ADVERTISEMENT

ಜಿಎಸ್‌ಟಿ ದರ ಶೇ 12ಕ್ಕೆ ಏರಿಕೆ :ಜ.1ರಿಂದ ಪಾದರಕ್ಷೆ, ಬಟ್ಟೆ ದುಬಾರಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 20:22 IST
Last Updated 25 ಡಿಸೆಂಬರ್ 2021, 20:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಾದರಕ್ಷೆ ಮತ್ತು ಜವಳಿ ಮೇಲಿನ ಜಿಎಸ್‌ಟಿ ದರವು ಜನವರಿ 1ರಿಂದ ಶೇ 12ಕ್ಕೆ ಏರಿಕೆ ಆಗಲಿದೆ. ಈ ಕ್ರಮದಿಂದಾಗಿ ಪಾದರಕ್ಷೆ ಮತ್ತು ಬಟ್ಟೆಗಳ ಮಾರಾಟ ದರವೂ ಹೆಚ್ಚಾಗುವ ಸಾಧ್ಯತೆ ಇದೆ.

ಪಾದರಕ್ಷೆ ಮತ್ತು ಜವಳಿ ಮೇಲೆ ಶೇ 5 ರಷ್ಟು ಇದ್ದ ಜಿಎಸ್‌ಟಿ ದರವನ್ನು ಶೇ 12ಕ್ಕೆ ಹೆಚ್ಚಿಸುವ ಕುರಿತು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಅಧಿಸೂಚನೆ ಹೊರಡಿಸಿದೆ.

ಕೋವಿಡ್‌ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಪಾದರಕ್ಷೆಗಳ ವ್ಯಾಪಾರ ಈಗಷ್ಟೇ ಚೇತರಿಕೆಯತ್ತ ಮುಖಮಾಡಿದೆ. ಆದರೆ, ಜಿಎಸ್‌ಟಿ ಹೆಚ್ಚಳದಿಂದ ವ್ಯಾಪಾರಕ್ಕೆ ಮತ್ತೆ ಹಿನ್ನಡೆ ಉಂಟು ಮಾಡಲಿದೆ. ₹ 1000ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳನ್ನು ಖರೀದಿಸು
ವವರ ಪ್ರಮಾಣವೇ ಶೇ 75 ರಿಂದ ಶೇ 80ರಷ್ಟು ಇದ್ದು, ಇವರಿಗೆ ಹೊರೆಯಾಗಲಿದೆ ಎಂದು ಕರ್ನಾಟಕ ಫುಟ್‌ವೇರ್‌ ಹೋಲ್‌ಸೇಲರ್ಸ್‌ ಅಸೋಸಿಯೇಷನ್‌ ತಿಳಿಸಿದೆ.

ADVERTISEMENT

ಸದ್ಯ ₹ 1000ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ಶೇ 5ರಷ್ಟು ಹಾಗೂ ₹ 1000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಪಾದರಕ್ಷೆಗಳಿಗೆ ಶೇ 12ರಷ್ಟು ಜಿಎಸ್‌ಟಿ ಇದೆ.

ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವಲ್ಲಿ ಕೃಷಿ ವಲಯದ ನಂತರದ ಸ್ಥಾನ ಜವಳಿ ಉದ್ಯಮಕ್ಕಿದೆ. ಕೊರೊನಾ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಒಳಗಾಗಿರುವ ವಲಯಗಳಲ್ಲಿ ಜವಳಿ ವಲಯವೂ ಸೇರಿಕೊಂಡಿದೆ. ಜಿಎಸ್‌ಟಿ ಹೆಚ್ಚಳದಿಂದ ಬೇಡಿಕೆ ಇನ್ನಷ್ಟು ಕಡಿಮೆ ಆಗಿ ವ್ಯಾಪಾರಿಗಳು ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಚಿಕ್ಕಪೇಟೆಯಲ್ಲಿ ಜವಳಿ ವ್ಯಾಪಾರಿ ನಡೆಸುತ್ತಿರುವ ಟ್ರೇಡ್‌ ಆ್ಯಕ್ಟಿವಿಸ್ಟ್‌ ಸಜ್ಜನ್‌ ರಾಜ್‌ ಮೆಹ್ತಾ ಹೇಳಿದರು.

ನಿರ್ಧಾರ ಹಿಂಪಡೆಯಲು ಒತ್ತಾಯ
ಜವಳಿ ಉದ್ಯಮದ ಮೇಲಿನ ಜಿಎಸ್‌ಟಿ ಹೆಚ್ಚಿಸುವ ನಿರ್ಧಾರಕ್ಕೆ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘ ವಿರೋಧ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್‌ಗಲ್‌, ತೆರಿಗೆಯನ್ನು ಏಕಾಏಕಿ ಶೇ 140ರಷ್ಟು ಹೆಚ್ಚಿಸಿ ಜವಳಿ ಉದ್ಯಮಕ್ಕೆ, ವ್ಯಾಪಾರಿಗಳಿಗೆ ಮತ್ತು ಜನತೆಗೆ ತೊಂದರೆ ನೀಡಲು ಸರ್ಕಾರ ಮುಂದಾಗಿದೆ. ದರ ಹೆಚ್ಚಳ ಕ್ರಮವನ್ನು ಹಿಂಪಡೆದು, ಈಗಿರುವ ದರವನ್ನೇ ಮುಂದುವರೆಸಬೇಕು’ ಎಂದು ಒತ್ತಾಯಿಸಿದರು.

ಕೊರೊನಾ ಸಾಂಕ್ರಾಮಿಕದಿಂದಾಗಿ ಎರಡು ವರ್ಷದಿಂದ ಜವಳಿ ವಹಿವಾಟು ಶೇ 50ಕ್ಕೆ ಕುಸಿದಿದೆ. ಕಚ್ಚಾವಸ್ತುಗಳ ದರ ಏರಿಕೆಯೂ ಉದ್ದಿಮೆಗೆ ಹೊಡೆತ ನೀಡಿದೆ. ಈ ಸ್ಥಿತಿಯಲ್ಲಿ ತೆರಿಗೆ ಹೆಚ್ಚಿಸಿದರೆ ವ್ಯಾಪಾರ ಪೂರ್ಣ ನೆಲಕಚ್ಚಲಿದೆ. ಉದ್ದಿಮೆಗಳನ್ನು ಮುಚ್ಚುವ ಸಂದರ್ಭ ಎದುರಾಗಿ, ಲಕ್ಷಾಂತರ ನೌಕರರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದೂ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.