ಬಾಡಿಗೆ ವರಮಾನ ತರುವ ಆಸ್ತಿಗಳ ಮೇಲೆ ಹೂಡಿಕೆದಾರರ ಹಣವನ್ನು ತೊಡಗಿಸುವ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು ಹೂಡಿಕೆದಾರರಿಗೆ ಏಕೆ ಮಹತ್ವದ್ದು? ಇಲ್ಲಿ ಯಾವ ಪ್ರಮಾಣದ ಬೆಳವಣಿಗೆ ನಿರೀಕ್ಷಿಸಬಹುದು? ಈ ವಿಚಾರದ ಬಗ್ಗೆ ಅವಲೋಕನ ನಡೆಸಿದ ಈ ಬರಹ
ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳನ್ನು (ಆರ್‌ಇಐಟಿ) ಮ್ಯೂಚುವಲ್ ಫಂಡ್‌ಗಳು ‘ಈಕ್ವಿಟಿ’ಯಾಗಿ ಪರಿಗಣಿಸಬಹುದು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈಚೆಗೆ ಅನುಮತಿ ನೀಡಿದೆ.
ಇದಾದ ನಂತರ, ದೇಶದ ಷೇರುಪೇಟೆಗಳಲ್ಲಿ ನೋಂದಣಿ ಆಗಿರುವ ಆರ್‌ಇಐಟಿಗಳ ಮೌಲ್ಯವು ಕೆಲವು ದಿನಗಳಲ್ಲಿ ಏರಿಕೆ ಕಂಡಿತು. ಇದು ನಿಯಮಗಳಲ್ಲಿನ ಒಂದು ಬದಲಾವಣೆಯಂತೆ ಕಂಡರೂ, ಇದರ ಪರಿಣಾಮವು ಹೂಡಿಕೆದಾರರ ಮೇಲೆ ವ್ಯಾಪಕವಾಗಿರಲಿದೆ. ಸೆಬಿಯ ಈ ತೀರ್ಮಾನವು ಆರ್‌ಇಐಟಿಗಳನ್ನು ಬಂಡವಾಳ ಮಾರುಕಟ್ಟೆಯ ಮುಖ್ಯವಾಹಿನಿಗೆ ತರುತ್ತದೆ, ಮ್ಯೂಚುವಲ್ ಫಂಡ್‌ಗಳು ಇವುಗಳಲ್ಲಿ ಹೆಚ್ಚಿನ ಹಣ ತೊಡಗಿಸಲು ಅವಕಾಶ ಸಿಗುತ್ತದೆ, ಆರ್‌ಇಐಟಿಗಳು ಷೇರುಪೇಟೆ ಸೂಚ್ಯಂಕಗಳ ಭಾಗವಾಗುವ ಸಾಧ್ಯತೆಯೂ ತೆರೆದುಕೊಳ್ಳುತ್ತದೆ. ಭಾರತದ ಹೂಡಿಕೆದಾರರ ಪೋರ್ಟ್‌ಫೋಲಿಯೊದಲ್ಲಿ ಆರ್‌ಇಐಟಿಗಳ ಪಾಲು ಹೆಚ್ಚಳ ಕಾಣಲಿದೆ.
ರಿಯಲ್ ಎಸ್ಟೇಟ್ ವಲಯವನ್ನು ಸಂಪತ್ತಿನ ಚುಕ್ಕಾಣಿ ಎಂಬಂತೆ ದಶಕಗಳಿಂದಲೂ ಕಾಣಲಾಗಿದೆ. ಆದರೆ ರಿಯಲ್ ಎಸ್ಟೇಟ್ ಆಸ್ತಿಗಳ ಮಾಲೀಕತ್ವವು ಹೆಚ್ಚಿನ ಮಟ್ಟದಲ್ಲಿ ಇದ್ದಿದ್ದು ಭಾರಿ ಪ್ರಮಾಣದ ಬಂಡವಾಳ ಹೊಂದಿರುವವರಲ್ಲಿ ಮಾತ್ರ. ಸಾಂಪ್ರದಾಯಿಕವಾದ ಆಸ್ತಿಗಳ ಮೇಲೆ ಹೂಡಿಕೆ ಮಾಡಲು ದೊಡ್ಡ ಮೊತ್ತ ಬೇಕಾಗುತ್ತಿತ್ತು, ಅಂತಹ ಆಸ್ತಿಗಳನ್ನು ತಕ್ಷಣಕ್ಕೆ ಮಾರಾಟ ಮಾಡಿ ಹೂಡಿಕೆಯ ನಗದೀಕರಣ ಕಷ್ಟವಾಗಿತ್ತು.
