ADVERTISEMENT

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾನು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿ 2021ರ ನವೆಂಬರ್‌ನಲ್ಲಿ ನಿವೃತ್ತಿಯಾದೆ. ನನ್ನ ಪಿ.ಎಫ್. ಖಾತೆಯಲ್ಲಿನ ಹಣವನ್ನು ಇನ್ನೂ ಹಿಂಪಡೆದಿಲ್ಲ. ಅಲ್ಲಿ ಬಡ್ಡಿ ಸೇರಿ ₹50 ಲಕ್ಷದವರೆಗೆ ಸಿಗುವ ನಿರೀಕ್ಷೆ ಇದೆ. ಈ ಬಡ್ಡಿಗೆ ತೆರಿಗೆ ಕಟ್ಟಬೇಕೇ? ಅಸಲು ಮೊತ್ತಕ್ಕೆ (ಕಂಪನಿ ಹಾಗೂ ನನ್ನ ವೇತನದ ಪಾಲು) ತೆರಿಗೆಯಿಂದ ವಿನಾಯಿತಿ ಇದೆಯೆಂದು ತಿಳಿದುಕೊಂಡಿದ್ದೇನೆ. ಈ ಬಗೆಗಿನ ಗೊಂದಲ ಪರಿಹರಿಸಿ. -ಸುರೇಂದ್ರ ಕುಮಾರ್, ತುಮಕೂರು

ನೀವು ಉದ್ಯೋಗದಿಂದ ನಿವೃತ್ತರಾಗಿದ್ದೀರಿ. ನಿವೃತ್ತಿಯ 20 ತಿಂಗಳ ನಂತರ ನೀವು ಪಿ.ಎಫ್. ಖಾತೆಯಿಂದ ದೊಡ್ದ ಮೊತ್ತವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದೀರಿ. ನಿವೃತ್ತಿಯ ನಂತರ ನೀವು ಪಡೆಯುವ ಪಿ.ಎಫ್. ಮೊತ್ತವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(12) ಅನ್ವಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಹೊಂದಿದೆ. ಇದು ಕಂಪನಿಯ ಪಾಲಿನ ಮೊತ್ತ ಇರಬಹುದು ಅಥವಾ ನಿಮ್ಮದೇ ವೇತನದಿಂದ ಕಡಿತಗೊಂಡ ಮೊತ್ತ ಇರಬಹುದು.

ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಆದಾಯ ತೆರಿಗೆ ಕಾಯ್ದೆಯ ಅಡಿ ವಿನಾಯಿತಿ ಸಿಗಬೇಕಾದರೆ, ಉದ್ಯೋಗಿಯು ನಿರಂತರವಾಗಿ ಐದು ವರ್ಷ ಸೇವೆಯಲ್ಲಿದ್ದಿರಬೇಕು. ಈ ನಿರಂತರ ಸೇವಾ ಅವಧಿಯನ್ನು ಲೆಕ್ಕ ಹಾಕುವಾಗ, ಹಿಂದೆ ಉದ್ಯೋಗ ಮಾಡುತ್ತಿದ್ದ ಕಂಪನಿಯು ಇಪಿಎಫ್ ಪಾವತಿಸುತ್ತಿದ್ದರೆ ಆ ಸೇವಾ ಅವಧಿಯನ್ನೂ ಪರಿಗಣಿಸಲಾಗುತ್ತದೆ. ಹಾಗೂ ಆ ಮೊತ್ತವು ಪ್ರಸ್ತುತ ಕಂಪನಿ ಪಾವತಿಸುವ ಮೊತ್ತಕ್ಕೆ ವರ್ಗಾವಣೆಗೊಂಡಿರಬೇಕು. ಒಂದು ವೇಳೆ, ಈ ಷರತ್ತು ಪೂರೈಸದಿದ್ದಲ್ಲಿ, ಪಿ.ಎಫ್. ಅಧಿಕಾರಿಗಳು ಶೇ 10ರ ದರದಲ್ಲಿ ತೆರಿಗೆ ಕಡಿತ ಮಾಡಬಹುದು. ನೀವು ನವೆಂಬರ್ 2021ರಲ್ಲಿ ನಿವೃತ್ತಿ ಹೊಂದಿರುವ ಬಗ್ಗೆ ತಿಳಿಸಿರುತ್ತೀರಿ. ಆದರೆ, ಉದ್ಯೋಗಕ್ಕೆ ಸೇರಿದ ಮಾಹಿತಿ ನೀಡಿಲ್ಲ. ನೀವು ಬಹಳ ದೀರ್ಘ ಅವಧಿಗೆ ವೃತ್ತಿ ನಿಭಾಯಿಸಿ, ಈ ಮೊತ್ತ ಗಳಿಸಿರುತ್ತೀರಿ ಎಂದು ಭಾವಿಸುವೆ. ಹೀಗಾಗಿ ನಿಮಗೆ ಸಂಪೂರ್ಣ ವಿನಾಯಿತಿ ಸಿಗುತ್ತದೆ.

