ADVERTISEMENT

ಹಣಕಾಸು ಸಾಕ್ಷರತೆ: ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಹೇಗೆ ಇರಬೇಕು?

ರಾಜೇಶ್ ಕುಮಾರ್ ಟಿ. ಆರ್.
Published 18 ಆಗಸ್ಟ್ 2025, 0:44 IST
Last Updated 18 ಆಗಸ್ಟ್ 2025, 0:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಶಿಕ್ಷಣ ಕ್ಷೇತ್ರದಲ್ಲಿ ಬೆಲೆ ಏರಿಕೆ ಬೇರೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚಿದೆ. ಹಣದುಬ್ಬರ ಪ್ರಮಾಣವು ವಾರ್ಷಿಕ ಶೇ 4ರಿಂದ ಶೇ 8ರ ಆಸುಪಾಸಿನಲ್ಲಿದ್ದರೆ, ಶಿಕ್ಷಣ ಕ್ಷೇತ್ರದ ಹಣದುಬ್ಬರ ಮಾತ್ರ ಶೇ 10ರಿಂದ ಶೇ 12ರ ಆಸುಪಾಸಿಗೆ ತಲುಪಿದೆ. 2012ರಿಂದ 2020ರವರೆಗಿನ ಅಂಕಿ-ಅಂಶ ನೋಡಿದಾಗ ಆಹಾರ ಹಣದುಬ್ಬರ ಪ್ರಮಾಣ ವಾರ್ಷಿಕ ಶೇ 9.62ರಷ್ಟಿದ್ದರೆ ಆರೋಗ್ಯ ಕ್ಷೇತ್ರದ ಹಣದುಬ್ಬರ ಶೇ 8ರಷ್ಟು ಮತ್ತು ಶಿಕ್ಷಣ ಕ್ಷೇತ್ರದ ಹಣದುಬ್ಬರ ಶೇ 10ರಷ್ಟು ಇರುವುದು ಗೊತ್ತಾಗುತ್ತದೆ. 2021ರಲ್ಲಿ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಪದವಿ ಶಿಕ್ಷಣದ ಶುಲ್ಕ ಸಹ ದುಪ್ಪಟ್ಟಾಗಿದ್ದು ₹90 ಸಾವಿರ ಇದ್ದಿದ್ದು ಸುಮಾರು ₹ 2 ಲಕ್ಷಕ್ಕೆ ಏರಿಕೆಯಾಗಿದೆ.

ಸರ್ಕಾರದ ದತ್ತಾಂಶವೊಂದರ ಪ್ರಕಾರ 20ರಿಂದ 24 ವರ್ಷ ವಯಸ್ಸಿನ ವಿದ್ಯಾಭ್ಯಾಸನಿರತರಲ್ಲಿ ಪ್ರತಿ 10 ಮಂದಿ ಪೈಕಿ 4 ಮಂದಿ ಹಣದ ಕೊರತೆಯ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಪ್ರತಿ ಪೋಷಕರಿಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಹಂಬಲವಿದ್ದರೂ ಕೆಲವರು ಮಾತ್ರ ಅದಕ್ಕೆ ಸರಿಯಾದ ಹಣಕಾಸಿನ ಯೋಜನೆ ರೂಪಿಸುತ್ತಿದ್ದಾರೆ.

ADVERTISEMENT

ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಹೂಡಿಕೆಗಳು:

1. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್‌ವೈ): ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಸಣ್ಣ ಉಳಿತಾಯ ಯೋಜನೆ, ಹೆಣ್ಣು ಮಗುವಿನ ಭವಿಷ್ಯಕ್ಕೆ ಹಣಕಾಸಿನ ಭದ್ರತೆ ಒದಗಿಸುವುದು ಇದರ
ಪ್ರಮಖ ಉದ್ದೇಶ. 2015ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆಯ ಅಡಿಯಲ್ಲಿ ಈವರೆಗೆ 4.1 ಕೋಟಿಗೂ ಹೆಚ್ಚಿನ ಖಾತೆಗಳನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಹೆಸರಿನಲ್ಲಿ ತೆರೆಯಲಾಗಿದೆ. ಈ ಯೋಜನೆಯ ಬಡ್ಡಿ ದರ ಶೇ 8.2ರಷ್ಟಿದ್ದು ಪ್ರತಿ ವರ್ಷ ಕನಿಷ್ಠ ₹ 250 ಮತ್ತು ಗರಿಷ್ಠ ₹ 1.5 ಲಕ್ಷ ಹೂಡಿಕೆ ಮಾಡಬಹುದು. 15 ವರ್ಷಗಳ ಕಾಲ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಕಾಶವಿದ್ದು, ಹೂಡಿಕೆ ಆರಂಭಿಸಿ 21 ವರ್ಷ ತುಂಬಿದಾಗ ಯೋಜನೆ ಮೆಚ್ಯೂರಿಟಿಗೆ ಬರುತ್ತದೆ. ಉದಾಹರಣೆಗೆ, ನಿಮ್ಮ ಮಗಳಿಗೆ 2 ವರ್ಷವಿದ್ದಾಗ ಯೋಜನೆ ಆರಂಭಿಸಿದ್ದರೆ ಆಕೆಗೆ 22 ವರ್ಷ ತುಂಬುವ ಹೊತ್ತಿಗೆ ಹಣ ಸಿಗುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ಅಥವಾ ಸೂಚಿತ ಬ್ಯಾಂಕ್ ಶಾಖೆಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಈ ಯೋಜನೆಯಲ್ಲಿನ ₹ 1.5 ಲಕ್ಷದವರೆಗಿನ ಹೂಡಿಕೆಗೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಹೂಡಿಕೆ ಮೇಲಿನ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ಇಲ್ಲ.

ಉದಾಹರಣೆಗೆ, ಪ್ರಸ್ತುತ ಬಡ್ಡಿ ದರದ ಪ್ರಕಾರ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮುಂದಿನ 15 ವರ್ಷದವರೆಗೆ ಪ್ರತಿ ತಿಂಗಳು ₹ 6 ಸಾವಿರ ತೊಡಗಿಸಿದರೆ ಒಟ್ಟು ₹ 10.8 ಲಕ್ಷ ಹೂಡಿಕೆಯಾಗಿರುತ್ತದೆ. 15 ವರ್ಷಗಳ ಬಳಿಕ ಬಡ್ಡಿ ಸೇರಿ ಒಟ್ಟು ₹ 34.47 ಲಕ್ಷ ಲಭಿಸುತ್ತದೆ. ಈ ಹೂಡಿಕೆಯಲ್ಲಿ ಚಕ್ರಬಡ್ಡಿಯ ಲಾಭ ದೊರೆಯುತ್ತದೆ.

2. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಹೆಣ್ಣು ಮಗುವಿಗಾಗಿ ಹೂಡಿಕೆ ಮಾಡುತ್ತಿದ್ದರೆ ಸುಕನ್ಯಾ ಸಮೃದ್ಧಿ
ಅತ್ಯುತ್ತಮ. ಆದರೆ ಗಂಡು ಮಗುವಿನ ಶಿಕ್ಷಣಕ್ಕಾಗಿ ಹೂಡಿಕೆ ಮಾಡುವುದಿದ್ದರೆ ಪಿಪಿಎಫ್ ಉತ್ತಮ ಆಯ್ಕೆ. ಪಿಪಿಎಫ್ ಅನ್ನು ನಿವೃತ್ತಿ ಉದ್ದೇಶಕ್ಕೇ ಬಳಸಬೇಕು ಅಂತೇನಿಲ್ಲ, ಮಕ್ಕಳ ಶಿಕ್ಷಣದ ಉದ್ದೇಶಕ್ಕೂ ಇದು ಅನುಕೂಲಕರ. ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆ ಆರಂಭಿಸಲು ಸಾಧ್ಯವಿದೆ.

