ADVERTISEMENT

ಪ್ರಶ್ನೋತ್ತರ ಅಂಕಣ | ನೋಂದಣಿಯಾಗದ ಆಸ್ತಿ ಮಾರಾಟಕ್ಕೆ ಯಾವ ವರ್ಗದ ತೆರಿಗೆ ಅನ್ವಯ?

ಪ್ರಮೋದ ಶ್ರೀಕಾಂತ ದೈತೋಟ
Published 10 ಡಿಸೆಂಬರ್ 2025, 0:51 IST
Last Updated 10 ಡಿಸೆಂಬರ್ 2025, 0:51 IST
ನೇರ ತೆರಿಗೆ
ನೇರ ತೆರಿಗೆ   

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತಜ್ಞರ ಉತ್ತರ ಇಲ್ಲಿದೆ.

‘ನಾನು ನಿವೃತ್ತಿಯ ಅಂಚಿನಲ್ಲಿದ್ದೇನೆ. ಸಾಮಾನ್ಯವಾಗಿ ನಮ್ಮ ಸಂಸ್ಥೆಯಲ್ಲಿ ಸಂಪೂರ್ಣ ಅವಧಿ ಪೂರೈಸಿ ನಿವೃತ್ತಿಯಾದ ಸಂದರ್ಭದಲ್ಲಿ 8 ಗ್ರಾಂ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ನನ್ನ ಪ್ರಶ್ನೆ ಏನೆಂದರೆ, ಈಗಿನ ಇದರ ಮೌಲ್ಯ ಸುಮಾರು ₹1 ಲಕ್ಷಕ್ಕೂ ಅಧಿಕ ಆಗಿರುತ್ತದೆ. ಇದಕ್ಕೆ ತೆರಿಗೆ ಅನ್ವಯಿಸುತ್ತದೆಯೇ?

ರಘು ಎಂ, ಬೆಂಗಳೂರು

ADVERTISEMENT

ಉತ್ತರ: ನೀವು ಉದ್ಯೋಗದಲ್ಲಿದ್ದು ನಿಮ್ಮ ಸಂಸ್ಥೆ ನಿವೃತ್ತಿಯ ಸಂದರ್ಭದಲ್ಲಿ ನೀಡುವ ಈ ರೀತಿಯ ಉಡುಗೊರೆ ಪರ್ಕ್ವಿಸಿಟ್ ಭಾಗವಾಗಿ ಪರಿಗಣಿಸಲಾಗುತ್ತದೆ. ಉದ್ಯೋಗಿಗಳಿಗೆ ನೀಡುವ ಇಂತಹ ವಸ್ತು ರೂಪದ ಉಡುಗೊರೆ ವರ್ಷಕ್ಕೆ ₹5 ಸಾವಿರಕ್ಕಿಂತ ಅಧಿಕ ಮೌಲ್ಯದ್ದಾಗಿದ್ದರೆ, ಅಂತಹ ಉಡುಗೊರೆಗಳನ್ನು ಆದಾಯ ತೆರಿಗೆಯ ಸೆಕ್ಷನ್ 17(2)ರ ಪ್ರಕಾರ ತೆರಿಗೆಗೆ ಪರಿಗಣಿಸಬೇಕಾಗುತ್ತದೆ. ಈ ಮೊತ್ತವನ್ನು ನಿಮಗೆ ವಾರ್ಷಿಕವಾಗಿ ನೀಡಲಾಗುವ ‘ಫಾರಂ 12ಬಿಎ’ ಯಲ್ಲಿ ದಾಖಲಿಸಿ ವೇತನದ ಒಟ್ಟಾರೆ ತೆರಿಗೆ ನಿರ್ಣಯಿಸಬೇಕಾಗುತ್ತದೆ. ಇಂತಹ ನಗದೇತರ ಉಡುಗೊರೆಗಳನ್ನು ಆಯಾ ಸಮಯದ ಮಾರುಕಟ್ಟೆ ಮೌಲ್ಯ ಪರಿಗಣಿಸಿ ನಿಮ್ಮ ಸಂಸ್ಥೆಯವರು ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಇದು ಪರ್ಕ್ವಿಸಿಟ್ ಭಾಗವಾಗಿ ತೆರಿಗೆಗೊಳಪಡುವ ಆದಾಯವಾಗಿದೆ.

