ADVERTISEMENT

Mutual Fund Investment: ಎಂ.ಎಫ್‌ನಲ್ಲಿ ಹೂಡಿಕೆ ಯಾವುದು ಒಳ್ಳೆಯ ಫಂಡ್?

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 22:30 IST
Last Updated 21 ಜನವರಿ 2026, 22:30 IST
   
ಹೂಡಿಕೆ ಮಾಡಲು ಮನಸ್ಸು ಮಾಡಿದರೆ ಸಾಕಾಗುವುದಿಲ್ಲ; ಹೂಡಿಕೆ ಮಾಡಲು ಸೂಕ್ತವಾದ ಫಂಡ್‌ ಆಯ್ಕೆ ಗೊತ್ತಿರಬೇಕು, ಹೂಡಿಕೆ ಮೊತ್ತವನ್ನು ಯಾವಾಗ ಹಿಂದಕ್ಕೆ ಪಡೆಯಬೇಕು ಎಂಬುದು ಕೂಡ ಗೊತ್ತಿರಬೇಕು. ಈ ಎರಡು ಮಹತ್ವದ ವಿಷಯಗಳ ಮೇಲೆ ಈ ಬರಹ ಗಮನ ಹರಿಸಿದೆ.

ಹೂಡಿಕೆದಾರರ ಪಾಲಿಗೆ ಮ್ಯೂಚುವಲ್‌ ಫಂಡ್‌ಗಳು ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿವೆ. ಅವು ಹೂಡಿಕೆದಾರರಿಗೆ ದೇಶದ ಬಂಡವಾಳ ಮಾರುಕಟ್ಟೆಗಳ ಬೆಳವಣಿಗೆಯಲ್ಲಿ ಭಾಗಿಯಾಗಲು ಬಹಳ ಸುಲಭದ ಮಾರ್ಗವೊಂದನ್ನು ಒದಗಿಸುತ್ತವೆ. ಬೇರೆ ಬೇರೆ ಕಡೆಗಳಲ್ಲಿ ಹಣ ತೊಡಗಿಸುವ ಹಲವು ಮ್ಯೂಚುವಲ್‌ ಫಂಡ್‌ ಯೋಜನೆಗಳು ಲಭ್ಯವಿವೆ, ಅವು ಭಿನ್ನ ಬಗೆಯ ಹಣಕಾಸಿನ ಗುರಿಗಳನ್ನು ಹೊಂದಿರುವ ಹೂಡಿಕೆದಾರರ ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತವೆ. ಆದರೆ ಸರಿಯಾದ ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಿಕೊಳ್ಳುವುದು ಹಾಗೂ ಮ್ಯೂಚುವಲ್‌ ಫಂಡ್‌ನಿಂದ ಹೂಡಿಕೆಯನ್ನು ಹಿಂದಕ್ಕೆ ಪಡೆಯಲು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿದಿರುವುದು ಕೂಡ ಬಹಳ ಮುಖ್ಯ. ಫಂಡ್‌ ಆಯ್ಕೆ ಹಾಗೂ ಹೂಡಿಕೆ ಹಿಂತೆಗೆತದ ಸಂದರ್ಭದಲ್ಲಿ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ಗಮನ ಹರಿಸೋಣ.

