ADVERTISEMENT

ಪ್ರಶ್ನೋತ್ತರ: ಮ್ಯೂಚುವಲ್ ಫಂಡ್‌; ಪ್ರತಿ ತಿಂಗಳೂ ಹೂಡಿಕೆ ಮಾಡುವುದು ಯುಕ್ತವೇ?

ಪ್ರಮೋದ ಶ್ರೀಕಾಂತ ದೈತೋಟ
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
<div class="paragraphs"><p>ಮ್ಯೂಚುವಲ್ ಫಂಡ್‌ </p></div>

ಮ್ಯೂಚುವಲ್ ಫಂಡ್‌

   

(ಸಾಂದರ್ಭಿಕ ಚಿತ್ರ)

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ

-ಜಿತೇಂದ್ರ, ಮಂಗಳೂರು

ADVERTISEMENT

ನಾನು ಸೀಮಿತ ಆದಾಯ ಹೊಂದಿರುವ ತೆರಿಗೆದಾರ. ನನ್ನ ಆದಾಯವು ಮುಖ್ಯವಾಗಿ ವೇತನ, ಬಡ್ಡಿ ಮತ್ತು ಕೆಲವೊಮ್ಮೆ ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ವ್ಯವಹಾರಗಳಿಂದ ಬಂದಿರುತ್ತದೆ. ನಾನು ಹೊಸ ತೆರಿಗೆ ಪದ್ದತಿಯನ್ನು ಅನುಸರಿಸುತ್ತಿದ್ದೇನೆ. ಕಳೆದ ಸಾಲಿನ  ಬಜೆಟ್‌ ಪ್ರಕಾರ, ಆರ್ಥಿಕ ವರ್ಷ 2025–26ರಿಂದ ಹೊಸ ತೆರಿಗೆ ವ್ಯವಸ್ಥೆಯಡಿ ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ.

ಈ ಹಿನ್ನೆಲೆಯಲ್ಲಿ ನನ್ನ ಪ್ರಶ್ನೆ ಏನೆಂದರೆ, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಮಾರಾಟದಿಂದ ಉಂಟಾಗುವ ಬಂಡವಾಳ ವೃದ್ಧಿ ಆದಾಯವೂ ಒಟ್ಟಾರೆ ₹12 ಲಕ್ಷದ ವ್ಯಾಪ್ತಿಗೆ ಒಳಪಡುವುದೇ? ಪ್ರಸ್ತುತ ಅಂದಾಜು ಪ್ರಕಾರ, ಈ ರೀತಿಯ ನನ್ನ ಆದಾಯವು ಸುಮಾರು ₹3 ಲಕ್ಷದಷ್ಟಿದೆ. ಈ ಆದಾಯವೂ ವಿನಾಯಿತಿಯೊಳಗೆ ಇದ್ದರೆ, ತೆರಿಗೆ ಯೋಜನೆಯ ದೃಷ್ಟಿಯಿಂದ ಮಹತ್ವದ್ದಾಗುತ್ತದೆ.

ಉತ್ತರ: ಕಳೆದ ವರ್ಷದ ಬಜೆಟ್‌ನಲ್ಲಿ, ಹೊಸ ತೆರಿಗೆ ಪದ್ದತಿ ಆಯ್ಕೆ ಮಾಡಿದವರಿಗೆ ಆರ್ಥಿಕ ವರ್ಷ 2025–26ರಿಂದ ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಆದರೆ ಈ ವಿನಾಯಿತಿಯ ವ್ಯಾಪ್ತಿ ಎಲ್ಲ ವಿಧದ ಆದಾಯಗಳಿಗೆ ಸಮಾನವಾಗಿ ಅನ್ವಯವಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಆದಾಯ ತೆರಿಗೆ ಕಾಯ್ದೆ–1961ರ ಪ್ರಕಾರ, ವೇತನ, ಬಡ್ಡಿ ಆದಾಯ ಮತ್ತು ಇತರ ಸಾಮಾನ್ಯ ಆದಾಯಗಳು ಸ್ಲ್ಯಾಬ್ ದರಗಳ ಅಡಿ ತೆರಿಗೆಗೆ ಒಳಪಡುತ್ತವೆ. ಈ ಸ್ಲ್ಯಾಬ್ ಆದಾಯಗಳಿಗೆ ಮಾತ್ರವೇ ಸೆಕ್ಷನ್ 115 ಬಿಎಸಿ ಅಡಿಯಲ್ಲಿ ಹೊಸ ತೆರಿಗೆ ವ್ಯವಸ್ಥೆಯ ₹12 ಲಕ್ಷದ ವಿನಾಯಿತಿ ಹಾಗೂ ಸೆಕ್ಷನ್ 87ಎ ಅಡಿಯ ರಿಬೇಟ್ ಅನ್ವಯವಾಗುತ್ತದೆ.

