸ್ಮಾಲ್‌ ಕ್ಯಾಪ್‌ ಸೂಚ್ಯಂಕವು ತನ್ನ ಸಾರ್ವಕಾಲಿಕ ಗರಿಷ್ಠವಾದ 42,648 ಅಂಶ ಮತ್ತು ಮಿಡ್‌ ಕ್ಯಾಪ್‌ ಸೂಚ್ಯಂಕ 36,483 ಅಂಶಗಳಷ್ಟು ಏರುವ ಮೂಲಕ ಗರಿಷ್ಠಮಟ್ಟವನ್ನು ದಾಖಲಿಸಿತ್ತು. ಬಿಎಸ್‌ಇ ಮಾನದಂಡವು ಇದೇ ದಿನದಂದು 71,913 ಅಂಶಗಳಿಗೆ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿತ್ತು. 

ದೇಶೀಯ ಸ್ಥೂಲ ಆರ್ಥಿಕ ಅಂಶಗಳು ಮತ್ತು ಚಿಲ್ಲರೆ ಹೂಡಿಕೆದಾರರ ವಿಶ್ವಾಸವು ಈ ವರ್ಷ ಈಕ್ವಿಟಿ ಮಾರುಕಟ್ಟೆಗಳ ಉತ್ಕೃಷ್ಟತೆ ಹೆಚ್ಚಲು ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

‘ದೇಶದ ಆರ್ಥಿಕತೆಯು ಸದೃಢವಾದಾಗ ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ’ ಎಂದು ಎಯುಎಂ ಕ್ಯಾಪಿಟಲ್‌ನ ರಾಷ್ಟ್ರೀಯ ಸಂಪತ್ತಿನ ಮುಖ್ಯಸ್ಥ ಮುಖೇಶ್ ಕೊಚಾರ್ ಹೇಳಿದ್ದಾರೆ.

‘ಈ ವರ್ಷ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಜಿಡಿಪಿ ಬೆಳವಣಿಗೆ ವೃದ್ಧಿಸಿದೆ. ಇದರಿಂದ ಹೂಡಿಕೆದಾರರ ನಿರೀಕ್ಷೆಯೂ ಹೆಚ್ಚಾಯಿತು. ಮುಂಬರುವ ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಿ ರಾಜಕೀಯ ಸ್ಥಿರತೆ ಇರಲಿದೆ ಎಂದು ಹೂಡಿಕೆದಾರರು ನಿರೀಕ್ಷಿಸಿದ್ದಾರೆ. ಅಲ್ಲದೇ, ಮಾರುಕಟ್ಟೆಯಲ್ಲಿ ವಿದೇಶಿ ನಿಧಿಯ ಒಳಹರಿವು ಹೆಚ್ಚಿದೆ. ಈ ಎಲ್ಲಾ ಅಂಶಗಳು ಮಾರುಕಟ್ಟೆ ಏರಿಕೆಗೆ ಕಾರಣವಾಗಿವೆ’ ಎಂದು ಮಾಸ್ಟರ್ ಕ್ಯಾಪಿಟಲ್ ಸರ್ವಿಸಸ್ ಲಿಮಿಟೆಡ್‌ನ ನಿರ್ದೇಶಕ ಪಾಲ್ಕಾ ಅರೋರಾ ಚೋಪ್ರಾ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.