ADVERTISEMENT

ಪ್ರಶ್ನೋತ್ತರ ಅಂಕಣ: ಯಾವ ರೀತಿಯ ಕಾರು ಖರೀದಿಸಿದರೆ ತೆರಿಗೆ ರಿಯಾಯಿತಿ ಸಿಗುತ್ತದೆ?

ಪ್ರಮೋದ ಶ್ರೀಕಾಂತ ದೈತೋಟ ಅವರ ಪ್ರಶ್ನೋತ್ತರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 22 ಜನವರಿ 2025, 2:26 IST
Last Updated 22 ಜನವರಿ 2025, 2:26 IST
<div class="paragraphs"><p>ಯಾವ ಕಾರಿಗೆ  ಎಷ್ಟು ರಿಯಾಯಿತಿ?</p></div>

ಯಾವ ಕಾರಿಗೆ ಎಷ್ಟು ರಿಯಾಯಿತಿ?

   

lಪ್ರಶ್ನೆ: ನಾನು ಸರ್ಕಾರಿ ಉದ್ಯೋಗಿಯಾಗಿದ್ದು, ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದೇ? ನಿಯಮಗಳ ಬಗ್ಗೆ ಮಾಹಿತಿ ನೀಡಿ.

-ಚಂದನ್

ADVERTISEMENT

ಉತ್ತರ: ಸರ್ಕಾರಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಕೆಲವು ನಿರ್ಬಂಧಗಳಿವೆ. ಈ ನಿರ್ಬಂಧ ಸರ್ಕಾರಿ ಉದ್ಯೋಗಿಯ ಪತಿ, ಪತ್ನಿ, ಮಕ್ಕಳಿಗೂ ಇದೆ ಎನ್ನುವುದು ಗಮನಾರ್ಹ ವಿಚಾರ. ಕರ್ನಾಟಕ ನಾಗರಿಕ ಸೇವಾ ನಿಯಮಗಳು–1966) ಅಥವಾ ಕೇಂದ್ರ ನಾಗರಿಕ ಸೇವಾ ನಿಯಮಗಳು–1964ರ ಅನ್ವಯ ಈ ನಿಷೇಧ ಹೇರಲಾಗಿದೆ. ಇದರಂತೆ ಯಾವುದೇ ಸರ್ಕಾರಿ ಉದ್ಯೋಗಿಗಳು ಷೇರು ಅಥವಾ ಇತರೆ ಹೂಡಿಕೆ ಉತ್ಪನ್ನದಲ್ಲಿ ಸ್ಪೆಕ್ಯುಲೇಟಿವ್ (ತ್ವರಿತ ದರ ಏರಿಳಿತ) ರೂಪದಲ್ಲಿರುವ ವ್ಯವಹಾರಗಳಲ್ಲಿ ತೊಡಗಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿಯಮವು ಕೇಂದ್ರ, ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಅಡಿ ಬರುವ ಇಲಾಖೆಗಳಲ್ಲಿ ಉದ್ಯೋಗ ಮಾಡುವ ಎಲ್ಲಾ ನೌಕರರಿಗೂ ಆಯಾ ಪ್ರಾದೇಶಿಕ ನಿಯಮಗಳಂತೆ ಅನ್ವಯಿಸುತ್ತದೆ.

ಆದರೆ, ಕೇವಲ ಹೂಡಿಕೆಯ ದೃಷ್ಟಿಯಿಂದ ಮಾಡುವ ವ್ಯವಹಾರ ಇದರಲ್ಲಿ ಒಳಗೊಳ್ಳು ವುದಿಲ್ಲ. ಕೆಲವೊಂದು ರೀತಿಯ ಹೂಡಿಕೆಗಳಿಗೆ ರಿಯಾಯಿತಿ ನೀಡಲಾಗಿದೆ. ಉದಾಹರಣೆಗೆ ಹಂತ ಹಂತವಾಗಿ ಷೇರುಗಳನ್ನು ದೀರ್ಘಾವಧಿಗಾಗಿ ಖರೀದಿಸಿ ಕೆಲವು ವರ್ಷಗಳ ಬಳಿಕ ಮಾರಾಟ ಮಾಡಿದಾಗ ಅದು ಹೂಡಿಕೆ ಎಂದೇ ಪರಿಗಣಿಸಲ್ಪಡುತ್ತದೆ.