ಷೇರುಗಳು ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮಾರಾಟದಿಂದ ಉಂಟಾಗುವ ಬಂಡವಾಳ ವೃದ್ಧಿಯ ಆದಾಯಕ್ಕೆ ವಿಶೇಷವಾಗಿ ಪ್ರತ್ಯೇಕ ತೆರಿಗೆ ದರ ನಿಗದಿಪಡಿಸಲಾಗಿದೆ. ಈಕ್ವಿಟಿ ಷೇರುಗಳು ಮತ್ತು ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳ ಅಲ್ಪಾವಧಿ ಬಂಡವಾಳ ವೃದ್ಧಿಗೆ ಸೆಕ್ಷನ್ 111ಎ ಅಡಿಯಲ್ಲಿ ಶೇ 20ರ ವಿಶೇಷ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಅದೇ ರೀತಿ, ದೀರ್ಘಾವಧಿ ಬಂಡವಾಳ ವೃದ್ಧಿಗೆ ಸೆಕ್ಷನ್ 112ಎ ಅನ್ವಯಿಸುತ್ತದೆ, ವಾರ್ಷಿಕ ₹1.25 ಲಕ್ಷಕ್ಕೂ ಹೆಚ್ಚಿನ ಮೊತ್ತದ ಲಾಭಕ್ಕೆ ಶೇ 12.5ರ ತೆರಿಗೆ ಅನ್ವಯಿಸುತ್ತದೆ.

ಈ ರೀತಿಯ ವಿಶೇಷ ದರದ ಅಡಿ ತೆರಿಗೆಗೆ ಒಳಪಡುವ ಬಂಡವಾಳ ವೃದ್ಧಿ ಆದಾಯವನ್ನು ₹12 ಲಕ್ಷದ ಮೂಲ ವಿನಾಯಿತಿಯೊಳಗೆ ಸೇರಿಸಿ ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಲು ಹಾಗೂ ರಿಬೇಟ್ ಪಡೆಯಲು ಅವಕಾಶವಿಲ್ಲ. ತೆರಿಗೆ ಯೋಜನೆಯ ದೃಷ್ಟಿಯಿಂದ, ಈ ವ್ಯತ್ಯಾಸವನ್ನು ಮುಂಚಿತವಾಗಿಯೇ ಪರಿಗಣಿಸುವುದು ಅಗತ್ಯ.

****

-ನಾಗರಾಜು, ವಿಶ್ವೇಶ್ವರಯ್ಯ ಲೇಔಟ್, ಬೆಂಗಳೂರು

ನಾನು ಕಳೆದ 5–6 ವರ್ಷಗಳಿಂದ ಮಾಸಿಕ ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಪ್ರಸ್ತುತ ನನ್ನ ಒಟ್ಟು ಹೂಡಿಕೆ ಮೊತ್ತ ಸುಮಾರು ₹10 ಲಕ್ಷ. ಈ ಹೂಡಿಕೆಗಳಲ್ಲಿನ ಕೆಲವು ಫಂಡ್‌ಗಳು ಲಾಭದಲ್ಲಿದ್ದರೆ, ಕೆಲವು ಫಂಡ್‌ಗಳು ಯಾವುದೇ ದೊಡ್ಡ ಲಾಭ ಅಥವಾ ನಷ್ಟ ತೋರಿಸದೆ ಇವೆ. ಇನ್ನೂ ಕೆಲವು ಫಂಡ್‌ಗಳು ನಷ್ಟದಲ್ಲಿವೆ. ಒಟ್ಟಾರೆ ಪರಿಗಣಿಸಿದರೆ, ನನ್ನ ಹೂಡಿಕೆಗಳಿಂದ ದೊರಕಿರುವ ಸರಾಸರಿ ವಾರ್ಷಿಕ ಲಾಭ ಸುಮಾರು ಶೇ 6ರಷ್ಟು.

