ADVERTISEMENT

ಶೇ 50ರಷ್ಟು ಸುಂಕ | ಸಣ್ಣ ಉದ್ದಿಮೆಗಳಿಗೆ ಸಮಸ್ಯೆ: ರತ್ನ ಆಭರಣ ಉದ್ಯಮಕ್ಕೆ ಪೆಟ್ಟು

‘ಸುಂಕದ ದಿಢೀರ್ ಏರಿಕೆಯ ಪರಿಣಾಮ ಸಣ್ಣ ಉದ್ದಿಮೆಗಳ ಮೇಲೆ ಹೆಚ್ಚು’

ಪಿಟಿಐ
Published 8 ಆಗಸ್ಟ್ 2025, 2:32 IST
Last Updated 8 ಆಗಸ್ಟ್ 2025, 2:32 IST
<div class="paragraphs"><p>ರಫ್ತು</p></div>

ರಫ್ತು

   

ನವದೆಹಲಿ: ಭಾರತದ ಸರಕುಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಶೇಕಡ 50ರಷ್ಟು ತೆರಿಗೆಯ ಕಾರಣದಿಂದಾಗಿ ಭಾರಿ ನಷ್ಟ ಉಂಟಾಗಲಿದೆ ಎಂದು ಭಾರತದ ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಸುಂಕವನ್ನು ಹೆಚ್ಚು ಮಾಡಿರುವುದು ಭಾರತದ ರಫ್ತು ವಹಿವಾಟುಗಳಿಗೆ ಗಂಭೀರ ಸ್ವರೂಪದ ಹಿನ್ನಡೆ. ನಾವು ಅಮೆರಿಕದ ಮಾರುಕಟ್ಟೆಗೆ ಕಳುಹಿಸುವ ಶೇ 55ರಷ್ಟು ಪಾಲಿನ ಮೇಲೆ ನೇರ ಪರಿಣಾಮ ಉಂಟಾಗಲಿದೆ’ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದ್ದಾರೆ.

ADVERTISEMENT

ಖರೀದಿದಾರರು ತಾವು ಯಾವ ದೇಶದ ಸರಕು ಖರೀದಿಸಬೇಕು ಎಂಬುದನ್ನು ಪುನರ್‌ ಪರಿಶೀಲಿಸಲು ಆರಂಭಿಸಿರುವ ಕಾರಣಕ್ಕೆ ‘ಹಲವು ರಫ್ತು ಕಾರ್ಯಾದೇಶಗಳನ್ನು ಈಗಾಗಲೇ ತಡೆಹಿಡಿಯಲಾಗಿದೆ’ ಎಂದು ಕೂಡ ಅವರು ಹೇಳಿದ್ದಾರೆ.

ಸಣ್ಣ ಹಾಗೂ ಮಧ್ಯಮ ಗಾತ್ರದ ಹಲವು ಉದ್ಯಮಗಳ ಲಾಭದ ಪ್ರಮಾಣವು ಈಗಾಗಲೇ ಬಹಳ ಕಡಿಮೆ ಇದೆ. ಈಗ ಆಗಿರುವ ದಿಢೀರ್ ವೆಚ್ಚ ಏರಿಕೆಯನ್ನು ತಾಳಿಕೊಳ್ಳುವುದು ಆಗದ ಕೆಲಸ ಎಂದು ಅವರು ವಿವರಿಸಿದ್ದಾರೆ.

‘ಅಧ್ಯಕ್ಷ ಟ್ರಂಪ್ ಅವರು ಹೆಚ್ಚುವರಿಯಾಗಿ ಶೇ 25ರಷ್ಟು ತೆರಿಗೆ ವಿಧಿಸಿರುವುದು ಜಾರಿಗೆ ಬಂದಲ್ಲಿ, ಪ್ರವರ್ಧಮಾನಕ್ಕೆ ಬರುತ್ತಿರುವ ತಯಾರಿಕಾ ಕೇಂದ್ರವಾಗಿ ಭಾರತವು ಗಳಿಸಿರುವ ಆಕರ್ಷಣೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದು ಕ್ಯಾಪಿಟಲ್ ಎಕನಾಮಿಕ್ಸ್ ಸಂಸ್ಥೆಯ ಶಿಲಾನ್ ಶಾ ಹೇಳಿದ್ದಾರೆ. 

ರಫ್ತಿನಲ್ಲಿ ಆಗುವ ಇಳಿಕೆಯ ಪರಿಣಾಮವಾಗಿ ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆ ಪ್ರಮಾಣವು ಈ ವರ್ಷದಲ್ಲಿ ಸರಿಸುಮಾರು ಶೇ 6ರಷ್ಟು ಮಾತ್ರ ಆಗಲಿದೆ ಎಂದು ಕೂಡ ಅವರು ಅಂದಾಜು ಮಾಡಿದ್ದಾರೆ.

ಸ್ಮಾರ್ಟ್‌ಫೋನ್‌ಗಳು, ಔಷಧಗಳು, ಮುತ್ತು ಮತ್ತು ಹವಳಗಳು, ಜವಳಿ ಹಾಗೂ ಕೈಗಾರಿಕಾ ಯಂತ್ರೋಪಕರಣಗಳು ಭಾರತದಿಂದ ಅಮೆರಿಕಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತವೆ. ಆಭರಣಗಳು ಹಾಗೂ ಸಾಗರ ಉತ್ಪನ್ನಗಳು ಕೂಡ ಹೆಚ್ಚು ರಫ್ತಾಗುತ್ತವೆ.

