ADVERTISEMENT

ಹಣಕಾಸು ಸಾಕ್ಷರತೆ– ಹಣದ ಆದ್ಯತೆ: ಸಾಲ ಮರುಪಾವತಿಗೋ, ಹೂಡಿಕೆಗೋ?

ರಾಜೇಶ್‌ ಕುಮಾರ್‌ ಟಿ.ಆರ್‌
Published 2 ಅಕ್ಟೋಬರ್ 2022, 21:36 IST
Last Updated 2 ಅಕ್ಟೋಬರ್ 2022, 21:36 IST
   

ಪ್ರತಿ ವ್ಯಕ್ತಿಯೂ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಸಾಲದ ಮೊರೆ ಹೋಗಬೇಕಾಗುತ್ತದೆ. ಗೃಹ ಸಾಲ, ವಾಹನ ಸಾಲ, ಶಿಕ್ಷಣಕ್ಕಾಗಿ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಯಾವುದೇ ಸಾಲ ಪಡೆದಾಗ ಇಎಂಐ, ಅಂದರೆ ಮಾಸಿಕ ಕಂತು ಪಾವತಿ ಜೀವನದ ಭಾಗವೇ ಆಗಿಬಿಡುತ್ತದೆ.

ತಿಂಗಳ ಆದಾಯದಲ್ಲಿ ಇಎಂಐಗೆ ಎಂದೇ ಶೇಕಡ 35ರಿಂದ ಶೇ 45ರಷ್ಟು ಹಣ ಮೀಸಲಿಡಬೇಕಾದ ಸಂದರ್ಭವೂ ಬರಬಹುದು.

ಪರಿಸ್ಥಿತಿ ಹೀಗಿದ್ದಾಗ, ನಮಗೆ ಹೆಚ್ಚುವರಿ ಹಣ ಸಿಕ್ಕರೆ ಅದನ್ನು ಬಳಸಿ ಸಾಲ ತೀರಿಸಲು ಮುಂದಾಗಬೇಕೋ, ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡಬೇಕೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಕೆಲವು ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತದೆ. ಆ ಲೆಕ್ಕಾಚಾರಗಳ ಮೂಲಕ ಉತ್ತರ ಹುಡುಕೋಣ.

ADVERTISEMENT

ಯಾವುದಕ್ಕೆ ಯಾವಾಗ ಆದ್ಯತೆ?: ನೀವು ಸಾಲಕ್ಕೆ ಕಟ್ಟುವ ಬಡ್ಡಿಗಿಂತ ಹೆಚ್ಚು ಮೊತ್ತದ ಲಾಭವನ್ನು ಹೂಡಿಕೆ ಮಾಡುವುದರಿಂದ ಗಳಿಸಬಹುದು ಎಂದಾದಲ್ಲಿ, ಸಾಲವನ್ನು ಮುಂಚಿತವಾಗಿ ತೀರಿಸುವುದಕ್ಕಿಂತ ಹೂಡಿಕೆ ಮಾಡುವುದು ಹೆಚ್ಚು ಉತ್ತಮ ನಿರ್ಧಾರವಾಗುತ್ತದೆ. ಒಂದೊಮ್ಮೆ ಸಾಲಕ್ಕೆ ಕಟ್ಟುತ್ತಿರುವ ಬಡ್ಡಿಗಿಂತ ಹೂಡಿಕೆ ಹಣದಿಂದ ಕಡಿಮೆ ಲಾಭ ಗಳಿಸುತ್ತಿದ್ದರೆ ಸಾಲ ತೀರಿಸಲು ಆ ಹಣ ಬಳಸಿಕೊಳ್ಳುವುದು ಸೂಕ್ತ ತೀರ್ಮಾನವಾಗುತ್ತದೆ.

ಉದಾಹರಣೆಗೆ, ಕೆಳಗಿನ ಪಟ್ಟಿಯಲ್ಲಿ ವಿವರಿಸಿರುವಂತೆ ವ್ಯಕ್ತಿಯೊಬ್ಬ ₹ 20 ಲಕ್ಷ ಗೃಹ ಸಾಲವನ್ನು 15 ವರ್ಷಗಳಿಗೆ ಪಡೆದಿದ್ದು ಶೇ 8.5ರಷ್ಟು ಬಡ್ಡಿ ಪಾವತಿಸುತ್ತಿದ್ದಾನೆ ಎಂದು ಕೊಳ್ಳೋಣ. ಆ ವ್ಯಕ್ತಿಗೆ ಬೋನಸ್ ರೂಪದಲ್ಲಿ ₹ 1 ಲಕ್ಷ ಹಣ ಸಿಕ್ಕಿದ್ದು, ಆಗ ಸಾಲದ ಬಾಬ್ತಿಗೆ ಅದನ್ನು ಕಟ್ಟಬೇಕೋ, ಹೂಡಿಕೆಗೆ ಆದ್ಯತೆ ಕೊಡಬೇಕೋ ಎನ್ನುವ ಪ್ರಶ್ನೆ ಎದುರಾಗಬಹುದು. ₹ 1 ಲಕ್ಷವನ್ನು ಎಫ್.ಡಿ (ನಿಶ್ಚಿತ ಠೇವಣಿಯಲ್ಲಿ) ಇರಿಸಿದರೆ ಶೇ 5.5ರಿಂದ ಶೇ 6ರಷ್ಟು ಬಡ್ಡಿ ಸಿಗುತ್ತದೆ. ಆದರೆ ಆತ ಶೇ 8.5ರಷ್ಟು ಬಡ್ಡಿಯನ್ನು ಸಾಲಕ್ಕೆ ಕಟ್ಟುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ ಹಣವನ್ನು ಎಫ್‌.ಡಿ.ಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಸಾಲ ಮರುಪಾವತಿಗೆ ಬಳಸಿಕೊಳ್ಳುವುದು ಸೂಕ್ತ.

ಡೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಲಾಭ ಶೇ 6ರ ಆಸುಪಾಸಿನಲ್ಲಿರುವುದರಿಂದ ₹ 1 ಲಕ್ಷವನ್ನು ಅವುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸಾಲ ಮರುಪಾವತಿಗೆ ಬಳಸಿಕೊಳ್ಳುವುದು ಉತ್ತಮ ನಿರ್ಧಾರವಾಗುತ್ತದೆ. ಪಿಪಿಎಫ್‌ನಲ್ಲಿ ಸಿಗುವ ಬಡ್ಡಿ ಲಾಭ ಶೇ 7.1 ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸಿಗುವ ಬಡ್ಡಿ ಲಾಭ ಶೇ 7.6 ಆಗಿರುವುದರಿಂದ ಆ ಹಣವನ್ನು ಸಾಲದ ಬಾಬ್ತಿಗೆ ಹೊಂದಿಸಿಕೊಳ್ಳುವುದು ಸರಿಯಾದ ತೀರ್ಮಾನವಾಗುತ್ತದೆ.

ಆದರೆ ಅದೇ ₹ 1 ಲಕ್ಷವನ್ನು ನೀವು ದೀರ್ಘಾವಧಿ ಹೂಡಿಕೆಗಳಾದ ಈಕ್ವಿಟಿ ಮ್ಯೂಚುವಲ್ ಫಂಡ್, ಇಂಡೆಕ್ಸ್ ಫಂಡ್ ಅಥವಾ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದರೆ, ನೀವು ಸಾಲ ತೀರಿಸುವುದಕ್ಕಿಂತ ಹೂಡಿಕೆ ಮಾಡುವುದರಲ್ಲಿ ಹೆಚ್ಚು ಲಾಭವಿದೆ. ಏಕೆಂದರೆ, ಈಕ್ವಿಟಿ ಮ್ಯೂಚುವಲ್ ಫಂಡ್, ಇಂಡೆಕ್ಸ್ ಫಂಡ್ ಮತ್ತು ಷೇರು ಮಾರುಕಟ್ಟೆ ಹೂಡಿಕೆಗಳು ದೀರ್ಘಾವಧಿಯಲ್ಲಿ ಶೇ 12ರಿಂದ ಶೇ 16ರವರೆಗೂ ಲಾಭ ಕೊಡುವ ಶಕ್ತಿ ಹೊಂದಿವೆ. ಆದರೆ ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವಾಗ ಹೂಡಿಕೆ ರಿಸ್ಕ್ ಇರುತ್ತದೆ ಎನ್ನುವುದು ತಿಳಿದಿರಬೇಕು. ಉತ್ತಮ ಷೇರುಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ ಎನ್ನುವುದು ಗೊತ್ತಿರಬೇಕು.

ಕೆಲವು ಮಿತಿಗಳು: ಮೇಲಿನ ನಿಯಮಗಳನ್ನು ಅಳವಡಿಸಿ ಕೊಳ್ಳುವಾಗ ಕೆಲವು ವಿಚಾರಗಳನ್ನು ಗಮನಿಸ ಬೇಕಾಗುತ್ತದೆ. ನೀವು ನಿವೃತ್ತಿಗೆ ಸಮೀಪದಲ್ಲಿದ್ದರೆ ಸಾಲ ತೀರಿಸಲು ಗಮನಕೊಡಿ. ಷೇರು ಹೂಡಿಕೆ, ಮ್ಯೂಚುವಲ್ ಫಂಡ್ ಲಾಭ ಎಂದು ಕಾಯುತ್ತಾ ಕೂರಬೇಡಿ. ಎನ್‌ಬಿಎಫ್‌ಸಿ – ಅಂದರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು – ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರೆ ಸಾಲ ತೀರಿಸಲು ಆದ್ಯತೆ ಕೊಡಿ. ಏಕೆಂದರೆ ಇಲ್ಲಿ ಬಡ್ಡಿ ದರ ಜಾಸ್ತಿ ಇರುತ್ತದೆ.

ಅವಧಿಪೂರ್ವ ಪಾವತಿಗೆ ಶುಲ್ಕ: ಅವಧಿಗೂ ಮುನ್ನ ಗೃಹ ಸಾಲ ಮರುಪಾವತಿ ಮಾಡಿದರೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಅವಧಿಗೆ ಮುನ್ನ ವೈಯಕ್ತಿಕ ಸಾಲ, ವಾಹನ ಸಾಲ ಮರುಪಾವತಿಗೆ ಒಂದಿಷ್ಟು ಶುಲ್ಕ ಕಟ್ಟಬೇಕಾಗುತ್ತದೆ. ಸಾಲ ಮಂಜೂರಾತಿ ದಾಖಲೆ ಪರಿಶೀಲಿಸಿದರೆ ಅವಧಿಗೂ ಮುನ್ನ ಸಾಲ ಮರುಪಾವತಿಗೆ ಶುಲ್ಕ ಇದೆಯೋ ಇಲ್ಲವೋ ಗೊತ್ತಾಗುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.