ADVERTISEMENT

52 ಲಕ್ಷ ವಾಹನ ಬಿಕರಿ: GST ಇಳಿಕೆಯಿಂದ ಮಾರಾಟ ಹೆಚ್ಚಳ

ಪಿಟಿಐ
Published 7 ನವೆಂಬರ್ 2025, 15:37 IST
Last Updated 7 ನವೆಂಬರ್ 2025, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸೆಪ್ಟೆಂಬರ್‌ 22ರಿಂದ ನವೆಂಬರ್‌ 2ರವರೆಗಿನ ಹಬ್ಬದ ಋತುವಿನಲ್ಲಿ ದೇಶದ ರಿಟೇಲ್‌ ಮಾರುಕಟ್ಟೆಯಲ್ಲಿ 52 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಶುಕ್ರವಾರ ತಿಳಿಸಿದೆ.

ಕಳೆದ ವರ್ಷದ ಇದೇ ಋತುವಿನಲ್ಲಿ 43,25,632 ವಾಹನಗಳು ಮಾರಾಟವಾಗಿದ್ದವು. ಈ ಬಾರಿ 52,38,401 ವಾಹನಗಳು ಮಾರಾಟವಾಗಿದ್ದು, ಶೇ 21ರಷ್ಟು ಹೆಚ್ಚಳ ದಾಖಲಿಸಿದೆ ಎಂದು ತಿಳಿಸಿದೆ. ಜಿಎಸ್‌ಟಿ ಇಳಿಕೆಯಿಂದ ವಾಹನಗಳ ಬೆಲೆ ಇಳಿಕೆ ಆಯಿತು. ಇದು ವಾಹನಗಳ ಮಾರಾಟದ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ. 

ADVERTISEMENT

ನವರಾತ್ರಿ ಆರಂಭದ ದಿನದಿಂದ ಧನತ್ರಯೋದಶಿ ನಂತರದ 15 ದಿನದ ಅವಧಿಯನ್ನು (ಒಟ್ಟು 42 ದಿನ) ಹಬ್ಬದ ಋತು ಎಂದು ಹೇಳಿದೆ. 

‘42 ದಿನದ ಹಬ್ಬದ ಋತುವಿನಲ್ಲಿ ದೇಶದ ಮಾರುಕಟ್ಟೆಯಲ್ಲಿ ವಾಹನಗಳ ರಿಟೇಲ್‌ ಮಾರಾಟವು ಮಹತ್ವದ ಮೈಲಿಗಲ್ಲು ದಾಖಲಿಸಿದೆ. ಎಲ್ಲಾ ವಿಭಾಗಗಳಲ್ಲಿ ಅತಿ ಹೆಚ್ಚು ವಾಹನಗಳು ಮಾರಾಟ ಆಗಿವೆ’ ಎಂದು ಒಕ್ಕೂಟದ ಅಧ್ಯಕ್ಷ ಸಿ.ಎಸ್.ವಿಘ್ನೇಶ್ವರ್ ಹೇಳಿದ್ದಾರೆ. 

ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ 23ರಷ್ಟು ಹೆಚ್ಚಳವಾಗಿದ್ದು, 7,66,918 ವಾಹನಗಳು ಮಾರಾಟವಾಗಿವೆ. ಕಳೆದ ಬಾರಿ 6,21,539 ವಾಹನಗಳು ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ರಿಟೇಲ್‌ ಮಾರಾಟದಲ್ಲಿ ಶೇ 22ರಷ್ಟು ಏರಿಕೆಯಾಗಿದ್ದು, 40,52,503 ವಾಹನಗಳು ಮಾರಾಟವಾಗಿವೆ. ತ್ರಿಚಕ್ರ ವಾಹನಗಳು ಶೇ 9 ಮತ್ತು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಹಬ್ಬದ ಋತುವಿನಲ್ಲಿ ವಾಹನಗಳಿಗೆ ಬುಕಿಂಗ್ ಹೆಚ್ಚಳವಾಯಿತು. ಹೊಸ ಮಾದರಿ ವಾಹನಗಳು ಬಿಡುಗಡೆಗೊಂಡಿವೆ. ಹೊಸ ವರ್ಷ ಆರಂಭವಾಗುತ್ತಿದ್ದು, ಮಾರಾಟದಲ್ಲಿ ಹೆಚ್ಚಳವು ಮುಂದುವರಿಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಶೇ 41ರಷ್ಟು ಏರಿಕೆ

ಅಕ್ಟೋಬರ್‌ ತಿಂಗಳಿನಲ್ಲಿ ವಾಹನಗಳ ರಿಟೇಲ್‌ ಮಾರಾಟದಲ್ಲಿ ಶೇ 41ರಷ್ಟು ಏರಿಕೆಯಾಗಿದ್ದು 4023923 ವಾಹನಗಳು ಮಾರಾಟವಾಗಿವೆ. ಇದು ಅತಿ ಹೆಚ್ಚು ಪ್ರಯಾಣಿಕ ಮತ್ತು ದ್ವಿಚಕ್ರ ವಾಹನಗಳು ಮಾರಾಟವಾದ ತಿಂಗಳಾಗಿದೆ. ಈ ಒಟ್ಟು ವಾಹನಗಳ ಮಾರಾಟದಲ್ಲಿ 557373 ಪ್ರಯಾಣಿಕ ವಾಹನಗಳು ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 11ರಷ್ಟು ಹೆಚ್ಚಳವಾಗಿದೆ. 3149846 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು ಶೇ 52ರಷ್ಟು ಹೆಚ್ಚಳವಾಗಿದೆ. 129517 ತ್ರಿಚಕ್ರ ವಾಹನಗಳ ಮಾರಾಟವಾಗಿದ್ದು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 18ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. ಮುಂದಿನ ಮೂರು ತಿಂಗಳು ದೇಶದಲ್ಲಿ ವಾಹನಗಳ ರಿಟೇಲ್‌ ಮಾರಾಟದ ಮುನ್ನೋಟವು ಸಕಾರಾತ್ಮಕವಾಗಿಯೇ ಉಳಿದಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.