ADVERTISEMENT

ಸೆನ್ಸೆಕ್ಸ್: ಆರು ತಿಂಗಳ ಅತಿದೊಡ್ಡ ಕುಸಿತ

ಪಿಟಿಐ
Published 28 ಅಕ್ಟೋಬರ್ 2021, 13:48 IST
Last Updated 28 ಅಕ್ಟೋಬರ್ 2021, 13:48 IST
   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರದ ವಹಿವಾಟಿನಲ್ಲಿ 1,158 ಅಂಶ ಕುಸಿಯಿತು. ಆರು ತಿಂಗಳ ಅವಧಿಯಲ್ಲಿ ಸೆನ್ಸೆಕ್ಸ್ ಒಂದು ದಿನದಲ್ಲಿ ಕಂಡಿರುವ ಅತಿದೊಡ್ಡ ಕುಸಿತ ಇದು.

ಬ್ಯಾಂಕಿಂಗ್, ಎಫ್‌ಎಂಸಿಜಿ ಮತ್ತು ಇಂಧನ ವಲಯದ ಷೇರುಗಳನ್ನು ಹೂಡಿಕೆದಾರರು ಭಾರಿ ಸಂಖ್ಯೆಯಲ್ಲಿ ಮಾರಾಟ ಮಾಡಿದರು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕೂಡ ಕುಸಿತ ಕಂಡವು. ದಿನದ ಕೊನೆಯಲ್ಲಿ ಸೆನ್ಸೆಕ್ಸ್ 59,984 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಏಪ್ರಿಲ್‌ 12ರ ವಹಿವಾಟಿನಲ್ಲಿ ಸೆನ್ಸೆಕ್ಸ್ 1,708 ಅಂಶ ಇಳಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಗುರುವಾರದ ವಹಿವಾಟಿನಲ್ಲಿ 353 ಅಂಶ ಕುಸಿಯಿತು.

ADVERTISEMENT

ಹೂಡಿಕೆದಾರರು ಗುರುವಾರದ ವಹಿವಾಟಿನಲ್ಲಿ ಒಟ್ಟು ₹ 4.82 ಲಕ್ಷ ಕೋಟಿ ಮೌಲ್ಯದ ಸಂಪತ್ತು ಕಳೆದುಕೊಂಡರು. ‘ಏಷ್ಯಾ ಮತ್ತು ಯುರೋಪಿನ ಇತರ ಷೇರು ಮಾರುಕಟ್ಟೆಗಳಲ್ಲಿನ ವಹಿವಾಟಿನ ಪ್ರಭಾವು ದೇಶಿ ಷೇರು ಮಾರುಕಟ್ಟೆಗಳ ಮೇಲೆಯೂ ಆಗಿದೆ. ಹೂಡಿಕೆದಾರರು ಯುರೋಪಿನ ಕೇಂದ್ರೀಯ ಬ್ಯಾಂಕ್‌ ಕೈಗೊಳ್ಳುವ ತೀರ್ಮಾನವನ್ನು ಎದುರು ನೋಡುತ್ತಿದ್ದಾರೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ ಶೇಕಡ 1.11ರಷ್ಟು ಇಳಿಕೆ ಆಗಿದ್ದು, 82.94 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.