ADVERTISEMENT

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಮೋದ ಶ್ರೀಕಾಂತ ದೈತೋಟ
Published 3 ಡಿಸೆಂಬರ್ 2025, 0:04 IST
Last Updated 3 ಡಿಸೆಂಬರ್ 2025, 0:04 IST
   

‘ನಾನು 71 ವರ್ಷ ವಯಸ್ಸಿನ ನಿವೃತ್ತ ಕಾರ್ಮಿಕ. ನಾನು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಾಗೂ ಅದರ ನಂತರ ಆದಾಯ ತೆರಿಗೆ ವಿವರ ಸಲ್ಲಿಸುತ್ತಿದ್ದೇನೆ. ಹಾಗಿದ್ದರೂ 2008-09ನೇ ಸಾಲಿನ ತೆರಿಗೆ ಬಾಕಿ ₹48 ಸಾವಿರ ಇರುವುದಾಗಿ ನನ್ನ ಲೆಕ್ಕಪರಿಶೋಧಕರ ಮೂಲಕ ತಿಳಿಯಿತು. ನಂತರ 2022ರಲ್ಲಿ ಅಂಚೆ ಇಲಾಖೆಯ ಆದಾಯದ ಮೇಲೆ ನನ್ನ ಒಂದಿಷ್ಟು ತೆರಿಗೆಯನ್ನು ಕಡಿತ ಮಾಡಿದ್ದರು ಮತ್ತು ಈ ಮೊತ್ತ ಮರುಪಾವತಿ ಮೂಲಕ ಹಿಂಪಡೆಯುವುದಿತ್ತು. ಆದರೆ ಇದನ್ನು ಪಡೆಯಲು ಹೆಚ್ಚಿನ ಮಾಹಿತಿ ಹಾಗೂ ಹಳೆಯ ಬಾಕಿ ವಿವರ ಕೇಳಿದಾಗ ಯಾವುದೇ ಸ್ಪಷ್ಟ ವಿವರ ಆದಾಯ ತೆರಿಗೆ ಇಲಾಖೆಯಲ್ಲಿ ಸಿಗಲಿಲ್ಲ. ಈ ಬಗ್ಗೆ ಲೆಕ್ಕಪರಿಶೋಧಕರ ಮೂಲಕವೂ ಹೆಚ್ಚಿನ ಮಾಹಿತಿ ಪಡೆಯಲು ಹಲವು ಬಾರಿ ಪ್ರಯತ್ನಿಸಲಾಯಿತು, ಅವರಿಗೂ ಸ್ಪಷ್ಟತೆ ಸಿಗಲಿಲ್ಲ. ಇದಕ್ಕೆ ಪರಿಹಾರವೇನು?

ವೆಂಕಟಶಾಮಪ್ಪ ಎಸ್., ಬೆಂಗಳೂರು

ಉತ್ತರ: ನೀವು ಹಿಂದಿನಿಂದಲೂ ಆದಾಯ ತೆರಿಗೆ ವಿವರ ಸಲ್ಲಿಸುತ್ತ ಬಂದಿದ್ದರೂ 2008‑09ನೇ ಸಾಲಿನಲ್ಲಿ ಸುಮಾರು ₹48 ಸಾವಿರ ತೆರಿಗೆ ಬಾಕಿ ಇದೆ ಎಂದು ನೋಟಿಸ್ ಬಂದಿರುವ ಬಗ್ಗೆ ಹಾಗೂ ಈ ವಿಚಾರಕ್ಕೆ ಸಂಬಂಧಿಸಿ ಆಯಾ ಇಲಾಖೆಗಳಿಗೆ ಭೇಟಿ ನೀಡಿದ್ದರೂ ಸಮಸ್ಯೆ ಪರಿಹಾರ ಆಗಿದಿರುವ ಕುರಿತು ಹೇಳಿದ್ದೀರಿ. ಮೇಲ್ನೋಟಕ್ಕೆ ಇದು ಹಳೆಯ ತೆರಿಗೆ ಮಾಹಿತಿಯ ವ್ಯತ್ಯಾಸದಿಂದ ಆಗಿರಬಹುದು. ಹೀಗಾಗಿ ಇಂತಹ ವಿಚಾರಗಳನ್ನು ಪ್ರಸ್ತುತ ಸನ್ನಿವೇಶದಲ್ಲಿ ಮೊದಲ ಹಂತದಲ್ಲಿ ಆನ್‌ಲೈನ್‌ ಮಾಹಿತಿಯ ಪರಾಮರ್ಶೆ ಮೂಲಕ ಸಾಧ್ಯವಾದಷ್ಟು ಬಗೆಹರಿಸಿಕೊಳ್ಳುವುದು ಸೂಕ್ತ. ಇದಕ್ಕಾಗಿ ನಿಮ್ಮ ಲಾಗಿನ್ ಮಾಹಿತಿ, ಈಗಾಗಲೇ ಸಲ್ಲಿಸಿರುವ ಹಳೆಯ ವಿವರ, ಸಂಬಂಧಿತ ವರ್ಷದ ನಿಖರವಾದ ನಿಮ್ಮ ಆದಾಯ ತೆರಿಗೆ ಲೆಕ್ಕ ಹಾಗೂ ಫಾರಂ 16 ಇತ್ಯಾದಿ ಹೊಂದಿಸಿಕೊಳ್ಳಿ. ಆ ಅವಧಿಯಲ್ಲಿ ಆನ್‌ಲೈನ್‌ ಪೋರ್ಟಲ್ ಮೂಲಕ ನೀವು ವಿವರ ಸಲ್ಲಿಸಿರಲಿಕ್ಕಿಲ್ಲ. ಇದು ಕಾಗದಪತ್ರದ ಮೂಲಕ ಸಲ್ಲಿಸಿದ್ದ ಮಾಹಿತಿಯಾಗಿದ್ದರೆ, ಈ ಪೋರ್ಟಲ್‌ಗೆ ಮಾಹಿತಿ ವರ್ಗಾವಣೆ ವೇಳೆ ವ್ಯತ್ಯಾಸ ಆಗಿರುವ ಸಾಧ್ಯತೆ ಇದೆ.