ಸರಿಯಾದ ಮ್ಯೂಚುವಲ್‌ ಫಂಡ್‌ ಆಯ್ಕೆ

1) ಹಣಕಾಸಿನ ಗುರಿಗಳನ್ನು ಸ್ಪಷ್ಟಪಡಿಸಿಕೊಳ್ಳಿ: ಮೊದಲ ಹೆಜ್ಜೆಯಾಗಿ ನಿಮ್ಮ ಹೂಡಿಕೆಯ ಉದ್ದೇಶ ಏನು ಎಂಬುದನ್ನು ಗುರುತಿಸಿಕೊಳ್ಳಿ. ಅಲ್ಪಾವಧಿಯಲ್ಲಿ ರಜೆಯ ಖರ್ಚುಗಳಿಗಾಗಿ ಅಥವಾ ತುರ್ತು ನಿಧಿಯನ್ನು ಹೊಂದಲು ಹೂಡಿಕೆ ಆರಂಭಿಸುತ್ತಿದ್ದೀರಾ? ಅಥವಾ ನಿವೃತ್ತಿ ನಂತರದ ಜೀವನ, ಮಕ್ಕಳ ಶಿಕ್ಷಣ, ಸಂಪತ್ತು ಸೃಷ್ಟಿಯಂತಹ ದೀರ್ಘಾವಧಿಯ ಗುರಿಗಳನ್ನು ಇಟ್ಟುಕೊಂಡಿದ್ದೀರಾ? ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಸಾಮಾನ್ಯವಾಗಿ ದೀರ್ಘಾವಧಿ ಹೂಡಿಕೆಗಳಿಗೆ ಹೆಚ್ಚು ಸೂಕ್ತವಾಗುತ್ತವೆ. ಅಲ್ಪಾವಧಿ ಅಥವಾ ಮಧ್ಯಮ ಅವಧಿಯಲ್ಲಿ ಸ್ಥಿರತೆಯ ದೃಷ್ಟಿಯಿಂದ ಸಾಲಪತ್ರ ಆಧಾರಿತ ಫಂಡ್‌ಗಳು, ಹೈಬ್ರಿಡ್‌ ಫಂಡ್‌ಗಳು ಸೂಕ್ತವಾಗುತ್ತವೆ. ಗುರಿಗಳನ್ನು ಸ್ಪಷ್ಟಪಡಿಸಿಕೊಂಡರೆ ಎಷ್ಟು ಅವಧಿಗೆ ಹೂಡಿಕೆ ಮಾಡಬೇಕು, ಎಷ್ಟು ಗಳಿಕೆಯನ್ನು ನಿರೀಕ್ಷಿಸಬಹುದು ಎಂಬುದು ಕೂಡ ಸ್ಪಷ್ಟವಾಗುತ್ತವೆ. ಆಗ ಫಂಡ್‌ ಆಯ್ಕೆಯು ಸುಗಮವಾಗುತ್ತದೆ.

ADVERTISEMENT

2) ಎಷ್ಟು ರಿಸ್ಕ್‌ ತೆಗೆದುಕೊಳ್ಳಬಲ್ಲಿರಿ: ಪ್ರತಿ ಹೂಡಿಕೆದಾರ ತೆಗೆದುಕೊಳ್ಳಬಹುದಾದ ರಿಸ್ಕ್‌ನ ಮಟ್ಟ ಬೇರೆ ಬೇರೆ. ವ್ಯಕ್ತಿಯ ವಯಸ್ಸು, ಆದಾಯದಲ್ಲಿನ ಸ್ಥಿರತೆ, ಹಣಕಾಸಿನ ಹೊಣೆಗಾರಿಕೆಗಳನ್ನು ಇದು ಆಧರಿಸಿ
ರುತ್ತದೆ. ಮಾರುಕಟ್ಟೆಯ ಅಸ್ಥಿರತೆಯನ್ನು, ಮೌಲ್ಯದಲ್ಲಿ ತಾತ್ಕಾಲಿಕವಾಗಿ ಆಗುವ ಇಳಿಕೆಯನ್ನು ನಿಭಾಯಿಸಬಲ್ಲ ವ್ಯಕ್ತಿಗೆ ಈಕ್ವಿಟಿ ಆಧಾರಿತ ಫಂಡ್‌ಗಳು ಹೆಚ್ಚು ಸೂಕ್ತವಾಗಬಹುದು. ಸ್ಥಿರವಾದ ಗಳಿಕೆ, ಕಡಿಮೆ ಪ್ರಮಾಣದ ಏರಿಳಿತ ಬಯಸುವವರು ಸಾಲಪತ್ರ ಆಧಾರಿತ ಫಂಡ್‌ ಅಥವಾ ಹೈಬ್ರಿಡ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಬಹುದು. ಹೂಡಿಕೆದಾರರು ತಾವು ಎಷ್ಟರಮಟ್ಟಿಗೆ ರಿಸ್ಕ್‌ ತೆಗೆದುಕೊಳ್ಳಬಲ್ಲೆವು ಎಂಬುದನ್ನು ಅರ್ಥ ಮಾಡಿ
ಕೊಂಡಾಗ, ಮಾರುಕಟ್ಟೆ ಕುಸಿತದ ಸಂದರ್ಭಗಳಲ್ಲಿ ಭಾವನಾತ್ಮಕ ನೆಲೆಯಲ್ಲಿ ತೀರ್ಮಾನ ತೆಗೆದುಕೊಳ್ಳು ವುದನ್ನು ತಡೆಯಬಹುದು.

