
ನವದೆಹಲಿ: 2047ರ ವೇಳೆಗೆ ಭಾರತವು 30 ಟ್ರಿಲಿಯನ್ ಡಾಲರ್ (₹2,660 ಲಕ್ಷ ಕೋಟಿ) ಆರ್ಥಿಕತೆಯಾಗಲು ಹಣಕಾಸು ವಲಯದಲ್ಲಿ ಹೆಚ್ಚಿನ ಸುಧಾರಣೆಗಳು ಮತ್ತು ಖಾಸಗಿ ಬಂಡವಾಳಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
ಭಾರತದ ‘ವಿಶ್ವ ದರ್ಜೆ’ಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸರ್ಕಾರದ ಕಾರ್ಯಕ್ರಮಗಳು ಪುರುಷರು ಮತ್ತು ಮಹಿಳೆಯರಿಗೆ ಹಣಕಾಸು ಸೇವೆಗಳು ಸುಲಭವಾಗಿ ಲಭ್ಯವಾಗುವಂತಾಗಿವೆ ಎಂದು ವಿಶ್ವ ಬ್ಯಾಂಕ್‌ನ ಹಣಕಾಸು ವಲಯದ ಮೌಲ್ಯಮಾಪನ ವರದಿ ಶುಕ್ರವಾರ ತಿಳಿಸಿದೆ.
ವಿಶೇಷವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚಳವಾಗಬೇಕು. ವ್ಯಕ್ತಿಗಳು ಮತ್ತು ಎಂಎಸ್‌ಎಂಇಗಳಿಗೆ ಹೆಚ್ಚಿನ ಹಣಕಾಸಿನ ಸೌಲಭ್ಯ ಲಭ್ಯವಾಗುವಂತೆ ಮಾಡಬೇಕು. ಸಹಕಾರಿ ಬ್ಯಾಂಕ್‌ಗಳ ಮೇಲೆ ಪ್ರಾಧಿಕಾರದ ನಿಯಂತ್ರಣ ಅಗತ್ಯ ಎಂದು ಸಲಹೆ ನೀಡಿದೆ.
ಹಣಕಾಸು ವಲಯದ ಮೌಲ್ಯಮಾಪನ ಕಾರ್ಯಕ್ರಮವು (ಎಫ್‌ಎಸ್‌ಎಪಿ) ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನ ಜಂಟಿ ಕಾರ್ಯಕ್ರಮವಾಗಿದೆ. ಇದು ದೇಶದ ಹಣಕಾಸು ವಲಯದ ಸಮಗ್ರ ಮತ್ತು ಆಳವಾದ ವಿಶ್ಲೇಷಣೆಯನ್ನು ಮಾಡುತ್ತದೆ.
‘ಐಎಂಎಫ್ ಮತ್ತು ವಿಶ್ವಬ್ಯಾಂಕ್ ಜಂಟಿ ತಂಡವು ಕೈಗೊಂಡ ಹಣಕಾಸು ವಲಯದ ಮೌಲ್ಯಮಾಪನವನ್ನು ಭಾರತ ಸ್ವಾಗತಿಸುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.