ADVERTISEMENT

ಪ್ರಶ್ನೋತ್ತರ | ಮ್ಯೂಚುಯಲ್ ಫಂಡ್ ಫೋಲಿಯೊ ವಿವರ ಪತ್ತೆ ಹಚ್ಚುವುದು ಹೇಗೆ?

ಪ್ರಮೋದ ಶ್ರೀಕಾಂತ ದೈತೋಟ
Published 29 ಏಪ್ರಿಲ್ 2025, 23:41 IST
Last Updated 29 ಏಪ್ರಿಲ್ 2025, 23:41 IST
   

ಪ್ರಶ್ನೋತ್ತರ

ನಾನು ಶಾಲಾ ಶಿಕ್ಷಕ. ನನ್ನ ತಂದೆ ಇತ್ತೀಚೆಗೆ ನಿಧನರಾದರು. ಅವರು ಮ್ಯೂಚುವಲ್ ಫಂಡ್‌ಗಳಲ್ಲಿ ಕಳೆದ ಕೆಲವು ವರ್ಷಗಳಿಂದ ತಿಂಗಳಿಗೆ ₹10 ಸಾವಿರದಿಂದ ₹15 ಸಾವಿರ ಹೂಡಿಕೆ ಮಾಡಿದ್ದರು. ಅವರಿಗೆ ಲಾಭ ಬರುತ್ತಿದ್ದ ಬಗ್ಗೆ ಆಗಾಗ್ಗೆ ಹೇಳುತ್ತಿದ್ದರು. ಆದರೆ, ನಾನು ಅವರ ಹೂಡಿಕೆಯ ವಿವರದ ಬಗ್ಗೆ ನಿಖರ ಮಾಹಿತಿ ಹೊಂದಿಲ್ಲ. ಅವರ ಎಲ್ಲಾ ಫೋಲಿಯೊ ವಿವರವುಳ್ಳ ಹೂಡಿಕೆ ಮೊತ್ತದ ಬಗ್ಗೆ ತಿಳಿದುಕೊಳ್ಳುವುದು ಹೇಗೆ? ಅವರು ನಾಮಿನಿಯಾಗಿ ಉಲ್ಲೇಖಿಸಿದ ವ್ಯಕ್ತಿಯ ಹೆಸರಿನಲ್ಲಿ ಫಂಡ್ ಮೊತ್ತವನ್ನು ಹೇಗೆ ಹಸ್ತಾಂತರಿಸಿಕೊಳ್ಳಬಹುದು. ಈ ಬಗ್ಗೆ ತಿಳಿಸಿ – ನಿರಂಜನ್, ಬೆಳಗಾವಿ.

ನಿಮ್ಮ ತಂದೆಯವರ ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಟ್ರ್ಯಾಕ್ ಮಾಡಲು ಮತ್ತು ನಾಮಿನಿ ಹೆಸರಿನಲ್ಲಿ ಹಸ್ತಾಂತರಿಸಿಕೊಳ್ಳಲು ನೀವು ಸೆಬಿ ರೂಪಿಸಿರುವ ‘ಮಿತ್ರ’ (ಮ್ಯೂಚುವಲ್ ಫಂಡ್ ಹೂಡಿಕೆದಾರರ ಟ್ರ್ಯಾಕಿಂಗ್ ಮತ್ತು ಪರಿಹಾರ ಸಹಾಯಕ) ಎಂಬ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಈ ಪ್ಲಾಟ್‌ಫಾರ್ಮ್ ಹೂಡಿಕೆದಾರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಹೂಡಿಕೆ ವಿವರ ಪತ್ತೆ ಹಚ್ಚಲು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ADVERTISEMENT

ಇದು ನಿಮ್ಮ ತಂದೆಯ ಎಲ್ಲಾ ಮ್ಯೂಚುಯಲ್ ಫಂಡ್ ಫೋಲಿಯೊಗಳು ಮತ್ತು ಹೂಡಿಕೆಯ ವಿವರವನ್ನು ಸುಲಭವಾಗಿ ಪತ್ತೆ ಹಚ್ಚಲು ನಿಮಗೆ ಸಹಾಯ ಮಾಡುತ್ತದೆ.  

