ನವದೆಹಲಿ: ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು (ಯುಪಿಎಸ್) ಆಯ್ಕೆ ಮಾಡಿಕೊಳ್ಳಲು ಬಯಸುವ ಕೇಂದ್ರ ಸರ್ಕಾರದ ನೌಕರರು ಸೆ.30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ತನ್ನ ನೌಕರರಿಗೆ ಯುಪಿಎಸ್ ಆಯ್ಕೆಯನ್ನು ನೀಡಿದೆ. ಜುಲೈ 20ರವರೆಗೆ 31,555 ನೌಕರರು ಯುಪಿಎಸ್ ಆಯ್ಕೆ ಮಾಡಿಕೊಂಡಿದ್ದಾರೆ.
ಅರ್ಹ ನೌಕರರು ಕೊನೆಗಳಿಗೆಯಲ್ಲಿನ ತರಾತುರಿಯಿಂದ ತಪ್ಪಿಸಿಕೊಳ್ಳಲು ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ಆಯ್ಕೆ ಮಾಡಿದವರು ಸೆ.30ರ ನಂತರ ಮತ್ತೆ ಏಕೀಕೃತ ಪಿಂಚಣಿ ವ್ಯವಸ್ಥೆಗೆ (ಯುಪಿಎಸ್) ಬರಲಾಗದು ಎಂದು ತಿಳಿಸಿದೆ.
ಆ.25ರಂದು ಹಣಕಾಸು ಸಚಿವಾಲಯ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಯುಪಿಎಸ್ ಆಯ್ಕೆ ಮಾಡಿಕೊಂಡವರಿಗೆ ಎನ್‌ಪಿಎಸ್‌ಗೆ ಬರಲು ಒಂದು ಬಾರಿಯ ಅವಕಾಶವನ್ನು ನೀಡಲಾಗಿತ್ತು.
‘ಯುಪಿಎಸ್ ಆಯ್ಕೆ ಮಾಡಿಕೊಂಡವರು ನಿವೃತ್ತಿಗೆ ಒಂದು ವರ್ಷ ಮೊದಲು ಅಥವಾ ಸ್ವಯಂ ನಿವೃತ್ತಿ ಪಡೆಯುವುದಿದ್ದರೆ ನಿವೃತ್ತಿಯ ದಿನಕ್ಕಿಂತ ಮೂರು ತಿಂಗಳು ಮೊದಲು ಎನ್‌ಪಿಎಸ್‌ಗೆ ವರ್ಗಾವಣೆ ಆಗಬಹುದು’ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.