ನಿಯಮಿತ ಎಸ್‌ಐಪಿ ಹೂಡಿಕೆಯಾದರೂ, ದೊರಕುತ್ತಿರುವ ಲಾಭವು ಬ್ಯಾಂಕ್ ನಿಶ್ಚಿತ ಠೇವಣಿ, ಅಂಚೆ ಕಚೇರಿ ಉಳಿತಾಯ ಯೋಜನೆಗಳು ಅಥವಾ ಸರ್ಕಾರಿ ಬಾಂಡ್‌ಗಳಂತಹ ಹೂಡಿಕೆಯಿಂದ ದೊರಕುವ ಅಪಾಯರಹಿತ ಬಡ್ಡಿದರಕ್ಕೆ ಸಮಾನವಾಗಿರುವುದು ನನಗೆ ಆತಂಕ ಉಂಟುಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳೂ ಹೂಡಿಕೆ ಮಾಡುತ್ತಾ ಮುಂದುವರಿಸುವುದು ಯುಕ್ತವೇ? ಅಥವಾ ಈಗಿರುವ ಹೂಡಿಕೆಯನ್ನು ಸಂಪೂರ್ಣ ಹಿಂಪಡೆದು ಸುರಕ್ಷಿತ ಮತ್ತು ಸ್ಥಿರ ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಉತ್ತಮವೇ?

ಉತ್ತರ: ಮ್ಯೂಚುವಲ್ ಫಂಡ್ ಎಸ್‌ಐಪಿ ಹೂಡಿಕೆಗಳ ಬಗ್ಗೆ ಈ ರೀತಿಯ ಸಂದೇಹಗಳು ಬಹುತೇಕ ಹೂಡಿಕೆದಾರರಿಗೆ ಸಹಜ. ಕಳೆದ ಕೆಲವು ವರ್ಷಗಳಲ್ಲಿ ಮಾರುಕಟ್ಟೆಯ ಏರಿಳಿತಗಳು, ಕೋವಿಡ್ ನಂತರದ ಅನಿಶ್ಚಿತತೆ, ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಪ್ರಭಾವ ಇತ್ಯಾದಿಗಳ ಕಾರಣದಿಂದ ಅನೇಕ ಹೂಡಿಕೆಗಳ ಲಾಭ ನಿರೀಕ್ಷಿತ ಮಟ್ಟದಲ್ಲಿ ಕಾಣಿಸದೇ ಇರಬಹುದು. ಇದು ಹೂಡಿಕೆ ಮಾಡಿದ ದಿನದ ಮಾರುಕಟ್ಟೆ ಪರಿಸ್ಥಿತಿ ಹಾಗೂ ಹೂಡಿಕೆ ಮಾಡಿದ ಫಂಡ್ ವರ್ಗ ಯಾವುದು ಎನ್ನುವುದರ ಆಧಾರದ ಮೇಲೆ ನಿರ್ಣಯವಾಗುತ್ತದೆ. ಆದರೆ ನಿಮಗೆ ಕೇವಲ ಬ್ಯಾಂಕ್ ಬಡ್ಡಿಗೆ ಸಮನಾದ ಸರಾಸರಿ ಆದಾಯ ಬಂದಿದೆ ಎನ್ನುವ ಕಾರಣಕ್ಕೆ ಎಸ್‌ಐಪಿ ಹೂಡಿಕೆಯ ಬೇಡವೆಂದು ನಿರ್ಧರಿಸುವುದು ಸರಿಯಲ್ಲ.

