ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಆಲೋಚನೆ ಹೊಂದಿರುವವರು ಕೆಲವು ಸಂದರ್ಭಗಳಲ್ಲಿ ಏನಾದರೂ ಒಂದು ಕಾರಣ ಹುಡುಕಿ, ಹೂಡಿಕೆ ಆರಂಭಿಸುವುದನ್ನು ಮುಂದಕ್ಕೆ ಹಾಕುವುದಿದೆ. ಕೆಲವರು ನಿಜವಾದ ಸಮಸ್ಯೆಯ ಕಾರಣದಿಂದಾಗಿ ಹೂಡಿಕೆ ಆರಂಭಿಸುವುದನ್ನು ಮುಂದೂಡುತ್ತಾರೆ ಎಂಬುದೂ ದಿಟ.
ಕಾರಣಗಳು ಏನೇ ಇರಲಿ, ಹೂಡಿಕೆ ಆರಂಭಿಸುವುದನ್ನು ಮುಂದಕ್ಕೆ ಹಾಕಿದರೆ ಅದರಿಂದ ಒಂದಿಷ್ಟು ನಷ್ಟವಂತೂ ಆಗುತ್ತದೆ. ಹೂಡಿಕೆಯನ್ನು ಎಷ್ಟು ಬೇಗ ಆರಂಭಿಸುತ್ತಾರೋ ಹೂಡಿಕೆದಾರರಿಗೆ ಅಷ್ಟರಮಟ್ಟಿಗೆ ಒಳ್ಳೆಯದೇ ಆಗುತ್ತದೆ ಎಂಬುದು ಹಣಕಾಸು ತಜ್ಞರ ಅಭಿಮತ. ಅಲ್ಲದೆ, ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಮಾತನ್ನು ಕೆಲವು ಹಣಕಾಸು ತಜ್ಞರು ತುಸು ಬದಲಾಯಿಸಿ, ‘ನೀವು ದುಡ್ಡನ್ನು ಕಾಪಾಡಿಕೊಂಡರೆ, ಅದು ನಿಮ್ಮನ್ನು ಕಾಪಾಡುತ್ತದೆ’ ಎಂದು ಹೇಳುವುದಿದೆ.
ಅದಿರಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್‌ಐಪಿ ಮೂಲಕ ಹೂಡಿಕೆ ಮಾಡುವುದನ್ನು ಎಷ್ಟು ತಡ ಮಾಡಿದರೆ ಎಷ್ಟು ನಷ್ಟ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕಹಾಕಲು ‘ಮ್ಯೂಚುವಲ್ ಫಂಡ್ ಸಹಿ ಹೈ’ ವೆಬ್‌ಸೈಟ್‌ನಲ್ಲಿ (www.mutualfundssahihai.com) ಒಂದು ಕ್ಯಾಲ್ಕುಲೇಟರ್ ಲಭ್ಯವಿದೆ.
ಉದಾಹರಣೆಗೆ, ವ್ಯಕ್ತಿಯೊಬ್ಬ 25ನೆಯ ವರ್ಷದಲ್ಲಿ ₹1000 ಮೊತ್ತಕ್ಕೆ ಎಸ್‌ಐಪಿ ಆರಂಭಿಸುತ್ತಾನೆ ಎಂದು ಭಾವಿಸಿ. ವಾರ್ಷಿಕ ಶೇ 8ರಷ್ಟು ಲಾಭ ಆತನಿಗೆ ಸಿಗುತ್ತದೆ ಎಂಬ ಅಂದಾಜಿನಲ್ಲಿ ಈ ಕ್ಯಾಲ್ಕುಲೇಟರ್ ಬಳಸಿ ಲೆಕ್ಕಹಾಕಿದರೆ, ಆತ ತನ್ನ 35ನೇ ವಯಸ್ಸಿಗೆ ₹1,20,000 ಹೂಡಿಕೆ ಮಾಡಿ, ಲಾಭದ ಮೊತ್ತವಾಗಿ ₹62,946 ಪಡೆದಿರುತ್ತಾನೆ ಎಂಬುದು ಗೊತ್ತಾಗುತ್ತದೆ.
ಅದೇ ವ್ಯಕ್ತಿ ಅಷ್ಟೇ ಮೊತ್ತದ ಹೂಡಿಕೆಯನ್ನು ತನ್ನ 25ನೇ ವಯಸ್ಸಿಗೆ ಬದಲು 30ನೇ ವಯಸ್ಸಿಗೆ ಶುರುಮಾಡಿದರೆ ಆತನಿಗೆ 35 ವರ್ಷ ವಯಸ್ಸಾದಾಗ ₹60,000 ಹೂಡಿಕೆ ಆಗಿರುತ್ತದೆ, ಸಿಗುವ ಲಾಭವು ₹₹13,476 ಮಾತ್ರ ಆಗಿರುತ್ತದೆ.
ಇಂತಹ ಹಲವು ಕ್ಯಾಲ್ಕುಲೇಟರ್‌ಗಳು ಮ್ಯೂಚುವಲ್ ಫಂಡ್ಸ್ ಸಹಿ ಹೈ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಈಗಿನ ವೆಚ್ಚವು ಹಣದುಬ್ಬರದ ಕಾರಣದಿಂದಾಗಿ ಮುಂದೆ ಎಷ್ಟಾಗುತ್ತದೆ, ನಿವೃತ್ತಿ ನಂತರದ ಜೀವನಕ್ಕೆ ಎಷ್ಟು ಹಣ ಬೇಕಾಗುತ್ತದೆ ಹಾಗೂ ಆ ಹಣವು ಹೂಡಿಕೆಗಳಿಂದ ಸಿಗುವಂತೆ ಆಗಲು ಯಾವ ಪ್ರಮಾಣದಲ್ಲಿ ಈಗ ಹೂಡಿಕೆ ಮಾಡಬೇಕಾಗುತ್ತದೆ ಸೇರಿದಂತೆ ಹಲವು ಹಣಕಾಸಿನ ಅಗತ್ಯಗಳಿಗೆ ಸಂಬಂಧಿಸಿದ
ಕ್ಯಾಲ್ಕುಲೇಟರ್‌ಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.