ADVERTISEMENT

ಹಣಕಾಸು ಸಾಕ್ಷರತೆ: ನಿಲ್ಲುತ್ತಾ ಮಿಡ್-ಸ್ಮಾಲ್‌ ಕ್ಯಾಪ್ ಓಟ?

ರಾಜೇಶ್ ಕುಮಾರ್ ಟಿ. ಆರ್.
Published 1 ಅಕ್ಟೋಬರ್ 2023, 20:36 IST
Last Updated 1 ಅಕ್ಟೋಬರ್ 2023, 20:36 IST
ರಾಜೇಶ್ ಕುಮಾರ್ ಟಿ.ಆರ್.
ರಾಜೇಶ್ ಕುಮಾರ್ ಟಿ.ಆರ್.   

ರಾಜೇಶ್ ಕುಮಾರ್ ಟಿ. ಆರ್.

ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಕಳೆದ ಕೆಲ ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಅತಿ ಹೆಚ್ಚು ಲಾಭಾಂಶ ತಂದುಕೊಟ್ಟಿವೆ. ಆದರೆ ಮಾರುಕಟ್ಟೆ ತಜ್ಞರು ಮಿಡ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳ ಈ ಓಟ ಹೆಚ್ಚು ಕಾಲ ಮುಂದುವರಿಯುವುದಿಲ್ಲ ಎನ್ನುತ್ತಿದ್ದಾರೆ. ಷೇರುಪೇಟೆ ಸೂಚ್ಯಂಕಗಳ ಈ ಗಣನೀಯ ಜಿಗಿತಕ್ಕೆ ಪೂರಕ ಕಾರಣಗಳು ಕಂಡುಬರುತ್ತಿಲ್ಲ ಎನ್ನುವುದು ಅವರ ತಕಾರಾರು. ಇಂತಹ ಸನ್ನಿವೇಷದಲ್ಲಿ ಹೂಡಿಕೆದಾರರು ಏನು ಮಾಡಬೇಕು? ಏನು ಮಾಡಬಾರದು ತಿಳಿಯೋಣ ಬನ್ನಿ.

ಮಿಡ್, ಸ್ಮಾಲ್ ಕ್ಯಾಪ್‌ನಲ್ಲಿ ದಾಖಲೆ ಲಾಭಾಂಶ, ದಾಖಲೆ ಹೂಡಿಕೆ: ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕ ಕಳೆದ 6 ತಿಂಗಳ ಸಮಯದಲ್ಲಿ ಸರಾಸರಿ ಶೇ 33 ರಷ್ಟು ಜಿಗಿದಿದೆ. ಇದೇ ಅವಧಿಯಲ್ಲಿ ನಿಫ್ಟಿ ಸ್ಮಾಲ್ ಕ್ಯಾಪ್ 250 ಸೂಚ್ಯಂಕ ಸರಾಸರಿ ಶೇ 37 ರಷ್ಟು ಹೆಚ್ಚಳ ಕಂಡಿದೆ. ಇಷ್ಟೇ ಅಲ್ಲ, ಈ ವಲಯದ ಫಂಡ್‌ಗಳಿಗೆ ದೊಡ್ಡ ಮೊತ್ತದ ಹಣವೂ ಹರಿದುಬಂದಿದೆ. ಮಾರ್ಚ್‌ನಿಂದ ಆಗಸ್ಟ್ ಅವಧಿಯಲ್ಲಿ ಮಿಡ್ ಕ್ಯಾಪ್ ಫಂಡ್ ವಲಯಕ್ಕೆ ₹ 11,000 ಕೋಟಿ ಹೂಡಿಕೆಯಾಗಿದ್ದರೆ, ಸ್ಮಾಲ್ ಕ್ಯಾಪ್ ವಲಯಕ್ಕೆ ₹ 21,803 ಕೋಟಿ ಹೂಡಿಕೆಯಾಗಿದೆ.

ADVERTISEMENT

ಬ್ರೋಕರೇಜ್‌ ಸಂಸ್ಥೆಗಳ ಕಳವಳ, ಹೂಡಿಕೆದಾರರಿಗೆ ಎಚ್ಚರಿಕೆ ಸಂದೇಶ: ಆಂತರಿಕ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ ತಲೆಬುಡವಿಲ್ಲದ ಲೆಕ್ಕಾಚಾರದಲ್ಲಿ ಬಹುತೇಕ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳ ಷೇರುಗಳ ಬೆಲೆ ಹೆಚ್ಚಳವಾಗುತ್ತಿದೆ ಎಂದು ಕೋಟಕ್ ಸೆಕ್ಯುರಿಟೀಸ್‌ ಬ್ರೋಕರೇಜ್ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ಕೋಟಕ್ ಸೆಕ್ಯೂರಿಟೀಸ್ ಮಾತ್ರವಲ್ಲ, ಎಕ್ಸಿಸ್ ಸೆಕ್ಯೂರಿಟೀಸ್ ಕೂಡ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳ ಷೇರುಗಳು ವಾಸ್ತವ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದೆ. ಈ ಹಂತದಲ್ಲಿ ಹೂಡಿಕೆದಾರರು ಜಾಗೃತರಾಗಿರಬೇಕು ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ.