ADVERTISEMENT

ಸಾಮಾನ್ಯವಾಗಿ ಯಾವುದೇ ಹಳೆ ಬಾಕಿಗಳಿದ್ದಾಗ ಹಾಗೂ ನಂತರದ ಹಂತಗಳಲ್ಲಿ ಮರುಪಾವತಿ ಕೂಡ ಇದ್ದಾಗ, ಹಳೆಯ ಡಿಮಾಂಡ್ ಭರಿಸುವವರೆಗೆ ಬಾಕಿ ಇರುವ ಮರುಪಾವತಿ ಮೊತ್ತವನ್ನು ಅದರೊಡನೆ ಸರಿದೂಗಿಸಲಾಗುತ್ತದೆ. ನಿಮ್ಮ ವಿಚಾರದಲ್ಲೂ ಅದು ನಡೆದಿದೆ. ಆದರೆ ಈ ಕ್ರಮದ ಬಗ್ಗೆ ಸೂಕ್ತ ಮಾಹಿತಿ ಲಿಖಿತ ನೋಟಿಸ್ ಮೂಲಕ ನೀಡುತ್ತಾರೆ.

ನಿಮ್ಮ ಸಮಸ್ಯೆ ಬಗೆಹರಿಸಲು, ಮೊದಲ ಹಂತದಲ್ಲಿ ನಿಮ್ಮ ಡಿಮಾಂಡ್ ನಿಮ್ಮ ಪ್ಯಾನ್ ಖಾತೆಯಲ್ಲಿ ಏನಿದೆ ಹಾಗೂ ನಂತರದ ಹಂತದ ಮರುಪಾವತಿ ಯಾವ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಕೊಳ್ಳಬೇಕು. ಈ ಸಂಬಂಧ ನಿಮ್ಮ ಅಹವಾಲುಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ಮೇಲೆ ಹೇಳಿರುವ ದಾಖಲೆಗಳನ್ನು ಹೊಂದಿಸಿ, ನುರಿತ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ಹಂತದಲ್ಲಿ ನಿಮ್ಮ ನಿಜವಾದ ತೆರಿಗೆ ಪಾವತಿ ಸರಿಯಾಗಿ ವರದಿಯಾಗದೆ ಇಂತಹ ಡಿಮ್ಯಾಂಡ್ ಬಂದಿದ್ದಲ್ಲಿ, ನಿಮ್ಮ ಸರಿಯಾದ ದಾಖಲೆಗಳನ್ನು ಸಲ್ಲಿಸುವ ಮೂಲಕ ಪರಿಹರಿಸಿಕೊಳ್ಳಬಹುದು. 2022ರ ಮರುಪಾವತಿ ಬಗ್ಗೆ ನಿಮ್ಮ ಅಹವಾಲು ಸಲ್ಲಿಸುವಾಗ, ಹಳೆಯ ಬಾಕಿ ಡಿಮಾಂಡ್ ಪೋರ್ಟಲ್‌ನಲ್ಲಿ ಇದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಿ ಹಾಗೂ ಆ ಮಾಹಿತಿಯನ್ನು ಸಲ್ಲಿಸಿ. 2011-12ಕ್ಕಿಂತ ಹಳೆಯ ವಿಚಾರವಾಗಿದ್ದರೆ, ಸಂಬಂಧಿತ ಅಧಿಕಾರಿಗಳ ವಿವರವನ್ನು ಪೋರ್ಟಲ್‌ನಲ್ಲಿ ತಿಳಿದು ಪರಿಹರಿಸಿಕೊಳ್ಳಬೇಕಾಗುತ್ತದೆ. ನಂತರದ ಹಂತದಲ್ಲೂ ಸ್ಪಂದಿಸದಿದ್ದರೆ ಸಂಬಂಧಿತ ಅಧಿಕಾರಿ, ಸೆಂಟ್ರಲ್ ಪ್ರೊಸೆಸಿಂಗ್ ಸಿಸ್ಟಂ ಅಥವಾ ಈ ಫೈಲಿಂಗ್ ಬಗ್ಗೆ ಪ್ರತ್ಯೇಕವಾಗಿ ಅಹವಾಲು ಸಲ್ಲಿಸಬಹುದು.