ಆದರೆ ಆರ್‌ಇಐಟಿಗಳು ಈ ವಾಸ್ತವಗಳನ್ನು ಬದಲಾಯಿಸಲು ಆರಂಭಿಸಿವೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ, ಅತ್ಯಾಧುನಿಕ ಸೌಲಭ್ಯಗಳು ಇರುವ ಕಚೇರಿ ಸ್ಥಳಗಳನ್ನು (ಗ್ರೇಡ್ ಎ), ರಿಟೇಲ್ ಮಾರಾಟ ಸ್ಥಳಗಳನ್ನು, ವರಮಾನ ತಂದುಕೊಡುವ ಇತರ ಆಸ್ತಿಗಳನ್ನು ಒಂದೆಡೆ ತಂದು ಸಾಂಸ್ಥಿಕ ಹಾಗೂ ಸಣ್ಣ ಹೂಡಿಕೆದಾರರ ಹಣವನ್ನು ಅವುಗಳ ಮೇಲೆ ತೊಡಗಿಸುವ ಕೆಲಸವನ್ನು ಆರ್‌ಇಐಟಿಗಳು ಮಾಡುತ್ತವೆ. ಇದರ ಪರಿಣಾಮವಾಗಿ, ಹಿಂದೊಂದು ಕಾಲದಲ್ಲಿ ಅಪಾರದರ್ಶಕ ಆಗಿದ್ದ ವಲಯವು ಈಗ ಹೆಚ್ಚು ಪಾರದರ್ಶಕ ಆಗುತ್ತಿದೆ. ಈ ವಲಯವು ಈಗ ಸಣ್ಣ ಹೂಡಿಕೆದಾರರ ಕೈಗೆ ಸಿಗುವಂತೆ ಆಗುತ್ತಿದೆ. ಈಗ ಸಣ್ಣ ಹೂಡಿಕೆದಾರರು ಕೆಲವು ಸಾವಿರ ರೂಪಾಯಿ ಹಣ ಬಳಸಿ, ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್ ಆಸ್ತಿಗಳಲ್ಲಿ ಪಾಲು ಹೊಂದಬಹುದು.
ಹಣದ ನಗದೀಕರಣವು ತಕ್ಷಣಕ್ಕೆ ಆಗುವುದು ಇವುಗಳ ಮುಖ್ಯವಾದ ಪ್ರಯೋಜನ. ಆರ್‌ಇಐಟಿಗಳ ಯೂನಿಟ್‌ಗಳನ್ನು ದೇಶದ ಷೇರುಪೇಟೆಗಳಲ್ಲಿ ಮಾರಾಟ ಮಾಡಬಹುದು, ಖರೀದಿಸಬಹುದು. ಇದರಿಂದಾಗಿ ಹೂಡಿಕೆದಾರರಿಗೆ ಇವುಗಳ ಮೇಲೆ ಹಣ ತೊಡಗಿಸುವುದು, ಇವುಗಳನ್ನು ಮಾರಾಟ ಮಾಡುವುದು ಸುಲಭ. ಆಸ್ತಿಯ ಮೇಲೆ ನೇರ ಮಾಲೀಕತ್ವ ಹೊಂದಿದ್ದರೆ, ಅದರ ಮಾರಾಟ ವಹಿವಾಟು ಬಹಳ ನಿಧಾನವಾಗಿರುತ್ತದೆ. ಅದರಲ್ಲಿ ಪಾಲಿಸಬೇಕಿರುವ ಕಾನೂನು ಪ್ರಕ್ರಿಯೆಗಳು ಬಹಳಷ್ಟು ಇರುತ್ತವೆ.
