ADVERTISEMENT

ಹಣಕಾಸು: ಅದೃಷ್ಟದ ಚಕ್ರದ ಗತಿ ಒಂದೇ ಬಗೆಯಲ್ಲಿ ಇರುತ್ತದೆಯೇ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:30 IST
Last Updated 11 ಫೆಬ್ರುವರಿ 2026, 23:30 IST
   
ಅದೃಷ್ಟದ ಚಕ್ರವು ಮಾರುಕಟ್ಟೆಗಳಲ್ಲಿ ಹಣ ತೊಡಗಿಸಿದವರಿಗೂ ಒಂದು ಪಾಠವನ್ನು ಹೇಳುತ್ತದೆ. ಹಿಂದೆ ಸಿಕ್ಕಿರುವ ಲಾಭವು ಮುಂದೆಯೂ ಅದೇ ಪ್ರಮಾಣದ ಲಾಭವನ್ನು ಖಾತರಿಪಡಿಸುವುದಿಲ್ಲ ಎಂಬುದು ಮಹತ್ವದ ಆ ಪಾಠ..

ಕ್ಯಾಸಿನೊ ಒಂದರಲ್ಲಿನ ಅದೃಷ್ಟದ ಚಕ್ರವನ್ನು ತಿರುಗಿಸಿದಾಗ ಅದರ ಮುಳ್ಳು 17ನೆಯ ಸಂಖ್ಯೆಯ ಬಳಿ ಮೂರು ಬಾರಿ ಬಂದು ನಿಂತಿದ್ದನ್ನು ರವಿ (ಹೆಸರು ಬದಲಾಯಿಸಲಾಗಿದೆ) ಗಮನಿಸಿದ. ಅದನ್ನು ಕಂಡು ಆತನಲ್ಲಿ ಉತ್ಸಾಹ ನೂರ್ಮಡಿ ಆಯಿತು. ಅಲ್ಲಿದ್ದ ಇತರ ಹಲವರು ಕೂಡ ಅದೃಷ್ಟ ಚಕ್ರದ ಬಳಿ ಬಂದರು. ರವಿ 17ನೆಯ ಸಂಖ್ಯೆಗೆ ಬಾಜಿ ಕಟ್ಟಿದ. ಆದರೆ ಆ ಬಾರಿ ಚಕ್ರ ತಿರುಗಿದಾಗ, ಅದರ ಮುಳ್ಳು 7ನೆಯ ಸಂಖ್ಯೆಯ ಬಳಿ ನಿಂತಿತು.

ಅದೃಷ್ಟದ ಚಕ್ರಕ್ಕೆ ನೆನಪುಗಳು ಇಲ್ಲ. ಪ್ರತಿ ಬಾರಿ ಚಕ್ರ ತಿರುಗಿದಾಗ, ಅದಕ್ಕೂ ಹಿಂದಿನ ಬಾರಿ ತಿರುಗಿದ್ದಕ್ಕೂ ಸಂಬಂಧ ಇರುವುದಿಲ್ಲ. ಹಿಂದೆ ಮೂರು ಬಾರಿ ಅದರ ಮುಳ್ಳು 17ನೆಯ ಸಂಖ್ಯೆಗೆ ಬಂದುನಿಂತಿತ್ತು ಎಂಬ ವಾಸ್ತವವು, ಅದು ಮುಂದೆಯೂ ಅದೇ ಸಂಖ್ಯೆಯ ಬಳಿ ಬಂದು ನಿಲ್ಲುತ್ತದೆ ಎಂಬುದನ್ನು ಹೇಳುವುದಿಲ್ಲ.

ಈ ಉದಾಹರಣೆಗೂ, ಬಹುತೇಕ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡುವಾಗ ಅನುಸರಿಸುವ ವಿಧಾನಕ್ಕೂ ಬಹಳ ಸಾಮ್ಯತೆ ಇದೆ. ಫಂಡ್‌ ಒಂದು ಈಚಿನ ನಿರ್ದಿಷ್ಟ ಅವಧಿಯಲ್ಲಿ ಉತ್ತಮ ಗಳಿಕೆ ತಂದುಕೊಟ್ಟಿದೆ ಎಂದಾದರೆ, ಆ ಫಂಡ್‌ ಮುಂದೆಯೂ ಒಳ್ಳೆಯ ಲಾಭ ತಂದುಕೊಡುತ್ತದೆ ಎಂದು ಭಾವಿಸುವುದು ಸಹಜ.

