ADVERTISEMENT

ಪ್ರಶ್ನೋತ್ತರ| ಗೋಲ್ಡ್ ಬಾಂಡ್‌ಗಳಿಂದ ಸಾಲ ಪಡೆಯಬಹುದೇ?

ಯು.ಪಿ.ಪುರಾಣಿಕ್
Published 20 ಏಪ್ರಿಲ್ 2021, 19:30 IST
Last Updated 20 ಏಪ್ರಿಲ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೆಸರು, ಊರು ಬೇಡ

l ಪ್ರಶ್ನೆ: ನನ್ನೊಡನೆ ಗೋಲ್ಡ್ ಬಾಂಡುಗಳಿವೆ. ಈ ಬಾಂಡುಗಳ ಆಧಾರದಿಂದ ಸಾಲ ಪಡೆಯಬೇಕೆಂದಿದ್ದೇನೆ. ನನಗೆ ಸಾಲ ದೊರೆಯಬಹುದೇ? ನನಗೆ ಬಾಂಡಿನ ಬೆಲೆಯ ಎಷ್ಟರಮಟ್ಟಿಗೆ ಸಾಲ ದೊರೆಯಬಹುದು ಹಾಗೂ ಬಡ್ಡಿದರ ಎಷ್ಟು?

ಯು.ಪಿ.ಪುರಾಣಿಕ್

ಉತ್ತರ: ಬ್ಯಾಂಕುಗಳಲ್ಲಿ, ಆರ್ಥಿಕ ಸಂಸ್ಥೆಗಳಲ್ಲಿ ಹಾಗೂ ಎನ್‌ಬಿಎಫ್‌ಸಿಗಳಲ್ಲಿ ಬಂಗಾರದ ಬಾಂಡುಗಳನ್ನು ಒತ್ತೆ ಇಟ್ಟು (ಅಂಚೆ ಕಚೇರಿಯ ಎನ್‌ಎಸ್‌ಸಿ ಮಾದರಿಯಲ್ಲಿ) ಬಾಂಡುದಾರರು ಸಾಲ ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್‌ ಈ ಬಾಂಡುಗಳ ಭದ್ರತೆಯ ಮೇಲೆ ಸಾಲ ವಿತರಿಸಲು (eligible to be used as a collateral security) ಎಲ್ಲಾ ಆರ್ಥಿಕ ಸಂಸ್ಥೆಗಳಿಗೆ ಪರವಾನಗಿ ನೀಡಿದೆ. ಸಾಮಾನ್ಯವಾಗಿ ಬಾಂಡಿನ ಮುಖಬೆಲೆಯ ಶೇಕಡ 75ರಷ್ಟು ಸಾಲ ಪಡೆಯಬಹುದು. ಸಾಲದ ಬಡ್ಡಿದರವನ್ನು ಆಯಾ ಬ್ಯಾಂಕುಗಳು ನಿರ್ಧರಿಸಿದಂತಿರುತ್ತದೆ. ಇದೇ ವೇಳೆ, ಬಂಗಾರದ ಬಾಂಡುಗಳ ಮೇಲೆ ಸಾಲ ಕೊಡುವ ಅಥವಾ ಕೊಡದಿರುವ ನಿರ್ಧಾರ ಆಯಾ ಬ್ಯಾಂಕು ಹಾಗೂ ಆರ್ಥಿಕ ಸಂಸ್ಥೆಗೆ ಬಿಟ್ಟಿದ್ದಾಗಿದೆ. ಸಾಲ ನೀಡಲೇಬೇಕು ಎನ್ನುವಂತಿಲ್ಲ.

ADVERTISEMENT

ಧನ್ವಂತರಿ ಡಿ. ಮೈಸೂರು

l ಪ್ರಶ್ನೆ: ನಾನು ಪದವಿಪೂರ್ವ ಕಾಲೇಜು ಪ್ರಾಂಶುಪಾಲನಾಗಿ ಕೆಲಸ ಮಾಡುತ್ತೇನೆ. ಉಳಿದ ಸೇವಾವಧಿ ಮೂರುವರೆ ವರ್ಷ. ಎಲ್ಲಾ ಕಡಿತದ ನಂತರ ಬರುವ ಸಂಬಳ ₹ 85,140. ಸಾಲ ಇಲ್ಲ. ಸ್ವಂತ ಮನೆ ಇದೆ. ಬ್ಯಾಂಕ್‌ ಖಾತೆಯಲ್ಲಿ ₹ 35 ಲಕ್ಷ ಇದೆ. ನಾನು ಈಚೆಗೆ ಮನೆ ಮಾರಾಟ ಮಾಡಿದ್ದು, ಅದರಿಂದ ₹ 21 ಲಕ್ಷ ಬರಲಿದೆ. ನಿವೃತ್ತಿಯಿಂದ ಬರುವ ಹಣ ಹಾಗೂ ಮನೆ ಮಾರಾಟ ಮಾಡಿದ ಹಣದಿಂದ ಬೇರೊಂದು ಮನೆ ಕೊಳ್ಳಬೇಕೆಂದಿದ್ದೇನೆ. ಇದರಿಂದ ತೆರಿಗೆ ಉಳಿಸಲು ಸಾಧ್ಯವೆ?

