ADVERTISEMENT

ಮಾಹಿತಿ ಕಣಜ | ಇಟಿಎಫ್‌: ಭಾರತದಲ್ಲಿ ಇದು ಹೇಗೆ ಬೆಳೆದಿದೆ ಗೊತ್ತಾ?

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 23:30 IST
Last Updated 15 ಅಕ್ಟೋಬರ್ 2025, 23:30 IST
   

ಪ್ಯಾಸಿವ್‌ ಹೂಡಿಕೆಗಳನ್ನು ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಒಂದು ಹೂಡಿಕೆ ಉತ್ಪನ್ನ ಇಟಿಎಫ್‌ಗಳು. ಇವು ಭಾರತದಲ್ಲಿ ಶುರುವಾಗಿದ್ದು 2001–02ರ ಸುಮಾರಿಗೆ. ಅದಾದ ನಂತರದ ವರ್ಷಗಳಲ್ಲಿ ಇಟಿಎಫ್‌ಗಳಲ್ಲಿನ ಹೂಡಿಕೆಯು ನಿರಂತರವಾಗಿ ಹೆಚ್ಚಾಗುತ್ತಿದೆ. ಇವುಗಳಲ್ಲಿ ಜನಸಾಮಾನ್ಯರೂ ಹೂಡಿಕೆ ಮಾಡುತ್ತಿದ್ದಾರೆ, ಬೃಹತ್‌ ಮೊತ್ತದ ನಿಧಿಯನ್ನು ನಿರ್ವಹಿಸುವ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಕೂಡ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಿದೆ.

ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟದಲ್ಲಿ (ಎಎಂಎಫ್‌ಐ) ಇರುವ ಮಾಹಿತಿಯೊಂದು ಭಾರತದಲ್ಲಿ ಈಗ ಇಟಿಎಫ್‌ಗಳು ಎಷ್ಟು ಜನಪ್ರಿಯ ಆಗಿವೆ ಎಂಬುದನ್ನು ಹೇಳುತ್ತಿದೆ. 2025ರ ಏಪ್ರಿಲ್‌ ವೇಳೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ ವಿವಿಧ ವಲಯಗಳಲ್ಲಿ, ವಿವಿಧ ಸೂಚ್ಯಂಕಗಳ ಮೇಲೆ, ವಿವಿಧ ಸರಕುಗಳ ಮೇಲೆ ಹಣ ತೊಡಗಿಸುವ ಒಟ್ಟು 253 ಇಟಿಎಫ್‌ಗಳು ಇದ್ದವು. ಈ ಪೈಕಿ ಚಿನ್ನದ ಮೇಲೆ ಹಣ ತೊಡಗಿಸುವ ಇಟಿಎಫ್‌ಗಳ ಸಂಖ್ಯೆ 20.

ಇಟಿಎಫ್‌ಗಳ ಮೇಲೆ ಹಣ ತೊಡಗಿಸುವುದಕ್ಕಾಗಿ 2.73 ಕೋಟಿ ಖಾತೆಗಳನ್ನು (ಮ್ಯೂಚುವಲ್‌ ಫಂಡ್‌ ಉದ್ಯಮದ ಪರಿಭಾಷೆಯಲ್ಲಿ ಇವುಗಳನ್ನು ಫೋಲಿಯೊ ಎಂದು ಕರೆಯಲಾಗುತ್ತದೆ) ತೆರೆಯಲಾಗಿದೆ. ಈ ಪೈಕಿ ಚಿನ್ನದ ಮೇಲೆ ಹಣ ತೊಡಗಿಸುವ ಇಟಿಎಫ್‌ ಖಾತೆಗಳ ಸಂಖ್ಯೆ 71 ಲಕ್ಷ.

ADVERTISEMENT

ಚಿನ್ನದ ಇಟಿಎಫ್‌ಗಳ ಮೇಲೆ ತೊಡಗಿಸಿರುವ ಮೊತ್ತವು ₹61 ಸಾವಿರ ಕೋಟಿಯಷ್ಟು ಇದೆ. ಇತರ ಇಟಿಎಫ್‌ಗಳ ಮೇಲೆ ತೊಡಗಿಸಿರುವ ಒಟ್ಟು ಮೊತ್ತವು ₹8.13 ಲಕ್ಷ ಕೋಟಿಯಷ್ಟಾಗಿದೆ. ಒಟ್ಟಾರೆಯಾಗಿ ಇಟಿಎಫ್‌ಗಳ ಮೇಲೆ ತೊಡಗಿಸಿರುವ ಮೊತ್ತ ₹8.75 ಲಕ್ಷ ಕೋಟಿ. 

  • ₹1.54 ಲಕ್ಷ ಕೋಟಿ: 2020ರ ಮಾರ್ಚ್‌ ತ್ರೈಮಾಸಿಕದಲ್ಲಿ ಇಟಿಎಫ್‌ಗಳಲ್ಲಿ ಹೂಡಿಕೆ ಆಗಿದ್ದ ಮೊತ್ತ

  • ₹8.75 ಲಕ್ಷ ಕೋಟಿ: 2025ರ ಏಪ್ರಿಲ್‌ ವೇಳೆಗೆ ಇಟಿಎಫ್‌ಗಳಲ್ಲಿ ಆಗಿರುವ ಹೂಡಿಕೆ

  • 5: ಇಟಿಎಫ್‌ಗಳಲ್ಲಿ ಹೂಡಿಕೆ ಆದ ಮೊತ್ತವು ಐದು ವರ್ಷಗಳಲ್ಲಿ ಐದು ಪಟ್ಟಿಗಿಂತ ಹೆಚ್ಚಾಗಿದೆ

  • 253: 2025ರ ಏಪ್ರಿಲ್‌ ವೇಳೆಗೆ ಹೂಡಿಕೆ ಲಭ್ಯವಿದ್ದ ಇಟಿಎಫ್‌ಗಳ ಸಂಖ್ಯೆ

  • 87: 2020ರ ಮಾರ್ಚ್‌ ವೇಳೆಗೆ ಹೂಡಿಕೆಗೆ ಲಭ್ಯವಿದ್ದ ಇಟಿಎಫ್‌ಗಳ ಸಂಖ್ಯೆ

  • 3: ಇಟಿಎಫ್‌ಗಳ ಸಂಖ್ಯೆ ಐದು ವರ್ಷಗಳಲ್ಲಿ ಸರಿಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.