ADVERTISEMENT

ಹಿಂದೆ ದೊರೆತ ಲಾಭದ ವಿಚಾರವಾಗಿ ಒಂದಿಷ್ಟು ಬೆರಗು ಬೆಳೆಸಿಕೊಳ್ಳುವುದು ಮಾನವ ಸಹಜವಾದ ಗುಣ. ನಮ್ಮ ಹಣವನ್ನು ಎಲ್ಲಿ ತೊಡಗಿಸಬೇಕು ಎಂಬ ವಿಚಾರವಾಗಿ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ರ್‍ಯಾಂಕಿಂಗ್, ಅತ್ಯುತ್ತಮ ಗಳಿಕೆ ತಂದುಕೊಟ್ಟ ಫಂಡ್‌ಗಳ ಪಟ್ಟಿ, ಅತಿಹೆಚ್ಚು ಖರೀದಿಯಾದ ಇಟಿಎಫ್‌ ಹಾಗೂ ಆ ಬಗೆಯ ಇತರ ವಿವರಗಳನ್ನು ನಾವು ಇಷ್ಟಪಡುತ್ತೇವೆ.

ರ್‍ಯಾಂಕಿಂಗ್ ಹೇಗೆ ಬದಲಾಗುತ್ತದೆ?

2014ನೆಯ ಕ್ಯಾಲೆಂಡರ್‌ ವರ್ಷದಿಂದ 2025ರ ನವೆಂಬರ್‌ವರೆಗಿನ ಟಾಪ್‌ ಮ್ಯೂಚುವಲ್‌ ಫಂಡ್‌ಗಳ ಕುರಿತಾಗಿ ನಡೆದ ಅಧ್ಯಯನವೊಂದರ ಪ್ರಕಾರ, ವರ್ಷವೊಂದರ ಅತ್ಯುತ್ತಮ ಮ್ಯೂಚುವಲ್‌ ಫಂಡ್‌ನ ಗಳಿಕೆಯು ಮಾರನೆಯ ವರ್ಷಗಳಲ್ಲಿ ಬಹಳಷ್ಟು ಕಡಿಮೆ ಆಗಿದ್ದೂ ಇದೆ. ನಿರ್ದಿಷ್ಟ ಅವಧಿಯೊಂದರಲ್ಲಿ ಅತ್ಯುತ್ತಮ ಗಳಿಕೆಯ ಫಂಡ್ ಎಂಬ ಸ್ಥಾನ ಗಿಟ್ಟಿಸಿದ್ದವು, ಮುಂದಿನ ವರ್ಷಗಳಲ್ಲಿ ಅತ್ಯಂತ ಕಡಿಮೆ ಗಳಿಕೆಯ ಫಂಡ್‌ಗಳ ಸಾಲಿಗೆ ಸೇರಿದ್ದೂ ಇದೆ. ಕೆಲವು ಸಂದರ್ಭಗಳಲ್ಲಿ ಈ ಕುಸಿತವು ಭಾರಿ ಪ್ರಮಾಣದಲ್ಲಿ ಇರುತ್ತದೆ. 2024ರಲ್ಲಿ ಮೊದಲ ಸ್ಥಾನ ಪಡೆದಿದ್ದ ಒಂದು ಮಿಡ್‌ಕ್ಯಾಪ್‌ ಫಂಡ್‌, ನಂತರ ಒಂದು ವರ್ಷದ ಅವಧಿಯಲ್ಲಿ 259ನೆಯ ಸ್ಥಾನಕ್ಕೆ ಕುಸಿದಿರುವುದನ್ನು ಈ ಅಧ್ಯಯನವು ಗುರುತಿಸಿದೆ.

ಹೀಗೆ ಆಗುವುದು ಏಕೆ?

ಇದಕ್ಕೆ ಕಾರಣ ಮಾರುಕಟ್ಟೆಯ ಚಲನೆಯಲ್ಲಿ ಇದೆ. ಮಾರುಕಟ್ಟೆಯ ಚಲನೆಗೆ ಅದರದೇ ಆದ ಗತಿಯೊಂದು ಇದೆ. ಈ ಗತಿಯು ಭಿನ್ನ ಸಂದರ್ಭಗಳಲ್ಲಿ ಭಿನ್ನ ಬಗೆಯ ಷೇರುಗಳಿಗೆ ಪೂರಕವಾಗಿ ಇರುತ್ತದೆ. ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ವಲಯದ ಷೇರುಗಳು ಉತ್ತಮ ಗಳಿಕೆ ಕಾಣುವಾಗ ಈ ವರ್ಗಗಳಿಗೆ ಸೇರಿದ ಮ್ಯೂಚುವಲ್‌ ಫಂಡ್‌ಗಳು ಕೂಡ ಸಹಜವಾಗಿಯೇ ಮುಂಚೂಣಿ ಸ್ಥಾನಗಳಿಗೆ ಬರುತ್ತವೆ.

