ADVERTISEMENT

ರಷ್ಯಾದಿಂದ ಕಚ್ಚಾ ತೈಲ ಆಮದು ಇಳಿಕೆ

ಪಿಟಿಐ
Published 2 ಡಿಸೆಂಬರ್ 2025, 14:41 IST
Last Updated 2 ಡಿಸೆಂಬರ್ 2025, 14:41 IST
ಕಚ್ಚಾ ತೈಲ
ಕಚ್ಚಾ ತೈಲ   

ನವದೆಹಲಿ: ಅಮೆರಿಕದ ನಿರ್ಬಂಧಗಳು ಜಾರಿಗೆ ಬಂದ ಬಳಿಕ ರಷ್ಯಾದಿಂದ ಭಾರತವು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣವು ಮೂರನೇ ಒಂದರಷ್ಟು ಕಡಿಮೆ ಆಗಿದೆ.

ತೈಲ ಮಾರಾಟ ಕಂಪನಿಗಳು ಅಮೆರಿಕ ಹೇರಿರುವ ಈ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ಬೇರೆ ಮೂಲಗಳಿಂದ ತೈಲ ಖರೀದಿಗೆ ಮುಂದಾಗಿವೆ. ಹೀಗಾಗಿ ಡಿಸೆಂಬರ್‌ನಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಪ್ರಕಾರ, ನವೆಂಬರ್‌ನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ ಸರಾಸರಿ 18 ಲಕ್ಷ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ಇದು ದೇಶದ ಒಟ್ಟು ಕಚ್ಚಾ ತೈಲ ಆಮದಿನ ಶೇ 35ಕ್ಕಿಂತ ಹೆಚ್ಚು.

ADVERTISEMENT

ಅಕ್ಟೋಬರ್‌ನಲ್ಲಿ 15 ಲಕ್ಷದಿಂದ 16 ಲಕ್ಷ ಬ್ಯಾರಲ್ ರಷ್ಯಾದ ತೈಲ ಆಮದು ಆಗಿತ್ತು. ನವೆಂಬರ್ 21ರಿಂದ ಅಮೆರಿಕದ ನಿರ್ಬಂಧಗಳು ಜಾರಿಗೆ ಬಂದಿವೆ. ಇದಕ್ಕೂ ಮೊದಲು ಕಂಪನಿಗಳು ಆಮದನ್ನು ಹೆಚ್ಚಿಸಿದ್ದವು.

‘ನವೆಂಬರ್ 21ಕ್ಕೆ ಮೊದಲು ತೈಲ ಕಂಪನಿಗಳು ದಿನಕ್ಕೆ 19 ಲಕ್ಷ ಬ್ಯಾರಲ್‌ನಿಂದ 20 ಲಕ್ಷ ಬ್ಯಾರಲ್‌ಗಳಷ್ಟು ತೈಲ ಖರೀದಿಸಿವೆ. ನಿರ್ಬಂಧಗಳಿಗೆ ಮುಂಚಿತವಾಗಿ ತೈಲ ಸಂಸ್ಕರಣಾ ಕಂಪನಿಗಳು ಹೆಚ್ಚು ಕಚ್ಚಾ ತೈಲವನ್ನು ಖರೀದಿಸಿವೆ. ನಿರ್ಬಂಧ ಜಾರಿಯಾದ ನಂತರ ಆಮದನ್ನು ಕಡಿಮೆ ಮಾಡಲು ಮುಂದಾಗಿವೆ’ ಎಂದು ಕೆಪ್ಲರ್‌ ಸಂಸ್ಥೆಯ ಮುಖ್ಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಹೇಳಿದ್ದಾರೆ.

ನಿರ್ಬಂಧ ಜಾರಿಯಾದ ಬಳಿಕ ತೈಲ ಆಮದು 5.70 ಲಕ್ಷ ಬ್ಯಾರಲ್‌ನಷ್ಟು ಕಡಿಮೆ ಆಗಿದ್ದು, 12.70 ಲಕ್ಷ ಬ್ಯಾರಲ್‌ಗೆ ಇಳಿದಿದೆ. ಡಿಸೆಂಬರ್‌ನಲ್ಲಿ ಆಮದು ಪ್ರಮಾಣವು ದಿನಕ್ಕೆ 10 ಲಕ್ಷ ಬ್ಯಾರಲ್‌ಗೆ ಇಳಿಕೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಅಮೆರಿಕ ಹೇರಿರುವ ನಿರ್ಬಂಧಗಳು ನವೆಂಬರ್‌ 21ರಿಂದ ಜಾರಿಗೆ ಬಂದಿವೆ. ಇದರ ಪರಿಣಾಮವಾಗಿ ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್‌), ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಂತಹ ಕಂಪನಿಗಳು ಸದ್ಯಕ್ಕೆ ಆಮದುಗಳನ್ನು ಸ್ಥಗಿತಗೊಳಿಸಿವೆ.

ಒಟ್ಟಾರೆಯಾಗಿ, ನವೆಂಬರ್ ನಂತರ ರಷ್ಯಾದ ನೇರ ಆಮದು ಕಡಿಮೆಯಾಗುವ ನಿರೀಕ್ಷೆಯಿದ್ದರೂ, ಕುಸಿತವು ತಾತ್ಕಾಲಿಕವಾಗಿರಲಿದೆ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.