3) ಫಂಡ್‌ನ ಇತಿಹಾಸ ಗಮನಿಸಿ: ಯಾವುದೇ ಫಂಡ್‌ ಈ ಹಿಂದೆ ಎಷ್ಟರಮಟ್ಟಿಗೆ ಲಾಭ ಗಳಿಸಿದೆ ಎಂಬುದು, ಅದು ಮುಂದೆ ಎಷ್ಟು ಲಾಭ ತಂದುಕೊಡಬಹುದು ಎಂಬುದನ್ನು ಖಚಿತವಾಗಿ ಹೇಳುವುದಿಲ್ಲ. ಆದರೆ ಹಿಂದಿನ ದಾಖಲೆಗಳು ಮಾರುಕಟ್ಟೆಯ ಏಳುಬೀಳುಗಳ ಸಂದರ್ಭಗಳಲ್ಲಿಯೂ ಫಂಡ್‌ ಎಷ್ಟರಮಟ್ಟಿಗೆ ಲಾಭ ತಂದುಕೊಟ್ಟಿದೆ ಎಂಬುದನ್ನು ತಿಳಿಸುತ್ತವೆ. ಭಾರಿ ಪ್ರಮಾಣದ ಲಾಭ ಯಾವ ಫಂಡ್‌ನಲ್ಲಿ ಬಂದಿದೆ ಎಂಬುದನ್ನು ನೋಡುವುದಕ್ಕಿಂತ, ಯಾವ ಫಂಡ್‌ ಸ್ಥಿರವಾದ ಪ್ರಮಾಣದಲ್ಲಿ ಲಾಭ ನೀಡಿದೆ ಎನ್ನುವುದನ್ನು ಗಮನಿಸಬೇಕು. ಮಾರುಕಟ್ಟೆಯಲ್ಲಿ ಗೂಳಿಯ ಓಟ ಇದ್ದಾಗಲೂ ಕರಡಿ ಕುಣಿತ ಇದ್ದಾಗಲೂ ಸ್ಥಿರವಾದ ಗಳಿಕೆಯನ್ನು ತಂದುಕೊಟ್ಟ ಫಂಡ್‌, ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ನೀಡಿದ ಫಂಡ್‌ಗಿಂತ ಹೆಚ್ಚು ವಿಶ್ವಾಸಾರ್ಹವಾಗುತ್ತದೆ.

ಫಂಡ್‌ ನೀಡಿರುವ ಲಾಭವನ್ನು ಸಂಬಂಧಪಟ್ಟ ಸೂಚ್ಯಂಕದ ಜೊತೆ ಅಥವಾ ಸಮಾನ ನೆಲೆಯ ಇತರ ಫಂಡ್‌ಗಳ ಜೊತೆ ಹೋಲಿಕೆ ಮಾಡಿ ನೋಡುವುದು ಉತ್ತಮ ಕ್ರಮವಾಗುತ್ತದೆ.

4) ಫಂಡ್‌ ಯಾವ ವರ್ಗಕ್ಕೆ ಸೇರಿದ್ದು?: ಈಕ್ವಿಟಿ, ಸಾಲಪತ್ರ, ಹೈಬ್ರಿಡ್‌ ಮತ್ತು ವಿಷಯವಾರು ಫಂಡ್‌ಗಳು ಭಿನ್ನ ಉದ್ದೇಶಗಳನ್ನು ಹೊಂದಿರುತ್ತವೆ. ವಿಷಯವಾರು (thematic) ಫಂಡ್‌ಗಳು ಬಹಳ ಬೇಗನೆ ಮೌಲ್ಯವರ್ಧಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬಹುದಾದರೂ ಅವುಗಳಲ್ಲಿ ರಿಸ್ಕ್‌ ಕೂಡ ಹೆಚ್ಚಿರುತ್ತದೆ. ಏಕೆಂದರೆ ಇಲ್ಲಿ ಹೂಡಿಕೆಯ ಮೊತ್ತವು ಕೆಲವೇ ಕಂಪನಿಗಳಲ್ಲಿ ವಿನಯೋಗ ಆಗಿರುತ್ತದೆ. ಆದರೆ ಹೆಚ್ಚಿನ ಸಂಖ್ಯೆಯ ಕಂಪನಿಗಳಲ್ಲಿ ಹಣ ತೊಡಗಿಸುವ ಈಕ್ವಿಟಿ ಫಂಡ್‌ಗಳು, ಸೂಚ್ಯಂಕ ಆಧಾರಿತ ಫಂಡ್‌ಗಳು ಅಥವಾ ಬ್ಯಾಲೆನ್ಸ್ಡ್‌ ಅಡ್ವಾಂಟೇಜ್‌ ಫಂಡ್‌ಗಳು ರಿಸ್ಕ್‌ನ ನಿರ್ವಹಣೆ ಹಾಗೂ ಲಾಭದ ನಡುವೆ ಸಮತೋಲನವೊಂದನ್ನು ತರಬಲ್ಲವು. ಹೂಡಿಕೆದಾರರು ಒಂದೇ ವರ್ಗದ ಹಲವು ಫಂಡ್‌ಗಳಲ್ಲಿ ಹಣ ತೊಡಗಿಸುವುದನ್ನು ಕಡಿಮೆ ಮಾಡಬೇಕು.

