ADVERTISEMENT

ಉಕ್ರೇನ್ ಸಂಘರ್ಷ: ಕಚ್ಚಾ ಸೂರ್ಯಕಾಂತಿ ಎಣ್ಣೆ ಶೇ 25ರಷ್ಟು ಪೂರೈಕೆ ಕೊರತೆ ಸಾಧ್ಯತೆ

ಕ್ರಿಸೆಲ್‌ ವರದಿ

ಪಿಟಿಐ
Published 31 ಮಾರ್ಚ್ 2022, 12:40 IST
Last Updated 31 ಮಾರ್ಚ್ 2022, 12:40 IST
ಸೂರ್ಯಕಾಂತಿ ಎಣ್ಣೆ (ಸಾಂದರ್ಭಿಕ ಚಿತ್ರ)
ಸೂರ್ಯಕಾಂತಿ ಎಣ್ಣೆ (ಸಾಂದರ್ಭಿಕ ಚಿತ್ರ)   

ಮುಂಬೈ: ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಮುಂದಿನ ಹಣಕಾಸು ವರ್ಷದಲ್ಲಿ ಭಾರತಕ್ಕೆ ಕಚ್ಚಾ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ಶೇಕಡ 25ರಷ್ಟು ಅಥವಾ ಗರಿಷ್ಠ 6 ಲಕ್ಷ ಟನ್‌ಗಳಷ್ಟು ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಭಾರತಕ್ಕೆ ಶೇ 70ರಷ್ಟು ಕಚ್ಚಾ ಸೂರ್ಯಕಾಂತಿ ಎಣ್ಣೆಯು ಉಕ್ರೇನ್‌ನಿಂದ ಪೂರೈಕೆ ಆಗುತ್ತಿದೆ. ಶೇ 20ರಷ್ಟನ್ನು ರಷ್ಯಾ ಪೂರೈಸುತ್ತಿದೆ. ಇನ್ನುಳಿದ ಶೇ 10ರಷ್ಟನ್ನು ಅರ್ಜೆಂಟೀನಾ ಮತ್ತು ಇತರೆ ದೇಶಗಳು ನೀಡುತ್ತಿವೆ.

ಅಡುಗೆ ಎಣ್ಣೆಯ ವಾರ್ಷಿಕ ಬೇಡಿಕೆ ದೇಶದಲ್ಲಿ 230 ಲಕ್ಷ ಟನ್‌ಗಳಿಂದ 240 ಲಕ್ಷ ಟನ್‌ಗಳಷ್ಟು ಇದೆ. ಇದರಲ್ಲಿ ಸಂಸ್ಕರಣೆ ಆಗಿರುವ ಸೂರ್ಯಕಾಂತಿ ಎಣ್ಣೆಯ ಪಾಲು ಸರಿಸುಮಾರು ಶೇ 10ರಷ್ಟು ಇದೆ. ಅಡುಗೆ ಎಣ್ಣೆಯ ಒಟ್ಟು ಬೇಡಿಕೆಯಲ್ಲಿ ಶೇ 60ರಷ್ಟನ್ನು ಆಮದು ಮೂಲಕ ಪೂರೈಸಲಾಗುತ್ತಿದೆ.

ADVERTISEMENT

ಉಕ್ರೇನ್‌ ಮತ್ತು ರಷ್ಯಾ ದೇಶಗಳು ವಾರ್ಷಿಕವಾಗಿ 100 ಲಕ್ಷ ಟನ್‌ ಕಚ್ಚಾ ಸೂರ್ಯಕಾಂತಿ ಎಣ್ಣೆ ರಫ್ತು ಮಾಡುತ್ತಿವೆ. ಅರ್ಜೆಂಟೀನಾ ದೇಶವು ವಾರ್ಷಿಕವಾಗಿ 7 ಲಕ್ಷ ಟನ್‌ಗಳಷ್ಟು ರಫ್ತು ಮಾಡುತ್ತಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ.

ದೇಶದಲ್ಲಿ ಅಡುಗೆ ಎಣ್ಣೆ ಸಂಸ್ಕರಣೆ ಮಾಡುವವರು 30ರಿಂದ 45 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ಸರಕನ್ನು ದಾಸ್ತಾನು ಇಟ್ಟುಕೊಂಡಿರುತ್ತಾರೆ. ಇದರಿಂದಾಗಿ ಅಲ್ಪಾವಧಿಗೆ ಪೂರೈಕೆ ಸಮಸ್ಯೆ ನಿವಾರಿಸಬಹುದು. ಆದರೆ, ಒಂದೊಮ್ಮೆ ರಷ್ಯಾ–ಉಕ್ರೇನ್‌ ಸಂಘರ್ಷ ಶಮನವಾಗದಿದ್ದರೆ, ಪೂರೈಕೆ ಮತ್ತು ಬೆಲೆಯ ಮೇಲೆ ಇನ್ನಷ್ಟು ಹೆಚ್ಚಿನ ಪರಿಣಾಮ ಉಂಟಾಗಬಹುದು.

ರಷ್ಯಾ ಮತ್ತು ಉಕ್ರೇನ್‌ನಿಂದ ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳಲು ಸಮಸ್ಯೆ ಆದಲ್ಲಿ, ಆಗ ಅರ್ಜೆಂಟೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಾಗಿ ಬರಲಿದೆ. ಹೀಗಿದ್ದರೂ, ಅರ್ಜೆಂಟೀನಾದಿಂದ ತರಿಸಿಕೊಳ್ಳುವ ಪ್ರಮಾಣವು ರಷ್ಯಾ ಮತ್ತು ಉಕ್ರೇನ್‌ ಪೂರೈಕೆ ಮಾಡುತ್ತಿರುವುದಕ್ಕೆ ಸಮವಾಗಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.