ಎಸ್‌ಐಪಿ ಹೂಡಿಕೆಯ ಶಕ್ತಿ ಅದರ ದೀರ್ಘಾವಧಿಯ ದೃಷ್ಟಿಕೋನದಲ್ಲಿದೆ. ನಿಶ್ಚಿತ ಠೇವಣಿ ಅಥವಾ ಸರ್ಕಾರಿ ಯೋಜನೆಗಳು ಸುರಕ್ಷಿತ ಆದಾಯ ನೀಡುತ್ತವೆ ಎಂಬುದು ನಿಜವಾದರೂ, ಅವುಗಳ ಬಡ್ಡಿದರ ದೀರ್ಘಾವಧಿಯಲ್ಲಿ ಹಣದುಬ್ಬರ ಪ್ರಮಾಣವನ್ನು ಮೀರುವಲ್ಲಿ ಬಹುಮಟ್ಟಿಗೆ ವಿಫಲವಾಗುತ್ತವೆ. ಹೂಡಿಕೆದಾರರಿಗಿರುವ ಆರ್ಥಿಕ ವಿಚಾರಗಳ ಅರಿವು ಹಾಗೂ ಅವರ ನಷ್ಟ ಭರಿಸುವ ಆರ್ಥಿಕ ಕ್ಷಮತೆಯ ಆಧಾರದ ಮೇಲೆ ಹೇಳುವುದಾದರೆ, ಮ್ಯೂಚುವಲ್ ಫಂಡ್‌ಗಳು ದೀರ್ಘಾವಧಿಯಲ್ಲಿ ಉತ್ತಮ ಲಾಭ ಸೃಷ್ಟಿಸುವ ಹೂಡಿಕೆ ಮಾಧ್ಯಮ ಎಂಬುದು ಸ್ಪಷ್ಟ.

ಹೂಡಿಕೆದಾರರು ವರ್ಷಗಟ್ಟಲೆ ಒಂದೇ ಫಂಡ್‌ಗಳಲ್ಲಿ ಹೂಡಿಕೆ ಮುಂದುವರಿಸುವುದಕ್ಕಿಂತ, ಪ್ರತಿ ಮೂರು ತಿಂಗಳಿಗೊಮ್ಮೆ ಹೂಡಿಕೆಗಳ ಗುಣಮಟ್ಟ ಪರಿಶೀಲಿಸುವುದು ಅಗತ್ಯ. ನಿರಂತರವಾಗಿ ಕಡಿಮೆ ಲಾಭ ನೀಡುತ್ತಿರುವ ಫಂಡ್‌ಗಳನ್ನು ಬದಲಿಸಿ, ಉತ್ತಮ ಗುಣಮಟ್ಟದ ಹಾಗೂ ನಿಮ್ಮ ಗುರಿಗೆ ಹೊಂದುವ ಫಂಡ್‌ ಆಯ್ಕೆ ಮುಖ್ಯ. ಇದಕ್ಕೆ ಅನುಭವದ ಕೊರತೆ ಇದ್ದರೆ, ನುರಿತ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಿ.

ಎಸ್‌ಐಪಿ ಮೂಲಕ ಹೂಡಿಕೆ ಮಾಡಿದಾಗ ಮಾರುಕಟ್ಟೆಯ ಏರಿಳಿತಗಳ ಪ್ರಭಾವ ಕಡಿಮೆಯಾಗುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಉತ್ತಮ ಸರಾಸರಿ ದರದಲ್ಲಿ ಯೂನಿಟ್‌ಗಳು ದೊರೆಯುತ್ತವೆ. ಆದ್ದರಿಂದ, ಹೂಡಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಬದಲು ದೀರ್ಘಾವಧಿ ಹೂಡಿಕೆಯಲ್ಲಿ ಭರವಸೆ ಇರಿಸಿದರೆ, ನಿಶ್ಚಿತ ಠೇವಣಿಗಳಿಗಿಂತ ಉತ್ತಮ ಲಾಭ ದೊರೆಯುವ ಸಾಧ್ಯತೆ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.