ನೀವು ಮಿತ್ರ ಪ್ಲಾಟ್‌ಫಾರ್ಮ್‌ನ ವೆಬ್‌ಸೈಟ್ https://www.mfcentral.comಗೆ ಭೇಟಿ ನೀಡಿ. ಈ ವೆಬ್‌ಸೈಟ್‌ನಲ್ಲಿ ನಿಮ್ಮ ತಂದೆಯವರ ಪ್ಯಾನ್ ಸಂಖ್ಯೆ, ಇ–ಮೇಲ್ ಐಡಿ ಅಥವಾ ಮೊಬೈಲ್ ನಂಬರ್, ಇತರೆ ಮಾಹಿತಿ ಬಳಸಿ ಲಾಗಿನ್ ಮಾಡಿ, ಅವರ ಎಲ್ಲಾ ಫೋಲಿಯೊಗಳ ವಿವರ, ಪೋರ್ಟ್ ಫೋಲಿಯೊ ವಿವರವನ್ನು ಇಲ್ಲಿ ಪಡೆಯಬಹುದು. ಈ ವೇದಿಕೆಯು ಪ್ಯಾನ್ ಸಂಖ್ಯೆಯ ಮಾಹಿತಿ ಹಾಗೂ ಮೊಬೈಲ್/ ಇ–ಮೇಲ್ ಮಾಹಿತಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಯಾವುದೇ ಕೆವೈಸಿ ವಿವರ, ಎಸ್‌ಐಪಿ ವಿವರ, ಕ್ಯಾಪಿಟಲ್ ಗೈನ್ ಸೇರಿ ಒಟ್ಟಾರೆ ಹೂಡಿಕೆ ಇತ್ಯಾದಿ ವಿವರ ಪಡೆಯಬಹುದು.  

ಫೋಲಿಯೊಗಳನ್ನು ಪತ್ತೆ ಹಚ್ಚಿದ ನಂತರ ಮುಂದಿನ ಹಂತದಲ್ಲಿ ಆ ಹೂಡಿಕೆಗಳನ್ನು ನಾಮಿನಿ ಹೆಸರಿಗೆ ಹಸ್ತಾಂತರಿಸಲು ಸಂಬಂಧಪಟ್ಟ ಮ್ಯೂಚುವಲ್ ಫಂಡ್ ಕಂಪನಿಗೆ ಅರ್ಜಿ ಸಲ್ಲಿಸಬೇಕಿದೆ. ಇದಕ್ಕಾಗಿ ಸಾಮಾನ್ಯವಾಗಿ ಅರ್ಜಿಯೊಂದಿಗೆ ಮರಣ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್ ಪ್ರತಿ ಮತ್ತು ಕೆಲವೊಮ್ಮೆ ಮುಚ್ಚಳಿಕೆ ಪತ್ರ ಸಲ್ಲಿಸಬೇಕಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ಸ್ಥಳೀಯ ಫಂಡ್ ಶಾಖೆಗಳನ್ನು ಸಂಪರ್ಕಿಸಿ.

ನಾನು ಪ್ರತಿ ವರ್ಷ ₹7 ಲಕ್ಷ ಪಿಂಚಣಿ ಪಡೆಯುತ್ತಿದ್ದೇನೆ. ಇತ್ತೀಚೆಗೆ ಘೋಷಿತ ಆದಾಯ ತೆರಿಗೆ ಸಡಿಲಿಕೆಗಳ ಪ್ರಯೋಜನ ಪಡೆಯಲು ಸುಮಾರು 10 ವರ್ಷದ  ಹಿಂದೆ ಖರೀದಿಸಿದ್ದ ಷೇರಿನಲ್ಲಿ ₹4 ಲಕ್ಷ ಹಾಗೂ 5 ವರ್ಷದ ಹಿಂದೆ ಹೂಡಿದ್ದ ಮ್ಯೂಚುವಲ್ ಫಂಡ್‌ನಲ್ಲಿ ₹1 ಲಕ್ಷ ಮೌಲ್ಯದ ಹೂಡಿಕೆ ಹಿಂತೆಗೆದುಕೊಳ್ಳಲು ಉದ್ದೇಶಿಸಿದ್ದೇನೆ. ಈ ರೀತಿಯಲ್ಲಿ ನನ್ನ ಒಟ್ಟು ಆದಾಯ ₹12 ಲಕ್ಷ ಆಗಲಿದೆ. ನಾನು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆಯೇ?.