ನಿವೇನು ಮಾಡಬೇಕು?: ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ವಾಸ್ತವಕ್ಕಿಂತ ಹೆಚ್ಚು ಮೌಲ್ಯಮಾಪನಕ್ಕೆ ಒಳಗಾಗಿರುವುದರಿಂದ ಈ ಫಂಡ್‌ಗಳಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತ (ಲಮ್ ಸಮ್) ಹೂಡಿಕೆ ಮಾಡದಿರುವುದು ಒಳಿತು. ಇಲ್ಲದಿದ್ದರೆ ಮಾರುಕಟ್ಟೆ ದಿಢೀರ್ ಕುಸಿದರೆ ತಾತ್ಕಾಲಿಕ ನಷ್ಟಕ್ಕೆ ಒಳಗಾಗಬೇಕಾಗುತ್ತದೆ.

ಆದರೆ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಪ್ರತಿ ತಿಂಗಳು ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮುಂದುವರಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಏಕೆಂದರೆ, ಎಸ್‌ಐಪಿ ಹೂಡಿಕೆಯಲ್ಲಿ ಬೆಲೆ ಜಾಸ್ತಿಯಿದ್ದಾಗ ಕಡಿಮೆ ಯುನಿಟ್‌ಗಳು ಸಿಗುತ್ತವೆ ಮತ್ತು ಬೆಲೆ ಕಮ್ಮಿ ಇದ್ದಾಗ ಹೆಚ್ಚು ಯೂನಿಟ್‌ಗಳು ಸಿಗುತ್ತವೆ. ಈ ಪ್ರಕ್ರಿಯೆಯಿಂದ ನಿಮ್ಮ ಹೂಡಿಕೆಯ ಮೇಲೆ ಅನಿಶ್ಚಿತತೆ ಕಡಿಮೆಯಾಗುತ್ತದೆ. ಉದಾಹರಣೆಗೆ ನಿಫ್ಟಿ ಮಿಡ್ ಕ್ಯಾಪ್ 150 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 250 ಸೂಚ್ಯಂಕಗಳು ಆಗಸ್ಟ್ 2015 ರಲ್ಲಿ ಹೆಚ್ಚು ಗಳಿಕೆ ಮಟ್ಟ ಮುಟ್ಟಿದವು. ಆದರೆ ಫೆಬ್ರುವರಿ 2016 ರ ವೇಳೆಗೆ ಗಣನೀಯ ಕುಸಿತ ಕಂಡವು. ಮಿಡ್ ಕ್ಯಾಪ್ ಸೂಚ್ಯಂಕ ಶೇ 18 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 23 ರಷ್ಟು ಕುಸಿಯಿತು. ಯಾರು ಎಸ್‌ಐಪಿ ಹೂಡಿಕೆ ಮುಂದುವರಿಸಿದರೋ ಅವರಿಗೆ ಸಮಸ್ಯೆಯಾಗಲಿಲ್ಲ. ಆಗಸ್ಟ್ 2015 ರಲ್ಲಿ ಆರಂಭಿಸಿದ ಎಸ್‌ಐಪಿ ಹೂಡಿಕೆಗಳು 8 ವರ್ಷಗಳ ಅವಧಿಯಲ್ಲಿ ಶೇ 20 ರಷ್ಟು ಲಾಭಾಂಶ ತಂದುಕೊಟ್ಟವು. ಇದೊಂದು ಉದಾಹರಣೆ ಅಷ್ಟೇ. ಎಸ್‌ಐಪಿ ಹೂಡಿಕೆಯಿಂದ ಮಾರುಕಟ್ಟೆ ಅನಿಶ್ಚಿತತೆಯನ್ನು ಹೇಗೆ ಮೀರಿ ನಿಲ್ಲಬಹುದು ಎನ್ನುವುದಕ್ಕೆ ಹತ್ತಾರು ನಿದರ್ಶನಗಳಿವೆ.

