ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 14 ಮೇ 2025, 0:30 IST
Last Updated 14 ಮೇ 2025, 0:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

-ಮಂಜುನಾಥ್, ಬೆಂಗಳೂರು.

ನಾನು ಆನ್‌ಲೈನ್‌ ಗೇಮ್‌ನಲ್ಲಿ ಬಹುಮಾನ ಗೆದ್ದಿದ್ದೇನೆ. ಇದಕ್ಕೆ ಶೇ 30ರಷ್ಟು ತೆರಿಗೆ ಕಡಿತಗೊಂಡು ಉಳಿದ ಮೊತ್ತ ನನ್ನ ಕೈಸೇರಿದೆ. ಇದು ಸರಿಯೇ? ಸ್ವಲ್ಪ ಹಣವನ್ನು ನನ್ನ ಕುಟುಂಬದ ಸದಸ್ಯರ ಖಾತೆಗೆ ವರ್ಗಾಯಿಸಬೇಕೆಂದು ಯೋಚಿಸಿದ್ದೇನೆ. ಉಳಿದ ಮೊತ್ತವನ್ನು ಹೂಡಿಕೆ ಮಾಡಬೇಕೆಂದು ಯೋಚಿಸಿದ್ದೇನೆ. ಈ ಬಗ್ಗೆ ಮಾಹಿತಿ ನೀಡಿ?

ಉತ್ತರ: ಆದಾಯ ತೆರಿಗೆ ಸೆಕ್ಷನ್ 194 ಬಿಎ ಅಡಿ ಯಾವುದೇ ಆನ್‌ಲೈನ್‌ ಗೇಮ್‌, ರಸಪ್ರಶ್ನೆ ಕಾರ್ಯಕ್ರಮ, ಬೆಟ್ಟಿಂಗ್ ಇತ್ಯಾದಿಯಿಂದ ನಿವ್ವಳ ಮೊತ್ತ ಆದಾಯವಾಗಿ ಬಂದರೂ ಅಂತಹ ಮೊತ್ತಕ್ಕೆ ತೆರಿಗೆ ಕಡಿತ ಇರುತ್ತದೆ. ಈ ತೆರಿಗೆ ಕಡಿತ ಶೇ 30ರ ವಿಶೇಷ ದರದಲ್ಲಿ ಜಾರಿಯಲ್ಲಿರುತ್ತದೆ. ಈ ತೆರಿಗೆ ದರಕ್ಕೂ, ವಿಜೇತ ವ್ಯಕ್ತಿಯ ವೈಯಕ್ತಿಕ ತೆರಿಗೆ ದರಕ್ಕೂ ನೇರ ಸಂಬಂಧ ಇಲ್ಲ. ಉದಾಹರಣೆಗೆ ತೆರಿಗೆದಾರ ತನ್ನ ವೇತನ ಆದಾಯಕ್ಕೆ ಶೂನ್ಯದಿಂದ 30ರ ತೆರಿಗೆ ದರದಲ್ಲಿ ಯಾವುದೇ ದರದ ಅಡಿ ತೆರಿಗೆಗೊಳಪಟ್ಟರೂ ಮೇಲೆ ಹೇಳಿರುವ ಆದಾಯ ಗಳಿಸಿದ ಸಂದರ್ಭದಲ್ಲಿ ಅಂತಹ ಆದಾಯಕ್ಕೆ ಶೇ 30ರಷ್ಟು ಪ್ರತ್ಯೇಕ ತೆರಿಗೆ ದರ ಅನ್ವಯವಾಗುತ್ತದೆ.

ADVERTISEMENT

ಇಂತಹ ಪಾವತಿ ಮಾಡುವ ಮುನ್ನ ಬಹುಮಾನದ ವಿತರಕರು ಪಾವತಿ ಸಮಯದಲ್ಲಿ ತೆರಿಗೆ ಕಡಿತಗೊಳಿಸಲು ಹೊಣೆಗಾರರಾಗಿರುತ್ತಾರೆ. ಅಂತಹ ಆದಾಯಕ್ಕೆ ಯಾವುದೇ ಇತರ ಕಡಿತ/ ರಿಯಾಯಿತಿ (ಸೆಕ್ಷನ್ 80ಸಿ ಅಥವಾ 80 ಡಿ ಇತ್ಯಾದಿ) ಸಿಗುವುದಿಲ್ಲ.