ದೀರ್ಘಾವಧಿಗೆ ಷೇರುಗಳಲ್ಲದೆ ಎಸ್‌ಐಪಿ, ಗೋಲ್ಡ್ ಬಾಂಡ್‌, ಆರ್‌ಬಿಐ ಬಾಂಡ್‌ ಮತ್ತು ಅಂತಹ ಇತರೆ ಹೂಡಿಕೆಗಳನ್ನೂ ಮಾಡಬಹುದು. ಈ ಬಗ್ಗೆ ಅಗತ್ಯ ಬಿದ್ದಲ್ಲಿ ಸಂಬಂಧಿತ ಉನ್ನತ ಅಧಿಕಾರಿಗಳಿಗೂ ನೀವು ಲಿಖಿತ ರೂಪದಲ್ಲಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ನಿಷೇಧಿತ ವ್ಯವಹಾರಗಳಲ್ಲಿ ಅಲ್ಪಾವಧಿಗೆ ಷೇರು ಖರೀದಿ-ಮಾರಾಟ, ಕರೆನ್ಸಿ ಹಾಗೂ ಕಮೋಡಿಟಿ ವಹಿವಾಟು, ಫ್ಯೂಚರ್ಸ್ ಮತ್ತು ಆಪ್ಶನ್ ವ್ಯವಹಾರ ಅಥವಾ ಇಂಟ್ರಾಡೇ ಟ್ರೇಡಿಂಗ್ ಇತ್ಯಾದಿಗಳು ಇಲ್ಲಿ ಬಹುಮುಖ್ಯವಾಗಿ ಒಳಗೊಳ್ಳುತ್ತವೆ.

ನಿಮ್ಮ ಹೂಡಿಕೆಗಳಿಗೂ ಆರ್ಥಿಕ ಮಿತಿ ಇದೆ. 2019ರ ತಿದ್ದುಪಡಿಯಂತೆ ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ವರ್ಗದ ನೌಕರ ರಾಗಿದ್ದರೂ ತಮ್ಮ ಮೂಲ ವೇತನದ 6 ಪಟ್ಟು ಮೊತ್ತ ಹೂಡಿಕೆಗೆ ಮುಕ್ತ ಅವಕಾಶವಿದೆ. ಇನ್ನೂ ಹೆಚ್ಚಿನ ಹೂಡಿಕೆ ಇದ್ದರೆ, ಅದನ್ನು ವರ್ಷಾಂತ್ಯದ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

lಪ್ರಶ್ನೆ: ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ನೌಕರ. ಕಂಪನಿಯ ಉದ್ಯೋಗ ನಿಯಮದಂತೆ ನಮಗೆ ಪ್ರತಿವರ್ಷ ರಜಾ ಪ್ರವಾಸ ಕೈಗೊಳ್ಳುವ ಬಗ್ಗೆ ವೇತನದೊಂದಿಗೆ ಸುಮಾರು ₹75 ಸಾವಿರ ಭತ್ಯೆ ನೀಡಲಾಗುತ್ತದೆ. ಇದಕ್ಕೆ ಪ್ರವಾಸ ಕೈಗೊಂಡು ಬಿಲ್ ಸಹಿತ ತೆರಿಗೆ ರಿಯಾಯಿತಿ ಪಡೆಯಬಹುದು ಎಂದು ತಿಳಿದಿದ್ದೇನೆ. ನಾನು ಹೊಸ ತೆರಿಗೆ ಪದ್ಧತಿಯಡಿ ರಿಟರ್ನ್ಸ್ ಸಲ್ಲಿಸುತ್ತಿದ್ದೇನೆ. ಇದರಡಿ ನನಗೆ ಒಟ್ಟಾರೆ ತೆರಿಗೆ ಉಳಿತಾಯವಾಗುತ್ತದೆ. ನನ್ನ ಪ್ರಶ್ನೆ ಏನೆಂದರೆ ಈ ಭತ್ಯೆಗೆ ತೆರಿಗೆ ರಿಯಾಯಿತಿ ಪಡೆಯುವ ಸಾಧ್ಯತೆ ಇದೆಯೇ ಅಥವಾ ಪ್ರವಾಸ ಕೈಗೊಂಡರೂ ತೆರಿಗೆ ಕಟ್ಟಬೇಕಾಗುತ್ತದೆಯೇ? ರಿಯಾಯಿತಿ ಇಲ್ಲವೇ? ತಿಳಿಸಿಕೊಡಿ.

