ನವದೆಹಲಿ: ದೇಶದ ಅತಿದೊಡ್ಡ ಐ.ಟಿ ಸೇವಾ ಪೂರೈಕೆದಾರ ಕಂಪನಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ರಸಕ್ತ ಆರ್ಥಿಕ ವರ್ಷದಲ್ಲಿ 12 ಸಾವಿರಕ್ಕೂ (ಶೇ 2ರಷ್ಟು) ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಷೇರುಗಳ ಮೌಲ್ಯ ಸುಮಾರು ಶೇ 2ರಷ್ಟು ಕುಸಿತ ಕಂಡಿವೆ.
ಬಿಎಸ್‌ಇಯಲ್ಲಿ ಷೇರು ಶೇ1.69 ರಷ್ಟು ಕುಸಿದು ₹3,081.20ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ, ಷೇರು ಶೇ1.7 ರಷ್ಟು ಕುಸಿದು ₹3,081.60 ಕ್ಕೆ ತಲುಪಿದೆ.
ಪ್ರಸಕ್ತ ವರ್ಷದ ಜೂನ್ 30ರಂದು ಕಂಪನಿಯು ಜಾಗತಿಕವಾಗಿ 6,13,069 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಶೇ 2ರಷ್ಟು ಅಂದರೆ ಅಂದಾಜು 12,261 ಉದ್ಯೋಗಿಗಳನ್ನು ಕಡಿತಗೊಳಿಸಲಿದೆ. ಹಿರಿಯ ಮತ್ತು ಮಧ್ಯಮ ಶ್ರೇಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಲಿದೆ ಎಂದು ಟಿಸಿಎಸ್ ಭಾನುವಾರ ತಿಳಿಸಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 5 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು.
ಹೊಸ ತಂತ್ರಜ್ಞಾನದಲ್ಲಿನ ಹೂಡಿಕೆಗಳು, ಕೃತಕ ಬುದ್ಧಿಮತ್ತೆ ನಿಯೋಜನೆ, ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕಂಪನಿಯು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಉದ್ದೇಶಿಸಿದೆ. ಅಲ್ಲದೆ, ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುತ್ತಿದ್ದೇವೆ. ಇದರ ಭಾಗವಾಗಿ ಉದ್ಯೋಗ ಕಡಿತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.