ಒಂದೇ ಕಟ್ಟಡ ಅಥವಾ ಗೋದಾಮುಗಳನ್ನು ಗುರಿಯಾಗಿಸಿಕೊಂಡ ‘ಎಸ್‌ಎಂ ಆರ್‌ಇಐಟಿ’ಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಇರುವ ಹೂಡಿಕೆದಾರರಿಗೆ ಸೂಕ್ತವೆನಿಸುತ್ತವೆ. ಆದರೆ, ಇತರ ಸಾಮಾನ್ಯ ಹೂಡಿಕೆದಾರರಿಗೆ ಆರ್‌ಇಐಟಿಗಳು ಹೆಚ್ಚು ವೈವಿಧ್ಯಮಯವಾದ ಕಚೇರಿಗಳು, ಮಾಲ್‌ಗಳು, ಸರಕು ಸಾಗಣೆ ಸೌಲಭ್ಯಗಳಿಂದ ವರಮಾನ ಸಿಗುವಂತೆ ನೋಡಿಕೊಳ್ಳುತ್ತವೆ. ಇಂದು ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಆರ್‌ಇಐಟಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಹೂಡಿಕೆದಾರರಿಗೆ ಇರುವ ಆಯ್ಕೆಗಳು ಸೀಮಿತ. ಆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಆಸ್ತಿಗಳು ಆರ್‌ಇಐಟಿಗಳ ವ್ಯಾಪ್ತಿಗೆ ಬರುವ ನಿರೀಕ್ಷೆ ಇದೆ.
ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್‌ಗಳಿಗೆ (ಜಿಸಿಸಿ) ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಚೇರಿ ಸ್ಥಳಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇದರಿಂದಾಗಿ ಆರ್‌ಇಐಟಿಗಳ ನೆಲಗಟ್ಟು ಭದ್ರವಾಗುತ್ತಿದೆ. ಮೈಂಡ್‌ಸ್ಪೇಸ್‌ನಂತಹ ಆರ್‌ಇಐಟಿಗಳು ಗ್ಲೋಬಲ್ ಕೆಪ್ಯಾಟಿಸಿ ಸೆಂಟರ್‌ಗಳಿಗೆ ತಮ್ಮ ಸ್ಥಳವನ್ನು ಗಣನೀಯ ಪ್ರಮಾಣದಲ್ಲಿ ಬಾಡಿಗೆಗೆ ನೀಡಿವೆ. ಈಚೆಗೆ ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ನಾಲೆಜ್ ರಿಯಾಲ್ಟಿ ಟ್ರಸ್ಟ್ ಮುಂಬೈ, ಬೆಂಗಳೂರು, ಹೈದರಾಬಾದ್‌ನಲ್ಲಿ ವರಮಾನ ಬರುವ ಆಸ್ತಿಗಳನ್ನು ಹೊಂದಿದ್ದು, ಕಚೇರಿ ಸ್ಥಳಗಳಿಗೆ ಇರುವ ಬೇಡಿಕೆಗೆ ಅನುಗುಣವಾಗಿ ದೇಶದ ಆರ್‌ಇಐಟಿಗಳು ಹೇಗೆ ಬೆಳೆಯುತ್ತಿವೆ ಎಂಬುದನ್ನು ತೋರಿಸುತ್ತಿದೆ.
ಹೂಡಿಕೆದಾರರು ಇಲ್ಲಿರುವ ರಿಸ್ಕ್‌ಗಳನ್ನು ಸ್ಪಷ್ಟತೆಯೊಂದಿಗೆ ಅಂದಾಜು ಮಾಡಿಕೊಳ್ಳಬೇಕು. ಬಡ್ಡಿ ದರದ ಏರಿಳಿತಗಳು ಮೌಲ್ಯದ ಮೇಲೆ ಪ್ರಭಾವ ಬೀರಬಲ್ಲವು, ಕೆಲವು ಮಾರುಕಟ್ಟೆಗಳಲ್ಲಿ ಬಾಡಿಗೆ ಸ್ಥಳಗಳು ಬೇಡಿಕೆಗಿಂತ ಹೆಚ್ಚಿದ್ದರೆ ಅದು ಬಾಡಿಗೆ ವರಮಾನದ ಹೆಚ್ಚಳಕ್ಕೆ ಅಡ್ಡಿಯಾಗಬಲ್ಲದು. ಕಚೇರಿ ಸ್ಥಳ, ಮಾಲ್, ಸರಕು ಸಾಗಣೆ ಕೇಂದ್ರಗಳಲ್ಲಿ ಆರ್‌ಇಐಟಿಗಳು ಹೂಡಿಕೆ ಮಾಡಿದ್ದರೆ ಈ ಸಮಸ್ಯೆಯು ತೀವ್ರವಾಗಿ ಕಾಡುವುದಿಲ್ಲ.
