ADVERTISEMENT

ಸ್ವಾಯತ್ತತೆ ರಕ್ಷಿಸುವ ಭರವಸೆ

ಆರ್‌ಬಿಐ ನೂತನ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:00 IST
Last Updated 12 ಡಿಸೆಂಬರ್ 2018, 20:00 IST
ಶಕ್ತಿಕಾಂತ್‌ ದಾಸ್‌
ಶಕ್ತಿಕಾಂತ್‌ ದಾಸ್‌   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸ್ವಾಯತ್ತತೆ, ವಿಶ್ವಾಸಾರ್ಹತೆ ಮತ್ತು ಸಮಗ್ರತೆ ಎತ್ತಿಹಿಡಿಯಲು ತಾವು ಸರ್ವ ಪ್ರಯತ್ನ ಮಾಡುವುದಾಗಿ ಹೊಸ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಭರವಸೆ ನೀಡಿದ್ದಾರೆ.

ಬುಧವಾರ ಇಲ್ಲಿ ಆರ್‌ಬಿಐನ 25ನೇಯ ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಸುದ್ದಿಗೋಷ್ಠಿ
ಯಲ್ಲಿ ಮಾತನಾಡುತ್ತಿದ್ದರು. ಕೇಂದ್ರೀಯ ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಒಳಪಡುವ ಕೇಂದ್ರ ಸರ್ಕಾರವೂ ಸೇರಿದಂತೆ ಎಲ್ಲ ಭಾಗಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಧಾನ ಮಾರ್ಗದಲ್ಲಿ ಮುನ್ನಡೆಯುವುದಾಗಿ ಹೇಳಿದ್ದಾರೆ.

‘ದೇಶಿ ಅರ್ಥ ವ್ಯವಸ್ಥೆಗೆ ಸದ್ಯಕ್ಕೆ ಬೇಕಾಗಿರುವ ಅಗತ್ಯ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವೆ. ಈ ನಿಟ್ಟಿನಲ್ಲಿನ ಮೊದಲ ಹೆಜ್ಜೆಯಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಖ್ಯಸ್ಥರನ್ನು ಭೇಟಿಯಾಗುವೆ.

ADVERTISEMENT

‘ಆರ್‌ಬಿಐ ಶ್ರೇಷ್ಠ ಸಂಸ್ಥೆಯಾಗಿದೆ. ಅದಕ್ಕೆ ಅದರದ್ದೇ ಆದ ಸುದೀರ್ಘ ಮತ್ತು ಭವ್ಯ ಪರಂಪರೆ ಇದೆ. ಅದರ ಸ್ವಾಯತ್ತತೆಗೆ ಯಾವುದೇ ಧಕ್ಕೆ ಒದಗುವುದಿಲ್ಲ ಎಂದು ನಾನು ಭರವಸೆ ನೀಡುವೆ. ದೇಶವನ್ನು ಮುನ್ನಡೆಸುವ ಕೇಂದ್ರ ಸರ್ಕಾರವು ಆರ್‌ಬಿಐನ ಪ್ರಮುಖ ಪಾಲುದಾರ ಮತ್ತು ಮಾಲೀಕನಾಗಿದೆ.

‘ಕೇಂದ್ರೀಯ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಸಂಘರ್ಷದ ಬಗ್ಗೆ ನಾನು ಮಾತನಾಡಲಾರೆ. ಪ್ರತಿಯೊಂದು ಸಂಸ್ಥೆಯು ತನ್ನ ಸ್ವಾಯತ್ತತೆ ಕಾಪಾಡಿಕೊಳ್ಳಬೇಕು ಮತ್ತು ವಿಶ್ವಾಸಾರ್ಹತೆಗೆ ಬದ್ಧರಾಗಿರಬೇಕು. ಆರ್‌ಬಿಐ ಮತ್ತು ಸರ್ಕಾರದ ನಡುವಣ ಸಂಬಂಧ ಮುರಿದು ಬಿದ್ದಿದೆಯೇ ಎನ್ನುವುದು ನನಗೆ ತಿಳಿಯದು. ಆದರೆ, ಭಾಗಿದಾರರ ಮಧ್ಯೆ ನಿರಂತರವಾಗಿ ಸಂಧಾನ ಮಾತುಕತೆ ನಡೆಯುತ್ತಿರಬೇಕು ಎಂಬುದು ನನ್ನ ನಿಲುವಾಗಿದೆ’ ಎಂದರು.

‘ಆರ್‌ಬಿಐ ಗವರ್ನರ್‌ನಾಗಿ ಅಧಿಕಾರ ಸ್ವೀಕರಿಸಿರುವೆ. ನನಗೆ ಶುಭ ಕೋರಿರುವ ಎಲ್ಲರಿಗೂ ಧನ್ಯವಾದಗಳು’ ಎಂದೂ ದಾಸ್‌ ಟ್ವೀಟ್‌ ಮಾಡಿದ್ದಾರೆ.

‘ಆರ್‌ಬಿಐನ ಉನ್ನತ ಹುದ್ದೆ ನಿಭಾಯಿಸಲು ಬೇಕಾದ ಎಲ್ಲ ಅರ್ಹತೆಗಳು ದಾಸ್‌ ಅವರಲ್ಲಿ ಇವೆ. ಅವರೊಬ್ಬ ಹಿರಿಯ ಮತ್ತು ಅನುಭವಿ ನಿವೃತ್ತ ಸರ್ಕಾರಿ ನೌಕರರಾಗಿದ್ದಾರೆ. ತಮಿಳುನಾಡು ಮತ್ತು ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಇವರು ಹಣಕಾಸು ಮತ್ತು ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಬಣ್ಣಿಸಿದ್ದಾರೆ.

‘ದೇಶಿ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳನ್ನು ಇವರು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎನ್ನುವುದರ ಬಗ್ಗೆ ದೃಢ ವಿಶ್ವಾಸ ಇದೆ’ ಎಂದೂ ಹೇಳಿದ್ದಾರೆ.

ಆರ್‌ಬಿಐನ ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜತೆಗಿನ ಸಂಘರ್ಷದ ಕಾರಣಕ್ಕೆ ಹಠಾತ್ತಾಗಿ ರಾಜೀನಾಮೆ ಪ್ರಕಟಿಸಿದ ಉರ್ಜಿತ್‌ ಪಟೇಲ್‌ ಅವರಿಂದ ಗವರ್ನರ್‌ ಹುದ್ದೆ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.