ADVERTISEMENT

ವಿಪ್ರೊ: ₹ 2,544 ಕೋಟಿ ನಿವ್ವಳ ಲಾಭ

1.3ರ ಅನುಪಾತದಲ್ಲಿ ಬೋನಸ್‌ ಷೇರು ಘೋಷಣೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 17:08 IST
Last Updated 18 ಜನವರಿ 2019, 17:08 IST
ಸಿಇಒ ಅಬಿದಾಲಿ ನೀಮೂಚವಾಲಾ ಮತ್ತು ಹಿರಿಯ ಉಪಾಧ್ಯಕ್ಷ ಸೌರಭ್‌ ಗೋವಿಲ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ
ಸಿಇಒ ಅಬಿದಾಲಿ ನೀಮೂಚವಾಲಾ ಮತ್ತು ಹಿರಿಯ ಉಪಾಧ್ಯಕ್ಷ ಸೌರಭ್‌ ಗೋವಿಲ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದ ಮೂರನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊ, ಡಿಸೆಂಬರ್‌ ಅಂತ್ಯಕ್ಕೆ ಕೊನೆಗೊಂಡ 3ನೆ ತ್ರೈಮಾಸಿಕದಲ್ಲಿ ₹ 2,544 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 1,930 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 31.8ರಷ್ಟು ಏರಿಕೆ ದಾಖಲಿಸಿ ಮಾರು
ಕಟ್ಟೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ವರಮಾನವು ಶೇ 10.17ರಷ್ಟು ಹೆಚ್ಚಾಗಿ ₹ 15,059 ಕೋಟಿಗೆ ತಲುಪಿದೆ. ಐ.ಟಿ ಸೇವೆಗಳಿಂದ ಹೆಚ್ಚಿನ ವರಮಾನ ಗಳಿಸಿದೆ.

ಬೋನಸ್‌ ಷೇರು: 1.3ರ ಅನುಪಾತದಲ್ಲಿ ಬೋನಸ್‌ ಷೇರು ನೀಡುವುದಕ್ಕೆ ಸಂಸ್ಥೆಯ ನಿರ್ದೇಶಕ ಮಂಡಳಿಯು ಸಮ್ಮತಿ ನೀಡಿದೆ.

ADVERTISEMENT

ಷೇರುದಾರರು ಹೊಂದಿರುವ ಪ್ರತಿ 3 ಷೇರುಗಳಿಗೆ 1 ಬೋನಸ್‌ ಷೇರು ನೀಡಲಾಗುವುದು.

ಎರಡು ವರ್ಷಗಳಲ್ಲಿ ಸಂಸ್ಥೆಯು ಎರಡನೆ ಬಾರಿಗೆ ಬೋನಸ್‌ ಷೇರು ಪ್ರಕಟಿಸಿದೆ. 2017ರಲ್ಲಿ 1;1 ಅನುಪಾತದಲ್ಲಿ ಬೋನಸ್‌ ಷೇರು ನೀಡಿತ್ತು. ಆ ವರ್ಷದಲ್ಲಿ ಸಂಸ್ಥೆಯು ₹ 11 ಸಾವಿರ ಕೋಟಿಗಳ ಷೇರು ಮರುಖರೀದಿಯನ್ನೂ ಮಾಡಿತ್ತು.

ಮಧ್ಯಂತರ ಲಾಭಾಂಶ: ಪ್ರತಿ ಷೇರಿಗೆ ₹ 1ರಂತೆ ಮಧ್ಯಂತರ ಲಾಭಾಂಶವನ್ನೂ ಘೋಷಿಸಲಾಗಿದೆ. ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಿಇಒ ಅಬಿದಾಲಿ ನಿಮೂಚವಾಲಾ ಅವರು ಅಕ್ಟೋಬರ್‌ – ಡಿಸೆಂಬರ್‌ ಅವಧಿಯಲ್ಲಿನ ಸಂಸ್ಥೆಯ ಹಣಕಾಸು ಸಾಧನೆಯ ವಿವರಗಳನ್ನು ನೀಡಿದರು.

‘ಸಂಸ್ಥೆಯ ಹೊಸ ಹೂಡಿಕೆಗಳು, ಗ್ರಾಹಕರ ಜತೆಗಿನ ಉತ್ತಮ ಬಾಂಧವ್ಯ, ಉದ್ಯಮದ ಆಧುನೀಕರಣ, ಡಿಜಿಟಲ್‌ ಬದಲಾವಣೆಗೆ ಕಾರ್ಪೊರೇಟ್‌ಗಳು ಕೈಗೊಂಡ ಕ್ರಮಗಳಿಂದಾಗಿ ತೃಪ್ತಿದಾಯಕ ಹಣಕಾಸು ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ವಿವರಿಸಿದರು.

‘ಮಾರ್ಚ್‌ ತ್ರೈಮಾಸಿಕದಲ್ಲಿ ಸಂಸ್ಥೆಯ ವರಮಾನವು ಶೇ 2ರಷ್ಟು ಹೆಚ್ಚಳಗೊಳ್ಳಲಿದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.