ADVERTISEMENT

₹14,130 ಕೋಟಿ ಮೌಲ್ಯದ ಆಸ್ತಿ ವಶ | ನನ್ನಿಂದ ದುಪ್ಪಟ್ಟು ಸಾಲ ವಸೂಲಿ: ಮಲ್ಯ

ಸಚಿವೆ ನಿರ್ಮಲಾ ಹೇಳಿಕೆಗೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 13:45 IST
Last Updated 19 ಡಿಸೆಂಬರ್ 2024, 13:45 IST
<div class="paragraphs"><p>ವಿಜಯ್‌ ಮಲ್ಯ –ಪಿಟಿಐ ಚಿತ್ರ</p></div>

ವಿಜಯ್‌ ಮಲ್ಯ –ಪಿಟಿಐ ಚಿತ್ರ

   

ನವದೆಹಲಿ (ಪಿಟಿಐ): ‘ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಬ್ಯಾಂಕ್‌ಗಳು ನನ್ನ ಸಾಲಕ್ಕಿಂತಲೂ ಎರಡು ಪಟ್ಟು ವಸೂಲಿ ಮಾಡಿವೆ’ ಎಂದು ಉದ್ಯಮಿ ವಿಜಯ್‌ ಮಲ್ಯ ಆರೋಪಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಸಾಲ ಬಾಕಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಮಲ್ಯ ಅವರಿಗೆ ಸೇರಿದ ₹14,130 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿವೆ ಎಂದು ಸಂಸತ್‌ನಲ್ಲಿ ಹೇಳಿಕೆ ನೀಡಿದ್ದರು.

ADVERTISEMENT

ಇದಕ್ಕೆ ಮಲ್ಯ ಅವರು ‘ಎಕ್ಸ್‌’ನಲ್ಲಿ ಪ್ರತಿಕ್ರಿಯೆ ನೀಡಿದ್ದು, ‘ಕಿಂಗ್‌ಫಿಶರ್‌ ಏರ್‌ಲೈನ್ಸ್‌ (ಕೆಎಫ್‌ಎ) ಪ್ರಕರಣದಲ್ಲಿ ಸಾಲದ ಅಸಲು ₹6,203 ಕೋಟಿ ಹಾಗೂ ಇದಕ್ಕೆ ಬಡ್ಡಿ ₹1,200 ಆಗಲಿದೆ ಎಂದು ಸಾಲ ವಸೂಲಾತಿ ನ್ಯಾಯಮಂಡಳಿಯೇ ಹೇಳಿದೆ. ನನ್ಲಿಂದ ದುಪ್ಪಟ್ಟು ವಸೂಲಿ ಮಾಡಿದ್ದರೂ ನಾನಿನ್ನೂ ಆರ್ಥಿಕ ಅಪರಾಧಿಯಾಗಿದ್ದೇನೆ’ ಎಂದು ಹೇಳಿದ್ದಾರೆ.

‘ಇ.ಡಿ ಮತ್ತು ಬ್ಯಾಂಕ್‌ಗಳು ಎರಡು ಪಟ್ಟು ಹೆಚ್ಚು ಸಾಲದ ಮೊತ್ತವನ್ನು ಹೇಗೆ ತೆಗೆದುಕೊಂಡಿವೆ ಎಂಬ ಬಗ್ಗೆ ಕಾನೂನಾತ್ಮಕವಾಗಿ ಸಮರ್ಥಿಸಿಕೊಳ್ಳಬೇಕಿದೆ. ಇಲ್ಲವಾದರೆ ನಾನು ಕೂಡ ಪರಿಹಾರಕ್ಕೆ ಅರ್ಹನಾಗಿದ್ದೇನೆ’ ಎಂದು ಹೇಳಿದ್ದಾರೆ.

ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಪ್ರಕರಣದಲ್ಲಿ ಹಲವು ಬ್ಯಾಂಕ್‌ಗಳಿಂದ ₹9 ಸಾವಿರ ಕೋಟಿ ಸಾಲ ಬಾಕಿ ಉಳಿಸಿಕೊಂಡ ಆರೋಪ ಕೇಳಿಬಂದ ಬೆನ್ನಲ್ಲೇ ಮಲ್ಯ ಅವರು, 2016ರಲ್ಲಿ ಬ್ರಿಟನ್‌ಗೆ ಪಲಾಯನಗೈದಿದ್ದರು.

‘ನಾನು ಕೆಎಫ್‌ಎ ಸಾಲಕ್ಕೆ ಖಾತರಿದಾರ. ನನ್ನ ಸಾಲದ ಹೊಣೆಗಾರಿಕೆ ಬಗ್ಗೆ ನ್ಯಾಯಮಂಡಳಿಯಲ್ಲಿ ಹೇಳಿಕೆ ದಾಖಲಿಸಿದ್ದೇನೆ. ಇದನ್ನು ಕಾನೂನುಬದ್ಧವಾಗಿ  ಪರಿಶೀಲಿಸಬಹುದಾಗಿದೆ. ಆದರೆ, ನ್ಯಾಯಮಂಡಳಿ ನೀಡಿದ ತೀರ್ಪಿನಲ್ಲಿ ಪ್ರಕಟಿಸಿರುವ ಸಾಲಕ್ಕಿಂತಲೂ ನನ್ನಿಂದ ₹8,000 ಕೋಟಿಗೂ ಹೆಚ್ಚು ವಸೂಲಿ ಮಾಡಲಾಗಿದೆ’ ಎಂದಿದ್ದಾರೆ.

‘ನನ್ನನ್ನು ಸಾಲಗಾರನೆಂದು ಹಲವು ಮಂದಿ ನಿಂದಿಸುತ್ತಾರೆ. ಅವರು ಸೇರಿದಂತೆ ಯಾರಾದರೂ ಈ ಘೋರ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತಾರೆಯೇ? ನಾನು ಹೆಚ್ಚು ಅಪಮಾನಕ್ಕೊಳಗಾಗಿದ್ದೇನೆ. ನನಗೆ ಬೆಂಬಲ ನೀಡಲು ಧೈರ್ಯ ಬೇಕಿದೆ. ಆದರೆ, ನ್ಯಾಯ ಪಡೆಯಲು ನನಗೆ ಯಾವುದೇ ಧೈರ್ಯವಿಲ್ಲ’ ಎಂದು ಹೇಳಿದ್ದಾರೆ.

‘ನಾನು ಸಿಬಿಐ ದಾಖಲಿಸಿರುವ ಪ್ರಕರಣಗಳ ಬಗ್ಗೆ ಉತ್ತರಿಸಬೇಕಿದೆ ಎಂದು ಸರ್ಕಾರ ಹಾಗೂ ನನ್ನ ಟೀಕಾಕಾರರು ಹೇಳುತ್ತಾರೆ. ನನ್ನ ಮೇಲೆ ಸಿಬಿಐ ದಾಖಲಿಸಿರುವ ಪ್ರಕರಣಗಳೇನು? ನಾನು ಎಂದಿಗೂ ಒಂದು ರೂಪಾಯಿ ಸಾಲ ಮಾಡಿಲ್ಲ. ಹಣವನ್ನು ಕದ್ದಿಲ್ಲ. ಒಂಬತ್ತು ವರ್ಷಗಳಾದರೂ ಹಣದ ದುರ್ಬಳಕೆ ಮತ್ತು ವಂಚನೆ ಪ್ರಕರಣದ ಬಗ್ಗೆ ನಿರ್ಣಾಯಕ ಪುರಾವೆಯನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಏಕೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.