‘ಕೇಂದ್ರ ತಕ್ಷಣವೇ ನೆರವು ಒದಗಿಸಬೇಕು’

ನವದೆಹಲಿ: ಸುಂಕವನ್ನು ದುಪ್ಪಟ್ಟು ಮಾಡಿರುವ ಅಮೆರಿಕದ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಿದ್ಧ ಉಡುಪು ರಫ್ತು ಉತ್ತೇಜನಾ ಮಂಡಳಿಯು (ಎಇಪಿಸಿ) ಕೇಂದ್ರ ಸರ್ಕಾರವು ತಕ್ಷಣವೇ ಹಣಕಾಸಿನ ನೆರವು ಒದಗಿಸಬೇಕು ಎಂದು ಆಗ್ರಹಿಸಿದೆ. ಅತಿಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಹೆಚ್ಚು ಹಾನಿಯಾಗಲಿದೆ ಎಂದು ಅದು ಹೇಳಿದೆ. ‘ಈ ಪರಿಯ ಸುಂಕವನ್ನು ನಮ್ಮ ಉದ್ಯಮವು ತಾಳಿಕೊಳ್ಳಲು ಸಾಧ್ಯವೇ ಇಲ್ಲ. ಅಸಮರ್ಥನೀಯವಾದ ಈ ಸುಂಕ ಏರಿಕೆಯು ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಸಿದ್ಧ ಉಡುಪು ಉದ್ಯಮದ ಪಾಲಿಗೆ ಸಾವಿನ ಕರೆಗಂಟೆಯಂತೆ ಇದೆ ಎಂಬುದನ್ನು ಸರ್ಕಾರವೂ ಅರ್ಥ ಮಾಡಿಕೊಳ್ಳುತ್ತದೆ ಎನ್ನುವ ವಿಶ್ವಾಸವು ನನಗೆ ಇದೆ’ ಎಂದು ಮಂಡಳಿಯ ಅಧ್ಯಕ್ಷ ಸುಧೀರ್ ಸೇಖ್ರಿ ಹೇಳಿದ್ದಾರೆ. ಭಾರತದ ಸಿದ್ಧ ಉಡುಪು ಉದ್ಯಮಕ್ಕೆ ಅಮೆರಿಕವು ದೊಡ್ಡ ಮಾರುಕಟ್ಟೆ. 2024ರಲ್ಲಿ ಭಾರತದ ಒಟ್ಟು ಜವಳಿ ರಫ್ತಿನಲ್ಲಿ ಅಮೆರಿಕದ ಪಾಲು ಶೇ 33ರಷ್ಟು ಇತ್ತು.

ರತ್ನ ಆಭರಣ ಉದ್ಯಮಕ್ಕೆ ಪೆಟ್ಟು

ರತ್ನ ಮತ್ತು ಆಭರಣಗಳ ರಫ್ತುದಾರರ ಸಂಘಟನೆಯಾದ ‘ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿ’ಯು ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲು ನೀತಿಗಳಲ್ಲಿ ತಕ್ಷಣವೇ ಸುಧಾರಣೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಭಾರತದ ರತ್ನ ಮತ್ತು ಆಭರಣಗಳಿಗೆ ಅಮೆರಿಕವು ದೊಡ್ಡ ಮಾರುಕಟ್ಟೆ. ಈ ಉದ್ಯಮ ವಲಯವು ನಡೆಸುವ ಜಾಗತಿಕ ವಹಿವಾಟಿನಲ್ಲಿ ಅಮೆರಿಕದ ಪಾಲು ಸರಿಸುಮಾರು ಶೇ 30ರಷ್ಟಿದೆ ಎಂದು ಮಂಡಳಿಯ ಅಧ್ಯಕ್ಷ ಕಿರೀಟ್ ಭನ್ಸಾಲಿ ಹೇಳಿದ್ದಾರೆ. ಈ ಪ್ರಮಾಣದ ಸುಂಕವು ರತ್ನ ಮತ್ತು ಆಭರಣ ವಲಯಕ್ಕೆ ಬಹಳ ಕೇಡು ಉಂಟುಮಾಡಲಿದೆ ಎಂದು ಭನ್ಸಾಲಿ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಿಂದ ರಫ್ತಾಗುವ ಕತ್ತರಿಸಿದ ಹಾಗೂ ಪಾಲಿಷ್ ಮಾಡಲಾದ ವಜ್ರಗಳ ಪೈಕಿ ಶೇ 50ರಷ್ಟು ಅಮೆರಿಕ ತಲುಪುತ್ತವೆ. ಪರಿಷ್ಕೃತ ಸುಂಕದ ಪರಿಣಾಮವಾಗಿ ಈ ಉದ್ಯಮ ವಲಯದಲ್ಲಿ ಚಟುವಟಿಕೆಗಳು ಸ್ಥಗಿತಗೊಳ್ಳಬಹುದು ಎಂಬ ಆತಂಕ ಎದುರಾಗಿದೆ. ಭಾರತದಕ್ಕೆ ಸ್ಪರ್ಧೆ ನೀಡುವ ಇತರ ತಯಾರಿಕಾ ದೇಶಗಳ (ಟರ್ಕಿ ವಿಯೆಟ್ನಾಂ ಥಾಯ್ಲೆಂಡ್) ಮೇಲೆ ಕಡಿಮೆ ಸುಂಕ ವಿಧಿಸಲಾಗಿದೆ. ಇದು ಭಾರತದ ಉದ್ಯಮದ ಪಾಲಿಗೆ ಹೆಚ್ಚು ಕಳವಳಕಾರಿ ಎಂದು ಭನ್ಸಾಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.