ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಮೋದ ಶ್ರೀಕಾಂತ ದೈತೋಟ
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ


ಸತೀಶ್ ಮೋಹನ್, ಮೈಸೂರು

ನಾನು ನಿವೃತ್ತನಾಗಿದ್ದು, ತೆರಿಗೆ ಪಾವತಿಸಬೇಕಾಗುವ ಪಿಂಚಣಿ ಆದಾಯ ಹೊಂದಿದ್ದೇನೆ. ನಾನು ನನ್ನ ಮನೆ ಮಾರಾಟ ಮಾಡಿ ಬಂದ ಹಣದಿಂದ ಒಂದು ಅಪಾರ್ಟ್ಮೆಂಟ್‌ನಲ್ಲಿ ಬಾಡಿಗೆ ಮನೆ ಪಡೆಯುವ ಅಂದಾಜು ಮಾಡಿದ್ದೇನೆ. ನಾನು ಉದ್ಯೋಗದಲ್ಲಿ ಇದ್ದಾಗ ಬಾಡಿಗೆ ಮನೆಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಇತ್ತು. ಈಗಲೂ ಅದೇ ಬಗೆಯಲ್ಲಿ, ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಿದರೆ, ಮನೆ ಬಾಡಿಗೆ ಪಾವತಿಗೆ ಯಾವುದಾದರೂ ತೆರಿಗೆ ವಿನಾಯಿತಿ ಇದೆಯೇ?

ADVERTISEMENT

ಉತ್ತರ: ನೀವು ಪ್ರಶ್ನೆಯಲ್ಲಿ ಪ್ರಸ್ತಾಪಿಸಿದ ವಿಚಾರ ವಿವಿಧ ಸನ್ನಿವೇಶ ಹಾಗೂ ನೀವು ಆಯ್ಕೆ ಮಾಡಿದ ತೆರಿಗೆ ಪದ್ಧತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ವಾಸಕ್ಕಾಗಿ ಪಾವತಿಸುವ ಬಾಡಿಗೆಗೆ ಸಾಮಾನ್ಯವಾಗಿ ಸೆಕ್ಷನ್ 10(13ಎ) ಅಥವಾ ಸೆಕ್ಷನ್ 80ಜಿಜಿ ಅಡಿಯಲ್ಲಿ ವಿನಾಯಿತಿ ಲಭ್ಯವಿರುತ್ತದೆ. ಆದರೆ ಇದಕ್ಕೆ ಕೆಲವು ಷರತ್ತುಗಳಿವೆ. ಸೆಕ್ಷನ್ 10(13ಎ) ಅಡಿಯಲ್ಲಿ ಬಾಡಿಗೆ ನೀಡುವುದರ ಆಧಾರದಲ್ಲಿ ತೆರಿಗೆ ವಿನಾಯಿತಿ ಪಡೆಯಲು ವೇತನದಲ್ಲಿ ಗೃಹ ಬಾಡಿಗೆ ಭತ್ಯೆಯನ್ನು ಪಡೆದಿರಬೇಕು ಹಾಗೂ ಬಾಡಿಗೆ ಮನೆಯಲ್ಲಿ ವಾಸವಿದ್ದು ಬಾಡಿಗೆ ಪಾವತಿಸುತ್ತಿರಬೇಕು. ಅದರ ಪ್ರಕಾರ ನಿಗದಿಯಾಗುವ ಮೊತ್ತವನ್ನು ವಿನಾಯಿತಿಯಾಗಿ ತೆರಿಗೆ ಲೆಕ್ಕ ಹಾಕುವಾಗ ನೀಡಲಾಗುತ್ತದೆ. ಆದರೆ ನಿವೃತ್ತಿಯ ನಂತರ ಪಿಂಚಣಿ ಮಾತ್ರ ಸ್ವೀಕರಿಸುವವರು ಇಂತಹ ಗೃಹ ಬಾಡಿಗೆ ಭತ್ಯೆ ಪಡೆಯುವುದಿಲ್ಲವಾದ್ದರಿಂದ ಈ ಸೆಕ್ಷನ್ ಅಡಿ ವಿನಾಯಿತಿ ಪಡೆಯಲು ಸಾಧ್ಯವಾಗುವುದಿಲ್ಲ.