5) ವೆಚ್ಚದ ಪರಿಶೀಲನೆ: ಎಕ್ಸ್‌ಪೆನ್ಸ್‌ ರೇಷ್ಯೊ, ಹೂಡಿಕೆ ಮಾಡುವ ಹಾಗೂ ಹಿಂಪಡೆಯುವುದರ ಮೇಲಿನ ವೆಚ್ಚಗಳು ಒಟ್ಟು ಲಾಭದ ಮೇಲೆ ಪರಿಣಾಮ ಬೀರಬಲ್ಲವು. ವೆಚ್ಚವು ಕಡಿಮೆ ಇದ್ದರೆ ಹೂಡಿಕೆದಾರರಿಗೆ ಒಳಿತು. ಎಕ್ಸ್‌‍ಪೆನ್ಸ್‌ ರೇಷ್ಯೊದಲ್ಲಿನ ಸಣ್ಣ ವ್ಯತ್ಯಾಸ ಕೂಡ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಯ ಮೇಲೆ ದೊಡ್ಡ ಪರಿಣಾಮ ಉಂಟುಮಾಡಬಲ್ಲದು.

6) ಫಂಡ್‌ ನಿರ್ವಾಹಕರ ಪರಿಣತಿ: ಹೆಚ್ಚಿನ ಕೌಶಲ ಹಾಗೂ ಅನುಭವ ಹೊಂದಿರುವ ಫಂಡ್‌ ನಿರ್ವಾಹಕ ಮಾರುಕಟ್ಟೆಯ ಏರಿಳಿತಗಳನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲ. ಫಂಡ್‌ ನಿರ್ವಹಣಾ ತಂಡದಲ್ಲಿ ಸ್ಥಿರತೆ ಹಾಗೂ ಸ್ಪಷ್ಟವಾದ ಹೂಡಿಕೆ ತತ್ತ್ವವು ದೀರ್ಘಾವಧಿ ಹೂಡಿಕೆದಾರರಿಗೆ ಪೂರಕವಾದ ಅಂಶಗಳು.

ಹೂಡಿಕೆ ಹಿಂಪಡೆಯುವ ಮೊದಲು ನೆನಪಿನಲ್ಲಿಡಿ

l ಮಾರುಕಟ್ಟೆಯಲ್ಲಿನ ಅಲ್ಪಾವಧಿ ಅಸ್ಥಿರತೆ ಕಂಡು ವಿಚಲಿತರಾಗದಿರಿ. ತಾತ್ಕಾಲಿಕ ಕುಸಿತಗಳ ಸಂದರ್ಭದಲ್ಲಿ ಭೀತಿಗೆ ಒಳಗಾಗಿ ಹೂಡಿಕೆ ಹಿಂಪಡೆದಲ್ಲಿ, ನಷ್ಟ ಅನುಭವಿಸಬೇಕಾಗಬಹುದು.

l ತೆರಿಗೆ ಪರಿಣಾಮಗಳ ಬಗ್ಗೆ ತಿಳಿದಿರಲಿ. 

l ಅನಗತ್ಯ ವೆಚ್ಚಗಳ ಹೊರೆಯಿಂದ ತಪ್ಪಿಸಿಕೊಳ್ಳಲು ಫಂಡ್‌ನ ಎಕ್ಸಿಟ್‌ ಲೋಡ್‌ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಹೂಡಿಕೆ ಹಿಂತೆಗೆದುಕೊಳ್ಳುವುದರ ಬಗ್ಗೆ ಮೊದಲೇ ಯೋಜಿಸಿಕೊಂಡರೆ ತೆರಿಗೆ ಹೊರೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯ.

