
ನವದೆಹಲಿ: ಸಿಗರೇಟುಗಳ ಮೇಲಿನ ಎಕ್ಸೈಸ್ ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದರಿಂದ ರೈತರು, ಕಾರ್ಮಿಕರ ಮೇಲೆ ಆಗಿರುವ ದುಷ್ಪರಿಣಾಮವನ್ನು ವಿವರಿಸಿ ತಂಬಾಕು ಮಂಡಳಿಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದೆ.
ಫೆಬ್ರುವರಿ 1ರಿಂದ ಜಾರಿಗೆ ಬಂದಿರುವ ಎಕ್ಸೈಸ್ ಸುಂಕ ಹೆಚ್ಚಳವು ಸಿಗರೇಟು ಬೆಲೆಯು ಶೇ 60ರಷ್ಟರವರೆಗೆ ಹೆಚ್ಚಾಗುವಂತೆ ಮಾಡಿದೆ.
ಸುಂಕದ ಭಾರಿ ಏರಿಕೆಯು ಅಕ್ರಮ ಸಿಗರೇಟು ವಹಿವಾಟು ಜಾಸ್ತಿಯಾಗುವ ಭೀತಿ ಉಂಟುಮಾಡಿದೆ. ಅನಿಯಂತ್ರಿತ ಸಿಗರೇಟು ಮಾರುಕಟ್ಟೆಯು ಸರ್ಕಾರಗಳ ತೆರಿಗೆ ವರಮಾನವನ್ನು ಕಿತ್ತುಕೊಳ್ಳುತ್ತದೆ, ಕಾನೂನುಬದ್ಧವಾದ ವಹಿವಾಟುಗಳಿಗೆ ಧಕ್ಕೆ ಉಂಟುಮಾಡುತ್ತದೆ, ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಸೃಷ್ಟಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಉದ್ಯಮದ ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ, ರೈತ ಸಮುದಾಯದ ಮೇಲಿನ ಗಣನೀಯ ಪರಿಣಾಮವನ್ನು ಗಮನಿಸಿ, ನೀವು ಮಧ್ಯಪ್ರವೇಶ ಮಾಡಬೇಕು ಹಾಗೂ ತಂಬಾಕು ಉತ್ಪನ್ನಗಳ ಮೇಲಿನ ಅತಿಯಾದ ಸುಂಕವನ್ನು ಪರಿಷ್ಕರಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ’ ಎಂದು ತಂಬಾಕು ಮಂಡಳಿಯ ಅಧ್ಯಕ್ಷ ಯಶವಂತ ಕುಮಾರ್ ಚಿದಿಪೋತು ಪತ್ರದಲ್ಲಿ ಹೇಳಿದ್ದಾರೆ.
‘ಸಿಗರೇಟುಗಳ ಮೇಲಿನ ಎಕ್ಸೈಸ್ ಸುಂಕವನ್ನು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಹೆಚ್ಚು ಮಾಡಿರುವುದರಿಂದಾಗಿ ಲಕ್ಷಾಂತರ ರೈತರಿಗೆ, ಕಾರ್ಮಿಕರಿಗೆ ಮತ್ತು ಸಣ್ಣ ಅಂಗಡಿಗಳ ಮಾಲೀಕರಿಗೆ ತೊಂದರೆ ಆಗಿದೆ’ ಎಂದು ಅವರು ವಿವರಿಸಿದ್ದಾರೆ.
ತೆರಿಗೆ ಹೆಚ್ಚಳದಿಂದಾಗಿ ರೈತರ ಆದಾಯ ಕಡಿಮೆ ಆಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ತಂಬಾಕಿನ ಮಾರುಕಟ್ಟೆ ಬೆಲೆ ಕುಸಿಯಬಹುದು, ರೈತರು ಹೊರಬರಲಾಗದಂತಹ ಸಾಲದ ಸುಳಿಗೆ ಸಿಲುಕಬಹುದು ಎಂಬ ಕಳವಳ ವ್ಯಾಪಕವಾಗಿದೆ. 2014ರಲ್ಲಿ ತೆರಿಗೆಯನ್ನು ಶೇ 22ರಷ್ಟು ಹೆಚ್ಚು ಮಾಡಿದ್ದರಿಂದಾಗಿ ತಂಬಾಕಿನ ಬೆಲೆಯು ಕೆ.ಜಿ.ಗೆ ₹20ರಿಂದ ₹30ರವರೆಗೆ ಕಡಿಮೆ ಆಗಿತ್ತು ಎಂದು ಚಿದಿಪೋತು ನೆನಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.