ಆದಾಯ ತೆರಿಗೆ
ನರೇಂದ್ರ ರೈ, ದಕ್ಷಿಣ ಕನ್ನಡ ಜಿಲ್ಲೆ.
ಪ್ರಶ್ನೆ: ನಾನು ಕೆಲವು ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೇನೆ. ಇದರಲ್ಲಿ ಷೇರುಪೇಟೆಯಲ್ಲಿನ ಹೂಡಿಕೆಯೇ ಹೆಚ್ಚಿದೆ. ಆದರೆ, ಇತ್ತೀಚಿನ ಮಾರುಕಟ್ಟೆ ಸ್ಥಿತಿಯು ದಯನೀಯವಾಗಿದೆ. ನಮ್ಮ ಹೂಡಿಕೆಗೆ ಲಾಭದ ವಿಚಾರ ಬದಿಗೊತ್ತಿದರೂ ಅಸಲು ಬಂದರೆ ಸಾಕೆನ್ನುವ ಹಂತದಲ್ಲಿದ್ದೇವೆ. ಪ್ರಸ್ತುತ ಷೇರು ಹೂಡಿಕೆ- ಮ್ಯೂಚುವಲ್ ಫಂಡ್ ಹೂಡಿಕೆ ಬೇಡ ಅನ್ನುವ ಸ್ಥಿತಿಯಲ್ಲಿ ನಾನೂ ಸೇರಿದಂತೆ ಇನ್ನೂ ನನ್ನಂತಹ ಅನೇಕ ಹೂಡಿಕೆದಾರರು ಇರಬಹುದು. ಮುಂದಿನ ಹೂಡಿಕೆಯನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಠೇವಣಿ ಇರಿಸೋಣ ಅಂತ ಅನ್ನಿಸುತ್ತಿದೆ. ನನ್ನ ಈ ನಿರ್ಧಾರ ಸರಿಯಾದುದೇ ಅಥವಾ ಇನ್ಯಾವುದೇ ಮಾರ್ಗೋಪಾಯಗಳಿವೆಯೇ?
***
ಉತ್ತರ: ನೀವು ಬಂಡವಾಳ ಮಾರುಕಟ್ಟೆಯ ದೀರ್ಘಕಾಲದ ಹೂಡಿಕೆದಾರರು ಎಂಬುದು ನೀವು ನೀಡಿರುವ ಮಾಹಿತಿಯಿಂದ ಅರಿವಿಗೆ ಬರುತ್ತದೆ. ಇತ್ತೀಚಿನ ಮಾರುಕಟ್ಟೆಯ ಕುಸಿತವು ಆತಂಕವನ್ನು ಉಂಟು ಮಾಡುತ್ತದೆ. ಇದು ಸಣ್ಣ ಅವಧಿಯ ಹೂಡಿಕೆದಾರರಿಗೆ ಹೆಚ್ಚು ಆತಂಕ ಮೂಡಿಸುವ ವಿಚಾರ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಹೂಡಿಕೆ ತಂತ್ರವನ್ನು ಬದಲಾಯಿಸುವ ಮುನ್ನ ಕೆಲವು ಸಾಮಾನ್ಯ ಸಂಗತಿಗಳನ್ನು ಪರಿಗಣಿಸಬೇಕು. ಹೂಡಿಕೆಗೆ ಸಂಬಂಧಿತ ಆಪ್ತ ಸಮಾಲೋಚಕರನ್ನೂ ಸಂಪರ್ಕಿಸಿ.
ನಷ್ಟ ದಾಖಲಿಸುವ ಮೊದಲು ನಿಮ್ಮ ಹೂಡಿಕೆಯು ದೀರ್ಘಕಾಲೀನ ನಷ್ಟದಲ್ಲಿದೆಯೇ ಅಥವಾ ಕೇವಲ ತಾತ್ಕಾಲಿಕ ಕುಸಿತವೇ ಎಂಬುದನ್ನು ಆಯಾ ಕಂಪನಿಗಳ ಆರ್ಥಿಕ ಕ್ಷಮತೆ ಹಾಗೂ ಅವುಗಳ ಮುಂದಿನ ಯೋಜನೆಗಳ ಭರವಸೆಯ ಆಧಾರದ ಮೇಲೆ ನಿರ್ಣಯಿಸಿ. ಕಂಪನಿಯ ಪ್ರಸ್ತುತ ಮೌಲ್ಯದಲ್ಲಿ ಆದ ಕುಸಿತವು ಅದರ ಆರ್ಥಿಕತೆಯ ಕುಸಿತದ ಪರಿಣಾಮದಿಂದಲ್ಲ. ಬದಲಾಗಿ ಒಟ್ಟಾರೆ ಮಾರುಕಟ್ಟೆಯ ಕುಸಿತದ ಭಾಗವೇ ಅಥವಾ ಬೇರೇನಾದರೂ ಮೂಲ ಸಮಸ್ಯೆ ಇದೆಯೇ ಎನ್ನುವುದಷ್ಟೇ ಇಲ್ಲಿ ಮುಖ್ಯ.