ಷೇರುಪೇಟೆಯಲ್ಲಿ ಮುಂದುವರಿದ ಅನಿಶ್ಚಿತ ಓಟ

ಷೇರುಪೇಟೆಯಲ್ಲಿ ಸದ್ಯ ಅನಿಶ್ಚಿತ ಸ್ಥಿತಿ ಮನೆ ಮಾಡಿದೆ. ಸೆಪ್ಟೆಂಬರ್ 29ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿವೆ. ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‌ಗಳು ಸದ್ಯದ ಸ್ಥಿತಿಯಲ್ಲಿ ಬಡ್ಡಿ ದರ ಇಳಿಕೆ ಇಲ್ಲ ಎನ್ನುವ ಮುನ್ಸೂಚನೆ ನೀಡಿರುವುದು ತೈಲ ಬೆಲೆ ಹೆಚ್ಚಳ ಡಾಲರ್ ಮೌಲ್ಯ ಹೆಚ್ಚಳ ವಿದೇಶಿ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ. ಕಳೆದ ವಾರ 65828 ರಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 0.27 ರಷ್ಟು ಕುಸಿದಿದೆ. 19638 ರಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.18 ರಷ್ಟು ತಗ್ಗಿದೆ. ಆದರೆ ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.2 ರಷ್ಟು ಗಳಿಸಿಕೊಂಡಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.3 ರಷ್ಟು ಜಿಗಿದಿದೆ. ವಲಯವಾರು ನೋಡಿದಾಗ ಬಿಎಸ್ಇ ಟೆಲಿಕಾಂ ಸೂಚ್ಯಂಕ ಶೇ 2.7 ಬಿಎಸ್ಇ ಹೆಲ್ತ್ ಕೇರ್ ಸೂಚ್ಯಂಕ ಶೇ 2.6 ಬಿಎಸ್ಇ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2.5 ರಷ್ಟು ಗಳಿಸಿಕೊಂಡಿವೆ. ಬಿಎಸ್ಇ ಮೆಟಲ್ ಮತ್ತು ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕಗಳು ತಲಾ ಶೇ 2 ರಷ್ಟು ಗಳಿಸಿಕೊಂಡಿವೆ. ಉಳಿದಂತೆ ಬಿಎಸ್ಇ ಐ.ಟಿ. ಸೂಚ್ಯಂಕ ಶೇ 3 ಮತ್ತು ಆಟೊ ಸೂಚ್ಯಂಕ ಶೇ 0.5 ರಷ್ಟು ಕುಸಿದಿವೆ. ಗಳಿಕೆ–ಇಳಿಕೆ: ಸೆನ್ಸೆಕ್ಸ್‌ನಲ್ಲಿ ಬಜಾಜ್ ಫೈನಾನ್ಸ್ ಶೇ 4.5 ಕೋಲ್ ಇಂಡಿಯಾ ಶೇ 4.15 ಒಎನ್‌ಜಿಸಿ ಶೇ 3.54 ಎಲ್‌ ಆ್ಯಂಡ್‌ ಟಿ ಶೇ 3.53 ಎನ್‌ಟಿಪಿಸಿ ಶೇ 3.24 ಸನ್ ಫಾರ್ಮಾ ಶೇ 2.13 ಎಕ್ಸಿಸ್ ಬ್ಯಾಂಕ್ ಶೇ 1.82 ಏರ್‌ಟೆಲ್‌ ಶೇ 1.67 ಮತ್ತು ಟಾಟಾ ಮೋಟರ್ಸ್ ಶೇ 1.49 ರಷ್ಟು ಹೆಚ್ಚಳ ಕಂಡಿವೆ. ಇನ್ಫೊಸಿಸ್ ಶೇ 4.07 ಎಷ್ಯನ್‌ ಪೇಂಟ್ಸ್ ಶೇ 3.50 ಮಹಿಂದ್ರ ಆ್ಯಂಡ್‌ ಮಹಿಂದ್ರ ಶೇ 3.37 ಎಚ್‌ಸಿಎಲ್ ಟೆಕ್ ಶೇ 2.93 ಯೆಸ್‌ ಬ್ಯಾಂಕ್ ಶೇ 2.49 ಮತ್ತು ಟಿಸಿಎಸ್ ಶೇ 2 ರಷ್ಟು ಕುಸಿದಿವೆ. ಮುನ್ನೋಟ: ಈ ವಾರ ವೇಲಿಯಂಟ್ ಲ್ಯಾಬೊರೇಟರಿಸ್ ಮತ್ತು ಪ್ಲಾಜಾ ವೈಯರ್ಸ್ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಜರುಗಲಿದೆ. ಉಳಿದಂತೆ ಮಾರುಕಟ್ಟೆಯಲ್ಲಿ ತಕ್ಷಣದ ಏರಿಳಿತಗಳಾಗುವ ಸಾಧ್ಯತೆ ಇರುತ್ತದೆ. ಜಾಗತಿಕ ವಿದ್ಯಮಾನಗಳು ದೇಶಿಯ ಬೆಳವಣಿಗೆಗಳು ಹಾಗೂ ಮುಂಬರುವ ಕಂಪನಿಗಳ ತ್ರೈಮಾಸಿಕ ವರದಿಗಳು ಷೇರುಪೇಟೆ ಸೂಚ್ಯಂಕಗಳ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.