‘ನಾವು 2022ರ ಏಪ್ರಿಲ್‌ನಲ್ಲಿ ನಿರ್ಮಾಣವಾಗುತ್ತಿರುವ ಫ್ಲ್ಯಾಟ್ ಒಂದನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದೆವು. ಪ್ರಸ್ತುತ ಆ ಭಾಗದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಏರಿಕೆಯಲ್ಲಿ ಇದೆ. ನಾವು ಖರೀದಿಸಿದ ಮೂಲ ಉದ್ದೇಶ ಹೂಡಿಕೆಗಾಗಿ ಇರುವುದರಿಂದ ಪ್ರಸ್ತುತ ಮಾರುಕಟ್ಟೆಯೂ ಉತ್ತಮ ಸ್ಥಿತಿಯಲ್ಲಿರುವ ಕಾರಣ ಈ ಆಸ್ತಿಯನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದೇವೆ. ಆಸ್ತಿ ಖರೀದಿಗೆ ಸಂಬಂಧಿಸಿ ಈಗಾಗಲೇ ಕರಾರು ಮಾಡಿಕೊಂಡಿದ್ದು ನಮ್ಮ ಹೆಸರಲ್ಲಿ ಫ್ಲ್ಯಾಟ್ ನೋಂದಣಿ ಆಗಬೇಕಾಗಿದೆ’.

ನಮಗಿರುವ ಪ್ರಶ್ನೆ ಏನೆಂದರೆ, ನಮ್ಮ ಹೆಸರಿಗೆ ಇನ್ನೂ ನೋಂದಣಿಯಾಗದ ಆಸ್ತಿ ಮಾರಾಟ ಮಾಡುವಾಗ ಯಾವ ವರ್ಗದ ತೆರಿಗೆ ಅನ್ವಯಿಸುತ್ತದೆ. ಇದಲ್ಲದೆ, ನಾವು ಪಾವತಿಸಿರುವ ಇಎಂಐ ಮೇಲಿನ ಬಡ್ಡಿಯನ್ನು ನಿರ್ಮಾಣ ವೆಚ್ಚದಲ್ಲಿ ಸೇರಿಸಬಹುದೇ. ಒಂದು ವೇಳೆ ತೆರಿಗೆ ಅನ್ವಯಿಸುವುದಿದ್ದರೆ, ಉಳಿತಾಯ ಸಾಧ್ಯವೇ?

ಕರುಣಾಕರ್, ಬೆಂಗಳೂರು

ಉತ್ತರ: ನೀವು 2022ರ ಏಪ್ರಿಲ್‌ನಲ್ಲಿ ನಿರ್ಮಾಣದ ಹಂತದಲ್ಲಿರುವ ಫ್ಲ್ಯಾಟ್ ಖರೀದಿಸುವ ಒಪ್ಪಂದ ಹೊಂದಿರುವ ಬಗ್ಗೆ ಖಚಿತಪಡಿಸಿದ್ದೀರಿ. ಪ್ರಸ್ತುತ ಮಾರುಕಟ್ಟೆ ದರ ಏರಿಕೆಯಲ್ಲಿ ಇರುವುದರಿಂದ ಆಸ್ತಿ ನಿಮ್ಮ ಹೆಸರಲ್ಲಿ ನೋಂದಣಿ ಮಾಡುವ ಮೊದಲೇ ನೀವು ಹೂಡಿರುವ ಬಂಡವಾಳ ಮೊತ್ತವನ್ನು ಲಾಭದಾಯಕ ಸ್ಥಿತಿಯಲ್ಲಿ ಮರಳಿ ಪಡೆಯುವ ನಿರ್ಧಾರ ಮಾಡಿದ್ದೀರಿ.  

