
ನವದೆಹಲಿ: ವೆನೆಜುವೆಲಾದ ತೈಲ ಉದ್ಯಮ ವಲಯವನ್ನು ಅಮೆರಿಕವು ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಭಾರತಕ್ಕೆ ಅದರಿಂದ ಲಾಭವೇ ಆಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಹಿಂದೊಂದು ಸಂದರ್ಭದಲ್ಲಿ ಭಾರತವು ವೆನೆಜುವೆಲಾದಿಂದ ಪ್ರತಿನಿತ್ಯ 4 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಅಮೆರಿಕವು ಆ ದೇಶದ ಮೇಲೆ ನಿರ್ಬಂಧ ವಿಧಿಸಿದ ನಂತರ, 2020ರಿಂದ ಆಮದು ನಿಂತಿತು.
ಭಾರತದ ಒಎನ್‌ಜಿಸಿ ವಿದೇಶ್ ಲಿಮಿಟೆಡ್ (ಒವಿಎಲ್) ಕಂಪನಿಯು ವೆನೆಜುವೆಲಾದ ಪೂರ್ವ ಭಾಗದ ಸ್ಯಾನ್ ಕ್ರಿಸ್ಟೊಬಾಲ್ ತೈಲ ನಿಕ್ಷೇಪದಿಂದ ಕಚ್ಚಾ ತೈಲವನ್ನು ಜಂಟಿಯಾಗಿ ಹೊರತೆಗೆಯುತ್ತಿದೆ. ಆದರೆ ಅಮೆರಿಕದ ನಿರ್ಬಂಧದಿಂದಾಗಿ ಅಲ್ಲಿ ಕಚ್ಚಾ ತೈಲ ಉತ್ಪಾದನೆಯು ತೀವ್ರವಾಗಿ ಕಡಿಮೆ ಆಗಿದೆ.
ವೆನೆಜುವೆಲಾ ದೇಶವು ಒವಿಎಲ್ ಕಂಪನಿಗೆ 2014ರವರೆಗಿನ ಲಾಭಾಂಶ (ಇಂದಿನ ಅಂದಾಜು ₹4,824 ಕೋಟಿ) ಪಾವತಿಸಲು ವಿಫಲವಾಗಿದೆ. ನಂತರದ ವರ್ಷಗಳ ಲಾಭಾಂಶವನ್ನೂ ಅದು ಪಾವತಿಸಿಲ್ಲ.
ಈಗ ಅಮೆರಿಕವು ವೆನೆಜುವೆಲಾ ಮೇಲೆ ನಿಯಂತ್ರಣ ಸಾಧಿಸಿರುವ ಕಾರಣದಿಂದಾಗಿ, ನಿರ್ಬಂಧಗಳು ಸಡಿಲವಾಗುವ ನಿರೀಕ್ಷೆ ಇದೆ. ನಿರ್ಬಂಧ ಸಡಿಲವಾದಲ್ಲಿ ಒವಿಎಲ್ ಕಂಪನಿಯು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದಿಸಬಹುದು ಎಂದು ಮೂಲಗಳು ಹೇಳಿವೆ.
ಅಲ್ಲಿನ ನಿಕ್ಷೇಪಗಳಿಂದ ಒವಿಎಲ್ ಪ್ರತಿನಿತ್ಯ 1 ಲಕ್ಷ ಬ್ಯಾರೆಲ್‌ವರೆಗೆ ಕಚ್ಚಾ ತೈಲ ಉತ್ಪಾದಿಸಬಹುದು ಎನ್ನಲಾಗಿದೆ.
ಅಮೆರಿಕದ ಪ್ರಮುಖ ಕಚ್ಚಾ ತೈಲ ಕಂಪನಿಗಳು ವೆನೆಜುವೆಲಾಕ್ಕೆ ಮರಳಲಿವೆ, ಅಲ್ಲಿನ ಕಚ್ಚಾ ತೈಲ ಉದ್ಯಮದ ಮೂಲಸೌಕರ್ಯವನ್ನು ಸರಿಪಡಿಸಲಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವೆನೆಜುವೆಲಾ ದೇಶವು ಅಮೆರಿಕ ಹಾಗೂ ಇತರ ದೇಶಗಳ ಕಂಪನಿಗಳ ನೆರವಿನಿಂದ ತೈಲ ಉತ್ಪಾದನೆಯನ್ನು ಮತ್ತೆ ಆರಂಭಿಸಿದ ನಂತರದಲ್ಲಿ ಭಾರತವು ಪ್ರಮುಖ ಖರೀದಿದಾರ ದೇಶಗಳ ಪೈಕಿ ಒಂದಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಭಾರತದ ಕಚ್ಚಾ ತೈಲ ಸಂಸ್ಕರಣಾ ಘಟಕಗಳು ವೆನೆಜುವೆಲಾದ ಹೆಚ್ಚು ಸಾಂದ್ರೀಕೃತ ಕಚ್ಚಾ ತೈಲವನ್ನು ಪೆಟ್ರೋಲ್, ಡೀಸೆಲ್‌ನಂತಹ ಇಂಧನವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.