ಅಲ್ಲದೆ, ನಾನು ₹5 ಲಕ್ಷ ಮೌಲ್ಯದ ಷೇರುಗಳನ್ನು ನನ್ನ ಕುಟುಂಬದ ಸದಸ್ಯರಿಗೆ (ಯಾವುದೇ ಆದಾಯವಿಲ್ಲದವರಿಗೆ) ವರ್ಗಾವಣೆ ಮಾಡಿದರೆ ಮತ್ತು ಅವರು ಈ ವರ್ಷವೇ ಮಾರಾಟ ಮಾಡಿದರೆ ಅವರು ತೆರಿಗೆ ಪಾವತಿಸಬೇಕಾಗುತ್ತದೆಯೇ? ಈ ಬಗ್ಗೆ ಸ್ಪಷ್ಟನೆ ನೀಡಿರಿ – ಸತೀಶ್ ಮೋಹನ್, ಮೈಸೂರು.

ನಿಮ್ಮ ಈ ವರ್ಷದ ಗಳಿಕೆ ₹12 ಲಕ್ಷ ಎಂದು ಪರಿಭಾವಿಸಿದ್ದರೂ ತೆರಿಗೆಗೆ ಸಂಬಂಧಿಸಿ ಈ ಮೊತ್ತವು ಸಂಪೂರ್ಣ ತೆರಿಗೆಗೊಳಪಡುವ ಲಾಭವಲ್ಲ. ಏಕೆಂದರೆ ನೀವು ಕೆಲವು ವರ್ಷದ ಹಿಂದೆ ಷೇರು ಖರೀದಿಸಿರುವಾಗ ಅದಕ್ಕೂ ಅಸಲು ಮೊತ್ತ ಕೊಟ್ಟಿರುತ್ತೀರಿ.

ಒಂದು ವೇಳೆ 2018ರ ಜನವರಿ 31ಕ್ಕಿಂತ ಹಿಂದೆ ಹೂಡಿಕೆ ಮಾಡಿದ್ದರೆ ಅಂದಿನ ಮಾರುಕಟ್ಟೆ ಮೌಲ್ಯ ಅಥವಾ ನಿಜವಾದ ಖರೀದಿ ಮೌಲ್ಯದಲ್ಲಿ ಯಾವುದು ಅಧಿಕವೋ ಅದು ನಿಮ್ಮ  ಪರಿಷ್ಕೃತ ಖರೀದಿ ಮೌಲ್ಯ ಎಂಬುದಾಗಿ ತಿಳಿಯಲಾಗುತ್ತದೆ. ಹೀಗಾಗಿ, ಮಾರಾಟವಾದ ಮೌಲ್ಯ ಮತ್ತು ಪರಿಷ್ಕೃತ ಖರೀದಿ ಮೌಲ್ಯದೊಳಗಿನ ಅಂತರವಷ್ಟೇ ನಿಮ್ಮ ಲಾಭ, ನಷ್ಟ ಎಂಬುದನ್ನು ಗಮನಿಸಿ. ಅದೇ ರೀತಿ 2018ರ ಜನವರಿ 31ರ ನಂತರ ಮ್ಯೂಚುವಲ್ ಫಂಡ್ ಖರೀದಿಸಿದ್ದರೆ ನಿಮ್ಮ ಅಸಲು ಮೊತ್ತವನ್ನೇ ಪರಿಗಣಿಸಿ ಲಾಭ, ನಷ್ಟವನ್ನು ಲೆಕ್ಕ ಹಾಕಲಾಗುತ್ತದೆ.

ನಿಮ್ಮ ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳು ದೀರ್ಘಾವಧಿಯ ಬಂಡವಾಳ ಆಸ್ತಿಗಳಾಗಿವೆ. ಇದರಿಂದ ಇವುಗಳ ಮಾರಾಟದಿಂದ ಬರುವ ಲಾಭದ ಮೇಲೆ ಸೆಕ್ಷನ್ 112ಎ ಪ್ರಕಾರ ₹1.25 ಲಕ್ಷದವರೆಗೆ ಲಾಭ ಇದ್ದರೆ ತೆರಿಗೆ ಸಂಪೂರ್ಣ ಮುಕ್ತವಾಗಿರುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತದ ಮೇಲಷ್ಟೇ ಶೇ 12.5ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇದು ನಿಮ್ಮ ವಿವಿಧ ಸ್ಲ್ಯಾಬ್ ತೆರಿಗೆ ದರಕ್ಕಿಂತ ಭಿನ್ನವಾಗಿದ್ದು, ಮೇಲಿನ ನಿಶ್ಚಿತ ದರದಲ್ಲಿ ತೆರಿಗೆಗೆ ಒಳಪಡುತ್ತದೆ.