ಈ ಹಿನ್ನೆಲೆಯಲ್ಲಿ ತೆರಿಗೆಯ ವಿಚಾರವಾಗಿ ಹೇಳುವುದಾದರೆ, ನೀವು ಈಗಾಗಲೇ ಮನೆ ನಿರ್ಮಾಣ ಮಾಡುವ ಕಂಪನಿಯೊಡನೆ ಫ್ಲ್ಯಾಟ್ ಖರೀದಿ ಮಾಡುವ ಹಕ್ಕುವುಳ್ಳ ಕರಾರು ಮಾಡಿಕೊಂಡಿದ್ದೀರಿ. ಪ್ರಸ್ತುತ ಆ ಖರೀದಿಯ ಹಕ್ಕನ್ನು ನೀವು ಇತರರಿಗೆ ವರ್ಗಾಯಿಸುವ ಯೋಜನೆ ಮಾಡಿದ್ದೀರಿ. ಈ ಆಸ್ತಿ ನಿಮ್ಮ ಹೆಸರಿಗೆ ನೋಂದಣಿ ಆಗಿರದಿದ್ದರೂ, ಈ ಸಂಬಂಧ ನಿಮ್ಮ ಎಲ್ಲಾ ಪಾವತಿಗಳು ಕೂಡ ಸಂದಿವೆ ಹಾಗೂ ಆ ಆಸ್ತಿಯನ್ನು ಪಡೆಯುವ ಸಂಪೂರ್ಣ ಹಕ್ಕು ನಿಮಗಿದೆ. ಹೀಗಾಗಿ ಈ ಸ್ಥಿರಾಸ್ತಿಯ ಮೇಲಿನ ಹಕ್ಕು ಬದಲಾವಣೆಯೂ ವರ್ಗಾವಣೆಯೇ ಆಗುತ್ತದೆ ಹಾಗೂ ಬಂಡವಾಳ ತೆರಿಗೆಗೊಳಪಡುವ ಪರಿಧಿಯಲ್ಲಿ ಬರುತ್ತದೆ.

ಯಾವುದೇ ಸ್ಥಿರಾಸ್ತಿಯಲ್ಲಿ 24 ತಿಂಗಳಿಗಿಂತ ಅಧಿಕ ಸಮಯ ನಿಮ್ಮ ಹಕ್ಕು ಅದರ ಮೇಲಿದ್ದಾಗ, ಮಾರಾಟ ಮಾಡುವುದಿದ್ದರೆ ಅದು ದೀರ್ಘಾವಧಿ ಬಂಡವಾಳ ತೆರಿಗೆಗೆ ಒಳಪಡುವ ವ್ಯವಹಾರವಾಗುತ್ತದೆ. ಈ ಸಂಬಂಧ ದಲ್ಲಾಳಿ ವೆಚ್ಚ ಏನಾದರೂ ಪಾವತಿಸಿದ್ದರೆ, ಮಾರಾಟ ಮೌಲ್ಯದಿಂದ ಅದನ್ನು ಕಳೆದು, ಉಳಿದ ಮೊತ್ತವನ್ನು ನಿವ್ವಳ ಮಾರಾಟ ಮೌಲ್ಯ ಎಂದು ಪರಿಗಣಿಸಲಾಗುತ್ತದೆ. ಇದರ ನಂತರ ಆಸ್ತಿ ಮೌಲ್ಯ ಕಳೆದು ಸಂಬಂಧಿತ ಕಾನೂನಿನನ್ವಯ ತೆರಿಗೆ ನಿರ್ಧಾರವಾಗುತ್ತದೆ.

ತೆರಿಗೆ ಪಾವತಿಯ ಉದ್ದೇಶಕ್ಕೆ ಲಾಭ ಲೆಕ್ಕ ಹಾಕಲು ಆಸ್ತಿಯ ಅಸಲು ನಿರ್ಣಯಿಸಬೇಕಾಗುತ್ತದೆ. ಮೂಲ ಖರೀದಿ ಮೌಲ್ಯವಲ್ಲದೆ ನೀವು ಈ ಕೆಲವು ವರ್ಷಗಳಲ್ಲಿ ಇಎಂಐ ಮೇಲೆ ಬಡ್ಡಿ ಪಾವತಿಸಿರುವ ಬಗ್ಗೆ ಹೇಳಿದ್ದೀರಿ. ಆದಾಯ ತೆರಿಗೆಯ ಯಾವುದೇ ನಿರ್ದಿಷ್ಟ ಸೆಕ್ಷನ್‌ಗಳಡಿ ಬಡ್ಡಿ ಪಾವತಿ ಕೂಡ ಅಸಲಿನ ಭಾಗ ಎನ್ನುವ ಸ್ಪಷ್ಟ ಉಲ್ಲೇಖ ಇಲ್ಲದಿದ್ದರೂ, ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳ ತೀರ್ಪು ಖರೀದಿಯ ಸಂದರ್ಭದಲ್ಲಿ ಕಟ್ಟಿರುವ ಬ್ಯಾಂಕ್ ಬಡ್ಡಿಯನ್ನು ಕೂಡ ಅಸಲಿನ ಭಾಗವಾಗಿ ಪರಿಗಣಿಸಬಹುದೆಂದು ತೀರ್ಪುಕೊಟ್ಟಿವೆ. ಈ ವಿಚಾರ ಗಮನದಲ್ಲಿಟ್ಟುಕೊಂಡು ನೀವು ಬಡ್ಡಿ ಮೊತ್ತ ಕೂಡ ಅಸಲಿನ ಭಾಗವಾಗಿ ಪರಿಗಣಿಸಬಹುದು. ನಿಮ್ಮ ವಿಚಾರದಲ್ಲಿ ಬಡ್ಡಿ ಮೊತ್ತವನ್ನು ಹೌಸ್ ಪ್ರಾಪರ್ಟಿ ಆದಾಯ ಶೀರ್ಷಿಕೆಯಡಿಯಲ್ಲಿ ನೀವು ಪರಿಗಣಿಸಲು ಸಾಧ್ಯವಿಲ್ಲ, ಕಾರಣ ನೀವು ನಿರ್ಮಾಣದ ಹಂತದಲ್ಲಿರುವ ಆಸ್ತಿಯನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದೀರಿ.