ಮಾರುಕಟ್ಟೆಯ ಗತಿ ಬದಲಾವಣೆ ಕಂಡಾಗ, ಅದೇ ಫಂಡ್‌ಗಳ ಗಳಿಕೆಯು ಬಹಳ ತೀವ್ರವಾಗಿ ಕಡಿಮೆ ಆಗಬಹುದು. ಇದು ಮಾರುಕಟ್ಟೆ ಬಂಡವಾಳ ಆಧಾರಿತ ಫಂಡ್‌ಗಳಿಗೆ ಮಾತ್ರ ಸೀಮಿತವಲ್ಲ. ಹೂಡಿಕೆ ಶೈಲಿಯನ್ನು ಆಧರಿಸಿದ (ಅಂದರೆ ಬೆಳವಣಿಗೆ, ಮೌಲ್ಯ, ಗುಣಮಟ್ಟ ಇತ್ಯಾದಿ) ಫಂಡ್‌ಗಳಿಗೂ ಇದು ಅನ್ವಯವಾಗುತ್ತದೆ. ವೇಗವಾಗಿ ಮೌಲ್ಯ ಹೆಚ್ಚಿಸಿಕೊಳ್ಳುವ ಷೇರುಗಳಲ್ಲಿ ಹಣ ತೊಡಗಿಸುವ ಫಂಡ್‌ ಒಂದು ಕೆಲವು ವರ್ಷ ಹೆಚ್ಚಿನ ಗಳಿಕೆ ತಂದುಕೊಡುತ್ತ ಇರಬಹುದು. ಆದರೆ, ಕಡಿಮೆ ಮೌಲ್ಯಕ್ಕೆ ಸಿಗುವ ಗುಣಮಟ್ಟದ ಷೇರುಗಳು ಹೆಚ್ಚಿನ ಲಾಭ ತಂದುಕೊಡುವ ಕಾಲಘಟ್ಟದಲ್ಲಿ ಈ ಬಗೆಯ ಫಂಡ್‌ ಕಡಿಮೆ ಗಳಿಕೆ ನೀಡಬಹುದು.

ಮಾರುಕಟ್ಟೆಯ ಒಂದು ಘಟ್ಟದಲ್ಲಿ ನಿರ್ದಿಷ್ಟ ಫಂಡ್‌ ಒಂದನ್ನು ಮೊದಲ ಸ್ಥಾನಕ್ಕೆ ತಂದು ನಿಲ್ಲಿಸುವ ಅಂಶಗಳು ಮುಂದೊಂದು ಘಟ್ಟದಲ್ಲಿ ಇಲ್ಲವಾಗಬಹುದು. ಮೂರು ವರ್ಷಗಳಲ್ಲಿ ಆದ ಬದಲಾವಣೆಯನ್ನು ಅಧ್ಯಯನಕ್ಕಾಗಿ ಕೈಗೆತ್ತಿಕೊಂಡಾಗ ಕೂಡ ಬಹಳ ಗಮನಾರ್ಹವಾದ ಅಂಶಗಳು ಕಂಡುಬಂದವು. ಮೂರು ವರ್ಷಗಳ ಅವಧಿಯಲ್ಲಿ ಒಂದು ಫಂಡ್‌ ಉತ್ತಮ ಗಳಿಕೆ ನೀಡಿದ್ದರೂ, ಮುಂದೆಯೂ ಆ ಫಂಡ್‌ ಉತ್ತಮ ಗಳಿಕೆ ನೀಡುವುದನ್ನು ಮುಂದುವರಿಸಲಿದೆ ಎಂಬುದನ್ನು ಖಚಿತವಾಗಿ ಹೇಳಲಾಗದು.

ಗೆದ್ದವರ ಹಿಂದೆ ಓಟ...