ನನ್ನ ಮನೆಯ 900 ಚದರ ಅಡಿ ವಾಣಿಜ್ಯ ಉಪಯೋಗದ ಜಾಗವನ್ನು ತಿಂಗಳಿಗೆ ₹55 ಸಾವಿರ ಬಾಡಿಗೆಗೆ ವಾಣಿಜ್ಯ ಉಪಯೋಗಕ್ಕಾಗಿ ಕೊಟ್ಟಿರುತ್ತೇನೆ. ಇದಕ್ಕೆ ಶೇ 18ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆ ಹಾಗೂ ಈ ಮೊತ್ತವನ್ನು ಕಡಿತಮಾಡಿ ಬಾಡಿಗೆ ಪಾವತಿಸುವುದಾಗಿ ಬಾಡಿಗೆದಾರರು ಹೇಳುತ್ತಿದ್ದಾರೆ. ಇದು ಜಿಎಸ್‌ಟಿ ಕಾಯ್ದೆ ಪ್ರಕಾರ ಸರಿಯೇ? ಹಾಗಿದ್ದಲ್ಲಿ ಜಿಎಸ್‌ಟಿ ಕಾಯ್ದೆಯ ಯಾವ ಭಾಗ ಇದಕ್ಕೆ ಅನ್ವಯಿಸುತ್ತದೆ? ನನಗೆ ಬೇರೆ ಯಾವುದೇ ಬಾಡಿಗೆ ಆದಾಯವಿಲ್ಲ, ಯಾವುದೇ ವಾಣಿಜ್ಯ ವ್ಯವಹಾರವೂ ಇರುವುದಿಲ್ಲ. ಹಾಗಾಗಿ ಜಿಎಸ್‌ಟಿ ನೋಂದಣಿ ನನಗೆ ಇಲ್ಲ. ನನ್ನ ಅರಿವಿನ ಪ್ರಕಾರ ಈ ವಾರ್ಷಿಕ ಬಾಡಿಗೆ ಮೊತ್ತ, ಜಿಎಸ್‌ಟಿ ಅಡಿ ನೋಂದಣಿ ಪಡೆಯಬೇಕಾದ ಮೊತ್ತಕ್ಕಿಂತ ಕಡಿಮೆ ಆಗಿರುವುದರಿಂದ ವಾಣಿಜ್ಯ ಬಾಡಿಗೆ ಆದಾಯಕ್ಕೆ ಜಿಎಸ್‌ಟಿ ಅನ್ವಯಿಸುವುದಿಲ್ಲ. ಇದು ಸರಿಯೇ? ದಯವಿಟ್ಟು ತಿಳಿಸಿ.