ಆರ್‌ಇಐಟಿಗಳು ಈಕ್ವಿಟಿ ಹೂಡಿಕೆ ಹಾಗೂ ನಿಶ್ಚಿತ ವರಮಾನದ ಹೂಡಿಕೆಗಳ ನಡುವಿನ ಹೂಡಿಕೆಯ ರೂಪದಲ್ಲಿ ಕಾಣುತ್ತವೆ. ಆರ್‌ಇಐಟಿಗಳು ಸ್ಥಿರವಾದ ವರಮಾನವನ್ನು, ಬಂಡವಾಳದ ಮೌಲ್ಯ ವೃದ್ಧಿಯ ಸಾಧ್ಯತೆಯನ್ನೂ ಹೂಡಿಕೆದಾರರಿಗೆ ಒದಗಿಸುತ್ತವೆ.
ಈಗ ಆರ್‌ಇಐಟಿಗಳನ್ನು ‘ಈಕ್ವಿಟಿ’ ಎಂದು ಪರಿಗಣಿಸಲು ಸೆಬಿ ಅವಕಾಶ ಕಲ್ಪಿಸಿರುವುದರ ಪರಿಣಾಮವಾಗಿ ಪಿಂಚಣಿ ನಿಧಿಗಳು, ವಿಮಾ ಕಂಪನಿಗಳು ಹಾಗೂ ಮ್ಯೂಚುವಲ್ ಫಂಡ್‌ಗಳು ಇವುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಣ ತೊಡಗಿಸುವ ಸಾಧ್ಯತೆ ಇರುತ್ತದೆ. ಇದುವರೆಗೆ ಈ ವರ್ಗದ ಹೂಡಿಕೆದಾರರಿಗೆ ಆರ್‌ಇಐಟಿಗಳ ಮೇಲೆ ಹೆಚ್ಚು ಹಣ ತೊಡಗಿಸಲು ಮಿತಿ ಇತ್ತು, ಏಕೆಂದರೆ ಇವುಗಳನ್ನು ‘ಪರ್ಯಾಯ ಹೂಡಿಕೆ’ಗಳು ಎಂದು ಪರಿಗಣಿಸಲಾಗಿತ್ತು.
ಈಗ ಇವುಗಳನ್ನು ಈಕ್ವಿಟಿ ಎಂದು ಪರಿಗಣಿಸಲು ಅವಕಾಶ ದೊರೆತಿರುವ ಕಾರಣದಿಂದಾಗಿ, ಇವುಗಳಲ್ಲಿ ತೊಡಗಿಸಲು ಮೀಸಲಿರಿಸುವ ಮೊತ್ತ ಹೆಚ್ಚಲಿದೆ. ಆಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ದೀರ್ಘಾವಧಿಯ ಬಂಡವಾಳವನ್ನು ಒದಗಿಸಬಲ್ಲ ಹಣದ ಹರಿವು ಕೂಡ ಲಭ್ಯವಾಗಲಿದೆ.
ಜಗತ್ತಿನಲ್ಲಿ ಏನಾಯಿತು? ಇಲ್ಲಿ ಏನಾಗಬಹುದು?