ನಿಮ್ಮ ಫ್ಲ್ಯಾಟ್ ಖರೀದಿಯ ಕರಾರು 2024ರ ಜುಲೈ 23ರ ಹಿಂದೆಯೇ ಆಗಿರುವ ಕಾರಣ ನಿಮಗೆ ಇಂಡೆಕ್ಸೇಷನ್ ಸಹಿತ ಶೇಕಡ 20ರ ತೆರಿಗೆ ಅಥವಾ ಇಂಡೆಕ್ಸೇಷನ್ ರಹಿತ ಶೇಕಡ 12.5ರ ದರದಲ್ಲಿ ಯಾವುದು ನಿಮಗೆ ಲಾಭದಾಯಕವೋ ಅದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಅಗತ್ಯ ಬಿದ್ದಲ್ಲಿ ಈ ವಿಚಾರವಾಗಿ ಮೊದಲೇ ತೆರಿಗೆ ಲೆಕ್ಕ ಹಾಕಲು ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಇನ್ನು ನಿಮ್ಮ ತೆರಿಗೆ ತಗ್ಗಿಸಲು ಕಾನೂನಿನನ್ವಯ ಇರುವ ಅವಕಾಶಗಳೆಂದರೆ, ನೀವು ಮೂರು ವರ್ಷದೊಳಗೆ ಇನ್ನೂ ಒಂದು ಮನೆ ಕಟ್ಟಿಸಬಹುದು ಅಥವಾ ಎರಡು ವರ್ಷದೊಳಗೆ ಮನೆ ಖರೀದಿಸಬಹುದು. ಈ ನಿರ್ಧಾರ ತ್ವರಿತವಾಗಿ ಕೈಗೊಳ್ಳಲು ಸಾಧ್ಯವಿಲ್ಲದಿದ್ದರೆ, ಮೂರು ವರ್ಷ ನಿಮ್ಮ ಲಾಭವನ್ನು ಯಾವುದೇ ಸ್ಥಳೀಯ ಬ್ಯಾಂಕ್ ಗಳಲ್ಲಿ ‘ಕ್ಯಾಪಿಟಲ್ ಗೈನ್ಸ್’ ಖಾತೆಗೆ ವರ್ಗಾಯಿಸಿ ತೆರಿಗೆಯನ್ನು ತಾತ್ಕಾಲಿಕವಾಗಿ ತಗ್ಗಿಸಬಹುದು. ಈ ಮೊತ್ತ ಉಪಯೋಗಿಸದಿದ್ದರೆ, ಅಂತಹ ಮೊತ್ತ ತೆರಿಗೆಗೊಳಪಡುತ್ತದೆ.  

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ )ಬರೆದು ಕಳಿಸಿ.

ವಿಳಾಸ: ಪ್ರಶ್ನೋತ್ತರ,ವಾಣಿಜ್ಯವಿಭಾಗ,ಪ್ರಜಾವಾಣಿ,ನಂ.75,ಮಹಾತ್ಮಗಾಂಧಿ ರಸ್ತೆ ಬೆಂಗಳೂರು–560001.

ಇ–ಮೇಲ್‌:businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.