ಇನ್ನು ನೀವು ಈ ಮೊತ್ತವನ್ನು ನಿಮ್ಮ ಕುಟುಂಬದ ಸದಸ್ಯರ ಖಾತೆಗೆ ವರ್ಗಾಯಿಸುವ ಬಗ್ಗೆ ಕೇಳಿರುತ್ತೀರಿ. ಸಮೀಪದ ಬಂಧು ವರ್ಗದಲ್ಲಿ ಒಳಪಡುವ ವ್ಯಕ್ತಿಗಳಾದ ತಂದೆ-ತಾಯಿ- ಮಕ್ಕಳು, ಗಂಡ-ಹೆಂಡತಿ, ಸಹೋದರ-ಸಹೋದರಿ ಇತ್ಯಾದಿ ವ್ಯಕ್ತಿಗಳೊಳಗಿನ ಹಣಕಾಸು ವ್ಯವಹಾರಕ್ಕೆ ಕೆಲವು ವಿನಾಯಿತಿಗಳಿವೆ. ಹೀಗಾಗಿ ಅಂತಹ ಆರ್ಥಿಕ ವ್ಯವಹಾರ ‘ಉಡುಗೊರೆ’ ರೂಪದಲ್ಲಿ ಇರಬೇಕು. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 56(2)ರ ನಿಬಂಧನೆಗಳಂತೆ ಇವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಹೀಗಾಗಿ, ಉಡುಗೊರೆಯಾಗಿ ವರ್ಗಾಯಿಸುವ ಇಂತಹ ಮೊತ್ತಕ್ಕೆ ತೆರಿಗೆ ಇರುವುದಿಲ್ಲ.    

ನಿಮ್ಮ ಹೂಡಿಕೆ ನಿರ್ಧಾರದ ಬಗ್ಗೆ ಹೇಳುವುದಾದರೆ ಅದು ನೀವು ತೆಗೆದುಕೊಳ್ಳುವ ಆರ್ಥಿಕ ಅಪಾಯದ (ರಿಸ್ಕ್) ಮೇಲೆ ಅವಲಂಬಿತವಾಗಿದೆ. ಒಂದಷ್ಟು ಮೊತ್ತವನ್ನು ನಿಶ್ಚಿತ ಆದಾಯ ನೀಡುವ ಹೂಡಿಕೆಗಳಾದ ಅಂಚೆ, ಬ್ಯಾಂಕ್ ಠೇವಣಿಯಲ್ಲಿ, ಉತ್ತಮ ಮ್ಯೂಚುವಲ್ ಫಂಡ್‌, ಷೇರು, ಇಟಿಎಫ್, ಸ್ವರ್ಣ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಪ್ರತಿ ಹೂಡಿಕೆ ಉತ್ಪನ್ನದ ವಿಶಿಷ್ಟತೆ, ಆದಾಯ, ಅಪಾಯ ವಿಭಿನ್ನವಾಗಿರುವುದನ್ನು ಅರಿತು ಹೂಡಿಕೆ ಮಾಡಿ.

****

-ವಿಜಯಾ, ಉಡುಪಿ.

ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಪಿಎಫ್ ಸೌಲಭ್ಯ ಇದೆ. ಇದರ ಭಾಗವಾಗಿ ವೇತನದಿಂದ ₹4,320 ಪಿಎಫ್ ಬಾಬ್ತು ಕಡಿತವಾಗುತ್ತಿದೆ. ಅಷ್ಟೇ ಮೊತ್ತವನ್ನು ನನ್ನ ಕಂಪನಿಯವರೂ ನನ್ನ ಪಿಎಫ್‌ ಖಾತೆಯಲ್ಲಿ ಜಮೆ ಮಾಡುತ್ತಿದ್ದಾರೆ. ನಾನು ಈ ಹೂಡಿಕೆಯನ್ನು ಇನ್ನಷ್ಟು ಮಾಡಬೇಕೆಂದಿದ್ದೇನೆ. ನನ್ನ ತಿಂಗಳ ವೇತನ ಸುಮಾರು ₹60 ಸಾವಿರ. ಇದರಲ್ಲಿ ಶೇ 60ರಷ್ಟು ನನಗೆ ಮೂಲ ವೇತನ ಹಾಗೂ ಡಿ.ಎ ಸಿಗುತ್ತದೆ. ನನಗೆ ಇನ್ನೂ 25 ವರ್ಷ ಸೇವಾವಧಿ ಇದೆ. ನಾನು ಉಳಿತಾಯ ಹೆಚ್ಚಿಸುವ ಈ ಬಗೆ ಸೂಕ್ತವೇ ಅಥವಾ ಬೇರೆ ಮಾರ್ಗಗಳಿವೆಯೇ? ಒಂದು ವೇಳೆ ನಾನು ಹೆಚ್ಚುವರಿ ಪಿಎಫ್ ಹೂಡಿಕೆ ಮಾಡುವುದಿದ್ದರೆ ಗರಿಷ್ಠ ಎಷ್ಟು ಮೊತ್ತ ಹೂಡಿಕೆ ಮಾಡಬಹುದು?

ಉತ್ತರ: ನೀವು ಈಗಾಗಲೇ ಉದ್ಯೋಗದಲ್ಲಿದ್ದು ಹೆಚ್ಚುವರಿ ಉಳಿತಾಯಕ್ಕಾಗಿ ಪಿಎಫ್ ಮೊತ್ತವನ್ನು ಸ್ವಪ್ರೇರಣೆಯಿಂದ ಮಾಡುವ ಉದ್ದೇಶ ಹೊಂದಿದ್ದೀರಿ. ಇದು ಉತ್ತಮ ಯೋಜನೆಯಾಗಿದೆ. ಈ ಕೆಳಗಿನ ಕೆಲವು ಅಂಶಗಳನ್ನು ಗಮನಿಸಿ ನಿರ್ಧಾರ ಕೈಗೊಳ್ಳಿ.