ಆರ್‌ಇಐಟಿಗಳ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಏನಾಯಿತು ಎಂಬುದರ ಅವಲೋಕನವು ಭಾರತದಲ್ಲಿ ಇವುಗಳು ಮುಂದೆ ಏನಾಗಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಅಮೆರಿಕದಲ್ಲಿ ಆರ್‌ಇಐಟಿಗಳು ಆರು ದಶಕಗಳಿಂದ ಗಟ್ಟಿಯಾಗಿ ಬೇರುಬಿಟ್ಟಿವೆ. ಅವು ಅಲ್ಲಿ ಇಂದು ಶತಕೋಟಿ ಡಾಲರ್‌ಗಳ ಮೊತ್ತದ ಆಸ್ತಿಯನ್ನು ನಿರ್ವಹಿಸುತ್ತಿವೆ. ಸಿಂಗಪುರದಲ್ಲಿ ಆರ್‌ಇಐಟಿಗಳನ್ನು ಬಳಸಿ ಅಲ್ಲಿನ ನಗರ ಅರ್ಥ ವ್ಯವಸ್ಥೆಗೆ ದೇಶಿ ಹಾಗೂ ವಿದೇಶಿ ಬಂಡವಾಳ ಬರುವಂತೆ ಮಾಡಲಾಗಿದೆ.
ಭಾರತದಲ್ಲಿ ಆರ್‌ಇಐಟಿಗಳು ಆರಂಭಿಕ ಹಂತದಲ್ಲಿ ಇವೆ. ಗ್ರೇಡ್ ಎ ದರ್ಜೆಯ ಕಚೇರಿ ಸ್ಥಳಗಳಲ್ಲಿ ಚಿಕ್ಕ ಪಾಲು ಮಾತ್ರ ಆರ್‌ಇಐಟಿಗಳ ವ್ಯಾಪ್ತಿಯಲ್ಲಿದೆ. ಆದರೆ ಅಧ್ಯಯನಗಳ ಪ್ರಕಾರ, ಸುಧಾರಣಾ ಕ್ರಮಗಳು ಮುಂದುವರಿದಲ್ಲಿ 2030ರ ವೇಳೆಗೆ ಇಂತಹ ಸ್ಥಳಗಳ ಪೈಕಿ ಶೇ 30ರಷ್ಟು ಪಾಲು ಆರ್‌ಇಐಟಿ ವ್ಯಾಪ್ತಿಗೆ ಬರುವ ನಿರೀಕ್ಷೆ ಇದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೆ ವಿಶಿಷ್ಟವಾದ ಹೂಡಿಕೆ ಉತ್ಪನ್ನಗಳು ಎಂದು ಗುರುತಿಸಿಕೊಂಡಿದ್ದ ಆರ್‌ಇಐಟಿಗಳು ಈಗ ರಿಯಲ್ ಎಸ್ಟೇಟ್ ಹಾಗೂ ಬಂಡವಾಳ ಮಾರುಕಟ್ಟೆಗಳ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಿವೆ. ಇವುಗಳ ವಿಸ್ತರಣೆಯು ದೇಶದ ನಗರ ಪ್ರದೇಶಗಳ ವಿಸ್ತರಣೆಯ ಮೇಲೆ ಪ್ರಭಾವ ಬೀರಲಿದೆ, ಕುಟುಂಬಗಳು ಮತ್ತು ಸಂಸ್ಥೆಗಳ ಉಳಿತಾಯದ ಹಣವು ಉತ್ಪಾದಕ ಆಸ್ತಿಗಳ ಮೇಲೆ ಹೇಗೆ ವಿನಿಯೋಗ ಆಗಲಿದೆ ಎಂಬುದರ ಮೇಲೆ ಪ್ರಭಾವ ಬೀರಲಿದೆ.
ಹೂಡಿಕೆದಾರರು ಸೆಬಿ ನೋಂದಾಯಿತ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದು, ತಮ್ಮ ಒಟ್ಟು ಹೂಡಿಕೆ ಮೊತ್ತದಲ್ಲಿ ಶೇ 5ರಿಂದ ಶೇ 10ರವರೆಗಿನ ಮೊತ್ತವನ್ನು ಆರ್‌ಇಐಟಿಗಳ ಮೇಲೆ ತೊಡಗಿಸುವ ಬಗ್ಗೆ ಪರಿಗಣಿಸಬಹುದು. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ‘ಗ್ರೇಡ್ ಎ’ ಕಚೇರಿ ಸ್ಥಳಗಳು, ದೀರ್ಘಾವಧಿ ಗುತ್ತಿಗೆ ಒಪ್ಪಂದ, ಶಿಸ್ತಿನ ಆಡಳಿತ ನಿರ್ವಹಣೆ ಇರುವ ಆರ್‌ಇಐಟಿಗಳಿಗೆ ಆದ್ಯತೆ ನೀಡಬಹುದು.