ಭಾರಿ ಪ್ರಮಾಣದ ಲಾಭದ ಗಳಿಸಿದ್ದನ್ನು ಕಂಡು ಹೂಡಿಕೆದಾರರು ಫಂಡ್‌ಗಳ ಮೇಲೆ ಹಣ ಸುರಿಯಲು ಆರಂಭಿಸುತ್ತಾರೆ. ಆದರೆ ಈ ಹೊಸ ಹೂಡಿಕೆಗಳ ಅಲೆ ಬರುವ ಹೊತ್ತಿಗೆ, ಆ ಫಂಡ್‌ ಆಕರ್ಷಕವಾಗುವಂತೆ ಮಾಡಿದ ಲಾಭದ ಪ್ರಮಾಣವು ಇತಿಹಾಸ ಸೇರಿರುತ್ತದೆ. ಮಾರುಕಟ್ಟೆಯ ಗತಿಯು ಬೇರೊಂದು ಮಗ್ಗುಲಿಗೆ ಹೊರಳಿಕೊಳ್ಳಲು ಅಣಿಯಾಗುತ್ತಿರುತ್ತದೆ.

ಹೀಗೆ ಆದಾಗ, ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ ಯೂನಿಟ್‌ನ ಮೌಲ್ಯ ಹೆಚ್ಚು ಇದ್ದಾಗ ಅವುಗಳನ್ನು ಖರೀದಿಸಿ, ಮುಂದೆ ಅವುಗಳ ಮೌಲ್ಯ ಇಳಿಕೆ ಆಗುವುದನ್ನು ಕಾಣುತ್ತ ಕೂರಬೇಕಾಗುತ್ತದೆ. ಒಟ್ಟಾರೆಯಾಗಿ ದೀರ್ಘಾವಧಿಯಲ್ಲಿ ಮಾರುಕಟ್ಟೆಯಿಂದ ಸಿಗುವ ಲಾಭವು ಆರೋಗ್ಯಕರ ಮಟ್ಟದಲ್ಲಿಯೇ ಇದ್ದರೂ, ಹಲವಾರು ಹೂಡಿಕೆದಾರರಿಗೆ ಹೂಡಿಕೆ ಪ್ರಕ್ರಿಯೆಯಲ್ಲಿ ಬೇಸರ ಮೂಡುವುದಕ್ಕೆ ಇದೂ ಒಂದು ಕಾರಣ. ಹೂಡಿಕೆದಾರರಿಗೆ ಹತಾಶೆ ಮೂಡುವುದಕ್ಕೆ ಅವರ ವರ್ತನೆಯೇ ಕಾರಣವಾಗಿರುತ್ತದೆಯೇ ವಿನಾ ಮಾರುಕಟ್ಟೆ ಅಲ್ಲ.

ಒಂದೇ ವರ್ಗಕ್ಕೆ ಸೇರಿದ ಮ್ಯೂಚುವಲ್‌ ಫಂಡ್‌ಗಳ ನಡುವೆ, ಅಂದರೆ ಉದಾಹರಣೆಯಾಗಿ ಲಾರ್ಜ್‌ಕ್ಯಾಪ್‌ ಅಥವಾ ಮಿಡ್‌ಕ್ಯಾಪ್‌ ವರ್ಗದ ಫಂಡ್‌ಗಳನ್ನು ಪರಿಗಣಿಸಿದರೆ, ಒಂದೇ ವರ್ಷದ ಅವಧಿಯಲ್ಲಿ ಅತ್ಯುತ್ತಮ ಗಳಿಕೆ ನೀಡಿದ ಹಾಗೂ ಅತ್ಯಂತ ಕಳಪೆ ಗಳಿಕೆ ನೀಡಿದ ಫಂಡ್‌ಗಳ ನಡುವಿನ ವ್ಯತ್ಯಾಸವು ಬಹಳ ದೊಡ್ಡದಾಗಿರಬಹುದು ಎಂಬುದನ್ನು ನಾವು ನಡೆಸಿದ ಅಧ್ಯಯನವೊಂದು ಹೇಳಿದೆ. 2024ರಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ಕಳಪೆ ಮಿಡ್‌ಕ್ಯಾಪ್‌ ಫಂಡ್‌ಗಳ ಗಳಿಕೆಯ ನಡುವಿನ ವ್ಯತ್ಯಾಸವು ಶೇ 45ರಷ್ಟು ಇತ್ತು.