ಪಿಪಿಎಫ್ ಹೂಡಿಕೆ ಮೊತ್ತಕ್ಕೆ ಕೇಂದ್ರ ಸರ್ಕಾರದ ಖಾತರಿ ಇದೆ. ಬಡ್ಡಿ ಗಳಿಕೆ ಕಡಿಮೆ ಇದ್ದರೂ ಪರವಾಗಿಲ್ಲ, ಹಣಕ್ಕೆ ಖಾತರಿ ಇರಬೇಕು, ತೆರಿಗೆ ಭಾರ ಇರಬಾರದು ಎನ್ನುವವರಿಗೆ ಪಿಪಿಎಫ್ ಉತ್ತಮ ಆಯ್ಕೆ. ಪಿಪಿಎಫ್‌ನಲ್ಲಿ ವಾರ್ಷಿಕ ಕನಿಷ್ಠ ₹500 ಮತ್ತು ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಅಂಚೆ ಕಚೇರಿ ಮತ್ತು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಈ ಯೋಜನೆ ಲಭ್ಯ. ಈ ಯೋಜನೆಯಲ್ಲಿನ ₹1.5 ಲಕ್ಷದವರೆಗಿನ ಹೂಡಿಕೆಗೆ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಹೂಡಿಕೆ ಮೇಲಿನ ಬಡ್ಡಿ ಗಳಿಕೆಗೆ ತೆರಿಗೆ ಅನ್ವಯಿಸುವುದಿಲ್ಲ. ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು
ಐದು ವರ್ಷಗಳ ನಂತರ ಭಾಗಶಃ ಹಿಂಪಡೆಯಬಹುದು. ಆದರೆ ಪೂರ್ತಿ ಹಣ ವಾಪಸ್ ಪಡೆಯಬೇಕಾದರೆ 15 ವರ್ಷ ಕಾಯಬೇಕು. ಪಿಪಿಎಫ್ ಬಡ್ಡಿ ದರ ವಾರ್ಷಿಕ ಶೇ 7.1ರಷ್ಟಿದೆ. ಇದು ಅಷ್ಟು ಆಕರ್ಷಕ ಅನಿಸದೇ ಇರಬಹುದು. ಆದರೆ ಶೇ 30ರ ತೆರಿಗೆ ಹಂತದಲ್ಲಿ ಬರುವವರಿಗೆ ಇದು ಉತ್ತಮ ಯೋಜನೆಯಾಗುತ್ತದೆ. ಶೇ 30ರಷ್ಟು ತೆರಿಗೆ ಮಿತಿಗೆ ಬರುವವರು ಪಿಪಿಎಫ್‌ನ ಬಡ್ಡಿ ಲಾಭವನ್ನು ನಿಶ್ಚಿತ ಠೇವಣಿಯಲ್ಲಿ ಪಡೆಯಬೇಕಾದರೆ ಆ ಅದು ಶೇ 10ರಷ್ಟು ಗಳಿಕೆ ಕೊಡಬೇಕು. ಪಿಪಿಎಫ್‌ನಲ್ಲಿ ಪ್ರತಿ ವರ್ಷ ₹1.5 ಲಕ್ಷ ತೊಡಗಿಸಿದರೆ ಒಟ್ಟು ₹22.5 ಲಕ್ಷ ಹೂಡಿಕೆಯಾಗಿರುತ್ತದೆ. ಹೂಡಿಕೆ ಮತ್ತು ಬಡ್ಡಿ ಸೇರಿ 15 ವರ್ಷಗಳ ಬಳಿಕ ₹40.68 ಲಕ್ಷ ಸಿಗುತ್ತದೆ. ಬಡ್ಡಿ ಲೆಕ್ಕಾಚಾರಕ್ಕೆ ಪ್ರಸ್ತುತ ದರ ಪರಿಗಣಿಸಲಾಗಿದೆ.

