ADVERTISEMENT

ಹಣಕಾಸು ಸಾಕ್ಷರತೆ: ಏನಿದು ಲಿಕ್ವಿಡ್ ಫಂಡ್ ? ಯಾರಿಗೆ ಸೂಕ್ತ?

ರಾಜೇಶ್ ಕುಮಾರ್ ಟಿ.ಆರ್. ಅವರ ಅಂಕಣ

ರಾಜೇಶ್ ಕುಮಾರ್ ಟಿ. ಆರ್.
Published 12 ನವೆಂಬರ್ 2023, 20:59 IST
Last Updated 12 ನವೆಂಬರ್ 2023, 20:59 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಏನಿದು ಲಿಕ್ವಿಡ್ ಫಂಡ್?

ಡೆಟ್ ಫಂಡ್ ಮಾದರಿಯಲ್ಲಿ ಬರುವ ಪ್ರಮುಖ ಫಂಡ್‌ಗಳಲ್ಲಿ ಲಿಕ್ವಿಡ್ ಮ್ಯೂಚುಯಲ್ ಫಂಡ್ ಕೂಡ ಒಂದು. 7 ದಿನಗಳಿಂದ ಒಂದು ವರ್ಷದೊಳಗಿನ ಹೂಡಿಕೆಗೆ ಲಿಕ್ವಿಡ್ ಮ್ಯೂಚುಯಲ್ ಫಂಡ್‌ಗಳು ಸರಿ ಹೊಂದುತ್ತವೆ. ಲಿಕ್ವಿಡ್ ಫಂಡ್‌ಗಳಲ್ಲಿ ನಗದೀಕರಣ ಸುಲಭ. ಹಣ ಅಗತ್ಯ ಎನಿಸಿದಾಗ 24 ಗಂಟೆಗಳ ಒಳಗೆ ಹೊಡಿಕೆ ಹಿಂಪಡೆಯಬಹುದು. ಹಾಗಾಗಿ ತುರ್ತು ಅಗತ್ಯಗಳಿಗೆ ಬೇಕಾಗುವ ಹಣವನ್ನು ಲಿಕ್ವಿಡ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು. ಇದು ಹೆಚ್ಚು ರಿಸ್ಕ್ ಇಲ್ಲದಿರುವ ಮಾದರಿಯ ಹೂಡಿಕೆಯಾಗಿದ್ದು ಬ್ಯಾಂಕ್ ಉಳಿತಾಯ ಖಾತೆ ಮತ್ತು ಅಲ್ಪಾವಧಿ ಫಿಕ್ಸೆಡ್ ಡೆಪಾಸಿಟ್ ಗಿಂತ ಕೊಂಚ ಹೆಚ್ಚು ಲಾಭಾಂಶ ಕೊಡುವ ಸಾಮರ್ಥ್ಯವಿದೆ.

ADVERTISEMENT

ಲಿಕ್ವಿಡ್ ಫಂಡ್‌ಗಳು ಎಲ್ಲಿ ಹಣ ತೊಡಗಿಸುತ್ತವೆ?

ಹೂಡಿಕೆದಾರನಿಗೆ ಅಗತ್ಯ ಬಿದ್ದಾಗ ಲಿಕ್ವಿಡ್ ಫಂಡ್ ಗಳಲ್ಲಿ ಹೂಡಿಕೆ ಮಾಡಿರುವ ಹಣ ಹಿಂಪಡೆಯುವ ಅವಕಾಶ ಇರುವುದರಿಂದ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮದ ಪ್ರಕಾರ, ಹೆಚ್ಚು ರಿಸ್ಕ್ ಇರುವ ಕಡೆ ಲಿಕ್ವಿಡ್ ಫಂಡ್‌ಗಳು ಹೂಡಿಕೆ ಮಾಡುವಂತಿಲ್ಲ. ಲಿಕ್ವಿಡ್ ಫಂಡ್‌ಗಳು ಹೂಡಿಕೆದಾರರ ಹಣವನ್ನ ನಿಶ್ಚಿತ ಆದಾಯ ತಂದುಕೊಡುವ, 91 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವಂತಹ ಸರ್ಕಾರಿ ಬಾಂಡ್‌ಗಳು, ಟ್ರಷರಿ ಬಿಲ್‌ ಗಳು, ಕಮರ್ಶಿಯಲ್ ಪೇಪರ್‌ಗಳಲ್ಲಿ ತೊಡಗಿಸಬಹುದು. ಇಷ್ಟೇ ಅಲ್ಲ, ಒಂದು ನಿರ್ದಿಷ್ಟ ವಲಯದಲ್ಲಿ ಶೇ 25 ಕ್ಕಿಂತ ಹೆಚ್ಚಿಗೆ ತೊಡಗಿಸುವಂತಿಲ್ಲ.