-ಜಿ. ಪ್ರಸನ್ನಕುಮಾರ್, ಮೂಡಲಪಾಳ್ಯ, ಬೆಂಗಳೂರು

ಉತ್ತರ: ನೀವು ಆದಾಯ ತೆರಿಗೆ ಸೆಕ್ಷನ್ 115ಬಿಎಸಿ  ಅಡಿ ರಿಟರ್ನ್ಸ್ ಸಲ್ಲಿಸುತ್ತಿರುವ ಬಗ್ಗೆ ಹೇಳಿದ್ದೀರಿ. ಇದು ಹೊಸ ತೆರಿಗೆ ಪದ್ಧತಿಯಾಗಿದೆ. ತೆರಿಗೆ ದರ ನಿಗದಿ ಮಾಡುವಾಗ ಅನೇಕ ಮಟ್ಟದ ತೆರಿಗೆ ದರವನ್ನು ಈ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಹಜವಾಗಿ ತೆರಿಗೆ ಉಳಿಸುವ ಅವಕಾಶ ಈ ಪದ್ಧತಿಯಡಿ ಇರುವುದರಿಂದ ಬಹುತೇಕ ತೆರಿಗೆ ರಿಯಾಯಿತಿಗಳನ್ನು ಈ ಕಾರಣಕ್ಕೆ ಕೈಬಿಡಲಾಗಿದೆ.

ಆದಾಯ ತೆರಿಗೆಯ ಸೆಕ್ಷನ್ 10(5) ಅಡಿ ರಜಾ ಸಂಬಂಧಿತ ವೇತನ ಪಾವತಿಗೆ ಸಂಬಂಧಿಸಿದ ರಿಯಾಯಿತಿಗಳನ್ನು ಉಲ್ಲೇಖಿಸಲಾಗಿದೆ. ನಾಲ್ಕು ವರ್ಷದ ಬ್ಲಾಕ್ ಅವಧಿಯಲ್ಲಿ ಎರಡು ಬಾರಿ ಹಳೆಯ ತೆರಿಗೆ ಪದ್ಧತಿ ಅನುಸರಿಸುವವರಿಗೆ ಈ ರಿಯಾಯಿತಿಯ ಲಾಭ ಪಡೆಯಬಹುದು. ಆದರೆ, ಇತರೆ ಎರಡು ವರ್ಷ ಯಾವುದೇ ಅವಕಾಶ ಇಲ್ಲದ ಕಾರಣ ಬರುವ ಮೊತ್ತ ತೆರಿಗೆಗೆ ಒಳಪಡುತ್ತದೆ.

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡುವವರಿಗೆ ಈ ರಿಯಾಯಿತಿಯಿಂದ ಹೊರಗಿಡಲಾಗಿದೆ. ಹೀಗಾಗಿ, ನಿಮಗೆ ಪ್ರತ್ಯೇಕ ರಿಯಾಯಿತಿ ಸಿಗುವುದಿಲ್ಲ. ನೀವು ನಿಮ್ಮ ಆದಾಯವನ್ನು ಎರಡೂ ಪದ್ಧತಿಯನ್ನು ಅನ್ವಯಿಸಿ ನೋಡಿ. ಒಟ್ಟಾರೆ ತೆರಿಗೆ ಎಷ್ಟು ಬರಬಹುದೆಂಬುದನ್ನು ತಿಳಿದುಕೊಳ್ಳಿ.

