ADVERTISEMENT

‘ಎಸ್‌ಬಿಐನೊಂದಿಗೆ ಯೆಸ್ ಬ್ಯಾಂಕ್ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ’

ಯೆಸ್‌ ಬ್ಯಾಂಕ್‌ನ ಹೊಸ ಆಡಳಿತಾಧಿಕಾರಿ ಪ್ರಶಾಂತ್‌ ಕುಮಾರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 12:06 IST
Last Updated 9 ಮಾರ್ಚ್ 2020, 12:06 IST
   

ಮುಂಬೈ:ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್‌ ಅನ್ನು ಎಸ್‌ಬಿಐನೊಂದಿಗೆ ವಿಲೀನ ಮಾಡುವುದಿಲ್ಲ ಎಂದು ಹೊಸದಾಗಿ ನೇಮಕವಾಗಿರುವ ಯೆಸ್‌ ಬ್ಯಾಂಕ್‌ಆಡಳಿತಾಧಿಕಾರಿ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.ಈ ಕುರಿತು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಬ್ಯಾಂಕ್‌ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.

ವಸೂಲಾಗದ ಸಾಲದ ಪ್ರಮಾಣದಲ್ಲಿ ಭಾರೀಏರಿಕೆಯಾಗಿದ್ದರಿಂದ, ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಮೇಲೆ ಆರ್‌ಬಿಐ ಮಾರ್ಚ್‌ 6ರಂದು ನಿರ್ಬಂಧ ಹೇರಿದೆ.ಮಾತ್ರವಲ್ಲದೆ, ಎಸ್‌ಬಿಐನ ಮಾಜಿ ಸಿಎಫ್‌ಒ ಪ್ರಶಾಂತ್‌ ಕುಮಾರ್‌ ಅವರನ್ನು ಯೆಸ್ ಬ್ಯಾಂಕ್‌ನ ಆಡಳಿತಾಧಿಕಾರಿಯನ್ನಾಗಿನೇಮಿಸಿದೆ.

30 ದಿನಗಳವರೆಗೆ ವಿಧಿಸಲಾಗಿರುವ ಈ ನಿರ್ಬಂಧದ ಅಡಿಯಲ್ಲಿ ಬ್ಯಾಂಕ್‌ ಠೇವಣಿದಾರರನ್ನು ಉಳಿಸಿಕೊಳ್ಳುವ ಸಲುವಾಗಿ, ಹಣ ಹಿಂಪಡೆಯುವಿಕೆಗೂ ಆರ್‌ಬಿಐ ಮಿತಿ ನಿಗದಿಪಡಿಸಿತ್ತು. ಈ ನಿರ್ಧಾರವು ಠೇವಣಿದಾರರನ್ನು ಗೊಂದಲಕ್ಕೀಡು ಮಾಡಿತ್ತು. ಹೀಗಾಗಿ ಹಣ ಹಿಂಪಡೆಯುವ ಸಲುವಾಗಿ ಬ್ಯಾಂಕ್‌ನತ್ತ ಧಾವಿಸಿದ್ದರು.

ADVERTISEMENT

ಆ ಬಳಿಕ ಸ್ಪಷ್ಟನೆ ನೀಡಿದ್ದ ಪ್ರಶಾಂತ್‌ ಕುಮಾರ್‌, ಗ್ರಾಹಕರ ಠೇವಣಿಯು ಸುರಕ್ಷಿತವಾಗಿದೆ. ಬ್ಯಾಂಕ್‌ ಮೇಲೆ ಹೇರಲಾಗಿರುವ ನಿರ್ಬಂಧವನ್ನು ನಿಗದಿಗಿಂತ (ಏಪ್ರಿಲ್‌ 3) ಮುಂಚಿತವಾಗಿಯೇ ಹಿಂಪಡೆಯಲಾಗುತ್ತದೆ. ಶೀಘ್ರದಲ್ಲೇ ಬ್ಯಾಂಕ್‌ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.ಹಣ ಹಿಂಪಡೆಯುವಿಕೆಗೆ ವಿಧಿಸಲಾಗಿರುವ ಮಿತಿಯನ್ನೂ ಮಾರ್ಚ್‌,15ರ ಒಳಗೆ ಹಿಂಪಡೆಯಲಾಗುತ್ತದೆ ಎಂದು ಭರವಸೆ ನೀಡಿದ್ದರು.

ಯೆಸ್ ಬ್ಯಾಂಕ್‌ ಷೇರು ಖರೀದಿ ಸಂಬಂಧ ಶನಿವಾರ ಮಾತನಾಡಿದ್ದ ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್,ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಯೆಸ್‌ ಬ್ಯಾಂಕ್‌ನ ಶೇ 49ರಷ್ಟು ಪಾಲು ಬಂಡವಾಳವನ್ನು ₹2,450 ಕೋಟಿಗೆ ಖರೀದಿಸುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.