ಲಿಕ್ವಿಡ್ ಫಂಡ್‌ಗಳಲ್ಲಿ ಲಾಭ ಎಷ್ಟು?

ಲಿಕ್ವಿಡ್ ಫಂಡ್‌ಗಳು ಹೂಡಿಕೆದಾರರಿಂದ ಪಡೆದ ಹಣವನ್ನು ಸಾಲದ ರೂಪದಲ್ಲಿ ಬೇರೆಯವರಿಗೆ ನೀಡಿ ಅದರಿಂದ ಬರುವ ಬಡ್ಡಿಯಿಂದ ಆದಾಯ ಗಳಿಸುತ್ತವೆ. ಲಿಕ್ವಿಡ್ ಮ್ಯೂಚುಯಲ್ ಫಂಡ್‌ಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಸರಾಸರಿ ಶೇ 6.94 ರಷ್ಟು ಲಾಭಾಂಶ ಕೊಟ್ಟಿವೆ.

3 ವರ್ಷಗಳ ಸರಾಸರಿ ಲೆಕ್ಕಾಚಾರದಲ್ಲಿ ಶೇ 4.84 ರಷ್ಟು ಲಾಭಾಂಶ ಕೊಟ್ಟಿವೆ. 5 ವರ್ಷಗಳ ಸರಾಸರಿ ಅಂದಾಜು ಮಾಡಿದಾಗ ಶೇ 5.25 ರಷ್ಟು ಲಾಭ ಒದಗಿಸಿವೆ. ಹಾಗಾಗಿ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಸಿಗುವ ಶೇ 3 ರಿಂದ ಶೇ 3.5 ರಷ್ಟು ಬಡ್ಡಿಗಿಂತ ಹೆಚ್ಚು ಲಾಭ ಇಲ್ಲಿ ದಕ್ಕುತ್ತದೆ. 

ಎಸ್‌ಐಪಿ ಹೂಡಿಕೆ ಸಾಧ್ಯವೇ , ಶುಲ್ಕ ಎಷ್ಟು, ಯಾರು ಹೂಡಿಕೆ ಮಾಡಬಹುದು?

ಲಿಕ್ವಿಡ್ ಫಂಡ್‌ಗಳಲ್ಲಿ ಎಸ್‌ಐಪಿ ಮತ್ತು ಲಮ್‌ಸಮ್‌ (ದೊಡ್ಡ ಮೊತ್ತದ) ಹೂಡಿಕೆ ಮಾಡಬಹುದು. ಈ ಫಂಡ್‌ಗಳ ನಿರ್ವಹಣೆಗೆ ಫಂಡ್ ಹೌಸ್‌ಗಳು ಶೇ 0.25 ರಿಂದ ಶೇ 1 ರಷ್ಟು ಶುಲ್ಕ ಪಡೆಯುತ್ತವೆ. ಉಳಿತಾಯ ಖಾತೆಯಲ್ಲಿ ಹೆಚ್ಚುವರಿ ಹಣ ಹೊಂದಿರುವವರು, ತುರ್ತು ನಿಧಿಗೆ ಅವಶ್ಯಕವಿರುವ ಹಣ ಇಟ್ಟುಕೊಳ್ಳಬೇಕು ಎನ್ನುವವರು, ತಾತ್ಕಾಲಿಕವಾಗಿ ಅಂದರೆ ಒಂದು ವಾರದಿಂದ ಒಂದೆರಡು ತಿಂಗಳ ಕಾಲ ದೊಡ್ಡ ಮೊತ್ತದ ಹಣವನ್ನು ಸುರಕ್ಷಿತವಾಗಿ ಇಡಬೇಕು ಎನ್ನುವವರು, ಅಲ್ಪಾವಧಿ ಫಿಕ್ಸೆಡ್ ಡೆಪಾಸಿಟ್ ಮಾಡುವ ಆಲೋಚನೆ ಇರುವವರು ಲಿಕ್ವಿಡ್ ಮ್ಯೂಚುಯಲ್ ಫಂಡ್ ಪರಿಗಣಿಸಬಹುದು. ಹೂಡಿಕೆ ಮಾಡಿದ ಏಳು ದಿನಗಳ ಒಳಗಾಗಿ ಮೊತ್ತ ವಾಪಸ್ ಪಡೆಯಬೇಕಾದರೆ ಎಕ್ಸಿಟ್ ಲೋಡ್ ಶುಲ್ಕ ಕಟ್ಟಬೇಕಾಗುತ್ತದೆ. 7 ದಿನಗಳ ನಂತರದಲ್ಲಿ ಹೂಡಿಕೆ ಹಣ ಹಿಂಪಡೆದರೆ ಯಾವುದೇ ಶುಲ್ಕವಿರುವುದಿಲ್ಲ.