ಶ್ರೀನಿವಾಸ ಎಸ್, ನಾಗರಬಾವಿ, ಬೆಂಗಳೂರು

ಉತ್ತರ: ನೀವು ನಿಮ್ಮ ಮನೆಯ 900 ಚದರ ಅಡಿ ವಾಣಿಜ್ಯ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡುತ್ತಿರುವುದರಿಂದ ‘ವಾಣಿಜ್ಯ ಆಸ್ತಿಯ ಬಾಡಿಗೆಯ ಸೇವೆ’ಗಳ ಅಡಿ ಇದನ್ನು ಪರಿಗಣಿಸಲಾಗುತ್ತದೆ. ಇದು ಜಿಎಸ್‌ಟಿ ಅಡಿಯಲ್ಲಿ ತೆರಿಗೆಗೆ ಒಳಪಡುವ ಸೇವೆ. ಆದರೆ ಜಿಎಸ್‌ಟಿ ಕಾಯ್ದೆಯ ಪ್ರಮುಖ ಅಂಶವೆಂದರೆ ಸೇವೆಯ ಸರಬರಾಜುದಾರರ (ಇಲ್ಲಿ ನೀವು – ಆಸ್ತಿಯ ಮಾಲೀಕರು) ವಾರ್ಷಿಕ ವ್ಯವಹಾರ ₹20 ಲಕ್ಷ ಮೀರಿದಾಗ ಮಾತ್ರ ಜಿಎಸ್‌ಟಿ ಕಾಯ್ದೆ ಅಡಿ ನೋಂದಣಿ ಕಡ್ಡಾಯ. ನಿಮ್ಮ ವಾರ್ಷಿಕ ವಾಣಿಜ್ಯ ಬಾಡಿಗೆ ಆದಾಯ ಹನ್ನೆರಡು ತಿಂಗಳಿಗೆ ₹6.60 ಲಕ್ಷ ಮಾತ್ರ ಆಗಿರುವುದರಿಂದ ಮತ್ತು ನಿಮಗೆ ಬೇರೆ ಯಾವುದೇ ಆದಾಯ ಇಲ್ಲದ ಕಾರಣ ಜಿಎಸ್‌ಟಿ ನೋಂದಣಿ ಕಡ್ಡಾಯವಾಗುವುದಿಲ್ಲ ಮತ್ತು ನೀವು ಬಾಡಿಗೆಯ ಮೇಲೆ ಜಿಎಸ್‌ಟಿ ವಿಧಿಸುವ ಅಗತ್ಯವೂ ಇರುವುದಿಲ್ಲ.

ಬಾಡಿಗೆದಾರರು ವಾಣಿಜ್ಯ ವ್ಯವಹಾರದಲ್ಲಿ ಇರುವುದರಿಂದ ಅವರಿಗೆ ಜಿಎಸ್‌ಟಿ ಅನ್ವಯಿಸಬಹುದು. ನೀವು ನೋಂದಣಿ ಆಗದಿರುವ ಸೇವಾದಾರ ಆಗಿರುವುದರಿಂದ ಹಾಗೂ ಅವರು ನೋಂದಾಯಿತ ಸೇವೆಯನ್ನು ಅನುಭವಿಸುವವ ಆಗಿರುವುದರಿಂದ ಬಾಡಿಗೆ ಸೇವೆಯ ಮೇಲಿನ ಜಿಎಸ್‌ಟಿಯ ಜವಾಬ್ದಾರಿ ಅವರಿಗೆ ವರ್ಗಾವಣೆ ಆಗುತ್ತದೆ. ಸೇವೆಯನ್ನು ಬಳಸಿಕೊಳ್ಳುವವರು ಶೇ 18ರ ದರದಲ್ಲಿ ತೆರಿಗೆ ಕಟ್ಟಬೇಕಾಗಿರುತ್ತದೆ. ಈ ರೀತಿ ಕಟ್ಟಿರುವ ಮೊತ್ತ ಅವರಿಗೆ ನಷ್ಟವಲ್ಲ. ಅವರು ಈ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿ, ಅದರ ಜಮಾ ಆಧಾರದ ಮೇಲೆ, ಅವರ ಇತರ ಜಿಎಸ್‌ಟಿ ಪಾವತಿ ಮೊತ್ತದಲ್ಲಿ ವಜಾ ಮಾಡಿಕೊಳ್ಳುವ ಅವಕಾಶ ಕಾನೂನಿನ ಅಡಿ ಇದೆ. ಹೀಗಾಗಿ ಇದು ಸಂಪೂರ್ಣ ಅವರಿಗೆ ಸಂಬಂಧಿಸಿದ ಬಾಧ್ಯತೆ ಆಗಿರುವುದರಿಂದ, ನಿಮ್ಮ ಬಾಡಿಗೆ ಮೊತ್ತದಲ್ಲಿ ಅದನ್ನು ಮತ್ತೆ ಕಡಿತಮಾಡಿ ಅವರು ಲಾಭ ಪಡೆಯುವುದಕ್ಕೆ ಅವಕಾಶ ಇಲ್ಲ. ನೀವು ನಿಗದಿ ಮಾಡಿದ ಬಾಡಿಗೆಗೆ ತೆರಿಗೆ ಇಲ್ಲದ ಕಾರಣ ಪೂರ್ಣ ಮೊತ್ತ ನಿಮಗೆ ಸಿಗಬೇಕು. ಆದರೆ, ಆದಾಯ ತೆರಿಗೆ ಕಾನೂನಿನ ಅಡಿ ಅನ್ವಯಿಸುವ ತೆರಿಗೆ ಕಡಿತ ಶೇ 10ರ ದರದಲ್ಲಿ ಕಡಿತ ಅನ್ವಯಿಸುತ್ತದೆ ಎಂಬುದು ಗಮನದಲ್ಲಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.