ಗೃಹ ಬಾಡಿಗೆ ಭತ್ಯೆ ಪಡೆಯುತ್ತಿಲ್ಲದ ವೈಯಕ್ತಿಕ ತೆರಿಗೆದಾರರು, ಬಾಡಿಗೆ ಪಾವತಿಸುತ್ತಿದ್ದರೆ, ಸೆಕ್ಷನ್ 80ಜಿಜಿ ಅಡಿ ವಿನಾಯಿತಿ ಪಡೆಯಲು ಕೆಲವು ಸಂದರ್ಭಗಳಲ್ಲಿ ಅರ್ಹರಾಗಬಹುದು. ಇದರ ಅಡಿ, ತೆರಿಗೆದಾರರು ತಾವು ವಾಸಿಸುವ ಸ್ಥಳದಲ್ಲಿ ಸ್ವಂತ ನಿವಾಸ ಹೊಂದಿರಬಾರದು ಹಾಗೂ ತಮ್ಮ ಹೆಸರಿನಲ್ಲಿ ಅಥವಾ ಸಂಬಂಧಿಕರ ಹೆಸರಲ್ಲಿ (ಪತಿ-ಪತ್ನಿ ಅಥವಾ ಮಕ್ಕಳು) ಇರುವ ಆಸ್ತಿಯಲ್ಲಿ ವಾಸ್ತವ್ಯದಲ್ಲಿ ಇರಬಾರದು. ಬಾಡಿಗೆ ಪಾವತಿ ಮಾಡಿದ ಒಪ್ಪಂದ ಹೊಂದಿರಬೇಕು ಮತ್ತು ಫಾರಂ 10 ಬಿಎ ಭರ್ತಿ ಮಾಡಬೇಕು. ವಿನಾಯಿತಿಯ ಲೆಕ್ಕದಲ್ಲಿ ಒಟ್ಟು ಆದಾಯದ ಶೇ 25ರಷ್ಟು ಅಥವಾ ತಿಂಗಳಿಗೆ ₹5,000 (ವಾರ್ಷಿಕ ₹60,000) ಅಥವಾ ಒಟ್ಟು ಆದಾಯದ ಶೇ 10ಕ್ಕಿಂತ ಅಧಿಕ ಪಾವತಿಸಿದ ಬಾಡಿಗೆ –  ಇದರಲ್ಲಿ ಕನಿಷ್ಠ ಮೊತ್ತವನ್ನು ವಿನಾಯಿತಿಗೆ ಪರಿಗಣಿಸಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ತೆರಿಗೆ ವಿವರ ಸಲ್ಲಿಸುವಾಗ ಹಳೆಯ ಅಥವಾ ಹೊಸ ತೆರಿಗೆ ವಿಧಾನವನ್ನು ಆಯ್ಕೆ ಮಾಡಬಹುದು. ಹಳೆಯ ತೆರಿಗೆ ವಿಧಾನದಲ್ಲಿ ಸೆಕ್ಷನ್ 80ಜಿಜಿ ಸೇರಿದಂತೆ ವಿವಿಧ ಕಡಿತಗಳು ಲಭ್ಯವಿರುತ್ತವೆ. ಇದರಿಂದ ಹೆಚ್ಚಿನ ವಿನಾಯಿತಿ ಪಡೆಯಲು ಸಾಧ್ಯ. ಹೊಸ ತೆರಿಗೆ ವಿಧಾನದಲ್ಲಿ ತೆರಿಗೆ ದರ ಕಡಿಮೆ. ಆದರೆ ವಿನಾಯಿತಿಗಳಿಗೆ ಹೆಚ್ಚಿನ ಅವಕಾಶವಿಲ್ಲ. ಬಹುತೇಕ ಸಂದರ್ಭಗಳಲ್ಲಿ ಯಾವುದೇ ವಿನಾಯಿತಿ ಪಡೆಯದೆ ಇದ್ದಾಗಲೂ ಒಟ್ಟಾರೆ ತೆರಿಗೆ ಕಡಿಮೆಯಾಗಿರುವ ಸಾಧ್ಯತೆ ಹೊಸ ತೆರಿಗೆ ಪದ್ಧತಿಯಲ್ಲೇ ಇರುತ್ತದೆ. ಆದರೂ ನಿಮಗೆ ಈ ಯಾವುದೇ ವಿನಾಯಿತಿಗಳು ನಿಜವಾಗಿ ಪ್ರಯೋಜನ ಆಗುತ್ತವೆಯೇ ಎನ್ನುವುದನ್ನು ಸರಿಯಾಗಿ ತುಲನೆ ಮಾಡಿಯೇ ನೋಡುವುದು ಒಳಿತು. ಇದಕ್ಕೆ ನಿಮ್ಮ ಪೂರ್ಣ ಆದಾಯ ವಿವರದೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಅಶ್ವತ್ಥ ಕುಮಾರ, ಬನಶಂಕರಿ, ಬೆಂಗಳೂರು

ನನ್ನ ಮಗ ಕಳೆದ ಐದು ವರ್ಷಗಳಿಂದ ವಿದೇಶದಲ್ಲಿದ್ದಾನೆ. ನನ್ನೊಂದಿಗೆ ಇದ್ದಾಗ ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ದಿ ಯೋಜನೆಯನ್ನು ನನ್ನ ಮೊಮ್ಮಕ್ಕಳಿಗೆ ಮಾಡಿಸಿದ್ದೆ. ಈಗ ಅವರೂ ಅನಿವಾಸಿ ಭಾರತೀಯರಾಗಿದ್ದಾರೆ. ಈಗ ಅಂಚೆ ಇಲಾಖೆಯವರು ಅದನ್ನು ಮುಂದುವರಿಸಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಬೇಕಾಗಿತ್ತು.

ಉತ್ತರ: ನಿಮ್ಮ ಮೊಮ್ಮಕ್ಕಳ ಭವಿಷ್ಯದ ಆರ್ಥಿಕ ಉಪಯೋಗಕ್ಕೆಂದು ನೀವು ಸಲಹೆ ನೀಡಿ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿ ಹಣ ತೊಡಗಿಸಿರುವುದು ಉಪಯುಕ್ತ ಕ್ರಮ. ಪ್ರಸ್ತುತ ಈ ಹೂಡಿಕೆಗಳು ‘ಸರ್ಕಾರಿ ಉಳಿತಾಯ ಪ್ರೋತ್ಸಾಹನಾ ನಿಯಮಾವಳಿ 1873’ ಅಡಿ ನಿಯಂತ್ರಿಸಲ್ಪಡುತ್ತಿವೆ. ಖಾತೆ ತೆರೆಯುವಾಗ ಬಳಸುವ ‘ನಮೂನೆ - 1’ರಲ್ಲಿ ಹೂಡಿಕೆದಾರರು ತಮ್ಮ ಬದಲಾದ ವಾಸಸ್ಥಿತಿಯನ್ನು (ರೆಸಿಡೆನ್ಷಿಯಲ್ ಸ್ಟೇಟಸ್) ಖಾತೆ ಇರುವ ಸಂಬಂಧಿತ ಕಚೇರಿಗೆ ತಿಳಿಸಬೇಕು.

ಪ್ರಸ್ತುತ ನಿಯಮಗಳ ಪ್ರಕಾರ, ಹೊಸ ಖಾತೆಯನ್ನು ಭಾರತೀಯ ನಿವಾಸಿಗಳು ಮಾತ್ರ ತೆರೆಯಬಹುದಾಗಿದ್ದು, ಅನಿವಾಸಿ ಭಾರತೀಯರಾಗಿದ್ದರೆ ಹೊಸ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಆದರೆ, ಖಾತೆ ತೆರೆದ ನಂತರ ಯಾವುದೇ ನಿವಾಸಿ ಭಾರತೀಯ, ಅನಿವಾಸಿ ಭಾರತೀಯನಾಗಿ ಬದಲಾದ ಸನ್ನಿವೇಶದಲ್ಲಿ, ಈಗಾಗಲೇ ತೆರೆದಿರುವ ಖಾತೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಅವಕಾಶ ಇದೆ. ಈ ಠೇವಣಿ ಬಡ್ಡಿ ಗಳಿಸುವುದಕ್ಕೂ ಅರ್ಹವಾಗಿರುತ್ತದೆ. ಖಾತೆಯನ್ನು ಮುಚ್ಚಬೇಕಾದ ಸಂದರ್ಭ ಎದುರಾಗುವುದು ಭಾರತೀಯ ಪೌರರಾಗಿ ಇರುವ ಹಕ್ಕು ಕಳೆದುಕೊಂಡಾಗ ಮಾತ್ರ. ನಿಮ್ಮ ಮಗ, ಮೊಮ್ಮಕ್ಕಳು ಪೌರತ್ವದ ಹಕ್ಕು ಕಳೆದುಕೊಂಡಿಲ್ಲ; ಬದಲಾಗಿ ಅನಿವಾಸಿ ಭಾರತೀಯರಾಗಿದ್ದಾರೆ.

ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ, ಮೊಮ್ಮಕ್ಕಳ ಹೆಸರಲ್ಲಿ ಸುಕನ್ಯಾ ಸಮೃದ್ದಿ ಯೋಜನೆಯ ಖಾತೆಯನ್ನು ಈಗಾಗಲೇ ತೆರೆದಿರುವ ಕಾರಣ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಖಾತೆಯನ್ನು ಮುಂದಿನ ಅವಧಿ ಮುಗಿಯುವ ತನಕ (15 ವರ್ಷ) ಮುಂದುವರಿಸಿ. ಈ ಬಗ್ಗೆ ತಿಳಿಸಿರುವ ಮೇಲಿನ ನಿಯಮಗಳನ್ನು ರಾಷ್ಟ್ರೀಯ ಉಳಿತಾಯ ಸಂಸ್ಥೆಯ ವೆಬ್‌ಸೈಟ್‌ https://www.nsiindia.gov.in ಇದರಲ್ಲೂ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.