ADVERTISEMENT

ಸಾನಂದ ಘಟಕ ಸ್ವಾಧೀನ: ಗುಜರಾತ್ ಸರ್ಕಾರದೊಂದಿಗೆ ಟಾಟಾ, ಫೋರ್ಡ್‌ ಒಪ್ಪಂದ

ಪಿಟಿಐ
Published 30 ಮೇ 2022, 11:46 IST
Last Updated 30 ಮೇ 2022, 11:46 IST
   

ನವದೆಹಲಿ: ಗುಜರಾತ್‌ನ ಸಾನಂದದಲ್ಲಿ ಇರುವ ಫೋರ್ಡ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಫ್‌ಐಪಿಎಲ್‌) ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ತನ್ನ ಅಂಗಸಂಸ್ಥೆ ಮತ್ತು ಫೋರ್ಡ್‌ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಟಾಟಾ ಮೋಟರ್ಸ್‌ ಸೋಮವಾರ ತಿಳಿಸಿದೆ.

ಟಾಟಾ ಮೋಟರ್ಸ್‌ನ ಅಂಗಸಂಸ್ಥೆ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ (ಟಿಪಿಇಎಂಎಲ್‌) ಮತ್ತು ಎಫ್‌ಐಪಿಎಲ್‌ ಕಂಪನಿಗಳು ಗುಜರಾತ್‌ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿವೆ. ತಯಾರಿಕಾ ಘಟಕದ ಜೊತೆ ಜಾಗ, ಕಟ್ಟಡಗಳು, ಯಂತ್ರಗಳು ಮತ್ತು ಸಲಕರಣೆಗಳೂ ಸ್ವಾಧೀನ ಒಪ್ಪಂದದಲ್ಲಿ ಸೇರಿಕೊಂಡಿವೆ ಎಂದು ಟಾಟಾ ಮೋಟರ್ಸ್‌ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಘಟಕದ ವಾಹನ ತಯಾರಿಕೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿ ಸಹ ಟಾಟಾ ಕಂಪನಿಗೆ ವರ್ಗಾವಣೆ ಆಗಲಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಮತ್ತು ವಹಿವಾಟು ಅವಕಾಶಗಳನ್ನು ಸೃಷ್ಟಿಸಲು ಈ ಒಪ್ಪಂದದಿಂದಾಗಿ ಕಂಪನಿಗೆ ಸಾಧ್ಯವಾಗಲಿದೆ’ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ಲಿಮಿಟೆಡ್‌ ಮತ್ತು ಟಿಪಿಇಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್‌ ಚಂದ್ರ ತಿಳಿಸಿದ್ದಾರೆ.

‘ಪ್ರಯಾಣಿಕ ವಾಹನ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಅವರು ಹೇಳಿದ್ದಾರೆ.

‘ಇದರಿಂದಾಗಿ ಅಂತರರಾಷ್ಟ್ರೀಯ ಹೂಡಿಕೆ ಸಮುದಾಯದ ವಿಶ್ವಾಸ ವೃದ್ಧಿಸಲಿದೆ. ದೇಶದ ಮುಂಚೂಣಿ ಹೂಡಿಕೆ ತಾಣವಾಗಿ ಗುಜರಾತ್‌ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದ್ದು, ಆತ್ಮನಿರ್ಭರ ಭಾರತಕ್ಕೆ ಶಕ್ತಿ ತುಂಬಲಿದೆ’ ಎಂದು ಗುಜರಾತ್‌ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್‌ ಗುಪ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.