ಹೀಗಾಗುವುದು ಎಲ್ಲೋ ಅಲ್ಲೊಮ್ಮೆ, ಇಲ್ಲೊಮ್ಮೆ ಎಂಬಂತೆ ಅಲ್ಲ. ಹೂಡಿಕೆಯ ಶೈಲಿಯು ಇದಕ್ಕೆ ಕಾರಣ. ಒಬ್ಬ ನಿಧಿ ನಿರ್ವಾಹಕ ವೇಗವಾಗಿ ಮೌಲ್ಯ ವರ್ಧನೆ ಕಾಣುತ್ತಿರುವ ಷೇರುಗಳಲ್ಲಿ ಹಣ ತೊಡಗಿಸಬಹುದು, ಇನ್ನೊಬ್ಬರು ಗುಣಮಟ್ಟದ ಷೇರುಗಳ ಮೇಲೆ ಗಮನ ಹರಿಸಬಹುದು, ಮತ್ತೊಬ್ಬರು ಕಡಿಮೆ ಬೆಲೆಗೆ ಸಿಗುತ್ತಿರುವ ಗುಣಮಟ್ಟದ ಷೇರುಗಳ ಮೇಲೆ ಕಣ್ಣಿಡಬಹುದು. ಮಾರುಕಟ್ಟೆಯು ಒಂದು ಬಗೆಯ ಹೂಡಿಕೆ ಶೈಲಿಗೆ ಹೆಚ್ಚಿನ ಮಾನ್ಯತೆ ನೀಡಿದಾಗ, ಆ ಬಗೆಯ ಹೂಡಿಕೆ ಶೈಲಿಯನ್ನು ಅನುಸರಿಸುವ ಫಂಡ್‌ಗಳು ಹೆಚ್ಚು ಗಳಿಕೆ ನೀಡುತ್ತವೆ, ಮುಂಚೂಣಿ ಸ್ಥಾನಕ್ಕೆ ಬರುತ್ತವೆ.

ಆದರೆ ಆ ಹೂಡಿಕೆ ಶೈಲಿಯ ಜನಪ್ರಿಯತೆ ಕಡಿಮೆ ಆದಾಗ, ಆ ಶೈಲಿಯನ್ನು ಅನುಕರಣೆ ಮಾಡುವ ಫಂಡ್‌ಗಳಿಂದ ಸಿಗುವ ಲಾಭ ಕೂಡ ಕಡಿಮೆ ಆಗುತ್ತದೆ. ಇದು ‘ಅತ್ಯುತ್ತಮ ಮ್ಯೂಚುವಲ್‌ ಫಂಡ್‌’ ಆಯ್ಕೆಯನ್ನು ಇನ್ನಷ್ಟು ಸಂಕೀರ್ಣ ಕೆಲಸವನ್ನಾಗಿಸುತ್ತದೆ. ಮ್ಯೂಚುವಲ್‌ ಫಂಡ್‌ ಅಂದರೆ ಒಂದಿಷ್ಟು ಷೇರುಗಳು ಮಾತ್ರವೇ ಅಲ್ಲ; ಅದು ನಿರ್ದಿಷ್ಟ ಹೂಡಿಕೆ ಶೈಲಿಯ ಒಂದಿಷ್ಟು ನಿರ್ಣಯಗಳ ಒಟ್ಟು ಮೊತ್ತವೂ ಹೌದು.

ಇವನ್ನೆಲ್ಲ ಪರಿಗಣಿಸಿದಾಗ, ‘ಅತ್ಯುತ್ತಮ ಗಳಿಕೆ ನೀಡಿದ ಫಂಡ್‌’ ಆಯ್ಕೆಯು ಸೋಲುವ ಆಟದಂತೆ ಕಾಣಬಹುದು. ಹೀಗಾಗಿ, ಹೆಚ್ಚು ತರ್ಕಬದ್ಧವಾದ ನಡೆ ಅಂದರೆ, ಯಾವ ವರ್ಗದ ಮ್ಯೂಚುವಲ್‌ ಫಂಡ್‌ ಮುಂದೆ ಹೆಚ್ಚು ಲಾಭ ನೀಡಬಹುದು ಎಂಬ ಅಂದಾಜು ಮಾಡುವ ಕೆಲಸಕ್ಕೆ ಕೈಹಾಕದೆ ಇರುವುದು! ಹಾಗೆ ಮಾಡುವ ಬದಲಿಗೆ, ಯಾವುದೇ ಊಹೆಗಳನ್ನು ಆಧರಿಸಿರದ ಬಗೆಯಲ್ಲಿ ಪೋರ್ಟ್‌ಫೋಲಿಯೊ ಕಟ್ಟುವುದು. 