ಮ್ಯೂಚುವಲ್‌ ಫಂಡ್‌ನಿಂದ ಹಣ ಹಿಂಪಡೆಯುವುದು ಯಾವಾಗ?

ಮ್ಯೂಚುವಲ್‌ ಫಂಡ್‌ ಹೂಡಿಕೆಗಳು ದೀರ್ಘಾವಧಿಗೆ ಬಹಳ ಸೂಕ್ತವಾದವು. ಆದರೆ ಕೆಲವು ಸಂದರ್ಭ ಗಳಲ್ಲಿ ಅವುಗಳಿಂದ ಒಂದಿಷ್ಟು ಅಥವಾ ಪೂರ್ತಿಯಾಗಿ ಹಣವನ್ನು ಹಿಂಪಡೆಯುವುದು ಸರಿಯಾದ ನಿರ್ಧಾರವಾಗಬಹುದು.

1) ಗುರಿ ತಲುಪಿದಾಗ:ಹೂಡಿಕೆಯು ತನ್ನ ಗುರಿಯನ್ನು ತಲುಪಿದಾಗ, ಹೂಡಿಕೆಯ ಉದ್ದೇಶ ಈಡೇರಿದಾಗ ಮಾರುಕಟ್ಟೆಯ ಅಪಾಯಕ್ಕೆ ಮೈಯೊಡ್ಡಿ ಕುಳಿತಿರುವ ಬದಲು ಒಟ್ಟು ಮೊತ್ತವನ್ನು ಹಿಂಪಡೆಯುವುದು ಸರಿಯಾದ ನಡೆಯಾಗಬಹುದು. ಒಂದೇ ಬಾರಿಗೆ ಹಣ ಹಿಂಪಡೆಯುವ ಬದಲು ವ್ಯವಸ್ಥಿತವಾಗಿ ಹಿಂದಕ್ಕೆ ಪಡೆಯುವ (ಎಸ್‌ಡಬ್ಲ್ಯುಪಿ) ಮಾರ್ಗದ ಮೊರೆ ಹೋಗಬಹುದು.

2) ನಿರಂತರವಾಗಿ ಕಳಪೆ ಗಳಿಕೆ: ಫಂಡ್‌ ಒಂದು ತನ್ನದೇ ವರ್ಗದ ಇತರ ಫಂಡ್‌ಗಳಿಗಿಂತ ನಿರಂತರವಾಗಿ ಕಡಿಮೆ ಪ್ರಮಾಣದಲ್ಲಿ ಲಾಭ ತಂದುಕೊಡುತ್ತಿದ್ದರೆ, ಆ ಫಂಡ್‌ನ ಕಾರ್ಯತಂತ್ರ ದಲ್ಲಿ ಅಥವಾ ಹೂಡಿಕೆಯ ವಿಚಾರದಲ್ಲಿ ಸಮಸ್ಯೆಗಳು ಇರುವುದನ್ನು ಅದು ಸೂಚಿಸುತ್ತಿರಬಹುದು. ಇಂತಹ ಸಂದರ್ಭಗಳಲ್ಲಿ ಆ ಫಂಡ್‌ನಲ್ಲಿನ ಹೂಡಿಕೆಯನ್ನು ಮರುಪರಿಶೀಲಿಸುವುದು ಹಾಗೂ ಹೆಚ್ಚು ಉತ್ತಮವಾಗಿರುವ ಇನ್ನೊಂದು ಫಂಡ್‌ಗೆ ಹಣವನ್ನು ವರ್ಗಾವಣೆ ಮಾಡುವುದು ಹೆಚ್ಚು ಲಾಭದಾಯಕ ಆಗಬಹುದು.

