ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (ಅಥವಾ ಸಿಡಿಎಸ್‌ಎಲ್) ಕಡೆಯಿಂದ ಇ–ಮೇಲ್ ಮೂಲಕ ಕಾಲಕಾಲಕ್ಕೆ ಬರುವ ಸಿಎಎಸ್ ವಿವರವನ್ನು ಪರಿಶೀಲಿಸುತ್ತ ಇರಬೇಕು ಎಂಬ ಸಲಹೆಯನ್ನು ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರರು ನೀಡುವುದಿದೆ. ಅಲ್ಲದೆ, ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್‌ಗಳೂ ಇದನ್ನು ಪರಿಶೀಲಿಸುವುದು ಮಹತ್ವದ್ದು ಎಂಬ ಕಿವಿಮಾತನ್ನು ಹೇಳುತ್ತಿರುತ್ತಾರೆ.
ಆದರೆ ಸಣ್ಣ ಹೂಡಿಕೆದಾರರಲ್ಲಿ ಹಲವರು ಸಿಎಎಸ್ ನೋಡುವುದನ್ನು ಮರೆತುಬಿಡುವುದು ಇದೆ. ಕೆಲವರು ಆಗೊಮ್ಮೆ ಈಗೊಮ್ಮೆ ಮಾತ್ರವೇ ಪರಿಶೀಲಿಸುವುದೂ ಇದೆ. ಹಾಗಾದರೆ, ಸಿಎಎಸ್ ಪರಿಶೀಲನೆ ಏಕೆ ಮಹತ್ವದ್ದು?
ಹೂಡಿಕೆದಾರರು ಬೇರೆ ಆಸ್ತಿ ನಿರ್ವಹಣಾ ಕಂಪನಿಗಳ ಮೂಲಕ ಮಾಡಿರುವ ಮ್ಯೂಚುವಲ್ ಫಂಡ್ ಹೂಡಿಕೆ ಗಳೆಲ್ಲದರ ಮಾಹಿತಿಯು ಒಂದೇ ಕಡೆ ಲಭ್ಯವಿರುತ್ತದೆ. ಅಲ್ಲದೆ, ಬೇರೆ ಬೇರೆ ಬ್ರೋಕರೇಜ್ ಕಂಪನಿಗಳ ಮೂಲಕ ಷೇರುಗಳಲ್ಲಿ ಮಾಡಿರುವ ಹೂಡಿಕೆ ಬಗ್ಗೆಯೂ ಇದರಲ್ಲೇ ಮಾಹಿತಿ ಸಿಗುತ್ತದೆ.
ಅಷ್ಟೇ ಅಲ್ಲ, ನಿರ್ದಿಷ್ಟ ಅವಧಿಯಲ್ಲಿ ಬೇರೆ ಬೇರೆ ಮಾರ್ಗಗಳ ಮೂಲಕ ಯಾವೆಲ್ಲ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಲಾಗಿದೆ ಎಂಬುದರ ವಿವರವೂ ಇದರಲ್ಲಿ ಅಡಕವಾಗಿ ಇರುತ್ತದೆ. ಅಂದರೆ, ಎಸ್‌ಐಪಿ ಮೂಲಕ ಆಗಿರುವ ಹೂಡಿಕೆಗಳು ಯಾವುವು, ಒಂದು ಬಾರಿಯ ಹೂಡಿಕೆ ಎಷ್ಟು ಆಗಿದೆ ಎಂಬುದನ್ನೂ ಸಿಎಎಸ್ ಮೂಲಕ ತಿಳಿದುಕೊಳ್ಳಬಹುದು.
ಸಿಎಎಸ್ ದಾಖಲೆಯನ್ನು ಹೂಡಿಕೆದಾರರು ಎಂಎಫ್‌ಸೆಂಟ್ರಲ್ ವೆಬ್‌ಸೈಟ್ (www.mfcentral.com) ಮೂಲಕವೂ ಪಡೆದುಕೊಳ್ಳಬಹುದು. ಸಿಇಎಎಸ್‌ನ ಸಂಕ್ಷಿಪ್ತ ರೂಪವನ್ನು ಅಥವಾ ವಿಸ್ತೃತ ವರದಿಯನ್ನು ಪಡೆದುಕೊಳ್ಳುವ ಅವಕಾಶವು ಈ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಹೂಡಿಕೆದಾರರು ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಸಿಎಎಸ್ ವರದಿಯನ್ನು ಅಥವಾ ಹಿಂದಿನ ಹಣಕಾಸು ವರ್ಷದ ವರದಿಯನ್ನು ಪಡೆಯಬಹುದು. ಅಥವಾ ನಿರ್ದಿಷ್ಟ ಅವಧಿಯೊಂದರ ವರದಿಯನ್ನೂ ಪಡೆಯಬಹುದು.
ಸಿಡಿಎಸ್‌ಎಲ್‌ನಿಂದ ಸಿಗುವ ಸಿಎಎಸ್ ದಾಖಲೆ ಹಾಗೂ ಎಂಎಫ್ ಸೆಂಟ್ರಲ್‌ನಲ್ಲಿ ಸಿಗುವ ಸಿಎಎಸ್ ದಾಖಲೆಗಳ ನಡುವೆ ವ್ಯತ್ಯಾಸ ಇದೆ. ಸಿಡಿಎಸ್‌ಎಲ್‌ನಿಂದ ಸಿಗುವುದರಲ್ಲಿ ಹೂಡಿಕೆದಾರ ಷೇರುಗಳಲ್ಲಿ ನೇರವಾಗಿ ಹಣ ತೊಡಗಿಸಿದ್ದರೆ ಅದರ ವಿವರಗಳೂ ಇರುತ್ತವೆ. ಆದರೆ ಎಂಎಫ್‌ಸೆಂಟ್ರಲ್ ನಿಂದ ಸಿಗುವ ಸಿಎಎಸ್‌ನಲ್ಲಿ ಷೇರುಗಳ ವಿವರ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.