ನವದೆಹಲಿ: ಅಮೆರಿಕದ ನಾಗರಿಕರಲ್ಲದವರು ಮಾಡುವ ವಿದೇಶಿ ಹಣ ರವಾನೆ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತವು ಶೇ 5ರಷ್ಟು ತೆರಿಗೆ ವಿಧಿಸಲು ಮುಂದಾಗಿದೆ. ಇದು ದೇಶದಲ್ಲಿರುವ ಅನಿವಾಸಿ ಭಾರತೀಯರ ಕುಟುಂಬಗಳ ಆರ್ಥಿಕ ಸ್ಥಿತಿ ಹಾಗೂ ರೂಪಾಯಿ ಮೌಲ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ತಿಳಿಸಿದೆ.
ಮೇ 12ರಂದು ಅಮೆರಿಕದ ಜನಪ್ರತಿನಿಧಿ ಸಭೆಯಲ್ಲಿ ‘ಒನ್ ಬಿಗ್ ಬ್ಯೂಟಿಪುಲ್ ಬಿಲ್’ ಎಂಬ ಶೀರ್ಷಿಕೆ ಹೊಂದಿರುವ ಮಸೂದೆ ಮಂಡಿಸಲಾಗಿದೆ. ಗ್ರೀನ್ ಕಾರ್ಡ್ ಹೊಂದಿದವರು, ಎಚ್–1ಬಿ ಅಥವಾ ಎಚ್–2ಎ ವೀಸಾ ಅಡಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು, ತಮ್ಮ ತಾಯ್ನಾಡುಗಳಿಗೆ ರವಾನಿಸುವ ಹಣಕ್ಕೆ ತೆರಿಗೆ ವಿಧಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಅಮೆರಿಕದ ಪ್ರಜೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.
ಈ ಮಸೂದೆಯು ಕಾಯ್ದೆಯಾಗಿ ಅನುಷ್ಠಾನಗೊಂಡರೆ ಭಾರತಕ್ಕೆ ವಾರ್ಷಿಕವಾಗಿ ಕೋಟ್ಯಂತರ ಮೊತ್ತದ ವಿದೇಶಿ ವಿನಿಮಯ ಒಳಹರಿವು ಕಡಿಮೆಯಾಗಲಿದೆ ಎಂದು ಜಿಟಿಆರ್‌ಐ ಹೇಳಿದೆ.
ಅಮೆರಿಕದಲ್ಲಿ ನೆಲಸಿರುವ ಅನಿವಾಸಿ ಭಾರತೀಯರು 2023–24ರಲ್ಲಿ ₹10.27 ಲಕ್ಷ ಕೋಟಿ ಮೊತ್ತವನ್ನು ಭಾರತಕ್ಕೆ ರವಾನಿಸಿದ್ದಾರೆ. ಅಮೆರಿಕದಲ್ಲಿ ನೆಲಸಿರುವ ವಿವಿಧ ದೇಶದ ಜನರು ಪ್ರತಿ ವರ್ಷ ತಮ್ಮ ತಾಯ್ನಾಡುಗಳಿಗೆ ರವಾನಿಸುವ ಒಟ್ಟು ಮೊತ್ತದ ಪೈಕಿ ಈ ಪಾಲು ಶೇ 28ರಷ್ಟಿದೆ ಎಂದು ಹೇಳಿದೆ.
‘ಮಸೂದೆಯು ಕಾಯ್ದೆ ರೂಪ ಪಡೆದು ಅನುಷ್ಠಾನಗೊಂಡರೆ ಪ್ರಸ್ತುತ ಭಾರತಕ್ಕೆ ರವಾನೆಯಾಗುತ್ತಿರುವ ಹಣದ ಪೈಕಿ ಶೇ 10ರಿಂದ ಶೇ 15ರಷ್ಟು ಕಡಿಮೆಯಾಗಲಿದೆ. ಭಾರತಕ್ಕೆ ವಾರ್ಷಿಕ ₹1.54 ಲಕ್ಷ ಕೋಟಿ ನಷ್ಟವಾಗಲಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
ರೂಪಾಯಿ ಮೇಲೆ ಪರಿಣಾಮ
ಕಾಯ್ದೆ ಜಾರಿಗೆ ಬಂದರೆ ದೇಶದ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಕೂಡ ಕಡಿಮೆಯಾಗಲಿದೆ. ಇದು ರೂಪಾಯಿ ಮೌಲ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಸದ್ಯ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೂಪಾಯಿ ಮೌಲ್ಯದ ಬಲವರ್ಧನಗೆ ಮಧ್ಯಪ್ರವೇಶಿಸಿದೆ. ಈ ತೆರಿಗೆ ಜಾರಿಗೊಂಡರೆ ಡಾಲರ್ ಎದುರು ರೂಪಾಯಿ ಮೌಲ್ಯವು ಶೇ 1ರಿಂದ ಶೇ 1.5ರಷ್ಟು ಕುಸಿತಗೊಳ್ಳುವ ಸಾಧ್ಯತೆಯಿದೆ ಎಂದಿದ್ದಾರೆ. ಕೇರಳ, ಉತ್ತರ ಪ್ರದೇಶ, ಬಿಹಾರದ ಲಕ್ಷಾಂತರ ಕುಟುಂಬಗಳ ಶಿಕ್ಷಣ, ಆರೋಗ್ಯ, ವಸತಿ ಸೇರಿ ಅವರ ಒಟ್ಟಾರೆ ಜೀವನ ವೆಚ್ಚವು ಅಮೆರಿಕದಲ್ಲಿ ನೆಲಸಿರುವ ಈ ರಾಜ್ಯಗಳ ಜನರು ಕಳುಹಿಸುವ ಹಣವನ್ನು ಅವಲಂಬಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.