ಹೂಡಿಕೆದಾರರು ಮಾಡಬೇಕಿರುವುದು ಏನು

ಮೊದಲ ಕೆಲಸವಾಗಿ ಹೂಡಿಕೆದಾರರು ವಿವಿಧ ವರ್ಗಗಳ ಫಂಡ್‌ಗಳಲ್ಲಿ – ಅಂದರೆ ಲಾರ್ಜ್‌ಕ್ಯಾಪ್‌, ಮಿಡ್‌ಕ್ಯಾಪ್‌, ಸ್ಮಾಲ್‌ಕ್ಯಾಪ್‌, ಫ್ಲೆಕ್ಸಿಕ್ಯಾಪ್‌ ಅಥವಾ ಮಲ್ಟಿಕ್ಯಾಪ್‌ ಫಂಡ್‌ಗಳಲ್ಲಿ ಹಣ ತೊಡಗಿಸಬೇಕು. ಒಂದೊಂದು ಸಂದರ್ಭದಲ್ಲಿ ಒಂದೊಂದು ವರ್ಗದ ಫಂಡ್‌ಗಳು ಮುಂಚೂಣಿಯಲ್ಲಿ ಇರುತ್ತವೆ. ಹೀಗಾಗಿ ಬೇರೆ ಬೇರೆ ವರ್ಗದ ಫಂಡ್‌ಗಳಲ್ಲಿ ಹಣ ತೊಡಗಿಸುವುದರಿಂದ, ಯಾವುದೋ ಒಂದು ವರ್ಗದ ಫಂಡ್‌ ಮೇಲಿನ ಅತಿಯಾದ ಅವಲಂಬನೆ ಕಡಿಮೆ ಆಗಿರುತ್ತದೆ. 

ಎರಡನೆಯದಾಗಿ, ಒಂದೇ ವರ್ಗದ ಮ್ಯೂಚುವಲ್‌ ಫಂಡ್‌ಗಳ ಪೈಕಿ ವಿವಿಧ ಹೂಡಿಕೆ ಶೈಲಿಗಳನ್ನು ಅನುಸರಿಸುವ ಫಂಡ್‌ಗಳಲ್ಲಿ ಹಣ ತೊಡಗಿಸುವುದು. ಮಾರುಕಟ್ಟೆಯಲ್ಲಿ ಒಂದೊಂದು ಸಂದರ್ಭದಲ್ಲಿಒಂದೊಂದು ಶೈಲಿಗೆ ಹೆಚ್ಚಿನ ಮಹತ್ವ ಸಿಗುವ ಕಾರಣದಿಂದಾಗಿ, ಅವುಗಳಲ್ಲಿನ ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳುವುದು ಉತ್ತಮ. ಇವೆರಡೂ ಕೆಲಸ ಮಾಡಿದಾಗ, ಮಾರುಕಟ್ಟೆಯ ಗತಿಯನ್ನು ತಾಳಿಕೊಳ್ಳುವ ಪೋರ್ಟ್‌ಫೋಲಿಯೊ ಕಟ್ಟಲು ಸಾಧ್ಯವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅದೃಷ್ಟದ ಚಕ್ರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಹಿಂದೆ ಚಕ್ರ ತಿರುಗಿದಾಗಲೆಲ್ಲ ಒಂದು ಸಂಖ್ಯೆಯಲ್ಲಿ ಅದರ ಮುಳ್ಳು ಬಂದು ನಿಂತಿರಬಹುದು. ಆದರೆ ಭವಿಷ್ಯದಲ್ಲಿಯೇ ಅದೇ ರೀತಿಯಲ್ಲಿ ಆಗುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಮಾರುಕಟ್ಟೆ ಹೇಳುವ ಪಾಠ ಕೂಡ ಇದುವೇ. ಹೂಡಿಕೆದಾರರ ಕೈಯಲ್ಲಿ ಇರುವುದು ಹೂಡಿಕೆಗೆ ಸಂಬಂಧಿಸಿದ ತಮ್ಮ ವರ್ತನೆಯನ್ನು ನಿಯಂತ್ರಿಸುವುದು ಮಾತ್ರ.

ಲೇಖಕ ಪಿಜಿಐಎಂ ಇಂಡಿಯಾ ಅಸೆಟ್‌ ಮ್ಯಾನೇಜ್ಮೆಂಟ್‌ನ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.