ADVERTISEMENT

ಇನ್ನು ಬಡ್ಡಿಯ ಬಗ್ಗೆ ತಿಳಿದುಕೊಳ್ಳುವುದಾದರೆ; ನಿಮ್ಮ ಇಪಿಎಫ್‌ ಖಾತೆಯಲ್ಲಿ ಗಳಿಸಿದ ಬಡ್ಡಿಯೂ ತೆರಿಗೆಯಿಂದ ಮುಕ್ತವಾಗಿದೆ. ಅಂತಹ ಬಡ್ಡಿದರ ವಾರ್ಷಿಕವಾಗಿ ಶೇ 9.50ರೊಳಗೆ ಇರಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಪಿ.ಎಫ್. ಸಂಘಟನೆಯ ನೀಡುವ ಬಡ್ಡಿ ದರ ಇದಕ್ಕಿಂತ ಕಡಿಮೆಯೇ ಆಗಿರುತ್ತದೆ. ಆರ್ಥಿಕ ವರ್ಷ 2021-22ನೇ ಸಾಲಿನಿಂದ ಉದ್ಯೋಗಿಯು ಮಾಡುವ ₹2.50 ಲಕ್ಷಕ್ಕೂ ಮಿಕ್ಕ ಮೊತ್ತದ ಪಿ.ಎಫ್ ದೇಣಿಗೆಗೆ ಸಿಗುವ ಬಡ್ಡಿಯು ತೆರಿಗೆ ವಿನಾಯಿತಿಗೆ ಒಳಪಡುವುದಿಲ್ಲ. ನಿಮ್ಮ ವಿಚಾರದಲ್ಲಿ ಕೊನೆಯ ಕೆಲವು ತಿಂಗಳು ಮಾಡಿರುವ ಠೇವಣಿ ಈ ಮೊತ್ತಕ್ಕಿಂತ ಕಡಿಮೆ ಇರಬಹುದು ಎಂದು ಭಾವಿಸಿಸುವೆ. ನಿಮಗೆ ಸಂಪೂರ್ಣ ಬಡ್ಡಿ ಮೊತ್ತಕ್ಕೆ ತೆರಿಗೆ ಇರಲಾರದು.

ನನ್ನ ಪತಿಯ ಹೆಸರಲ್ಲಿದ್ದ ಕೆಲವು ಷೇರುಗಳನ್ನು ನನ್ನ ಹೆಸರಿಗೆ ವರ್ಗಾವಣೆ ಮಾಡುವ ಬಗ್ಗೆ ತುಸು ಮಾಹಿತಿ ಬೇಕಿತ್ತು. ಈ ವರ್ಗಾವಣೆಗೆ ತೆರಿಗೆ ಇದೆಯೇ? ನಾನು ಅಗತ್ಯ ದಾಖಲೆಗಳನ್ನು ಷೇರು ವರ್ಗಾವಣೆ ಏಜೆಂಟರಿಗೆ ಕೊಟ್ಟು ಒಂದೆರಡು ತಿಂಗಳಾದವು. ಪ್ರತ್ಯುತ್ತರ ಬಂದಿಲ್ಲ. ಈ ಬಗ್ಗೆ ಮುಂದೇನು ಮಾಡಬೇಕು? ಎಲ್ಲಿ ದೂರು?-ಕ್ಷೇಮಾ ವಿ ರಾವ್, ಸಹಕಾರ ನಗರ, ಬೆಂಗಳೂರು

ಕಂಪನಿಗಳ ಷೇರುಗಳನ್ನು ವರ್ಗಾಯಿಸಬಹುದು. ವರ್ಗಾವಣೆ ಎಂಬುದು ಸಹಜವಾಗಿ ಮಾಡುವ ಮಾರಾಟ, ಸಮೀಪದ ಬಂಧುಗಳಿಗೆ ಕೊಡುವ ಉಡುಗೊರೆ ಅಥವಾ ಹೂಡಿಕೆದಾರನ ಮರಣದ ಕಾರಣ ಉತ್ತರಾಧಿಕಾರಿಗಳಿಗೆ ಆಗುವ ವರ್ಗಾವಣೆ ಆಗಿರಬಹುದು. ವರ್ಗಾವಣೆಗೆ ಅಗತ್ಯವಾದ ದಾಖಲೆಗಳನ್ನು ಅರ್ಜಿಯೊಂದಿಗೆ ನಿಮ್ಮ ಷೇರು ಬ್ರೋಕರ್ ಮೂಲಕ ಸಲ್ಲಿಸಬೇಕು. ನೀವು ಈಗಾಗಲೇ ಈ ಪ್ರಕ್ರಿಯೆ ಪೂರೈಸಿದ್ದೀರಿ.

