ADVERTISEMENT

ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಪಿಟಿಐ
Published 6 ಫೆಬ್ರುವರಿ 2026, 9:54 IST
Last Updated 6 ಫೆಬ್ರುವರಿ 2026, 9:54 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಬಜೆಟ್‌ನಲ್ಲಿ ಸರ್ಕಾರಿ ವೆಚ್ಚದಲ್ಲಿ ಹೆಚ್ಚಳ ಮತ್ತು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಹಿನ್ನೆಲೆ ಸುಂಕದ ಒತ್ತಡ ಕಡಿಮೆ ಆಗಿದ್ದು, ಹಣದುಬ್ಬರವು ನಿರ್ವಹಣಾ ಮಟ್ಟದಲ್ಲಿ ಉಳಿಯುವ ಸಾಧ್ಯತೆ ಮತ್ತು ಬೆಳವಣಿಗೆಯ ಕಳವಳಗಳು ಕಡಿಮೆಯಾದ ಕಾರಣ, ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಕೇಂದ್ರ ಬ್ಯಾಂಕಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು(ಎಂಪಿಸಿ) ರೆಪೊ ದರವನ್ನು ಶೇ 5.25 ರಲ್ಲೇ ಇರಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು. ಆರ್‌ಬಿಐ ಸದ್ಯಕ್ಕೆ ತನ್ನ ತಟಸ್ಥ ನೀತಿ ನಿಲುವನ್ನು ಕಾಯ್ದುಕೊಂಡಿದೆ.

ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ರಿಂದ 18ಕ್ಕೆ ಇಳಿಸುವುದಾಗಿ ಘೋಷಿಸಿದರು. ಇದು ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ.

ADVERTISEMENT

ಎಂಪಿಸಿಯ ನಿರ್ಧಾರಗಳನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಆರ್ಥಿಕತೆಗೆ ಶುಭ ಸೂಚನೆಯಾಗಿದೆ ಎಂದು ಹೇಳಿದರು.

ಆರ್‌ಬಿಐ, 2025ರ ಫೆಬ್ರುವರಿಯಿಂದ 125 ಮೂಲಾಂಶದಷ್ಟು ರೆಪೊ ದರ ಕಡಿತಗೊಳಿಸಿದೆ. ಇದು 2019ರಿಂದ ಅತ್ಯಂತ ವೇಗದ ಕಡಿತವಾಗಿದೆ. ಕಳೆದ ಡಿಸೆಂಬರ್‌ನ ಎಂಪಿಸಿ ಸಭೆಯಲ್ಲಿ 25 ಮೂಲಾಂಶದಷ್ಟು ರೆಪೊ ದರ ಕಡಿತ ಮಾಡಲಾಗಿತ್ತು.

'ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಅನಿಶ್ಚಿತತೆಯ ನಡುವೆ, ಭಾರತೀಯ ಆರ್ಥಿಕತೆಯು ಬಲವಾದ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರದೊಂದಿಗೆ ಉತ್ತಮ ಸ್ಥಾನದಲ್ಲಿದೆ. ಹಣದುಬ್ಬರವು ಸಹಿಷ್ಣುತೆಯ ಮಟ್ಟಕ್ಕಿಂತ ಕಡಿಮೆ ಇದೆ. ಅದರ ನಿರೀಕ್ಷೆಯು ಸೌಮ್ಯವಾಗಿ ಮುಂದುವರೆದಿದೆ’ಎಂದು ಅವರು ಹೇಳಿದ್ದಾರೆ.

‘ಯುರೋಪಿಯನ್ ಒಕ್ಕೂಟದೊಂದಿಗೆ ಐತಿಹಾತಿಕ ವ್ಯಾಪಾರ ಒಪ್ಪಂದ ಮತ್ತು ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಭಾರತದ ಬೆಳವಣಿಗೆಯ ಆವೇಗವು ದೀರ್ಘಕಾಲದವರೆಗೆ ಉಳಿಯುವ ಸಾಧ್ಯತೆ ಇದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಸರಾಸರಿ ಶೇ 2ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಕೇಂದ್ರ ಬ್ಯಾಂಕಿನ ಗುರಿಯಾದ 4 ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಶೇ 7.4ರಷ್ಟು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.