lಪ್ರಶ್ನೆ: ನಾನು ಹೊಸ ಕಾರು ಖರೀದಿಸ ಬೇಕೆಂದಿದ್ದೇನೆ. ಕೆಲವು ವರ್ಷದ ಹಿಂದೆ ಸರ್ಕಾರ ಬಜೆಟ್‌ನಲ್ಲಿ ಕಾರು ಖರೀದಿಗೆ ಸಂಬಂಧಿಸಿ ಕೆಲವು ತೆರಿಗೆ ರಿಯಾಯಿತಿ ಇದೆ ಎಂದು ಪ್ರಕಟಿದ್ದ ನೆನಪು. ಇದಕ್ಕೆ ಯಾವ ರೀತಿಯ ಕಾರು ಖರೀದಿಸಿದರೆ ಈ ತೆರಿಗೆ ರಿಯಾಯಿತಿ ಸಿಗುತ್ತದೆ. ನಾನು ಬ್ಯಾಂಕ್ ಉದ್ಯೋಗದಲ್ಲಿದ್ದೇನೆ. ನನ್ನ ವಯಸ್ಸು 45. ನಮ್ಮ ತಂದೆ-ತಾಯಿ ಇರುವ ಹುಬ್ಬಳ್ಳಿಯಲ್ಲಿ ಹೊಸ ಮನೆ ಕಟ್ಟಿಸಿರುತ್ತೇನೆ. ಇದಕ್ಕೆ ಬ್ಯಾಂಕ್ ಸಾಲ ಇದೆ. ನಾನು ಹಳೆಯ ತೆರಿಗೆ ಪದ್ಧತಿಯಡಿ ತೆರಿಗೆ ಕಟ್ಟುತ್ತಿದ್ದೇನೆ. ಅಲ್ಲದೆ ಉದ್ಯೋಗ ವರ್ಗಾವಣೆಯಲ್ಲಿರುವ ಕಾರಣ ಬಾಡಿಗೆ ಮನೆಯಲ್ಲೇ ಪ್ರತಿ ಮೂರರಿಂದ ಐದು ವರ್ಷ ಇರುತ್ತೇನೆ. ಬಾಡಿಗೆ ಭತ್ಯೆ ಹಾಗೂ ತತ್ಸಂಬಂಧಿತ ತೆರಿಗೆ ರಿಯಾಯಿತಿ ಪಡೆಯುತ್ತಿದ್ದೇನೆ. ಈ ಹಿನ್ನೆಲೆ ಇರಿಸಿ ನಾನು ಕಾರು ಖರೀದಿಸಿದರೆ ನನಗೆ ಇನ್ನಷ್ಟು ತೆರಿಗೆ ಉಳಿತಾಯ ಮಾಡುವ ಸಾಧ್ಯತೆ ಇದೆಯೇ? ಈ ಬಗ್ಗೆ ಮಾಹಿತಿ ನೀಡಿ.

-ರಾಕೇಶ್, ಹೊಸದುರ್ಗ

ಉತ್ತರ: ನಿಮ್ಮ ಪ್ರಶ್ನೆ ಎಲೆಕ್ಟ್ರಿಕ್ ಕಾರು ಖರೀದಿಗೆ ಸಂಬಂಧಿಸಿ ಸಿಗಬಹುದಾದ ತೆರಿಗೆ ಲಾಭದ ಬಗ್ಗೆ ಆಗಿರುತ್ತದೆ. ಸೆಕ್ಷನ್ 80ಇಇಬಿ ಆರಂಭಗೊಂಡಿದ್ದು 2019ರಲ್ಲಿ. ನಂತರ 2023ರ ಮಾರ್ಚ್‌ 31ರ ತನಕ ಮಂಜೂರಾದ ಅಧಿಕೃತ ಹಣಕಾಸು ಸಂಸ್ಥೆ, ಬ್ಯಾಂಕ್‌ಗಳಿಂದ ಪಡೆದ ಸಾಲದ ಬಡ್ಡಿಗೆ ಪಾವತಿಗೆ ಸಂಬಂಧಿಸಿ ವಾರ್ಷಿಕವಾಗಿ ₹1.50 ಲಕ್ಷ ತೆರಿಗೆ ಸವಲತ್ತು ಸಿಗುತ್ತಿತ್ತು. ಇಲ್ಲೂ ಹಳೆಯ ತೆರಿಗೆ ಪದ್ಧತಿ ಅನುಸರಿಸುವವರಿಗೆ ಮಾತ್ರ ಈ ಲಾಭ ಪಡೆಯುವ ಅವಕಾಶ ನೀಡಲಾಗಿತ್ತು. ಪ್ರಸ್ತುತ ಈ ತೆರಿಗೆ ಲಾಭ ಜಾರಿಯಲ್ಲಿಲ್ಲ.

ಸಾರಾಂಶ

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.