3. ಮ್ಯೂಚುವಲ್ ಫಂಡ್: ಮಕ್ಕಳ ವಿದ್ಯಾಭ್ಯಾಸಕ್ಕೆ ಹೂಡಿಕೆ ಮಾಡುವಾಗ ಸಾಂಪ್ರದಾಯಿಕ ಯೋಜನೆಗಳನ್ನಷ್ಟೇ ನೆಚ್ಚಿಕೊಳ್ಳುವುದು ಸರಿಯಲ್ಲ. ಹಣದುಬ್ಬರ ವೇಗವಾಗಿ ಮುನ್ನುಗ್ಗುತ್ತಿರುವುದರಿಂದ ಪ್ರತಿ 6ರಿಂದ 7 ವರ್ಷಗಳಿಗೊಮ್ಮೆ ಶಿಕ್ಷಣ ವೆಚ್ಚಗಳು ದುಪ್ಪಟ್ಟಾಗುತ್ತಿವೆ. ಈ ಕಾರಣದಿಂದಾಗಿ ಮ್ಯೂಚುವಲ್ ಫಂಡ್‌ಗಳನ್ನೂ ಪರಿಗಣಿಸುವುದು ಒಳಿತು. ಮಕ್ಕಳನ್ನು ಕೇಂದ್ರೀಕರಿಸಿಕೊಂಡ ಮ್ಯೂಚುವಲ್ ಫಂಡ್ ಅಥವಾ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಭಾರತದಲ್ಲಿ ಮಕ್ಕಳನ್ನು ಕೇಂದ್ರೀಕರಿಸಿಕೊಂಡ ಮ್ಯೂಚುವಲ್ ಫಂಡ್ ಯೋಜನೆಗಳ ಸಂಖ್ಯೆ 10ಕ್ಕೂ ಹೆಚ್ಚು. ಈ ಯೋಜನೆಗಳನ್ನು ಶಿಕ್ಷಣ ಅಥವಾ ಮದುವೆಯ ಉದ್ದೇಶಕ್ಕೆ ಬಳಸಿಕೊಳ್ಳಬಹುದು.

ಸಾಮಾನ್ಯವಾಗಿ ಇಂತಹ ಮ್ಯೂಚುವಲ್ ಫಂಡ್ ಹೂಡಿಕೆಗಳು 5 ವರ್ಷದ ಲಾಕ್‌–ಇನ್ ಅವಧಿ ಹೊಂದಿರುತ್ತವೆ. ಇಂಥವು ನಿಮಗೆ ಸರಿಹೊಂದದಿದ್ದರೆ ಈಕ್ವಿಟಿ ಮ್ಯೂಚುವಲ್ ಫಂಡ್ ಮತ್ತು ಹೈಬ್ರೀಡ್ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಿ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಾವಧಿಯಲ್ಲಿ ವಾರ್ಷಿಕ ಶೇ 12ರವರೆಗೆ ಗಳಿಕೆ ನಿರೀಕ್ಷಿಸಬಹುದು. ನೀವು ಯಾವ ಮ್ಯೂಚುವಲ್ ಫಂಡ್ ಪರಿಗಣಿಸಬೇಕು ಎನ್ನುವುದು ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಲು ತಯಾರಿದ್ದೀರಿ ಮತ್ತು ಹೂಡಿಕೆಗೆ ಎಷ್ಟು ಸಮಯ ಕೊಡುತ್ತೀರಿ ಎನ್ನುವುದರ ಮೇಲೆ ನಿಂತಿದೆ.

ಕಿವಿಮಾತು: ಮಕ್ಕಳ ಶಿಕ್ಷಣಕ್ಕಾಗಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಲಾಭ. ಬೇಗ ಹಣ ತೊಡಗಿಸಿದಾಗ ಮಾತ್ರ ಹೂಡಿಕೆಗಳಿಂದ ನಿಮಗೆ ಚಕ್ರಬಡ್ಡಿಯ ಗಳಿಕೆ ಹೆಚ್ಚು ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.