ನಿಮ್ಮ ಕೋರಿಕೆಯನ್ನು 30 ದಿನಗಳೊಳಗೆ ಮಾನ್ಯ ಮಾಡಿಲ್ಲ ಎಂಬುದು ಖಂಡಿತವಾಗಿದ್ದರೆ, ಈ ಬಗ್ಗೆ ಮೊದಲಾಗಿ ನಿಮ್ಮ ಬ್ರೋಕರ್ ಕಂಪನಿಯ ಸಂಬಂಧಿತ ವಿಭಾಗಕ್ಕೆ ಇ–ಮೇಲ್‌ ಮೂಲಕ ತಿಳಿಸಿ. ಈ ಬಗ್ಗೆ ಮಾಹಿತಿಯನ್ನು ನೀವು ಷೇರು ಹೊಂದಿರುವ ಕಂಪನಿಯ ಹೂಡಿಕೆದಾರರ ಉಸ್ತುವಾರಿ ವಿಭಾಗಕ್ಕೆ ಕೂಡ ಇ–ಮೇಲ್‌ ಬರೆದು ತಿಳಿಸಬಹುದು. ಇಂತಹ ಸಮಸ್ಯೆಗೆ ಅವರೂ ಸೂಕ್ತವಾಗಿ ಸ್ಪಂದಿಸುತ್ತಾರೆ. ಈ ಎಲ್ಲ ವಿಚಾರಕ್ಕೂ ಮೊದಲು ಅಗತ್ಯ ದಾಖಲೆಗಳನ್ನು ನೀಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಮುಂದೆಯೂ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಷೇರುದಾರರ ದೂರು ವಿಭಾಗಕ್ಕೂ ನೀವು ಬರೆಯಬಹುದು. ಆದರೆ, ಮೊದಲ ಹಂತದಲ್ಲಿ, ಮೇಲೆ ಉಲ್ಲೇಖಿಸಿರುವ ಬಗೆಗಳಲ್ಲಿ ಪ್ರಯತ್ನಿಸಿದರೂ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬ ಬಗ್ಗೆ ದಾಖಲೆ ಇರಲಿ. ಈ ಸಂಬಂಧವಾಗಿ, ಕಂಪನಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ದಂಡ ವಿಧಿಸುವ ಅವಕಾಶ ಕಂಪನಿ ಕಾಯ್ದೆಯಲ್ಲಿ ಇದೆ.

ಷೇರು ವರ್ಗಾವಣೆಗೆ ತೆರಿಗೆ ಇದೆಯೇ ಎಂಬ ಪ್ರಶ್ನೆ ಕೇಳಿದ್ದೀರಿ. ನಿಮ್ಮ ವಿಷಯದಲ್ಲಿ ಷೇರುಗಳು ಒಬ್ಬರ ಹೆಸರಿನಿಂದ ಇನ್ನೊಬ್ಬರ ಹೆಸರಿಗೆ ವರ್ಗಾವಣೆಯಾಗುತ್ತಿರುವುದು ನಿಜವಾದರೂ, ಯಾವುದೇ ಖರೀದಿ ಮತ್ತು ಮಾರಾಟ ವಹಿವಾಟು ಇಲ್ಲದ ಕಾರಣ ಯಾವುದೇ ಬಂಡವಾಳ ವೃದ್ಧಿ ತೆರಿಗೆ ಇರುವುದಿಲ್ಲ. ನೀವು ಕಾನೂನಿನ ಪ್ರಕ್ರಿಯೆಯ ಅಡಿ ವರ್ಗಾವಣೆ ಮೂಲಕ ಷೇರು ಗಳಿಸುತ್ತಿದ್ದೀರಿ. ನೀವು ಮುಂದೆ ಅವನ್ನು ಮಾರಾಟ ಮಾಡಿದಾಗ, ಹಿಂದೆ ಯಾವ ಬೆಲೆಗೆ ನಿಮ್ಮ ಪತಿ ಆ ಷೇರುಗಳನ್ನು ಖರೀದಿಸಿದ್ದರೋ ಅದೇ ಮೊತ್ತವನ್ನು ನೀವು ಅಸಲು ಮೌಲ್ಯವೆಂದು ಪರಿಗಣಿಸಬೇಕು ಹಾಗೂ ಅವರು ಖರೀದಿಸಿದ ದಿನದಿಂದಲೇ ನಿಮ್ಮ ಹೂಡಿಕೆಯ ಅವಧಿಯನ್ನು ಲೆಕ್ಕಹಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.