ಉತ್ತಮ ಕಂಪನಿಗಳಾಗಿದ್ದರೆ ಅವು ಒಂದಲ್ಲ ಒಂದು ಹಂತದಲ್ಲಿ ಮತ್ತೆ ಉತ್ತಮ ಮೌಲ್ಯ ಕೊಡುತ್ತವೆ. ನಿಮ್ಮ ಹೂಡಿಕೆಯ ನಿರ್ಣಯ ಈ ಹಂತದ ಹೊರತಾಗಿದ್ದರೆ, ನಷ್ಟ ದಾಖಲಿಸಿ ಸೂಕ್ತ ನಿರ್ಣಯ ಕೈಗೊಳ್ಳಬಹುದು. ಆದರೆ, 2008 ಮತ್ತು 2020ರ ಮಾರುಕಟ್ಟೆ ಕುಸಿತದ ಸಮಯದಲ್ಲೂ ಹೂಡಿಕೆದಾರರು ಯದ್ವಾತದ್ವಾ ನಿರ್ಧಾರ ಕೈಗೊಂಡು ಮುಂದೆ ಸಂಭಾವ್ಯ ಲಾಭ ಮಾಡುವ ಅವಕಾಶ ಇದ್ದಾಗಲೂ ಅನಗತ್ಯ ನಷ್ಟ ದಾಖಲಿಸಿ ಅಥವಾ ಹೂಡಿಕೆಯಿಂದ ದೂರ ಉಳಿದ ಸನ್ನಿವೇಶವೂ ಇದೆ. ಹೀಗಾಗಿ, ಯಾವುದೇ ಹೂಡಿಕೆಯ ನಿರ್ಧಾರ ಇದ್ದರೂ ಯೋಚಿತ ಅಂಶ ಹೊಂದಿರುವುದು ಮುಖ್ಯ.
ನೀವು ಷೇರು ಮಾರುಕಟ್ಟೆಯಿಂದ ಹೊರಬರುವ ಮೊದಲು ಪರ್ಯಾಯ ಮಾರ್ಗಗಳಿವೆಯೇ ಎಂಬುದನ್ನು ಯೋಚಿಸಿ. ಒಂದೇ ಹಂತದಲ್ಲಿ ಈ ನಿರ್ಧಾರ ಕೈಗೊಂಡು ಒಂದೇ ದಿನಕ್ಕೆ ಎಲ್ಲ ಮೊತ್ತ ಹಿಂಪಡೆಯುವುದೂ ಒಳ್ಳೆಯ ಆಯ್ಕೆ ಆಗಲಾರದು. ಇಂತಹ ಸಮಯದಲ್ಲಿ ನೀವೇ ಉಲ್ಲೇಖಿಸಿರುವ ನಿಶ್ಚಿತ ಲಾಭ ನೀಡುವ ಹೂಡಿಕೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಬಹುದು. ನಂತರ ಈಕ್ವಿಟಿ ಷೇರುಗಳ ನೇರ ವ್ಯವಹಾರಕ್ಕಿಂತ ಪರೋಕ್ಷವಾಗಿ ಮ್ಯೂಚುವಲ್ ಫಂಡ್‌ಗಳಲ್ಲೂ ಹಂತ ಹಂತವಾಗಿ ಹೂಡಿಕೆ ಮಾಡಬಹುದು.
ಹೆಚ್ಚಾಗಿ ಡಿಫೆನ್ಸಿವ್ ಷೇರು, ಡಿವಿಡೆಂಡ್ ಷೇರುಗಳಲ್ಲಿ ಹೂಡಿಕೆ ಮಾಡುವ ಫಂಡ್‌ಗಳು ಮೊದಲ ಆಯ್ಕೆಯಾಗಿರಲಿ. ಷೇರು ಮಾರುಕಟ್ಟೆಗಿಂತ ತುಸು ಕಡಿಮೆ ಅಪಾಯ ಇರುವ ಹೂಡಿಕೆಗಳಾದ ಹೈಬ್ರಿಡ್ ಫಂಡ್, ಗೋಲ್ಡ್ ಫಂಡ್‌ಗಳನ್ನೂ ಆಯ್ಕೆ ಮಾಡಬಹುದು.
––––
ಸತ್ಯಪ್ರಿಯಾ ಕಾರಂತ್, ಬೆಂಗಳೂರು.
ಪ್ರಶ್ನೆ: ಸಂಸತ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಲಾಗಿದೆ. ಈಗಾಗಲೇ, ನಮಗೆ ₹12 ಲಕ್ಷದವರೆಗೆ ತೆರಿಗೆ ಕಟ್ಟುವ ಅಗತ್ಯವಿಲ್ಲ ಎಂಬ ಬಗ್ಗೆ 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹೀಗಿರುವಾಗ ಪ್ರಸ್ತುತ ಕಾನೂನಿನಡಿ ಇರುವ ಈ ಆದಾಯದ ವಿನಾಯಿತಿ ಮಿತಿ ಹಾಗೂ ಹೊಸ ತೆರಿಗೆ ಕಾನೂನಿನ ಮಿತಿ ಹಾಗೂ ಇತರೆ ವಿನಾಯಿತಿಗಳು ಮುಂದೆ ಹೇಗಿರಲಿದೆ. ಹೊಸ ಕಾನೂನಿನಿಂದ ತೆರಿಗೆ ಇನ್ನಷ್ಟು ಕಡಿಮೆ ಆಗಲಿದೆಯೇ ಅಥವಾ ಇದೊಂದು ದೊಡ್ಡ ಬದಲಾವಣೆಯೇ? ಜನಸಾಮಾನ್ಯರ ಮೇಲೆ ಇದರ ಪರಿಣಾಮ ಏನು?