ಲಿಕ್ವಿಡ್ ನೈಟ್ ಫಂಡ್‌ಗೆ ತೆರಿಗೆ ಹೇಗೆ?

ಲಿಕ್ವಿಡ್ ಫಂಡ್‌ನಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಹೂಡಿಕೆಗೆ ನಿರ್ದಿಷ್ಟ ವ್ಯಕ್ತಿಯ ಆದಾಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ. ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಹೂಡಿಕೆಗೆ ದೀರ್ಘಾವಧಿ ಬಂಡವಾಳ ತೆರಿಗೆ (ಎಲ್‌ಟಿಸಿಜಿ) ಅನ್ವಯಿಸುತ್ತದೆ. ಈ ಬೆಲೆ ಏರಿಕೆಯನ್ನು ಗಣನೆಗೆ ತೆಗೆದುಕೊಂಡು (ಇಂಡೆಕ್ಸೇಷನ್) ಇಲ್ಲಿ ಶೇ 20 ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

ಎರಡನೇ ವಾರವೂ ಗಳಿಕೆ ಕಂಡ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಗಳಿಕೆ ದಾಖಲಿಸಿವೆ. 64904 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.84 ರಷ್ಟು ಗಳಿಕೆ ಕಂಡಿದೆ. 19425 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1 ರಷ್ಟು ಹೆಚ್ಚಳವಾಗಿದೆ. ತೈಲ ಬೆಲೆ ಇಳಿಕೆ ಹಬ್ಬದ ಖರೀದಿ ಭರಾಟೆ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಹೆಲ್ತ್‌ಕೇರ್ ಸೂಚ್ಯಂಕ ಶೇ 4 ಬಿಎಸ್ಇ ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 3 ಬಿಎಸ್ಇ ಮೆಟಲ್ ಸೂಚ್ಯಂಕ ಶೇ 3 ಮತ್ತು ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2.6 ರಷ್ಟು ಗಳಿಕೆ ಕಂಡಿವೆ.  ಏರಿಕೆ ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಹಿಂದೂಸ್ಥಾನ್ ಏರೊನಾಟಿಕ್ಸ್ ನೈಕಾ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಇನ್ಫೊ ಎಡ್ಜ್ ಜೈಡಸ್ ಲೈಫ್‌ ಸೈನ್ಸಸ್‌ ಮತ್ತು ವರುಣ್ ಬಿವರೇಜಸ್ ಗಳಿಕೆ ದಾಖಲಿಸಿವೆ. ಮಿಡ್ ಕ್ಯಾಪ್‌ನಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಅರಬಿಂದೊ ಫಾರ್ಮಾ ಆಲ್ಕೆಂ ಲ್ಯಾಬೊರೇಟರಿಸ್ ಆರತಿ ಇಂಡಸ್ಟ್ರೀಸ್ ಪವರ್ ಫೈನಾನ್ಸ್ ಕಾರ್ಪೊರೇಷನ್ ಸೋಲಾರ್ ಇಂಡಸ್ಟ್ರೀಸ್  ಗಳಿಕೆ ಕಂಡಿವೆ. ಜೀ ಎಂಟರ್‌ಟೇನ್ಮೆಂಟ್‌ ‌‌‌ಎಂಟರ್ ಪ್ರೈಸಸ್ ಪಿರಾಮಲ್ ಎಂಟರ್ ಪ್ರೈಸಸ್ ಮುತ್ತೋಟ್ ಫೈನಾನ್ಸ್ ಇಂಡಿಯನ್ ಬ್ಯಾಂಕ್ ಮತ್ತು ಶ್ರೀರಾಮ್ ಫೈನಾನ್ಸ್ ಕುಸಿತ ಕಂಡಿವೆ. ಮುನ್ನೋಟ: ಈ ವಾರ ಅಡ್ವಾನಿ ಹೊಟೇಲ್ಸ್ ಅಂಡ್ ರೆಸಾರ್ಟ್ಸ್ ಲಿ. ಕೊನಾರ್ಟ್ ಇಂಜಿನಿಯರ್ಸ್ ಲಿ. ಎಕ್ಸಿಕಾನ್ ಈವೆಂಟ್ಸ್ ಅಂಡ್ ಮೀಡಿಯಾ ಸೊಲ್ಯೂಷನ್ಸ್ ಫ್ಲೆಕ್ಸ್ ಫುಡ್ಸ್ ಲಿ. ಗ್ರಾಸಿಮ್ ಇಂಡಸ್ಟ್ರೀಸ್ ಲಿ. ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ರಾಜೇಶ್ ಕುಮಾರ್ ಟಿ.ಆರ್.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.