3) ಹೂಡಿಕೆಯ ಉದ್ದೇಶದಲ್ಲಿ ಬದಲಾವಣೆ: ಕೆಲವು ಸಂದರ್ಭಗಳಲ್ಲಿ ಫಂಡ್‌ಗಳು ತಮ್ಮ ಹೂಡಿಕೆಯ ಬಗೆಯನ್ನು, ಹಣದ ಹಂಚಿಕೆಯನ್ನು ಬದಲಾಯಿಸುತ್ತವೆ. ಇಂತಹ ಬದಲಾವಣೆಯು ಹೂಡಿಕೆದಾರನ ಹಣಕಾಸಿನ ಗುರಿಗಳಿಗೆ ಅಥವಾ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಇಲ್ಲ ಎಂದಾದರೆ ಆ ಫಂಡ್‌ನಿಂದ ಹೊರಬರುವುದು ವಿವೇಕದ ನಿರ್ಧಾರವಾಗಬಹುದು.

4) ಮರುಹೊಂದಾಣಿಕೆಯ ಅಗತ್ಯ:ಸಮಯ ಕಳೆದಂತೆಲ್ಲ ಹೂಡಿಕೆಯ ಮೊತ್ತವು ಒಂದೇ ಬಗೆಯ ಹೂಡಿಕೆ ವರ್ಗದಲ್ಲಿ ಹೆಚ್ಚು ವಿನಿಯೋಗ ಆಗಬಹುದು. ಹೀಗೆ ಆದಾಗ ಕಡಿಮೆ ಪ್ರಾಧಾನ್ಯ ದೊರೆತಿರುವ ಹೂಡಿಕೆ ವರ್ಗಕ್ಕೆ ತುಸು ಹೆಚ್ಚು ಹಣವನ್ನು ವಿನಿಯೋಗಿಸುವುದು ಸಮತೋಲನ ಕಾಯ್ದುಕೊಳ್ಳಲು ಹಾಗೂ ಮಾರುಕಟ್ಟೆಯ ರಿಸ್ಕ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಬಹುದು.

5) ತುರ್ತು ಅಗತ್ಯಗಳು: ಹಣದ ತುರ್ತು ಅಗತ್ಯಗಳು ಎದುರಾದಾಗ ಮ್ಯೂಚುವಲ್‌ ಫಂಡ್‌ ಯೂನಿಟ್‌ಗಳನ್ನು ನಗದೀಕರಿಸಿಕೊಳ್ಳಬಹುದು. ಆದರೆ ಇಂತಹ ಸಂದರ್ಭಗಳಲ್ಲಿ ಹೂಡಿಕೆದಾರರಿಗೆ ತೆರಿಗೆ ಬಗ್ಗೆ ಹಾಗೂ ಫಂಡ್‌ನ ಎಕ್ಸಿಟ್‌ ಲೋಡ್‌ ಬಗ್ಗೆ ಮಾಹಿತಿ ಇರಬೇಕು.

ಕೊನೆ ಮಾತು: ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡುವಾಗ ಪರಿಶೀಲನೆ, ಅಧ್ಯಯನ ಅಗತ್ಯ. ಅಷ್ಟೇ ಮುಖ್ಯವಾದುದು ಫಂಡ್‌ಗಳಲ್ಲಿನ ಹೂಡಿಕೆಯ ಬಗ್ಗೆ ಆಗಾಗ ಪರಿಶೀಲನೆ ನಡೆಸಿ, ಯಾವಾಗ ಹೂಡಿಕೆಯನ್ನು ಹಿಂಪಡೆಯಬೇಕು ಎಂಬುದನ್ನು ತೀರ್ಮಾನಿಸುವುದು. ಹೂಡಿಕೆ ಮಾಡುವುದು ಯಾವಾಗ, ಹೂಡಿಕೆಯನ್ನು ಹಿಂಪಡೆಯುವುದು ಯಾವಾಗ ಎಂಬುದರ ಬಗ್ಗೆ ಸರಿಯಾಗಿ ಗಮನ ನೀಡುವ ಮೂಲಕ ಹೂಡಿಕೆದಾರರು ಲಾಭದ ಪ್ರಮಾಣ ಉತ್ತಮವಾಗಿ ಇರುವಂತೆ ನೋಡಿಕೊಳ್ಳಬಹುದು.

ಲೇಖಕ: ಕೋಟಕ್‌ ಸೆಕ್ಯುರಿಟೀಸ್‌ನ ಈಕ್ವಿಟಿ ಸಂಶೋಧನಾ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.