ಆದರೆ, 2025-26ನೇ ಆರ್ಥಿಕ ವರ್ಷದಲ್ಲಿ ನಡೆಯಲಿರುವ ಈ ವ್ಯವಹಾರ ಹಾಗೂ ಆದಾಯಕ್ಕೆ ಸೆಕ್ಷನ್ 87ಎ ಅಡಿ ತೆರಿಗೆ ರಿಬೇಟ್‌ (ವಿನಾಯಿತಿ) ಇರುವ ಕಾರಣ ಒಟ್ಟು ಆದಾಯ ₹12 ಲಕ್ಷದೊಳಗೆ ಇರುವವರಿಗೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಆದರೆ, ರಿಟರ್ನ್ಸ್ ಸಲ್ಲಿಸಬೇಕಿದೆ. ಹೀಗಾಗಿ ನಿಮ್ಮ ಷೇರು- ಮ್ಯೂಚುವಲ್ ಫಂಡ್‌ಗಳ ಖರೀದಿ ಮಾಹಿತಿ ನಿಖರವಾಗಿ ಪಡೆದುಕೊಂಡು ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ನೈಜ ಲಾಭದ ಬಗ್ಗೆ ತಿಳಿದು ಮುಂದಿನ ವರ್ಷ ಸಕಾಲದಲ್ಲಿ ರಿಟರ್ನ್ಸ್ ಸಲ್ಲಿಸಿ. 

ಷೇರುಗಳನ್ನು ಕುಟುಂಬದ ಸದಸ್ಯರಿಗೆ ಉಡುಗೊರೆ ರೂಪದಲ್ಲಿ ಹಸ್ತಾಂತರಿಸುವುದು ತೆರಿಗೆ ಪರಿಧಿಯಲ್ಲಿ ಬರುವುದಿಲ್ಲ. ಉದಾಹರಣೆಗೆ ಪತ್ನಿ, ಮಕ್ಕಳು, ತಂದೆ- ತಾಯಿ, ಅಣ್ಣ- ತಮ್ಮ, ಅಕ್ಕ- ತಂಗಿ ಹೀಗೆ ಇನ್ನೂ ಕೆಲವು ನಿರ್ದಿಷ್ಟ ವರ್ಗದ ಮಂದಿಗೆ ಆರ್ಥಿಕ ಮೌಲ್ಯ ಇರುವ ಆಸ್ತಿಗಳನ್ನು ಹಸ್ತಾಂತರಿಸಿದರೆ ಆ ಸಂದರ್ಭದಲ್ಲಿ ತೆರಿಗೆಗೊಳಪಡುವುದಿಲ್ಲ. ಆದರೆ, ಅವರು ತದನಂತರ ಮಾರಾಟ ಮಾಡಿದಾಗ ಬರುವ ಲಾಭ, ನಷ್ಟವನ್ನು ಅವರ ರಿಟರ್ನ್ಸ್‌ನಲ್ಲಿ ಸೇರ್ಪಡೆಗೊಳಿಸಬೇಕಾಗುತ್ತದೆ. ಅವರು ಸ್ವತಂತ್ರವಾಗಿ ತಮ್ಮ ಆದಾಯಕ್ಕೆ ತೆರಿಗೆ ಪಾವತಿಸಬೇಕು.

ಅವರು ಈಗಾಗಲೇ ಆದಾಯ ತೆರಿಗೆ ಮಿತಿಯೊಳಗಿದ್ದರೆ ಯಾವುದೇ ತೆರಿಗೆ ಅನ್ವಯವಾಗದಿರುವ ಸಾಧ್ಯತೆ ಇದೆ. ಇಂತಹ ಲಾಭ, ನಷ್ಟ ಲೆಕ್ಕ ಹಾಕುವಾಗ ನೀವು ಈಗಾಗಲೇ ಯಾವ ಮೌಲ್ಯಕ್ಕೆ ಖರೀದಿಸಿರುತ್ತೀರೋ ಆ ಮೌಲ್ಯವೇ ಮುಂದೆ ಅವರ ಅಸಲು ಮೌಲ್ಯವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.