ಲೇಖಕ ಕ್ರೆಡಾಯ್ ಬೆಂಗಳೂರು ಇದರ ಅಧ್ಯಕ್ಷ
ಸ್ಥಿರವಾದ ವರಮಾನ ಹಾಗೂ ಹೂಡಿಕೆ ಮೌಲ್ಯದಲ್ಲಿ ಹೆಚ್ಚಳದ ಸಾಧ್ಯತೆಯು ಆರ್‌ಇಐಟಿಗಳು ಹೂಡಿಕೆದಾರರನ್ನು ಸೆಳೆಯುವುದಕ್ಕೆ ಪ್ರಮುಖ ಕಾರಣ. ಬಾಡಿಗೆ ಮೂಲಕ ಬರುವ ಹಣದಲ್ಲಿ ಹೆಚ್ಚಿನ ಪಾಲನ್ನು ಇವು ಹೂಡಿಕೆದಾರರಿಗೆ ವಿತರಿಸಲೇಬೇಕು ಹೀಗಾಗಿ ಇವುಗಳಿಂದ ನೆಚ್ಚಿಕೊಳ್ಳಬಹುದಾದ ವರಮಾನವೊಂದು ಸಿಗುತ್ತದೆ. ಈಚಿನ ತ್ರೈಮಾಸಿಕಗಳಲ್ಲಿ ದೇಶದ ಷೇರುಪೇಟೆ ನೋಂದಾಯಿತ ಆರ್‌ಇಐಟಿಗಳು ₹1500 ಕೋಟಿಗಿಂತ ಹೆಚ್ಚಿನ ಮೊತ್ತವನ್ನು 2.5 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ತಮ್ಮ ಹೂಡಿಕೆದಾರರಿಗೆ ವಿತರಿಸಿವೆ. ಬಾಡಿಗೆ ವರಮಾನವು ಹೂಡಿಕೆದಾರರಿಗೆ ಹೇಗೆ ಹಣ ತಂದುಕೊಟ್ಟಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತಿದೆ. ಬಾಡಿಗೆದಾರರು ಬಿಟ್ಟುಹೋಗದಂತೆ ನೋಡಿಕೊಳ್ಳುವ ಗುತ್ತಿಗೆ ಒಪ್ಪಂದಗಳು ಬಾಡಿಗೆ ಮೊತ್ತದ ಹೆಚ್ಚಳ ಬಹುರಾಷ್ಟ್ರೀಯ ಕಂಪನಿಗಳು ಬಾಡಿಗೆಗೆ ಇರುವುದು ಬಾಡಿಗೆ ವರಮಾನದ ಹಂಚುವಿಕೆಗೆ ಇರುವ ನೀತಿಗಳು ಈ ಹಂಚಿಕೆಗೆ ಕಾರಣ. ಬಾಡಿಗೆ ಮೊತ್ತದ ಏರಿಕೆಯ ಬಗ್ಗೆ ಗುತ್ತಿಗೆ ಒಪ್ಪಂದದಲ್ಲಿ ಉಲ್ಲೇಖ ಇರುವುದು ವಾಣಿಜ್ಯ ಸ್ಥಳಗಳನ್ನು ಬಾಡಿಗೆಗೆ ಪಡೆಯುವುದು ಹೆಚ್ಚುತ್ತಿರುವುದು ಮತ್ತು ಬಾಡಿಗೆದಾರರು ಹೆಚ್ಚುತ್ತಿರುವುದು ಈ ಬಗೆಯ ಹೂಡಿಕೆಗಳಲ್ಲಿ ಬೆಳವಣಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹೀಗಾಗಿ ಈ ಹೂಡಿಕೆಗಳು ದೀರ್ಘಾವಧಿಯಲ್ಲಿ ಶೇ 12ರಿಂದ ಶೇ 15ರಷ್ಟು ಲಾಭ ತಂದುಕೊಡುವ ಸಾಧ್ಯತೆ ಇದೆ. ಅಲ್ಲದೆ ಇವು ಈಕ್ವಿಟಿ ಹೂಡಿಕೆಗಳಿಗಿಂತ ಹೆಚ್ಚು ಸ್ಥಿರವಾಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.