*ಹೂಡಿಕೆಗೆ ಅನೇಕ ಮಾರ್ಗಗಳಿವೆ. ಆದರೆ, ಈ ಹೆಚ್ಚುವರಿ ಹೂಡಿಕೆ ಮೊತ್ತವನ್ನು ಯಾವ ಕಾರಣಕ್ಕಾಗಿ ನೀವು ಆಯ್ಕೆ ಮಾಡುತ್ತಿದ್ದೀರಿ ಎಂಬ ಬಗ್ಗೆ ಖಚಿತ ಅಭಿಪ್ರಾಯ ಇರಲಿ. ವಾರ್ಷಿಕ ಬಡ್ಡಿ ಸುಮಾರು ಶೇ 8.25ರಷ್ಟು ಇರುವ ಉಳಿತಾಯ ಯೋಜನೆ ಇದಾಗಿದೆ. ದೀರ್ಘಾವಧಿಗಾಗಿ ಹಣ ತೊಡಗಿಸುವ ಉದ್ದೇಶ ಇದರಲ್ಲಿ ಅಡಗಿದೆ. ನಿಮ್ಮ ಸೇವಾವಧಿ ಇನ್ನೂ ದೀರ್ಘ ಕಾಲ ಇರುವುದರಿಂದ ಈ ಬಡ್ಡಿ ಮೊತ್ತವು ಸಂಚಿತವಾಗಿ ಹೂಡಿಕೆಯ ಮೊತ್ತ ವರ್ಧಿಸುವುದರಲ್ಲಿ ಸಂದೇಹವಿಲ್ಲ. ಬಡ್ಡಿಗೆ ತೆರಿಗೆ ಇಲ್ಲ ಎಂಬುದು ದೊಡ್ಡ ಧನಾತ್ಮಕ ಅಂಶ.

*ಇಂತಹ ದೀರ್ಘಾವಧಿ ಸ್ವಯಂ ಪ್ರೇರಿತ ಹೂಡಿಕೆಗೆ ನಿಮಗೆ ವರ್ಷಕ್ಕೊಮ್ಮೆ ನಿಮ್ಮ ನಿರ್ಧಾರ ಬದಲಿಸುವ ಅವಕಾಶ ಇದೆ. ಇದನ್ನು ನಿಮ್ಮ ಉದ್ಯೋಗದಾತರಲ್ಲಿ ಲಿಖಿತ ರೂಪದಲ್ಲಿ ನೀಡಬೇಕಾಗುತ್ತದೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಷ್ಟೇ ಈ ಮೊತ್ತವನ್ನು ನೀವು ನಗದೀಕರಿಸಬಹುದಾದ್ದರಿಂದ ಯೋಜಿತ ನಿರ್ಧಾರ ಕೈಗೊಳ್ಳಿ.

*ನೀವು ಇದೇ ಮೊತ್ತವನ್ನು ನಿಮ್ಮ ಮುಂದಿನ ಅಗತ್ಯ ಹಾಗೂ ಹೆಚ್ಚುವರಿ ಲಾಭದ ಗಳಿಕೆಯ ಅವಕಾಶ ಹಾಗೂ ಆರ್ಥಿಕ ಅಪಾಯಗಳನ್ನು ಪರಿಗಣಿಸಿ ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳಂತಹ ಆಯ್ಕೆಯನ್ನೂ ಮಾಡಬಹುದು.

*ಪ್ರಸ್ತುತ ನಿಮ್ಮ ವೇತನ ₹60 ಸಾವಿರ ಆಗಿರುವುದರಿಂದ ಇದರ ಶೇ 60ರಷ್ಟು ಮೊತ್ತವನ್ನು ಅಂದರೆ ತಿಂಗಳಿಗೆ ₹36 ಸಾವಿರದಷ್ಟು ಮೊತ್ತವನ್ನು ಹೆಚ್ಚುವರಿ ಪಿಎಫ್ ಖಾತೆಗೆ ಕಟ್ಟುವ ಅವಕಾಶ ಇದೆ. ಆದರೆ, ವಾರ್ಷಿಕವಾಗಿ ಈ ಮೊತ್ತ ₹2.50 ಲಕ್ಷ ಮೀರಿದಾಗ ಬರುವ ಹೆಚ್ಚುವರಿ ಬಡ್ಡಿಗೆ ತೆರಿಗೆ ಅನ್ವಯವಾಗುತ್ತದೆ ಎಂಬುದು ತಿಳಿದಿರಲಿ. ಈ ಬಗ್ಗೆ ನಿಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗವನ್ನು ಸಂಪರ್ಕಿಸಿ ನಿಮ್ಮ ಸೂಕ್ತ ನಿರ್ಧಾರ ಕೈಗೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.