ADVERTISEMENT

ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದಿದೆಯಂತೆ ಭಾರತ, ಒಳ್ಳೆಯದು: ಟ್ರಂಪ್

ರಾಯಿಟರ್ಸ್
Published 2 ಆಗಸ್ಟ್ 2025, 6:06 IST
Last Updated 2 ಆಗಸ್ಟ್ 2025, 6:06 IST
<div class="paragraphs"><p>ತೈಲ</p></div>

ತೈಲ

   

ನ್ಯೂಯಾರ್ಕ್: ‘ಭವಿಷ್ಯದಲ್ಲಿ ಎಂದೂ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಭಾರತ ಹೇಳಿದೆ. ಇದು ಉತ್ತಮ ಕ್ರಮ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

‘ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂಬುದನ್ನು ಭಾರತ ಹೇಳಿದೆ ಎಂದು ಕೇಳಿಸಿಕೊಂಡಿದ್ದೇನೆ. ಅದು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ ಭಾರತ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ ಎಂದೆನ್ನಲಾಗಿದೆ. ಅದು ಭಾರತದ ಉತ್ತಮ ನಿರ್ಧಾರ. ನೋಡೋಣ, ಮುಂದೇನಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಸುಮಾರು 70 ರಾಷ್ಟ್ರಗಳಿಗೆ ಸುಂಕ ವಿಧಿಸಿ ಅಮೆರಿಕದ ಶ್ವೇತ ಭವನ ಘೋಷಿಸಿದ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ. ಸರ್ಕಾರದ ಆದೇಶದಂತೆ ಭಾರತದ ಉತ್ಪನ್ನಗಳ ಮೇಲೆ ಅಮೆರಿಕವು ಶೇ 25ರಷ್ಟು ಆಮದು ಸುಂಕ ವಿಧಿಸುತ್ತದೆ. ಆದರೆ ರಷ್ಯಾದಿಂದ ಕಚ್ಚಾ ತೈಲ ಹಾಗೂ ಶಸ್ತ್ರಾಸ್ತ್ರ ಖರೀದಿಗೆ ವಿಧಿಸಲಾಗುತ್ತಿರುವ ದಂಡದ ಪ್ರಮಾಣ ಎಷ್ಟು ಎಂಬುದು ಈವರೆಗೂ ಘೋಷಣೆಯಾಗಿಲ್ಲ.

ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಿದೆ ಎಂಬ ವರದಿಯ ಸತ್ಯಾಸತ್ಯತೆ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಪ್ತಾಹಿಕ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿ, ‘ಉತ್ತಮ ಬೆಲೆಗೆ ಕಚ್ಚಾ ತೈಲ ಖರೀದಿಸುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನ ಯಾವ ರಾಷ್ಟ್ರದಿಂದ ಕಡಿಮೆ ಬೆಲೆಗೆ ತೈಲ ಸಿಗುತ್ತದೋ ಅಲ್ಲಿಂದ ಖರೀದಿಸಲಾಗುವುದು. ಆದರೆ ರಷ್ಯಾದಿಂದ ಖರೀದಿ ನಿಲ್ಲಿಸಲಾಗಿದೆಯೇ ಎಂಬ ಪ್ರಶ್ನೆಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ’ ಎಂದಿದ್ದಾರೆ.

‘ಭಾರತದೊಂದಿಗೆ ಅಮೆರಿಕ ವ್ಯಾಪಾರ ಜಟಾಪಟಿ ಹೊಂದಿದೆ. ಭಾರತ ನಮ್ಮ ಮಿತ್ರ ರಾಷ್ಟ್ರ ಎಂಬುದು ನಿಜ. ಆದರೆ ವ್ಯವಹಾರದಲ್ಲಿ ಅವರು ನಮ್ಮ ಉತ್ಪನ್ನಗಳಿಗೆ ಜಗತ್ತಿನಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರವಾಗಿದೆ. ಯಾವುದೇ ರಾಷ್ಟ್ರವೂ ಹೊಂದಿಲ್ಲದ ಅತ್ಯಂತ ಕೆಟ್ಟ ಹಾಗೂ ಅಸಹ್ಯಕರ ವ್ಯಾಪಾರ ನಿರ್ಬಂಧಗಳನ್ನು ಹೊಂದಿದೆ’ ಎಂದು ಟೀಕಿಸಿದ್ದಾರೆ.

‘ದೊಡ್ಡ ಪ್ರಮಾಣದಲ್ಲಿ ಸೇನಾ ಶಸ್ತ್ರಾಸ್ತ್ರಗಳನ್ನು ಸದಾ ಅವರು ರಷ್ಯಾದಿಂದ ಖರೀದಿ ಮಾಡುತ್ತಾರೆ. ಉಕ್ರೇನ್‌ನಲ್ಲಿ ರಕ್ತಪಾತ ನಿಲ್ಲಿಸುವಂತೆ ರಷ್ಯಾಗೆ ಒತ್ತಡ ಹೇರುತ್ತಿದ್ದರೂ, ಭಾರತವು ಇಂಧನವನ್ನು ಚೀನಾ ಮತ್ತು ರಷ್ಯಾದಿಂದ ಅಧಿಕ ಪ್ರಮಾಣದಲ್ಲಿ ಖರೀದಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತದ ಉತ್ಪನ್ನಗಳ ಮೇಲೆ ಆ. 1ರಿಂದ ಶೇ 25ರಷ್ಟು ಆಮದು ಸುಂಕ ವಿಧಿಸಲಾಗಿದೆ’ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಭಾರತ ಮತ್ತು ರಷ್ಯಾ ಏನಾದರೂ ಮಾಡಿಕೊಳ್ಳಲಿ. ಅವರದ್ದು ಸತ್ತ ಆರ್ಥಿಕತೆ ಇನ್ನಷ್ಟು ಪಾತಾಳಕ್ಕೆ ಕುಸಿಯಲಿದೆ. ಅದರ ಬಗ್ಗೆ ನನಗೇನೂ ಹೆಚ್ಚಿನ ಆಸಕ್ತಿ ಇಲ್ಲ. ಭಾರತದೊಂದಿಗೆ ನಮ್ಮದು ಅತ್ಯಲ್ಪ ಪ್ರಮಾಣದ ವ್ಯಾಪಾರ. ಅವರ ಸುಂಕ ಬಹಳಾ ಹೆಚ್ಚು. ಹಾಗೆಯೇ ಅಮೆರಿಕ ಮತ್ತು ರಷ್ಯಾ ಯಾವುದೇ ವ್ಯವಹಾರವನ್ನು ಹೊಂದಿಲ್ಲ’ ಎಂದು ಟ್ರಂಪ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.