ಹರ್ದೀಪ್ ಸಿಂಗ್ ಪುರಿ –ಪಿಟಿಐ ಚಿತ್ರ
ವಿಜಯವಾಡ (ಆಂಧ್ರಪ್ರದೇಶ): ‘ಅಮೆರಿಕ ಸೇರಿ ವಿವಿಧ ರಾಷ್ಟ್ರಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಕೆಯಾಗುತ್ತಿದೆ. ಹಾಗಾಗಿ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಹಣದುಬ್ಬರ ಇಳಿಕೆಗೆ ನೆರವಾಗಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ವಲಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯ ಸದೃಢವಾಗಿದೆ ಎಂದರು.
ಅರ್ಜೆಂಟೀನಾ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳಿಂದ ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕೆಲವು ರಾಷ್ಟ್ರಗಳು ತೈಲ ಉತ್ಪಾದನೆ ಕಡಿತದ ಬಗ್ಗೆ ಕೈಗೊಂಡಿದ್ದ ನಿರ್ಧಾರವನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಡಾಲರ್‌ನಲ್ಲಿಯೇ ಕಚ್ಚಾ ತೈಲದ ವಹಿವಾಟು ನಡೆಯುತ್ತದೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದಿಸುವ ಬಗ್ಗೆ ಹೇಳಿದ್ದಾರೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ತಗ್ಗಿಸಲು ಅಗತ್ಯವಿರುವ ಕ್ರಮಕೈಗೊಳ್ಳುವುದಾಗಿಯೂ ಹೇಳಿದ್ದಾರೆ ಎಂದರು.
2022ರ ಫೆಬ್ರುವರಿಯಿಂದ ಇಲ್ಲಿಯವರೆಗೆ ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪಾಕಿಸ್ತಾನದಲ್ಲಿ ಶೇ 48, ಬಾಂಗ್ಲಾದೇಶ ಶೇ 14.7, ಶ್ರೀಲಂಕಾ ಶೇ 37, ನೇಪಾಳ ಶೇ 16.2, ಅಮೆರಿಕ ಶೇ 14.2, ಇಟಲಿ ಶೇ 4.8, ಸ್ಪೇನ್ ಶೇ 4.2, ಜರ್ಮನಿ ಶೇ 2 ಮತ್ತು ಫ್ರಾನ್ಸ್‌ನಲ್ಲಿ ಶೇ 4.7ರಷ್ಟು ಏರಿಕೆಯಾಗಿದೆ. ಆದರೆ, ಭಾರತದಲ್ಲಿ ಶೇ 0.7ರಷ್ಟು ಇಳಿಕೆಯಾಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.