Visa
REUTERS/Dado Ruvic
ಬೆಂಗಳೂರು: ಅನಧಿಕೃತ ಪಾವತಿ ವಿಧಾನ ಅಳವಡಿಸಿಕೊಂಡಿದ್ದಕ್ಕೆ ಕಾರ್ಡ್ ಪೇಮೆಂಟ್ ಸೇವೆ ನೀಡುವ ಬಹುರಾಷ್ಟ್ರೀಯ ಕಂಪನಿ ‘ವಿಸಾ’ಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ₹2.41 ಕೋಟಿ ದಂಡ ವಿಧಿಸಿದೆ.
ಶುಕ್ರವಾರ ವಿಸಾ ವಿರುದ್ಧ ಈ ಕ್ರಮ ಕೈಗೊಂಡಿರುವುದಾಗಿ ಆರ್‌ಬಿಐ ತಿಳಿಸಿದೆ. ಆದರೆ, ವಿಸಾದ ಅನಧಿಕೃತ ಪಾವತಿ ವಿಧಾನ ಯಾವುದು ಎಂಬುದರ ವಿವರ ನೀಡಿಲ್ಲ.
ಸಕ್ಷಮ ಪ್ರಾಧಿಕಾರದಿಂದ (ಆರ್‌ಬಿಐನಿಂದ) ಅನುಮತಿ ಪಡೆಯದೇ ವಿಸಾ ಕಂಪನಿ ಪಾವತಿ ವಿಧಾನಕ್ಕೆ ದಾರಿ ಮಾಡಿಕೊಟ್ಟಿದೆ. ಇದು ನಿಯಮಗಳ ಸ್ಷಷ್ಟ ಉಲ್ಲಂಘನೆ ಎಂದು ಆರ್‌ಬಿಐ ಹೇಳಿದೆ.
‘ಆರ್‌ಬಿಐ ಕೈಗೊಂಡಿರುವ ಕ್ರಮ ನಮಗೆ ತಿಳಿದಿದ್ದು, ಸುರಕ್ಷಿತ ಪಾವತಿ ಸೇವೆ ನೀಡುವಲ್ಲಿ ನಾವು ಬದ್ಧವಾಗಿದ್ದೇವೆ’ ಎಂದು ವಿಸಾದ ವಕ್ತಾರರು ತಿಳಿಸಿದ್ದಾರೆ.
ಕೆಲ ವಾಣಿಜ್ಯ ಉದ್ದೇಶಕ್ಕಾಗಿ ಕಾರ್ಡ್ ಕಂಪನಿಗಳು ಅನಧಿಕೃತ ಪಾವತಿ ವಿಧಾನವನ್ನು ಯಾವುದೇ ಕಾರಣಕ್ಕೂ ಅನುಸರಿಸಬಾರದು ಎಂದು ಕಳೆದ ಫೆಬ್ರುವರಿಯಲ್ಲಿ ಕಾರ್ಡ್ ಸೇವೆ ನೀಡುವ ಕಂಪನಿಗಳಿಗೆ ಆರ್‌ಬಿಐ ಎಚ್ಚರಿಕೆ ನೀಡಿತ್ತು.
ಅಮೆರಿಕ ಮೂಲದ ವಿಸಾ ಕಂಪನಿ ಜಗತ್ತಿನ ಹಲವು ದೇಶಗಳಲ್ಲಿ ಪಾವತಿಗಳಿಗಾಗಿ ಡೆಬಿಟ್, ಕ್ರೆಡಿಟ್ ಹಾಗೂ ಇತರ ಹಣಕಾಸಿನ ಸೇವೆಗಳನ್ನು ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.