***
ಉತ್ತರ: ಯಾವುದೇ ಹೊಸ ಕಾನೂನು ಜಾರಿಗೊಳಿಸುವಾಗಲೂ ಅದರ ಪ್ರಸ್ತಾಪ ಸಹಜವಾಗಿ ನಮ್ಮ ಸಂಸತ್ತಿನ ಜಂಟಿ ಸದನದಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಯಿಂದ ಅಂಕಿತಗೊಂಡ ನಂತರವೇ ಅದು ಅಧಿಕೃತ ಘೋಷಣೆಯಾಗಿ ಕಾನೂನಿನ ಮಾನ್ಯತೆ ಪಡೆಯುತ್ತದೆ. ಹೀಗಾಗಿ ಆದಾಯ ತೆರಿಗೆ ಮಸೂದೆ– 2025 ಈಗ ತಾನೇ ಮಂಡಿಸಲಾಗಿದ್ದು, ಇನ್ನೂ ಅದಕ್ಕೆ ಬೇಕಾದ ತಿದ್ದುಪಡಿಗೆ ಅವಕಾಶಗಳಿವೆ.
ಪ್ರಸ್ತುತ ಘೋಷಿಸಿರುವ ₹12 ಲಕ್ಷ ತನಕದ ಆದಾಯದ ಮೇಲಿನ ತೆರಿಗೆ ರಿಬೇಟ್/ವಿನಾಯಿತಿ, ಆದಾಯ ವರ್ಷ 2025-26ಕ್ಕೆ ಅನ್ವಯವಾಗುವ ಮಿತಿಯಾಗಿರುತ್ತದೆ. ಈ ಹಂತದ ತನಕದ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಈ ಮಿತಿಯು ಪ್ರಸ್ತುತ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ಮಂಡಿಸಲಾದ ‘ಹಣಕಾಸು ಮಸೂದೆ 2025’ರ ಆದಾಯದ ಮಿತಿ ಹಾಗೂ ದರಗಳಾಗಿರುತ್ತವೆ.
ಇದನ್ನು ಆದಾಯ ತೆರಿಗೆ ಮಸೂದೆ ಜೊತೆಗೆ ತಳಕು ಹಾಕುವುದು ಸರಿಯಲ್ಲ. ಎಲ್ಲಾ ತೆರಿಗೆ ಮಿತಿ ಹಾಗೂ ದರಗಳು ಆಯಾ ವರ್ಷದ ಬಜೆಟ್ ಪ್ರಸ್ತಾಪದಂತೆ ಹಣಕಾಸು ಮಸೂದೆಯಲ್ಲಿ ಜಾರಿಯಾಗುವ ವಿಚಾರಗಳಾಗಿರುತ್ತವೆ. ಹೀಗಾಗಿ, ಹೊಸ ಕಾನೂನು ಬಂದ ನಂತರ ಮುಂದಿನ ವರ್ಷಗಳಲ್ಲಿ ಮಂಡಿಸಲಾಗುವ ಬಜೆಟ್ ಆಧಾರದಲ್ಲಿ ಇದು ನಿರ್ಣಯವಾಗುತ್ತದೆ. ಅದರ ತೆರಿಗೆ ದರಗಳು ಆರ್ಥಿಕ ವರ್ಷ 2026-27ರಿಂದ ಅನ್ವಯಿಸಲಿವೆ.
‘ಆದಾಯ ತೆರಿಗೆ ಮಸೂದೆ’ ಅಂಶಗಳ ಬಗ್ಗೆ ಹೇಳುವುದಾದರೆ ಇದು ಪ್ರಸ್ತುತ ಕಾನೂನಿನ ಪರಿಷೃತ ರೂಪವಾದರೂ ಜನಸಾಮಾನ್ಯರ ನಿತ್ಯ ವ್ಯವಹಾರಗಳಿಗೆ ನಿರ್ಣಾಯಕವಾಗಿರುವಂತಹ ದೊಡ್ಡ ಬದಲಾವಣೆಗಳನ್ನು ಮಾಡಿಲ್ಲ. ಹಳೆಯ ಕಾಯ್ದೆಯಲ್ಲಿನ ಸೆಕ್ಷನ್‌ಗಳನ್ನು ಒಟ್ಟು ಗೂಡಿಸಿ ಒಂದೇ ಕಡೆ ಮಾಹಿತಿ ನೀಡುವ, ಹಾಗೂ ನಾಗರಿಕರ ಸೀಮಿತ ಕಾನೂನಿನ ಪರಿಜ್ಞಾನಕ್ಕೆ ನಿಲುಕುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಸರಳ ಭಾಷೆಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.