ಉತ್ತರ: ನೀವು ₹ 35 ಲಕ್ಷ ಉಳಿತಾಯ ಖಾತೆಯಲ್ಲಿ ಇರಿಸಿದಂತೆ ಕಾಣುತ್ತದೆ. ಉಳಿತಾಯ ಖಾತೆಯಲ್ಲಿ ದೊಡ್ಡ ಮೊತ್ತ ಇಡುವುದರಿಂದ ಬಡ್ಡಿ ವರಮಾನದಲ್ಲಿ ತುಂಬಾ ನಷ್ಟವಾಗುತ್ತದೆ. ಅವಧಿ ಠೇವಣಿಯಲ್ಲಿ ಹಣ ಇರಿಸಿದರೆ ಅವಧಿಗೆ ಮುನ್ನ ಹಣ ಪಡೆಯವ ಹಕ್ಕು ನಿಮಗಿರುತ್ತದೆ. ಸೆಕ್ಷನ್‌ 54 ಆಧಾರದ ಮೇಲೆ ನೀವು ಮನೆ ಮಾರಾಟ ಮಾಡಿ ಬರುವ ಹಣದಿಂದ ಮಾರಾಟ ಮಾಡಿದ ಎರಡು ವರ್ಷದೊಳಗೆ ಇನ್ನೊಂದು ಮನೆ ಕೊಂಡರೆ ಅಥವಾ ನಿವೇಶನ ಕೊಂಡು ಮೂರು ವರ್ಷಗಳ ಒಳಗೆ ಮನೆ ಕಟ್ಟಿಸಿದರೆ ನಿಮಗೆ ಬಂಡವಾಳ ವೃದ್ಧಿ ತೆರಿಗೆ ಬರುವುದಿಲ್ಲ. ಇದೇ ವೇಳೆ ಈಗ ಮಾರಾಟ ಮಾಡಿ ಬಂದ ಮೊತ್ತವನ್ನು 1988ರ ಕ್ಯಾಪಿಟಲ್‌ ಗೇನ್ ನಿಯಮದಂತೆ ಬ್ಯಾಂಕ್‌ನಲ್ಲಿ ಜಮಾ ಇರಿಸಬೇಕು. ಮನೆ ಕೊಳ್ಳುವಾಗ ಈ ಹಣ ಬಳಸಬೇಕು. ಒಟ್ಟಿನಲ್ಲಿ ನೀವು ಬಯಸಿದಂತೆ, ಮನೆ ಮಾರಾಟ ಮಾಡಿ ಬರುವ ₹ 21 ಲಕ್ಷ ಹಾಗೂ ನಿಮ್ಮ ಹಣದಿಂದ ಬೇರೊಂದು ಮನೆ ಕೊಳ್ಳಬಹುದು. ನಿಮಗೆ ಗೊಂದಲ ಇದ್ದಲ್ಲಿ ಕರೆ ಮಾಡಿ.

ಡಾ. ಚಂದ್ರಶೇಖರ್, ಊರುಬೇಡ

l ಪ್ರಶ್ನೆ: ನಾನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್‌) ಸರ್ಕಾರದ ಕೊಡುಗೆಗೆ ತೆರಿಗೆ ಇದೆಯೇ? ಸೆಕ್ಷನ್ 80ಸಿ ಹಾಗೂ 80ಸಿಸಿಡಿ (1ಬಿ) ವಿನಾಯಿತಿ ಪಡೆಯಬಹುದೇ?

ಉತ್ತರ: ಸೆಕ್ಷನ್‌ 80 ಸಿಸಿಡಿ (2) ಆಧಾರದ ಮೇಲೆ ಉದ್ಯೋಗದಾತರು ಎನ್‌ಪಿಎಸ್‌ಗೆ ಜಮಾ ಮಾಡುವ ಮೊತ್ತ, ಮೂಲವೇತನ ಹಾಗೂ ಡಿ.ಎ. ಸೇರಿಸಿ ಶೇಕಡ 10ರತನಕ ತೆರಿಗೆ ವಿನಾಯಿತಿ ಇದೆ. ಇಂತಹ ಸವಲತ್ತು ಇರುವ ವ್ಯಕ್ತಿಗಳು 80ಸಿ ಆಧಾರದ ಮೇಲೆ ಗರಿಷ್ಠ ₹ 1.5 ಲಕ್ಷ ಹೂಡಿಕೆ ಮಾಡಿ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಎನ್‌ಪಿಎಸ್‌ಗೆ ನೌಕರರ ಕೊಡುಗೆ ಇರುವುದರಿಂದ ಸೆಕ್ಷನ್‌ 80ಸಿ ಹೊರತುಪಡಿಸಿ ಸೆಕ್ಷನ್‌ 80 ಸಿಸಿಡಿ (1ಬಿ) ಆಧಾರದ ಮೇಲೆ ಕೂಡಾ ಗರಿಷ್ಠ ₹ 50 ಸಾವಿರ ವಿನಾಯಿತಿ ಪಡೆಯಬಹುದು. ಒಟ್ಟಿನಲ್ಲಿ 80ಸಿ ಹಾಗೂ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ಗರಿಷ್ಠ ₹ 2 ಲಕ್ಷಗಳ ತನಕ ವಿನಾಯಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.